ಅತಿ ಸುಂದರ ಮುಂಜಾವನು
ನಾನೊಮ್ಮೆ ಕಣ್ಣಾರೆ ಕಂಡೆ
ಆಯಿತೆನಗೆ, ಮದುವೆಯೊಂದ ಕಂಡಂತೆ
ನಕ್ಷತ್ರಗಳು ಓಡುತ್ತಿತ್ತು
ಬೆಳಕೆಂಬ ಗೋಡೆಯ ಮರೆಗೆ
ವರನು ಬರಲು ವಧುವು
ನಾಚಿ ಮರೆಗೊಡುವಂತೆ
ಪ್ರತಿಯೊಂದು ಕ್ಷಣ ಕ್ಷಣಕೂ ತನ್ನ
ವರ್ಣವ ಬದಲಾಯಿಸುತಿತ್ತು ಆಗಸ
ವರನ ಕಣ್ಣೋಟ ತನ್ನೆಡೆಗಿರಲು
ವಧುವಿನ ಮುಖವು ರಂಗೆರುವಂತೆ
ಬೆಟ್ಟ ಗುಡ್ಡ ಮರಗಳ ನಡುವಿನಿಂದ
ರವಿಯು ಮೆಲ್ಲನೆ ಮೇಲೆ ಬಂದ
ಸಖಿಯರ ನಡುವೆ ಮಾಲೆ ಹಿಡಿದು
ವಧುವು ಮಂಟಪದೆಡೆ ಮೆಲ್ಲನೆ ಬರುವಂತೆ
ಹಕ್ಕಿಗಳು, ಮೇಘಗಳು ಅತ್ತಿತ್ತ ಸರಿದಾಡುತಿತ್ತು.
ಮದುವೆಯ ಸಡಗರದಿ ಮಕ್ಕಳು ಓಡಾಡುವಂತೆ
ದೇವ ಮಂದಿರದಿಂದ ಕೇಳಿ ಬಂದ ದೇವಸ್ತುತಿ,
ಕೇಳಿಸಿತೆನಗೆ, ಮಾಂಗಲ್ಯ ಧಾರಣೆಯ ಮಂತ್ರದಂತೆ.
No comments:
Post a Comment