Friday 14 December, 2012

ವಿರಹಗೀತೆ..

ನಾನಂದೆ
ಅವಳ ಬಳಿ,
ನಾ ನಿನ್ನ
ಮೇಲಿಟ್ಟಿರುವ
ಪ್ರೀತಿಗೆ
ನನ್ನ ಪ್ರೇಮ
ಕಾವ್ಯವೇ ಸಾಕ್ಷಿ;
ಅದಕವಳಂದಳು
ವಿರಹಗೀತೆಯ
ಬರೆಯುವುದೊಳ್ಳೆಯದು,
ಯಾಕೆಂದರೆ
ನಾ ನಿಮ್ಮ
ಕೈಗೆಟುಕದ
ಹುಳಿದ್ರಾಕ್ಷಿ.

ಅವಳು...

ಅವಳು.. ಅವಳು...
ಎನುವುದು ನಿಮಗೆ
ಗೀಚಿರುವ ನನ್ನ ಸಾಲುಗಳಲಿ
ಪದೇ ಪದೇ
ಕಾಣಸಿದ್ದಿರಬಹುದು...
ಆದರೆ ನೆರಳಿನಂತೆ
"ಅವಳಿಗೆ" ಅಂಟಿಕೊಂಡಿರುವ
ಪ್ರಶ್ನಾರ್ಥಕ ಚಿಹ್ನೆಯೊಂದು
ನನಗೆ ಮಾತ್ರ ಕಾಣಿಸುವುದು.

ಚಾಲನೆ

ಹಕ್ಕಿಗಳ ಹಾರಾಟಕ್ಕೆ
ಮೋಡಗಳ ಅಲೆದಾಟಕ್ಕೆ
ಸಂಸಾರದ ಜಂಜಾಟದಲಿನ
ಮಾನವನ ಪರದಾಟಕ್ಕೆ;
ಬೆಳಕಿನ ಬಾವುಟವ
ಬೀಸುತಿಹನು ರವಿ
ಇವುಗಳೆಲ್ಲವುಗಳಿಗೆ
ಚಾಲನೆಯ ನೀಡೋದಕ್ಕೆ.

ಕನಸುಗಳು

ನನ್ನ 
ನಿದಿರೆಯಾ 
ಮನೆಯ 
ಮುಂದೆ 
ಬರಿಯ 
ಅವಳ 
ಕನಸುಗಳದೇ 
ನೂಕು ನುಗ್ಗಲು

ತಯಾರಿ

ಕಾಡುವ 
ಕನಸುಗಳ 
ಬೆನ್ನೇರಿ
ಕಂಗಳು  

ಮಾಡುತಿದೆ 
ನಿದಿರೆಯಾ 
ತಯಾರಿ

ಒಳ-ಹೊರ ಹರಿವು..

ಕಾವೇರಿಯ ಒಳಹರಿವಿನ
ಬಗ್ಗೆ ಇಲ್ಲವಂತೆ
ಜಗದೀಶ್ ಶೆಟ್ಟರ್ ಗೆ
ತಲೆನೋವು...
ಅವರನ್ನು ಕಾಡುತ್ತಿರುವುದು
ಹಾವೇರಿಯ ಕಡೆ ಹೊರಟಿರೋ
ತನ್ನ ಸಾಂಸದರ ಹೊರಹರಿವು...

ಸಾಹಸ..

ಪ್ರತಿ ಇರುಳಿನಲೂ
ದುರಾಸೆಗೊಳಗಾಗಿ
ನನ್ನ ಮನಸು
ಮಾಡೋ ಹುಚ್ಚು ಕೆಲಸ,
ನಿದಿರೆಯ ನೆಲವ
ಅಗೆದು ಅಗೆದು
ಅವಳ ಕನಸೆನುವ ನಿಧಿಯ
ಹುಡುಕುವ ವ್ಯರ್ಥ ಸಾಹಸ.

ಪ್ರತಿಧ್ವನಿ...

"ಮರಳಿ ಬಾ"
ಎನುವ ನನ್ನ
ಒಡಲಾಳದ ಕೂಗು,
ತೇಲಿ ತಿರುಗಾಡಿ
ಪ್ರತಿಧ್ವನಿಯಾಗಿ
ಮತ್ತೆ ಬಂದು
ನನ್ನ ಸೇರಿತೇ
ಹೊರತು...
ತಲುಪಬೇಕಾಗಿದ್ದ
ಕಿವಿಗಳನು
ತಲುಪಿರಲೇ ಇಲ್ಲ...

ಚಿಕ್ಕಪ್ಪಾ, ನೀವು ಮಾಡಿದ್ದು ಎಷ್ಟು ಸರಿ....??

ಬರುವ ತಿಂಗಳಿನಲಿ ಊರಿಗೆ ಬರುವೆನೆಂದು ಮೊನ್ನೆ ಹೋದವರು
ಇನ್ನೆಂದಿಗೂ ಹಿಂತಿರುಗಿ ಬರಲಾಗದೂರಿಗೆ ಹೊರಟು ಹೋದದ್ದು,..ಎಷ್ಟು ಸರಿ..?

ಬಲುಬೇಗನೆ ಎದ್ದು ಬೆಳಗಾತ ನಿದ್ದೆ ಬರುವುದಿಲ್ಲ ಎನುತಿದ್ದವರು
ಸೂರ್ಯ ನಡು ನೆತ್ತಿಗೆ ಬಂದರೂ, ಮನೆಯೊಳಗೆ ಹಾಗೇ ಮಲಗಿದ್ದುದು ... ಎಷ್ಟು ಸರಿ..?

ಹೇಳದೆ ಹೋದರೂ, ಮಕ್ಕಳೊಳಗಿನ ನೋವೆನಗೆ ಕಾಣಿಸುವುದೆನುತಿದ್ದವರು
ಅಗಲಿಕೆಯ ನೋವಿನಲಿ ಬೊಬ್ಬಿಡುತ್ತಿದ್ದರೂ ಕಾಣಿಸದವರಂತೆ ಸುಮ್ಮನಿದ್ದುದು... ಎಷ್ಟು ಸರಿ..?


ಮೊದಲು ಸುರಿದ ಭಾಂದವರ ಕಣ್ಣೀರು, ಮತ್ತೆ ಸ್ನಾನಕಾಗಿ ಹೊಯ್ದ ಬಿಸಿ ನೀರು
ಮೈಯ ತಾಕಿದಾಗಲೂ ಎಚ್ಚರಗೊಳ್ಳದೇ ಸುಮ್ಮನೆ ಮಲಗಿದ್ದುದು... ಎಷ್ಟು ಸರಿ...?

ಹೆಗಲ ಮೇಲೆ ಹೊತ್ತೊಯ್ದು, ರಾಶಿ ಕಟ್ಟಿಗೆಯ ಮಂಚದಲಿ ಮಲಗಿಸಿದಾಗ
ಮೆತ್ತಗಿರದ ಕಟ್ಟಿಗೆಯು ಬೆನ್ನ ಚುಚ್ಚುತಿದೆಯೆಂದು ಏಳದಿದ್ದುದು ... ಎಷ್ಟು ಸರಿ...?

ನಿಮ್ಮ ಮಗ ಕಣ್ಣ ಕೆಂಪಗಾಗಿಸಿ, ಒಳಗೆ ಹೊತ್ತಿ ಉರಿಯುತಿದ್ದ ದುಃಖದ ಉರಿಯನ್ನೆ ಕೊಳ್ಳಿಯಾಗಿಸಿದಾಗಲೂ
ತನುವು ಉರಿಯುತಿದೆ ಎಂದು ಮೈಕೊಡವಿ ಎದ್ದು ಕೆಳಗಿಳಿಯದಿದ್ದುದು.. ಎಷ್ಟು ಸರಿ...?

ಭವಬಂಧನದ ಬೇಡಿಗಳನೆಲ್ಲಾ ಕಳಚಿ, ಹಾಯಾಗಿ ದೇವ ಸನ್ನಿಧಿಯ ಸೇರಿ
ಬರಿಯ ನೆನಪುಗಳ ಕತ್ತಲ ಕೋಣೆಯಲ್ಲಿ, ನಮ್ಮನ್ನೆಲ್ಲಾ ಬಂಧಿಸಿದಿರಲ್ಲಾ.. ನೀವು ಮಾಡಿದ್ದು ಎಷ್ಟು ಸರಿ...?

ಕೆಟ್ಟ ಪರಿಣಾಮ

ಪಶ್ಚಿಮದ
ಭಾಷೆ ಮತ್ತು
ಸಂಸ್ಕೃತಿಯ
ಕೆಟ್ಟ ಪರಿಣಾಮದ
ಬಿಸಿಯು ಬಿಟ್ಟಿಲ್ಲ,
ಬೆಳದಿಂಗಳೊಡೆಯ
ಚಂದಿರನನ್ನೂ..
ಮೊದಲೆಲ್ಲಾ
ತಾಯ ಕೈತುತ್ತು
ಉಣುವಾಗ
ಮುದ್ದು ಕಂದಮ್ಮಗಳಿಗೆ
ಮಾಮನಾಗುತ್ತಿದವನು,
ಈಗ ಆ ಮಧುರ
ಸಂಬಂಧವನು
ಕಳಕೊಂಡು
ಆಗಿದ್ದಾನಂತೆ,
ಮಕ್ಕಳ ಪಾಲಿಗೆ
ಬರಿ "ಮೂನು"..

ಸನ್ನದ್ಧ..

ಬರಲಿರೋ
ಪ್ರಳಯವ
ಎದುರಿಸಲು
ಸನ್ನದ್ಧನಾಗಿದ್ದೇನೆ,
ಕುಸ್ತೀ ಪಟುವಿನಂತೆ
ತೊಡೆಯ ತಟ್ಟಿ,
ಮಾಸವೊಂದರ
ಪರಿಶ್ರಮದ ಫಲ
ಈಗ ನನ್ನ
ಕೈಯಲ್ಲಿದೆ,
ಕೇಳಿದೊಡನೆ ಸಾಲ
ಕೊಡಬಹುದಾದವರ
ದೊಡ್ದ ಪಟ್ಟಿ.

ಹಿಂದಿನ ಜನ್ಮ

ಹಿಂದಿನ ಜನ್ಮದಲಿ
ಈ ಚಳಿರಾಯ
ಆಗಿದ್ದನೇನೋ..
ಸಿಡುಕಿನ ಸ್ಟ್ರಿಕ್ಟ್ ಮಾಸ್ಟರು..
ಅದಕಾಗೇ ತಾನೆ,
ಅವನಿರುವವರೆಗೂ
ನಡುಗೋ ಜನರು
ಕೈಯ ಕಟ್ಟಿಕೊಳುವರು.

ದಾಹ

ಗೆಳತೀ...
ನೀನಿರದೆ,
ನಾ ವಿರಹದಾ
ದಾಹದಲಿ
ಬಳಲಿ ಹೋದೆ,
ಇರುಳ ನಿದಿರೆಯ
ಸಣ್ಣ ಪಾತ್ರೆಯಲಿ
ನಿನ್ನ ಕನಸೆನುವ
ನೀರ ಸುರಿಸಿ
ಈ ದಾಹವನು
ತಣಿಸಬಾರದೇ..

ಕಾರಣ...

ಯಡಿಯೂರಪ್ಪನವರು
"ಬಿ.ಜೆ.ಪಿ" ಯಲ್ಲಿ
"ಬಿ" ಫಾರ್
"ಬಂಡಾಯ" ಮಾಡಿ ,
ಹೊಸ "ಕೆ.ಜೆ.ಪಿ" ಯನ್ನು
ಕಟ್ಟಲು ಕಾರಣ...
ಇಲ್ಲಿರುವ " ಕೆ " ಫಾರ್
"ಕುರ್ಚಿ" ಆಗಿರಬಹುದೇ..?