Saturday, 30 June, 2012

ಶಬರಿ..

ಹೋಗಿ ಬಾ ಗೆಳೆಯಾ
ಎನ್ನುತ್ತಾ ನುಡಿದಳಾಕೆ
ನೀನೆ ನನ್ನ ಶ್ರೀ ರಾಮ
ನಿನಾಗಾಗಿ ಕಾಯುವ
ನಾನೇ ಕಲಿಯುಗದ ಶಬರಿ;
ಕಷ್ಟಪಟ್ಟು ದುಡಿದು
ಅವಳಿಗಾಗಿ ಗುಲಾಬಿಯ
ಕೊಂಡು ತರುವಷ್ಟರಲ್ಲಿ,
ಅಪ್ಪ ಕೊಡಿಸಿದ ಕಾರಲ್ಲಿ
ಬಂದವನಲ್ಲೇ ರಾಮನನ್ನು
ಕಂಡು ಆದಳಾಕೆ ಪರಾರಿ.

ಪ್ರೇಯಸಿ.ಸಂಜೆಯಾದೊಡನೆಯೇ
ಏಕಾಂತದ ಮತ್ತಿನಲಿ
ನಾನಿದ್ದಾಗ ಅದೇನೋ
ಹೇಳಲಾಗದ ನೋವು,
ಮನದಲ್ಲಿ ಕನಸಾಗಿ ಮುಡಿ
ಬಂದಾಗ ನನ್ನ ಪ್ರೇಯಸಿ;
ಕನಸಲ್ಲಿ ಬಂದರೂ
ನೆತ್ತರ ಹೀರುವಂತಾ
ನೋವ ನನಗೇಕೆ ಕೊಡುವೆ,
ಎಂದು ಹೇಳುವಷ್ಟರಲ್ಲಿ
ಕಣ್ಣಿಗೆ ಕಾಣಿಸಿತು
ನನ್ನ ಕಾಲಲ್ಲಿ ಕುಳಿತು
ನಿಜವಾಗಿಯೇ ರಕ್ತ ಹೀರುತ್ತಿದ್ದ
ಒಂದು ದೊಡ್ಡ ನುಸಿ.

Wednesday, 27 June, 2012

ನಿಲ್ದಾಣ.

ನನ್ನೆಡೆಗೆ
ಹೆಜ್ಜೆಗಳನ್ನಿಟ್ಟಿದ್ದರೂ,
ನನ್ನ ಗುರಿಯಾಗಿಸದೆ
ಹೊರಟಿತ್ತು
ಅವಳ ಪಯಣ;
ನಡಿಗೆಯ ದಣಿವ
ನಿವಾರಿಸುವ ಸಲುವಾಗಿ
ಮಾಡಿಬಿಟ್ಟಳೆನ್ನ
ಹಾದಿಯ ನಡುವಿನ
ಸಣ್ಣ ನಿಲ್ದಾಣ.

ನಿದಿರೆ

ಸೂರ್ಯ ಕಡಲಲ್ಲಿ
ಮುಳುಗಿ ಭುವಿಯ
ಸುತ್ತಲೂ ಕತ್ತಲೆ
ಅವ ಬಂದು
ಜಗವ ಬೆಳಗುವವರೆಗೆ
ನಾ ಸ್ವಲ್ಪ ಮಲಗಲೇ...

ಅಡ್ಮಿನ್ನು...ನೀವು ಅದೇನೇ
ಪೋಸ್ಟ್ ಮಾಡಿದರೂ,
ತಪ್ಪದೇ ಓದಿ
ಲೈಕನ್ನೊತ್ತಿ
ಯಾರು ಮಾಡುತ್ತಾರೋ
ಒಳ್ಳೆಯ ಕಮೆಂಟುಗಳನ್ನು;
ಸರಿಯಾಗಿ
ಗುರುತಿಸಿಕೊಳ್ಳಿ...
ಹೆಚ್ಚಾಗಿ ಅವರೇ
ಆಗಿರುತ್ತಾರೆ
ಆ ಗುಂಪಿನ ಅಡ್ಮಿನ್ನು

Sunday, 17 June, 2012

ಅಪ್ಪ..

ದೊಡ್ಡ ದೊಡ್ಡ 
ಪದಗಳ 
ಕಾವ್ಯಧಾರೆಗೂ
ನಿಲುಕದಂತವರು 
ನನ್ನಪ್ಪ..
ಹಾಗಾಗಿ ಅವರ
ಕುರಿತು ನಾ
ಬರೆಯದಿರುವುದು
ನನ್ನ ತಪ್ಪಾ..?

ರವಿಯಾಟ

ನಿಶೆಯ ನಶೆ ಇಳಿದು
ತನುವಿನಾ ಜಡ ತೆಗೆದು
ಹೊಳೆವ ರವಿಯ 
ನೋಡ ಬಯಸಿದೆ
ತವಕದಿಂದಲೇ,
ಅವನೋ ಆಗಸದ
ತುಂಬ ತುಂಬಿದ್ದ
ಮೋಡಗಳ 
ಮರೆಗೋಡುತಲಿ
ಆಡುತ್ತಿದ್ದಾನೆ 
ನನ್ನೊಡನೆ
ಕಣ್ಣಾಮುಚ್ಚಾಲೆ.

ಅಂದು-ಇಂದು

ಅಂದೆಲ್ಲಾ
ತಂದೆ ತಾಯಿಯರಿಗೆ
ತನ್ನ ಮಗ
ಹುಡುಗಿಯರೊಡನೆ
ಅತಿಯಾಗಿ
ಮಾತನಾಡಿದಾಗ
ಉಂಟಾಗುತ್ತಿತ್ತು
ಏನೋ ಅನುಮಾನ,
ಇಂದು ಹಾಗಿಲ್ಲ
ತನ್ನ ಮಗ
ಮಾತನಾಡುತ್ತಿದ್ದುದು
ಹುಡುಗಿಯೊಂದಿಗೇ..
ಎಂದು ಗೊತ್ತಾದಾಗ
ಇಬ್ಬರಿಗೂ ಏನೋ ಒಂದು
ರೀತಿಯ ಸಮಾಧಾನ.

Friday, 15 June, 2012

ಬಂಧನ


ಮೋಡ ಬೀಸಿದ
ಮಳೆಹನಿಯ
ಬಲೆಗೆ ನಾನೀಗ
ಸಿಲುಕಿರುವೆ,
ಭುವಿಯಲ್ಲಿ
ಈಜಾಡಲಾಗದೇ
ಒಳಗೊಳಗೇ
ಒದ್ದಾಡುತ್ತಿರುವೆ.

ತಪ್ಪು ಯಾರದ್ದು...?


ಕಡಿದಾದ ತಿರುವಿನ
ಹಾದಿಯಲ್ಲಿ ನನ್ನ
ಪ್ರಯಾಣ ಸಾಗಿತ್ತು,
ಚಾಲಕನಿಗೋ ವೇಗದಲಿ
ವಾಹನ ಓಡಿಸೋ
ದೊಡ್ಡ ಚಟವಿತ್ತು,
ಪ್ರಯಾಣದ ನಡುವಲ್ಲಿ
ನನ್ನ ತನುವು ನಿದಿರೆಗೆ
ಶರಣು ಹೋಗಿತ್ತು.
ಒಮ್ಮೆಲೇ ತಿರುವು ಬಂದಾಗ
ಬಲವಿಲ್ಲದೆ ನನ್ನ ಮೈ
ಬದಿಯಲಿದ್ದ ಹುಡುಗಿಗೆ ತಾಗಿತ್ತು,
ಫಟಾರನೆ ಬಿದ್ದ ಏಟಿಗೆ
ಗಾಡವಾದ ನಿದಿರೆಯು
ಮತ್ತೆ ಬಾರದಂತೆ ಓಡಿ ಹೋಗಿತ್ತು,
ತಪ್ಪು ಹಾಳಾದ ತಿರುವಿನದಾಗಿದ್ದರೂ
ವೇಗದ ಚಾಲನೆಯದಾಗಿದ್ದರೂ
ಪೆಟ್ಟು ಮಾತ್ರ ನನಗೇಕೆ ಬಿತ್ತು..??

Friday, 8 June, 2012

ಗೊಂದಲ

ಗುಡುಗು,ಸಿಡಿಲು
ಬಂದದ್ದು ನನ್ನಾಕೆಯ
ನೆನಪಾದಗಲೋ..?
ಅಥವಾ..
ನನ್ನಾಕೆಯ ನೆನಪಾದಾಗ
ಗುಡುಗು,ಸಿಡಿಲು
ಬಂದದ್ದೋ...?
ಎನುವ ಸಣ್ಣದೊಂದು
ಗೊಂದಲವಿದೆ.
ನನ್ನ ಮನಸ್ಸಂತು
ಇನ್ನೂ ಈ ಉತ್ತರದ
ಹುಡುಕಾಟದಲ್ಲಿದೆ.

ದುಬಾರಿ ಟಾಯ್ಲೆಟ್ಟು

ಯೋಜನಾ ಆಯೋಗದ
ಟಾಯ್ಲೆಟ್ಟು ಕಟ್ಟಿಸಲು
ಆಯಿತಂತೆ ಖರ್ಚು 35 ಲಕ್ಷ;
ಹಸಿವು ಅತಿಯಾದವರು ಇವರೆಲ್ಲಾ 
ಕಕ್ಕಸಿನಲ್ಲೂ ಮನೆಯಲ್ಲೂ
ಉಂಡರಲ್ಲ ಜೇಬು ತುಂಬಾ ಭಕ್ಷ್ಯ.

Tuesday, 5 June, 2012

ಕೊಡುಗೆ ಏನು...?ಇರಲು ನೆಲೆಯ ಕೊಟ್ಟಳು..
ಉಸಿರಾಡಲು ಗಾಳಿಯ ಕೊಟ್ಟಳು..
ಹಸಿವಾದೊಡನೆ ಉಣುವುದಕಾಗಿ
ಬಗೆಬೆಗೆಯ ಫಲಗಳ ಕೈಗಿತ್ತಳು..
ನಿನ್ನ ಕೊಡುಗೆಯೇನೋ ಮನುಜ
ನಿನ್ನ ಹೊತ್ತವಳಿಗೆ...?

ಸುಖದ ಸೊಪ್ಪತ್ತಿಗೆಯ ಲಾಲಸೆಗೆ
ಮೈಮರೆತು ಮಲಿನಗೊಳಿಸಿದೆಯಾ...
ಸಕಲ ಜೀವಿಗಳಿಗೂ ಸ್ವರ್ಗವಾಗಿದ್ದ
ಭುವಿಯ ನರಕವಾಗಿಸಿದೆಯಾ...
ಇದೇ ನಿನ್ನ ಕೊಡುಗೆಯೇನೋ ಮನುಜ
ನಿನ್ನ ಹೊತ್ತವಳಿಗೆ...?

ಹಸುರು ತುಂಬಿದ ಅರಮನೆಯ ಕೆಡುಹಿ
ಸಿಮೆಂಟು ಕಟ್ಟಡದ ಕಾನನವ ಬೆಳೆಸಿದೆಯಾ
ಮುಗಿಲಿಗೆ ವಿಷಗಾಳಿಯ ಚಪ್ಪರವ ಹಾಕಿಸಿ
ಇಂಪಿನ ಸದ್ದನಡಗಿಸಿ ಕರ್ಕಶದ ರಾಗ ಹಾಡಿದೆಯಾ
ಇದೇ ನಿನ್ನ ಕೊಡುಗೆಯೇನೋ ಮನುಜ
ನಿನ್ನ ಹೊತ್ತವಳಿಗೆ...?

ಕ್ಷಮಯಾ ಧರಿತ್ರಿಯು ಕ್ಷಮಿಸದಂತಾ ತಪ್ಪನೆಸಗಬೇಡ,
ಮುನಿಯುವ ಮುನ್ನವೇ ಎಚ್ಚೆತ್ತುಕೋ..
ನಿನ್ನ ಕೈಯಾರೆ ನಿನ್ನವನತಿಯ ಅಹ್ವಾನಿಸಬೇಡ
ತಪ್ಪ ತಿದ್ದುವ ಕಾರ್ಯವನು ಕೈಗೆತ್ತಿಕೋ..
ಇಳೆಯ ಕಳೆಯ ಕೆಡೆಸದಿರೋ ಕೊಡುಗೆಯ ಕೊಡಲಾದೀತೇ..
ನಿನ್ನ ಹೊತ್ತವಳಿಗೆ...?

ಬನ್ನಿ ನಮ್ಮ ಪರಿಸರವ ಉಳಿಸಿ ಬೆಳೆಸೋಣ...

Monday, 4 June, 2012

ಮೊದಲ ಮಳೆ...


ಸುರಿಯುತಿದೆ ಮಳೆ ಎಡೆಬಿಡದೆ
ಮೋಡದಾ ಮನೆಯ ತೊರೆಯುತಿದೆ

ಬಿಸಿಲಿಗೊಣಗಿ ಬಳಲಿ ಹೋಗಿದ್ದ
ಧರೆಯ ಸಂತೈಸಲು ಬಂದಂತಿದೆ
ಕಾದ ಮಣ್ಣಿಂದ ಸುವಾಸನೆಯೊಂದ
ಹೊರಗೆಳೆದು ಎಲ್ಲೆಡೆ ಪಸರಿಸುತಿದೆ

ಅಳಿಸಿಹೋಗಿದ್ದ ಹಸಿರೆನುವ ಬಣ್ಣವ
ಭುವಿಯ ಗೋಡೆಯ ಮೇಲೆ ಬಳಿಯುತಿದೆ
ಒಣಗಿ ಸಾವನಪ್ಪಿದಂತಿದ್ದ ಬೀಜಗಳಿಗೆ
ಮೊಳಕೆಯೊಡೆದು ಬದುಕುವ ಕಲೆಯ ಕಲಿಸುತಿದೆ

ಉರಿವ ಸೂರ್ಯನನೆ ಮರೆಮಾಚಿ
ಭುವಿಗೆ ತಂಪಿನ ನೆರಳ ನೀಡುತಿದೆ
ಇಳೆಗೆ ಬಂದಿದ್ದ ಸುಡುವ ಜ್ವರಕೆ
ತಂಪಿನೌಷದಿಯ ನೀಡುತಿದೆ.

ಜಗದ ಜನರ ದಾಹವನು ತೀರಿಸಲು
ಅಮೃತದ ಬಿಂದುವಾಗಿ ಸುರಿಯುತಿದೆ
ಭುವಿಗೆ ಮೊದಲ ಮಳೆ ಬರುತಲಿದೆ
ಸಕಲ ಜೀವಿಗಳಿಗೂ ಮುದವ ನೀಡುತಿದೆ.

Sunday, 3 June, 2012

ಬಾರೆಯಾ ಮಳೆಹನಿಯೇ...


ಸತಾಯಿಸುತಿರುವೆ ಏಕೆ ಕಾರ್ಮುಗಿಲೇ...
ಮಳೆಹನಿಯ ಒಂದೊಂದಾಗಿ ಸುರಿಸಬಾರದೇ...
ಸೂರ್ಯನ ಕಡುಕೋಪಕ್ಕೆ, ಉರಿ ಕಿರಣದ ತಾಪಕ್ಕೆ
ಒಳಗಾಗಿ ಬಿರುಕು ಬಿಟ್ಟಿದೆ ಎನ್ನೊಡಲು,
ಔಷಧದ ರೂಪದಲಿ ಹರಿಯಬಿಡಬಾರದೆ ನಿನ್ನೊಡಲ ಹನಿಯ,
ಬಿರುಕೆನುವ ಈ ಗಾಯದ ನೋವ ನಿವಾರಿಸಲು

ಈಗ ನಿನ್ನ ಗರ್ಭದೊಳಗಿದ್ದರೂ ಅವು ನಿನ್ನ ಸ್ವಂತ ಮಕ್ಕಳಲ್ಲ
ಆ ರವಿಯ ತೀಕ್ಷ್ಣ ಕಿರಣಗಳ ಸಹಾಯದಿಂದ
ನನ್ನ ಒಡಲಿಂದಲೇ ಸೆಳೆದೊಯ್ದ ಕೂಸು ತಾನೆ ಅವುಗಳು,
ಮತ್ತೆ ನನ್ನೆಡೆಗೆ ಕಳುಹಿಸಿ ಕೊಡುವೆಯೆಂಬ
ನಂಬಿಕೆಯಲಿ ಬಿಟ್ಟು ಕೊಟ್ಟಿದ್ದೆ ಆ ನೀರ ಹನಿಗಳ
ಈಗಲಾದರೂ ಮನಸು ಮಾಡು, ನನಗವುಗಳ ಹಿಂತಿರುಗಿಸಲು,

ನಾ ಹೆತ್ತ ಮನುಜನಾ ಹಾಹಾಕಾರದ ಕೂಗು ಕೇಳಿಸದಾಯಿತೇ..
ಪ್ರಾಣದ ಉಳಿವಿಗಾಗಿ ಚಡಪಡಿಸುತಿರುವುದು ಕಾಣದಾಯಿತೇ..
ಕಂಡರೂ ಕಾಣದಂತೆ ಗಾಳಿಯ ಜೊತೆ ಪರಾರಿಯಾಗಿ ಬಿಡಬೇಡ,
ಮೈಕೊಡವಿ ಮಳೆಹನಿಯ ನನ್ನೆಡೆಗೆ ಸುರಿಸಿಬಿಡು...
ಕಾರಣವೇ ನೀನಾಗಿಬಿಡು, ನನ್ನಲಿಹ ಜೀವ ಸಂಕುಲದ ಪ್ರಾಣವುಳಿಯಲು,
ಮತ್ತೆ ನಾ ಹಸಿರೆನುವ ನಗೆಯ ಬೀರಿ, ಜಗಕೆ ಚೆಲುವ ಪಸರಿಸಲು.

ಕನಸು-ನನಸು


ಕತ್ತಲಲಿ,
ಮುಚ್ಚಿದ
ಕಂಗಳಲಿ,
ಕಂಡಿದ್ದ
ಕನಸುಗಳನೆಲ್ಲಾ
ನೆರವೇರಿಸಲು;
ಬೆಳಕಿನ ತೇರನೇರಿ
ಬಂದ ರವಿ
ಬಾನಿನಲಿ,
ಕನಸಗಳ
ನನಸಾಗಿಸುವ
ಹಾದಿಯನು
ತೋರಿಸಲು.