ಏಕಾಂತದಲಿ ನಾನಿರಲು ಬಾನನೊಮ್ಮೆ ನೋಡಿದೆ
ಕಡಲೊಂದ ಬಾನಿನಲಿ ಕಂಡು ನಾ ಬೆರಗಾದೆ.
ಬರಿದಾಗಿದೆ ಈ ಕಡಲಿನ ಒಡಲು ಉಪ್ಪು ನೀರಿಲ್ಲದೆ,
ನೀಲ ವರ್ಣವೋ ನೀರಿನಿರುವಿಕೆಯನು ತೋರುವಂತಿದೆ.
ಮೇರುಗಾತ್ರದ ತೆರೆಯನ್ನೇ ನಾ ಕಾಣದಾದೆ,
ಬಿಳಿ ಮೇಘದ ಗುಂಪುಗಳು ತೆರೆಯೆ ನಾವೆಂದು ಸಾರುತಿದೆ.
ಹಕ್ಕಿಯೆಂಬ ಜಲಚರಗಳು ಈಜಾಡುತಲಿದೆ
ದಡವಿಲ್ಲದ ಕಡಲ ನೀರಿನೊಳಗೆ ಮುಳುಗೇಳುತಿದೆ.
ಸೂರ್ಯನೋ ಹಗಲೆನ್ನದೆ ಚಂದಿರನೋ ಇರುಳೆನ್ನದೆ
ಈಜುವರು ಪಡುವಣದ ತುದಿಯ ಸೇರುವ ತವಕದೆ
ಯಾಕೆ ನೋಡದೆ ಇಷ್ಟು ಕಾಲವ ನಾ ವ್ಯರ್ಥದಿ ಕಳೆದೆ
ಈ ಕಡಲಿನ ಸೌಂದರ್ಯದ ರುಚಿಯ ಕಣ್ಣಲ್ಲಿ ಹೀರದೆ.