Friday, 30 November, 2012

ಕಠಿನ ಕೆಲಸ..

ಅಂದಿನ ಬಲು
ಕಠಿನ ಕೆಲಸ..
ಅವಳ ಮೆಚ್ಚಿಸುವ
ಪ್ರೇಮ ಕಾವ್ಯವನು
ನನ್ನ ಹೃದಯದಿಂದ
ಹೆಕ್ಕಿ ತೆಗೆಯುವುದು.
ಇಂದಿನ ಬಲು
ಕಠಿನ ಕೆಲಸ
ಅವಳುಟ್ಟ ಬಟ್ಟೆಯ
ಕೊಳೆಯನೆಲ್ಲಾ
ತಿಕ್ಕಿ ಒಗೆಯುವುದು.

ಭಾವನೆ..


ಕೆಲವೊಂದು
ಭಾವನೆಗಳೇ
ಹಾಗೆ..,
ಪದಗಳಾಗಿ
ಹೊರಬರುವುದಿಲ್ಲ.
ಕಣ್ಣೀರಿನ
ರೂಪವ ತಾಳಿ
ಮನಸಿನ ಬಿಗು
ಬಂಧನದಿಂದ
ಮುಕ್ತವಾಗುತ್ತದೆ.

ದೌರ್ಭಾಗ್ಯ...

ನನ್ನದೆಂಥಾ
ದೌರ್ಭಾಗ್ಯ..
ಕನಸಿನಲ್ಲಿಯೂ
ನನ್ನ,
ಮತ್ತವಳ
ಮಿಲನ
ಆಗಲೇ ಇಲ್ಲ

Saturday, 24 November, 2012

ಹಿಂತಿರುಗದಿರು...

ಕತ್ತಲಿನಲಿ ಬಂದು
ಕಣ್ಣಿನ ಕಿಟಕಿ
ಮುಚ್ಚಿದೆಯೆಂದು
ಮರಳಿ ಹೋಗದಿರು
ನನ್ನವಳ ನೆನಪೇ..
ನಿನ್ನ ಸುಖಾಗಮನಕಾಗಿ
ಮನದ ಬಾಗಿಲನ್ನೇ
ಕಳಚಿ ಕೆಳಗಿಟ್ಟಿದ್ದೇನೆ.

ಅಳಿಸಲಾಗದ ಕಲೆ...


ನನ್ನ ತೊರೆದು
ಇನ್ನೊಬ್ಬನನು
ಕೈಹಿಡಿಯಲು
ಹೊರಟ ಆಕೆಯ
ಕೈಯ ತುಂಬಾ
ಮದರಂಗಿ ಚಿತ್ತಾರ
ನಳನಳಿಸುತಿತ್ತು;
ಆದರದು ನನ್ನ ಕಂಗಳಿಗೆ
ಕಾಣಿಸಿದ ಬಗೆಯೇ ಬೇರೆ.
ಅವಳಿಗಾಗಿ ಮಿಡಿಯುತ್ತಿದ್ದ
ನನ್ನದೇ ಹೃದಯದಿಂದ
ಚಿಮ್ಮಿದ ನೆತ್ತರ ಕಲೆಗಳು
ಅವಳ ಕೈಯಲ್ಲಿ
ಅಳಿಸಿಹಾಕಲಾಗದಂತೆ
ಉಳಿದು ಹೋದಂತಿತ್ತು.

ಸ್ನಾನ..

ಇರುಳಿನಲಿ
ಮೈಗಂಟಿದ
ಚಳಿಯ
ಕೊಳೆಯ
ತೊಳೆಯಲು
ಮಾಡಬೇಕಾಗಿದೆ
ಬಯಲಿನಲಿ
ಸೂರ್ಯನ
ಎಳೆ ಬಿಸಿಲೆನುವ
ನೀರ ಸ್ನಾನ.

ಸವತಿ ಮತ್ಸರ

ಇರುಳ ಏಕಾಂತದಲಿ
ನನ್ನವಳ ನೆನಪು
ಬಳಿಗೋಡಿ ಬಂದು
ನನ್ನ ತಬ್ಬಿಕೊಂಡಾಗಲೆಲ್ಲಾ
ಬಳಿ ಬಾರದೆ ದೂರ ನಿಲುವ
ನಿದಿರಾ ದೇವಿಯ ಮುಖದಲ್ಲಿ
ಸವತಿ ಮತ್ಸರದ ಭಾವ
ಎದ್ದು ಕಾಣಿಸುವುದಲ್ಲಾ...??

ಉಡುಗೊರೆ

ಕತ್ತಲಲಿ ಬಂದ
ಕೊರೆವ ಚಳಿಗೆ
ನಡುಗುತಲಿದ್ದೆ
ಮನೆಯೊಳಗೆ ನಾನು
ಆ ನಡುಕವ ನಿಲ್ಲಿಸಲು
ಬಿಸಿಲ ಕಂಬಳಿಯ
ಉಡುಗೊರೆಯ
ತಂದಿತ್ತನೇ.. ಆ ಭಾನು

ಅತಿಥಿಗಳು...

ಹೊಳೆವ ತಾರೆಗಳೆಲ್ಲವೂ
ಹಣತೆಯ ದೀಪಗಳಾಗಿ
ದುಂಡಗಿನ ಗ್ರಹಗಳೆಲ್ಲವೂ
ಗೂಡುದೀಪಗಳಾಗಿ
ಕಪ್ಪಗಿನ ಆಗಸವ ತೊರೆದು
ಪ್ರತಿ ಮನೆಯಂಗಣವ ಬೆಳಗುತಿದೆ
ಮೂರು ದಿನದ ಅತಿಥಿಗಳಾಗಿ

Wednesday, 14 November, 2012

ಪಟಾಕಿ...

ದೀಪಾವಳಿಗೆ
ದೊಡ್ಡ ದೊಡ್ದ
ಸದ್ದು ಮಾಡೋ
ಪಟಾಕಿಗಳಿಗೆ
ಸುಮ್ಮನೆ
ಹಣ ಖರ್ಚು
ಮಾಡುವುದೇ ಇಲ್ಲ.
ಕತ್ತಲಾಗುತ್ತಿದ್ದಂತೆ
ಯಾವುದಾದರೂ
ಪೊಳ್ಳು ನೆಪದಲ್ಲಿ
ನನ್ನವಳ ಜತೆ
ಜಗಳವಾಡುತ್ತೇನೆ ಅಷ್ಟೇ...

ಕನಿಕರ

ಪ್ರತಿ ಮನೆಯಲೂ
ಬೆಳಕಿಗಾಗಿ ಹಚ್ಚಿಟ್ಟ
ಸಾಲು ಸಾಲು
ಹಣತೆಗಳ ಮಿಣುಕು
ಬೆಳಕ ಕಂಡು,
ಕನಿಕರಗೊಂಡು,
ತನ್ನ ಬೆಳಕಿಂದ
ಜಗವ ಬೆಳಗಲು
ಬಂದೇಬಿಟ್ಟನೇ ನೇಸರ..

ಜ್ಯೋತಿ..

ಎಣ್ಣೆಯ ಹಚ್ಚಿ
ಮೈಯಲಿರುವ
ಕೊಳೆಯನೆಲ್ಲಾ
ತೊಳೆದು
ತೆಗೆದು,
ಮನದ
ಹಣತೆಯಲಿ
ಪ್ರೀತಿಯ
ಜ್ಯೋತಿಯನು
ಹಚ್ಚಿ ಬಿಡಿ,
ನಿಮ್ಮೊಳಗಿನ
ದ್ವೇಷದ
ಕತ್ತಲನು
ಕೊಂದು ಬಿಡಿ.

ಚಾಳಿಪ್ರತಿದಿನವೂ
ಮೂಡುವಾಗಲೂ
ಮುಳುಗುವಾಗಲೂ
ಹೊಚ್ಚ ಹೊಸತನವ
ಪ್ರದರ್ಶಿಸುವುದೊಂದೆ
ನೇಸರನ ಏಕೈಕ
ಹಳೆಯ ಚಾಳಿ

ಪ್ರಭಾವ

ಮನದ
ಸಾಗರದೊಳಗೆ
ಮೂಡಿದೆ
ಅವಳ
ನೆನಪೆನುವ
ದೊಡ್ಡ
ಬಿರುಗಾಳಿ,
ಅದರದೇ
ಪ್ರಭಾವವಿರಬೇಕು
ಕಣ್ ರೆಪ್ಪೆಯ
ತೀರದಲ್ಲಿ
ಹುಚ್ಚೆದ್ದು
ಬರುತಿದೆ,
ಕಣ್ಣೀರಿನ
ದೊಡ್ಡ ದೊಡ್ಡ
ಅಲೆಗಳು

ಪ್ರಕ್ಷುಬ್ಧ ಸಾಗರ

ನೋಟದ
ನೌಕೆಯನೇರಿ
ತಂಗಾಳಿಯ
ಅಲೆಯಲ್ಲಿ
ತೇಲಿ ಬಂದಿತ್ತು
ಅವಳ ನಗು,
ನನ್ನೆಡೆಗೆ
ಅದೇನಾಯಿತೋ
ಗೊತ್ತಿಲ್ಲ
ಆ ನಗುವಿನ
ಸ್ಪರ್ಶವಾದಾಗಿನಿಂದ
ಮನದ
ಸಾಗರದಲ್ಲೆಲ್ಲಾ
ಅಲ್ಲೋಲ ಕಲ್ಲೋಲ

ಕಸ..

ನಾ ನಿದಿರೆಯಿಂದ
ಏಳುವ ಮೊದಲೇ
ಆಗಸದ
ಅಂಗಳದಲಿದ್ದ
ಕತ್ತಲೆನುವ
ಕಸವನೆಲ್ಲಾ
ಆ ನೇಸರ
ತನ್ನ ಬೆಳ್ಳಿಕಿರಣದ
ಪೊರಕೆಯಿಂದ
ಗುಡಿಸಿಬಿಟ್ಟಿದ್ದ.

ಪರಮ ಸುಖಿ..

ಅನುಭವಿಸಿದವರು
ಹೇಳಿದ್ದು, ಸಂಗಾತಿಯ
ಪ್ರೀತಿ ಪ್ರೇಮದ
ಆಗಸವೇ
ಬಲು ಸುಂದರ,
ನಾನಂದೆ ಇರಬಹುದೇನೋ
ನನಗದು ಗೊತ್ತಿಲ್ಲ,
ಅದನಾಸ್ವಾದಿಸುವುದಕಾಗಿ
ತಂದೆ ತಾಯಿಯ
ನಂಬಿಕೆ, ವಿಶ್ವಾಸದ
ಹೊಸ್ತಿಲ ದಾಟಿ
ಹೊರಬರುವುದು
ನನಗೆ ಬೇಕಿಲ್ಲ.
ಹೊತ್ತು ಹೆತ್ತವರ
ಆರೈಕೆಯ
ಪಂಜರದಲೇ
ಪರಮಸುಖಿ ನಾನು,
ರೆಕ್ಕೆ ಬಿಚ್ಚಿ ಹಾರುವ
ಮನಸೇ ನನಗಿಲ್ಲ

ಪ್ರಭಾವ

ಮನದ
ಸಾಗರದೊಳಗೆ
ಮೂಡಿದೆ
ಅವಳ
ನೆನಪೆನುವ
ದೊಡ್ಡ
ಬಿರುಗಾಳಿ,
ಅದರದೇ
ಪ್ರಭಾವವಿರಬೇಕು
ಕಣ್ ರೆಪ್ಪೆಯ
ತೀರದಲ್ಲಿ
ಹುಚ್ಚೆದ್ದು
ಬರುತಿದೆ,
ಕಣ್ಣೀರಿನ
ದೊಡ್ಡ ದೊಡ್ಡ
ಅಲೆಗಳು

Saturday, 3 November, 2012

ಸ್ವಾಗತ

ನಿದಿರೆಯಾ
ಕುದುರೆಯನೇರಿ
ಬರುವ
ಕನಸುಗಳಿಗೆ,
ಹಾಸಿರುವ
ಚಾಪೆಯೇ
ರತ್ನಗಂಬಳಿ,
ದಣಿದ
ತನುವಿನ
ಆಲಸ್ಯವೇ
ಪೂರ್ಣಕುಂಭ
ಸ್ವಾಗತ.

ಕೊಳದ ತಳ..

ಮಾನಸ ಸರೋವರದಂತೆಯೇ
ನನ್ನ ಮನದ ಸರೋವರವೂ
ತಿಳಿಯಾಗಿದೆ,ಪರಿಶುದ್ಧವಾಗಿದೆ
ಎನ್ನುವ ಕಲ್ಪನೆಯಲ್ಲಿದ್ದೆ.
ಅವಳ ನಗೆಯ ನೋಟ
ಮನದ ಕೊಳದ ನೀರ ಸೀಳಿ
ಮೆಲ್ಲಮೆಲ್ಲನೆ ಆಳಕಿಳಿದು ತಳವ
ತಲುಪಿ ರಾಡಿ ಮಾಡಿದಾಗಲೇ
ಗೊತ್ತಾಗಿದ್ದು.....
ಪ್ರೀತಿಯೆನುವ ಕೆಸರೊಂದು
ಮನದೊಳಗೆ ಹೇಗೋ ಕಾಣದಂತೆ
ಬಚ್ಚಿಟ್ಟುಕೊಂಡಿತ್ತೆಂದು...

ಪುತ್ರ ವ್ಯಾಮೋಹ

ನೇಸರನೆನುವ
ತನ್ನ ಮುದ್ದು
ಕಂದನಿಗೆ,
ಪ್ರತಿದಿನವೂ
ಹೊಸತನದ
ಬಟ್ಟೆಯ ತೊಡಿಸಿ,
ಆಗಸದ ಶಾಲೆಗೆ
ಕಳುಹಿಸಿ ಕೊಡುವ
ಈ ಶರಧಿಯದು
ಅದೆಂಥಾ
ಪುತ್ರ ವ್ಯಾಮೋಹ

ರಾಜೀನಾಮೆ

ಇನ್ನೊಬ್ಬರ ಪ್ರೇಮದಲಿ
ಮುಳುಗಿದ್ದಾರಂತೆ
ಎಸ್.ಎಮ್ ಕೃಷ್ಣರ
ವಿದೇಶಿ ಪ್ರಿಯತಮೆ,
ಅದು ಗೊತ್ತಾದಂದಿನಿಂದ
ಮನಸಿಟ್ಟು ದುಡಿಯೋಕಾಗದೆ
ಈಗ ಕೊಟ್ಟು ಬಿಟ್ಟರಂತೆ
ತಮ್ಮ ಖಾತೆಗೆ ರಾಜೀನಾಮೆ.

ಹಾದಿ..

ಮರೆವು
ಎನುವ
ಮಸಣದಲಿ
ಅವಳ
ನೆನಪೆನುವ
ಕೊಳೆಯದ
ಶವವನು
ಸುಟ್ಟು
ಬಿಡುವಾಸೆ,
ಆದರೇಕೋ
ಮಸಣದೆಡೆ
ಕೊಂಡೊಯ್ಯೋ..
ಹಾದಿಯೇ
ಸಿಗುತಿಲ್ಲ.

ಖ್ಯಾತೆ...

ಸಲ್ಮಾನ್ ಖುರ್ಷಿದ್ ಗೆ
ಖುಷಿಯೋ ಖುಷಿಯಂತೆ
ಭ್ರಷ್ಟರಾದರೂ ಸಿಕ್ಕಿದೆಯಲ್ಲಾ
ವಿದೇಶಾಂಗ ಖಾತೆ;
ಸಿಗಬಹುದೆನುವ ಇನ್ನೊಂದು ಆಸೆಯಂತೆ
ಎಸ್.ಎಮ್.ಕೆ ಗೆ ಸಿಗದ ವಿದೇಶಿ ಪ್ರೀತಿ;
ಹಾಗಂದುಕೊಳಲು ಕಾರಣ.....
ಒಂದೇಯಂತೆ ಇವರಿಬ್ಬರದು ಜಾತಿ.

ಶುಭೋದಯ...

ಹಲವು ಯುವ ಕನ್ನಡಿಗರಿಗೆ
ತನು - ಮನ ಕನ್ನಡ
ನಡೆ - ನುಡಿ ಕನ್ನಡ
ಎನುವುದೆಲ್ಲವೂ ಬರಿಯ
ಒಂದು ದಿನದ ಕಳಕಳಿ
ಸಣ್ಣದೊಂದು ಉದಾಹರಣೆ,
ನಿನ್ನೆಯ ಸೂರ್ಯ ಮುಳುಗಿ
ಇಂದು ಮೇಲೇರುವಷ್ಟರಲ್ಲಿ
ಶುರುವಾಗಿ ಬಿಟ್ಟಿದೆ
"ಶುಭೋದಯ"ಕೆ ಬದಲಾಗಿ
"ಗುಡ್ ಮಾರ್ನಿಂಗ್"ಗಳ ಹಾವಳಿ...

ನೆಲೆ

ಮಂದಿರಗಳ
ಗರ್ಭಗುಡಿಯಲಿ
ಬೇಕಾಗಿಲ್ಲ
ತಾಯಿ ಭುವನೇಶ್ವರಿಗೆ
ಚೆಂದದ ನೆಲೆ;
ಆಕೆ ಇರಬಯಸುವುದು
ಕನ್ನಡಿಗನ ನಾಲಗೆಯಲೇ,
ಆಕೆ ಪ್ರಸನ್ನಳಾಗುವುದು
ಅವಳ ಬೆಲೆಯ
ನಾವು ತಿಳಿದುಕೊಂಡಾಗಲೇ.

ನಾಚಿಕೆ


ಸಾಲು ಸಾಲು
ಮೋಡಗಳು
ತಬ್ಬಿ, ಕೊಟ್ಟ
ಸಿಹಿಮುತ್ತಿಗೆ
ಕೆಂಪಾದ
ಸೂರ್ಯನಿಗೆ
ನಾಚಿಕೆಯ
ಕಡಲಲ್ಲಿ
ಮುಳುಗುವ
ತವಕ