Tuesday 29 March, 2011

NANAADIDA MATCHU

ಅಂದು ಸಂತಸದಿ ದಿನವಿಡೀ ನಾ ನಲಿದಾಡಿದ್ದೆ.
ಯಾಕೆಂದರೆ ಭಾರತದ ಕ್ರಿಕೆಟ್ ತಂಡಕ್ಕೆ ನನಾಯ್ಕೆಯಾಗಿದ್ದೆ.

ಪಾಕಿಸ್ತಾನದೆದುರಿನ  ಮ್ಯಾಚಿಗೆ ನನ್ನನ್ನು ಹಾಕಿ ಮಾಡ  ಹೊರಟರೆನ್ನ ಅಗ್ನಿ ಪರೀಕ್ಷೆ.
ಆದರು ಧೃತಿಗೆಡದೆ ತವಕದಿಂದ ಮಾಡುತ್ತಿದ್ದೆ ಆ ಸಮಯದ ನಿರೀಕ್ಷೆ.

ಅಂತು ಇಂತು ಬಂದೇಬಿಟ್ಟಿತು ನಾನಾಡಬೇಕಿದ್ದ ಮ್ಯಾಚು.
ಜಯವು ನಮ್ಮದಾಗಲೇಬೇಕು ಎಂದರು ನಮ್ಮ ಕೋಚು.

ಟಾಸ್ ಗೆದ್ದ ಅವರು ಭರ್ಜರಿ ಬ್ಯಾಟಿಂಗ್ ಮಾಡತೊಡಗಿದರು.
ಬಸವಳಿದು ಸುಸ್ತಾಗಿ ಬೆವರು ಸುರಿಸತೊಡಗಿದರು ನಮ್ಮ ಬೌಲರು.

ಆ ದೇವನ ದಯದಿಂದ ಕಪ್ತಾನನ ದೃಷ್ಟಿ ನನ್ನ ಮೇಲೆ ಬಿತ್ತು.
ನನಗೆ ಕೊಟ್ಟ  ಮೊದಲ ಓವರಿನಲ್ಲಿ ಮಿಂಚಿದೆ ೩ ವಿಕೆಟ್ ಕಿತ್ತು.

ಚೊಚ್ಚಲ ಪಂದ್ಯದಲಿ ಸಿಕ್ಕಿತೆನಗೆ ಐದು ವಿಕೆಟ್ ಗಳ ಗೊಂಚಲು
ಆದರು ೨೯೫ ರನ್ ಗಳಿಸಬೇಕಾಗಿತ್ತು ನಾವು ಜಯಗಳಿಸಲು.

ಫಾಸ್ಟು ಬೌಲಿಂಗಿಗೆ ಆಗಿದ್ದರವರು ಭಾರೀ ಫೇಮಸ್ಸು 
ಹಾಗಾಗಿಯೇ ನಮ್ಮ ಬ್ಯಾಟ್ಸಮನ್ ಗಳು ಬೇಗನೆ ಬಂದರು ಪೆವಿಲಿಯನ್ನಿಗೆ ವಾಪಸ್ಸು.

ಐದನೇ ಬ್ಯಾಟ್ಸಮನ್ ಆಗಿ  ಹೊರಡಬೇಕಾದ ಸಮಯ ಬಂತು ನೋಡಿ
ಎದುರಾಳಿಗಳು ನಕ್ಕರು ನನ್ನ ನೋಡಿ, ನನಗೆ ತಮಾಷೆಯ ಮಾಡಿ.

ಅವಮಾನ ಮತ್ತು ಕೋಪದಿಂದ ಬೀಸು ಹೊಡೆತಗಳಿಗೆ ಕೈ ಹಾಕಿದೆ
ಇದರಿಂದಾಗಿಯೇ ಇಪ್ಪತ್ತು ಎಸೆತದಲೇ ಹಾಫ್ ಸೆಂಚುರಿ ಮುಗಿಸಿದೆ.

ಈ ರೀತಿ ಮುಂದುವರಿದು ಬಾರಿಸಿದೆ ಹಲವಾರು ಸಿಕ್ಸರು
ಆಗವರಿಗೆ ಬಂದೆ ಬಿಟ್ಟಿತು ಕಣ್ಣಲ್ಲಿ ಕಣ್ಣೀರು

ಆದರೆ ನನ್ನ ಮೊದಲ ಸೆಂಚುರಿಗೆ ಎರಡು ರನ್ನಿರುವ ವೇಳೆ
ನನ್ನ ದುರಾದೃಷ್ಟಕೆ ಬಂದು ಬಿಡಬೇಕೇ ಜೋರಾದ ಮಳೆ

ಪ್ರೇಕ್ಷಕರಂದರು ನನ್ನ ಬಗೆಗೆ ಇದು ಅವನ ದುರ್ದೆಷೆ
ನಿಲ್ಲಲಾರದ ಮಳೆಯ ಕಂಡು ನನಗಾಯಿತು ತೀವ್ರ ನಿರಾಶೆ

ಮಳೆಯ ನೀರಿಗೆ ನೆನೆದ ಮೈಯನ್ನು ನೋಡುತ್ತಲಿದ್ದಾಗ 
ಹಠಾತ್ತನೆ ಕೇಳಿಸಿತು ನನ್ನಮ್ಮನ ಸಿಡುಕಿನ ಸುಪ್ರಭಾತದ ರಾಗ 

ಅರ್ಥವಾಯಿತು ನನಗಾಗ ಬಂದೆ ಇರಲಿಲ್ಲ ಮಳೆಯು ಭಾರಿ ಜೋರು
ನಿದ್ದೆಯಿಂದೆಬ್ಬಿಸಲು ನನ್ನಮ್ಮ ಸುರಿದಿದ್ದರು ನನ್ನ ಮೇಲೆ ನೀರು.


Monday 28 March, 2011

PRIYE NANNA BAYAKE

ನದಿಯಾಗೋ ಬಯಕೆ, ನೀನೆಂಬ ಕಡಲ ಸೇರುವ ಸುಖಕೆ.
ಮಳೆ ಹನಿಯಾಗೋ ಬಯಕೆ, ನೀನೆಂಬ ಭುವಿಯ ಸ್ಪರ್ಶಿಸುವ ಸುಖಕೆ.
ತೆರೆಯಾಗೋ ಬಯಕೆ, ನೀನೆಂಬ ದಡವ ಆಲಿಂಗಿಸುವ ಸುಖಕೆ.
ಕನಸಾಗೋ ಬಯಕೆ, ಏಕಾಂತದಿ ನಿನ್ನ ಸಾಮೀಪ್ಯದ ಸುಖಕೆ.

ಇಬ್ಬನಿಯಾಗದಿರೋ ಬಯಕೆ, ನೀನೆಂಬ ಎಲೆಯಿಂದ ಜಾರುವ ಭಯಕೆ.
ಪಥವಾಗದಿರೋ ಬಯಕೆ, ನೀನೆಂಬ ಹುಲ್ಲು ಇರದಿರೋ ಭಯಕೆ.
ಭ್ರಮರವಾಗದಿರೋ ಬಯಕೆ, ನೀನೆಂಬ ಸುಮಕೆ ನೋವಾಗೋ ಭಯಕೆ.
ನೀನೆದುರಿರಲು ಕಣ್ ಮುಚ್ಚದಿರೋ ಬಯಕೆ, ನಿನ್ನಂದ ಕಣ್ಣಿಂದ ಮರೆಯಾಗೋ ಭಯಕೆ.

ಚಂದಿರನಾಗೋ ಬಯಕೆ, ನೀನೆಂಬ ಭುವಿಯ ಸುತ್ತ ಸುತ್ತುವುದಕೆ.
ಸುರ್ಯನಾಗೋ ಬಯಕೆ, ನೀನೆಂಬ ಸೂರ್ಯಕಾಂತಿ ನನ್ನನೇ ನೋಡುತಿರುವುದಕೆ.
ಹಕ್ಕಿಯಾಗೋ ಬಯಕೆ, ನೀನೆಂಬ ಮರದಲ್ಲಿ ಗುಡೊಂದನು ಕಟ್ಟುವುದಕೆ. 
ಮರವಾಗೋ ಕೊನೆಯ ಬಯಕೆ, ನೀನೆಂಬ ಲತೆಗೆ ಆಸರೆ ನಾನಾಗುವುದಕೆ. 


Tuesday 22 March, 2011

BALLIYANTHE

ಬಳ್ಳಿಯು 
ಅಪ್ಪಿಕೊಂಡಂತೆ
ಮರದ ತನುವ 
ನಿನ್ನ ನೆನಪುಗಳು 
ತಬ್ಬಿಕೊಂಡಿವೆ 
ನನ್ನ ಮನವ.


ಮಾತು


ಪ್ರಿಯೆ ನಾ ಹೊಳೆವ ಸೂರ್ಯನಂತೆ ಮಾತನಾಡುವುದರಲಿ
ನಿನ್ನೊಡನೆ ಮಾತನಾಡಲು ಬಂದರೆ, ಮೋಡಗಳು ಕವಿಯುವುದು ನನ್ನೆದುರಲಿ
ನಾ ದುಂಡಾದ, ಬೆಳ್ಳಗಿನ ಪೂರ್ಣ ಚಂದ್ರನಂತೆ ಮಾತನಾಡುವುದರಲಿ 
ನಿನ್ನೊಡನೆ ಮಾತನಾಡುತಿರಲು  ಕ್ಷಯ ರೋಗ ಪಡೆದ ಚಂದಿರನ ಸ್ಥಿತಿ ಉಂಟಾಗುವುದೆನ್ನಲಿ.

ತುಟಿಗಳೆರಡೆಕೋ ಚಲಿಸಲಾರದು, ನಾಲಗೆಯೋ ಅತ್ತಿತ್ತ ಹೊರಳಲಾರದು.
ನಿನ್ನ ಮುಖದಂದವನು ಕಂಗಳು ನೋಡುತಿರಲು ಮಾತುಗಳೇ ಹೊರಡಲಾರದು.
ಕನಸಿನಲಿ ನೀ ಬಂದಾಗ ಆಡುವ ಮಾತುಗಳಿಗೆ ಮಿತಿಯೇ ಇರದು
ಆದರೇಕೋ, ವಾಸ್ತವದಿ ಮಾತನಾಡಲು ನನ್ನಯಾ ಕಂಠ ಶಬ್ದಗಳಿಗೆ ಜನುಮ ನೀಡದು.

ಮೈಯೊಳಗೆ ನಡುಕ ಮನದೊಳಗೆ ಪುಳಕ ನಿನ್ನೊಡನೆ ಮಾತನಾಡಲು
ಆಗುವುದು ಮನಕಾನಂದದ ಜಳಕ ನೀ ಮಾತು ಮಾತಿಗೆ ನಗುತಿರಲು
ನಿಜವನರುಹಿದರೆ ಆ ನಗುವೇ ಕಾರಣವು ನಾ ಮಾತನಾಡದಿರಲು
ಮಾತೆಲ್ಲಿ ಹೊರಡುವುದು? ನಿನ್ನ ನಗೆಯಂದವ ಕಂಡು ನಾ ಸ್ತಬ್ಧನಾಗಿರಲು.



Tuesday 15 March, 2011

YEKANTHA

ಮೌನದೆದೆಯೊಳಗೆ ಮೇಲು ದನಿಯೊಂದು ಬರುತ್ತಿತ್ತು.
ಧ್ವನಿಯ ತನುವ ವೀಕ್ಷಿಸಲು ಅದು ಅವಳ ಹೆಸರು.
ಮನದ ಮೌನದೊಳಗೆ ಅದು ಅಚ್ಚಾಗಿತ್ತು.
ಅಂದು; ನನ್ನ ಕಣ್ ಗಳು ಅವಳ ಕಂಡಂದು
ಸೂರ್ಯ ಕಿರಣಗಳು ತಾಕಲು ಕಮಲಗಳರಳುವಂತೆ
ನಗೆಯ ಕಮಲವನು ಅರಳಿಸಿದ್ದಳು.
ನೋಟದಲಿ ಪ್ರೀತಿ ಮಕರಂದವನು ತುಂಬಿಸಿದ್ದಳು.
ಪ್ರತಿಯೊಂದು ನೋಟದಲು ಚಂಚಲತೆ,
ಬಿಡದೆ ನೋಡಲಿಲ್ಲ. ಬಿಟ್ಟು ಬಿಟ್ಟು ನೋಡಿದಳು.
ನಾ ಸೋತು ಹೋದೆ, ಅವಳ ಸೌಂದರ್ಯದ ದಾಸನಾದೆ.
ಆದರವಳಲಿ ಬದಲಾವಣೆ ಇಲ್ಲ
ಬದಲಾವಣೆ ಎಲ್ಲವೂ ನನ್ನೊಳಗೆ.
ಹಗಲೋ ಇರುಳೋ ತಿಳಿಯದಾಯ್ತು,
ಮನಸು ಕನಸುಗಳ ಗುಡಾಯ್ತು.
ಅವಳ ಕಾಣುವ ಬಯಕೆಯದು ಗಾಢವಾಯ್ತು.
ಅವಳ ಇಣುಕು ನೋಟವ ನಾನಿಣುಕಿ ನೋಡುತಿದ್ದೆ.
ಪ್ರೆಮದಾಹ್ವಾನದಂತಿರುತ್ತಿತ್ತು ಅವಳ ಪ್ರತಿಯೊಂದು ನೋಟ
ಆದರು ಭಯದಿ ನುಡಿಯಲಿಲ್ಲ ನಾನೇನನು
ನಾಚಿಕೆಯ ಮುಂದಿರಿಸಿ ಅವಳು ನುಡಿಯದಾದಳು.
ಈ ಎಲ್ಲ ಭಾವನೆಗೆ ಹೆಸರೇನೋ ತಿಳಿಯದಾಗಿತ್ತು.
ಅವರಿವರಲಿ ಕೇಳಿದರೆ ಅವರಂದರು
" ಪ್ರೀತಿ" ಎನುವುದೇ ಇದರ ಹೆಸರು.
ಅಂದಿನಿಂದ ಕಾಡುತಿದೆ ನನ್ನ ಏಕಾಂತ
ಏಕಾಂತ ಎಂದರೆ ಮತ್ತದೇ ಮೌನ
ಮತ್ತೆ ಮನದೊಳಗೆ ನೆನಪಿನ ನರ್ತನ.






SOORYASTHA

ಮತ್ತೊಂದು ದಿನದ ಅಂತ್ಯಕೆ
ನಾಂದಿ ಹಾಡಿದನು ಸೂರ್ಯನು
ಮತ್ತೊಂದು ಇರುಳ ಜನನಕೆ
ರವಿಯು ತನ್ನ ತಾ ಕೊಂದನು.

ಪೂರ್ವದಿಂದ ಪಶ್ಚಿಮಕೆ ದಿನವಿಡೀ ನಡೆದು
ಬಂದ ಹಾದಿಯನು ನೋಡಿ ಬಸವಳಿದು
ದಣಿವು ತಂದ ಬಾಯಾರಿಕೆಯ ತೀರಿಸಲು 
ನೀರ ಕುಡಿಯ ಹೋಗಿ ನೀರೊಳಗೆ ಮುಳುಗಿದನು.

ಮುಡುತಿರಲು ಮುಡಣಕೆ ರಂಗು
ಮುಳುಗುತಿರಲು ಪಡುವಣಕೆ ರಂಗು
ಬದುಕಿ ಬಾಳುವ ಹಗಲಿನಲಿ ಬಳಲಿದನು
ಇಡಿಯ ಜಗಕೆ ಕೊಡುತಲಿ ಬೆಳಕು

ಪಯಣದ ಉದ್ದಕ್ಕೂ ತಾನೋರ್ವನೆ ಬೆಳಗಿ
ಬೆಳಕ ಸೆರೆಯಾಳಾಗಿಹ ತಾರೆಯರ ಕಂಡು ಮರುಗಿ
ಬಂಧ ಮುಕ್ತರನ್ನಾಗಿಸಿ ನುಡಿದನು "ನೀವಿನ್ನು ಮಿನುಗಿ"
ಕಡಲ ತಳದ ಸೆರೆಮನೆಯಲಿ ತಾ ಸೆರೆಯಾಳಾಗಿ.




  



Wednesday 9 March, 2011

PREETHI

ಕರಿ ಮೋಡದ ಗರ್ಭದಲಿ
ಅವಿತಿರುವ ನೀರ ಹನಿಗಳ ರೀತಿ
ಓ ಚಂದದರಸಿ ನನ್ನ ಮನದಲಿ
ಇದೆ ನಿನ್ನ ಬಗೆಗೆ ಅತಿ ಪ್ರೀತಿ

ಮನವ ಬಿಚ್ಚಿ ನಾನೆಂತು ತಿಳಿಸಲಿ
ಹೇಳ ಹೊರಟರೆ ಆವರಿಸುವುದೇಕೆ ನನ್ನ ಭೀತಿ
ಈ ಭೀತಿ ಪ್ರೇಮ ಸಾಮ್ರಾಜ್ಯದಲಿ 
ಆಗಿರುವುದೇನೋ ಒಂದು ಸಂಸ್ಕೃತಿ

ಮರ ಬೆಟ್ಟಗಳ ಸ್ಪರ್ಶಿಸುತಲಿ 
ಮೋಡ ಮಳೆಯ ಸುರಿಸುವ ರೀತಿ
ಧೈರ್ಯದ ದಿಬ್ಬಕೆ ತಾಗುತಲಿ
ತಿಳಿಸುವೆ, ಕಳೆದುಕೊಳ್ಳುತಾ ನಾ ಸ್ಮೃತಿ

ನಿನ್ನ ಮನದಲಿಹ ಬತ್ತಿದಾ ಕೊಳದಲಿ
ನಾ ಸುರಿಸಿದ ಪ್ರೀತಿ ಹನಿಯ ತುಂಬಿಕೊ ಓ ರತಿ
ಒಲ್ಲೆ ಯೆನದಿರು ನಿನ್ನ ಮುದ್ದಾದ ಕಂಠದಲಿ
ಒಲ್ಲೆ ಎಂದರೆ ನನಗಾತ್ಮಹತ್ಯೆಯೇ ಗತಿ

ಯಾಕೆಂದರೆ ಇದೆಯೇನಗೆ ಅತಿ ಪ್ರೀತಿ ನಿನ್ನಲಿ
ನೀನೊಬ್ಬಳೆ ನನ್ನ ಪ್ರೇಮ ಸಾಮ್ರಾಜ್ಯದೊಡತಿ
ಹಾಗಾಗಿ ನನ್ನ ಪ್ರೇಮ ಪತ್ರಕೆ ಸಹಿ ಹಾಕುತಲಿ
ಆಗಬಾರದೇಕೆ ನಾವು ಆದರ್ಶ ದಂಪತಿ. 

SAVI NENAPU

ಮುಳುಗಿದರೇನು? ತೇಲಿದರೇನು ?
ನಾನಿರುವುದು ನಿನ್ನ ನೆನಪಿನ ಕಡಲಲ್ಲಿ
ಮರೆವೆನುವ ದಡವೇ ಸಿಗುತ್ತಿಲ್ಲ,
ಪ್ರಯತ್ನ ಎನುವ ಈಜಿನ ಕೊನೆಯಲ್ಲಿ.

ನನ್ನೆದುರು ನಿನ್ನಯಾ ಇರುವು
ಇದ್ದಂತೆ ಹಗಲಿನಲಿ  ಸೂರ್ಯನ ಬೆಳಕು,
ಮನದೊಳಗಿನ ನಿನ್ನ ನೆನಪುಗಳು
ಕತ್ತಲಲಿರುವಂತೆ ಚಂದಿರನ ಬಿಳಿ ಬೆಳಕು

ನಿಂತಂತೆ ಕಂಡರೂ ಹಲವು ಕಡೆ
ನದಿಯಲಿರುವುದು ನಿರಂತರ ಹರಿವು
ಅದರಂತೆಯೇ ಮರತಂತೆ ಕಂಡರೂ,
ನನ್ನ ಮನದೊಳಗಿಹುದು  ನಿನ್ನ ಸವಿನೆನಪು.

CHANDIRA

ಬೆಳದಿಂಗಳಿನ ಬೆಳಕಲಿ ನೋಡಲು ಚೆಂದ ಆಗಸ
ಚಂದಿರನ ಹಾಲ್ಬೆಳಕು ತರುವುದು ನಮ್ಮಲ್ಲಿ ಸಂತಸ

ಆ ಪೂರ್ಣ ಚಂದ್ರನ ನೋಡಿ ನಾಚಿ ಮರೆಯಾದನು ರವಿ
ಆ ಸಮಯವನೆ ಕಾಡು ಚಂದ್ರನನು ಬಣ್ಣಿಸುವನು ಕವಿ

ಆದರೆ ನಿಜವಾಗಿ ಆ ಚಂದ್ರನೆಷ್ಟು ದೌರ್ಭಾಗ್ಯವಂತ
ಹದಿನೈದು ದಿನದಲೇ ಆಗುವುದವನ ದೇಹಾಂತ.

Tuesday 8 March, 2011

ILLAVALLA

ನದಿಯು
ನಾನಾದರೇನು?
ಕಡಲು 
ನಿನಾದರೇನು ?
ಚೆಲುವೆ
ಇಲ್ಲವಲ್ಲ
ನಮ್ಮ ಬಾಳಿನಲಿ
ಮಿಲನವೆಂಬ
ಅಳಿವೆ.

MUNJAAVU

ನಿದಿರೆಯಾ ಬಂಧನದಿಂದ ಹೊರಬಂದು
ಅತಿ ಸುಂದರ ಮುಂಜಾವನು
ನಾನೊಮ್ಮೆ ಕಣ್ಣಾರೆ ಕಂಡೆ
ಆಯಿತೆನಗೆ, ಮದುವೆಯೊಂದ ಕಂಡಂತೆ

ನಕ್ಷತ್ರಗಳು ಓಡುತ್ತಿತ್ತು
ಬೆಳಕೆಂಬ ಗೋಡೆಯ ಮರೆಗೆ
ವರನು ಬರಲು ವಧುವು
ನಾಚಿ ಮರೆಗೊಡುವಂತೆ

ಪ್ರತಿಯೊಂದು ಕ್ಷಣ ಕ್ಷಣಕೂ ತನ್ನ
ವರ್ಣವ ಬದಲಾಯಿಸುತಿತ್ತು ಆಗಸ
ವರನ ಕಣ್ಣೋಟ ತನ್ನೆಡೆಗಿರಲು 
ವಧುವಿನ ಮುಖವು ರಂಗೆರುವಂತೆ

ಬೆಟ್ಟ ಗುಡ್ಡ ಮರಗಳ ನಡುವಿನಿಂದ 
ರವಿಯು ಮೆಲ್ಲನೆ ಮೇಲೆ ಬಂದ
ಸಖಿಯರ ನಡುವೆ ಮಾಲೆ ಹಿಡಿದು
ವಧುವು ಮಂಟಪದೆಡೆ ಮೆಲ್ಲನೆ ಬರುವಂತೆ

ಹಕ್ಕಿಗಳು, ಮೇಘಗಳು ಅತ್ತಿತ್ತ ಸರಿದಾಡುತಿತ್ತು.
ಮದುವೆಯ ಸಡಗರದಿ ಮಕ್ಕಳು ಓಡಾಡುವಂತೆ
ದೇವ ಮಂದಿರದಿಂದ ಕೇಳಿ ಬಂದ ದೇವಸ್ತುತಿ,
ಕೇಳಿಸಿತೆನಗೆ, ಮಾಂಗಲ್ಯ ಧಾರಣೆಯ ಮಂತ್ರದಂತೆ.







Sunday 6 March, 2011

INDU

ಅಂದೆನ್ನ
ಪ್ರೀತಿ
ಕಂಡಿತ್ತು
ಆನಂದದ
ಪರಮಾವಧಿ
ಇಂದು 
ಆ ಪ್ರೀತಿ
ದುಃಖವೆಂಬ
ಮಸಣದಲೊಂದು
ಸಮಾಧಿ.



Thursday 3 March, 2011

MUKHAVAADA

ಕಾಣದಿರಲೆಂದು
ಮನದೊಳಗಿನ
ದುಗುಡ
ಹಾಕಿರುವೆನು
ಮುಖಕೆ
ನಗುವಿನ
ಮುಖವಾಡ

Wednesday 2 March, 2011

APARICHITHA

ಅಂದು ಕಂಡರೆ ಸಾಕು
ಪ್ರೀತಿ ಉಕ್ಕಿ ಹರಿಯುತಿತ್ತು
ಅವಳಲ್ಲಿ ಅಪರಿಮಿತ
ಆದರಿಂದು ಕಂಡರೂ
ಕಾಣದಂತಾಗಿರುವ ನಾನು
ಅವಳಿಗೆ ಅಪರಿಚಿತ.

MANADINGITHA

ನೀಲಿ ನೀಲಿ ನೀರಿನಲೆಯಲಿ
ಈಜುತಿದ್ದ ಮೀನು ನಾನಾಗಿದ್ದೆ.
ಕಂಡು ನನ್ನ, ಬೀಸಿಬಿಟ್ಟಳು ಪ್ರೇಮ ಜಾಲವ
ಮುಢ ನಾ ಅದರೊಳಗೆ ಬಿದ್ದೆ.

ಮನಸು ಕರಗಿತು, ಮೇಣ ರೂಪದಿ
ಉರಿದು ಪ್ರೀತಿಯ ಬೆಂಕಿಯಲಿ
ಪ್ರೀತಿ ಹಕ್ಕಿಯ ರೆಕ್ಕೆ ಮುರಿಯಿತು
ಅವಳ ಮೋಸ ಅರಿವಾದ ಕ್ಷಣದಲಿ

ದೋಣಿ ಏರಿದ್ದೆ ಜೀವನದ ಯಾನಕೆ
ಸುಖವೆಂಬ ತೀರವ ಸೇರುವಾಸೆಗೆ
ಪ್ರೀತಿ ಎನುವ ತೂತು ಉಂಟಾಯಿತು
ದುಃಖದ ತಳವ ಸೇರುತಿದೆ ನಾವೆಯೀಗ ಮೆಲ್ಲಗೆ

ತನುವು ನಿಶ್ಚಲವಾದ ಸಮಯದಿ
ಮನಸು ನಿಶ್ಚಲವಾಗುವುದು ನಿಶ್ಚಿತ
ಆದರೆ ಮನಸು ಸಾವನು ಪಡೆದ ಮೇಲೆಯು
ತನುವಿಗುಸಿರಿರುವುದರಲಿ ಇದೆಯೇ ಅರ್ಥ?



Tuesday 1 March, 2011

NENAPU

 ಚಂದಿರನು ಬಲು ದೂರದಲಿದ್ದರು
ಅವನ ಪ್ರತಿಬಿಂಬವು
ಕೊಳದೊಳಗೆ ಇರುವಂತೆ
ಪ್ರಿಯೆ, ನೀ ನೆಲೆಸಿರುವೆ
ನನ್ನ ಮನದ ಕೊಳದೊಳಗೆ
ನೆನಪೆನುವ ಪ್ರತಿಬಿಂಬದಂತೆ.


KAVIYU THAYIYANTHE

ಕವಿಯು ತಾಯಿಯಂತೆ
ಹಡೆವ ಮುನ್ನ ನೂರಾರು
ಬಯಕೆಗಳು ಮುದ್ದಾದ 
ಮಗುವ ಹೆರಬೇಕೆಂದು
ಹಡೆದ ಮೇಲೆ ಅದು
ಹೆಗ್ಗಣವಾದರು
ಜಗದೊಳಗವಳಿಗೆ
ತನ್ನ ಕೂಸೆ ಹೆಚ್ಚು;
ಅದರಂತೆ ಕವಿಯು
ಕವಿತೆ ಬರೆಯುವ ಮುನ್ನ
ನೂರಾರು ಕಲ್ಪನೆಗಳು
ಕವನ ಅದ್ಭುತವಾಗಿರಬೇಕೆಂದು
ಮತ್ತೆ ತೋಚಿದ್ದು
ಗೀಚಿದರು ಅವನಿಗದೆ
 ಅಚ್ಚು ಮೆಚ್ಚು.