Thursday 28 February 2013

ಪ್ರೀತಿ ಮತ್ತು ಕವನ

ಪದಗಳೂ
ಅವಳಂತಾಗಿವೆ.
ಇದ್ದೂ ಇಲ್ಲದಂತೆ,
ಪ್ರೀತಿ ಎನುವ
ಕವನದಂಗಣವ
ಪ್ರವೇಶಿಸುವ
ಲಕ್ಷಣವೇ ಇಲ್ಲ

ಡೈ-ವರ್ಶನ್...

ಉಡುಪಿ ಮಂಗಳೂರಿನ
ಹೊಸ ರೋಡಿನ
ಕಾಮಗಾರಿಯಿಂದಾಗಿ
ಸಿಗುವುದು ನಮಗೆ ಅಲ್ಲಲ್ಲಿ
ಕೆಲವು ಡೈವರ್ಶನ್ನು(Diversion)
ಆದರೆ ಅಲ್ಲಾದ ಸಾವುಗಳ
ಪಟ್ಟಿ ನೋಡಿದಾಗ
ನನಗನಿಸುವುದು
ಇದು ಅಪಘಾತಕ್ಕಾಗೇ ಮಾಡಿದ
ಹೊಸ ಡೈ(Die)ವರ್ಶನ್ನು(Version)

ಫೇಸ್ ಬುಕ್ ಜೀವನ

ಜೀವನವೂ ಫೇಸ್ ಬುಕ್
ತರ ಎಂದುಕೊಂಡು
ಬಸ್ ಸ್ಟ್ಯಾಂಡಿನಲಿ
ಒಂಟಿಯಾಗಿದ್ದ ಹುಡುಗಿಯ
ನಗು ಮೊಗದ ಕಡೆ
ತೇಲಿ ಬಿಟ್ಟೆ " ಹಾಯ್ "
ಎನುವ ಸಣ್ಣ ಕಮೆಂಟು;
ಅಲ್ಲಿಂದಲೊಂದು " ಹಾಯ್ "ನ
ನಿರೀಕ್ಷೆಯಲಿದ್ದ ನನಗೆ ಸಿಕ್ಕಿದ್ದು
" ಬೇಕಾ " ಎನುವ ಹೊಸ ಕಮೆಂಟು,
ಮತ್ತೆ ಥಂಬ್ಸ್ ಅಪ್ ಸಿಂಬಲಿಗೆ ಬದಲಾಗಿ
ಕಾಣಿಸಿತು ಅವಳ ಕಾಲಿನ ಒಂದು ಮೆಟ್ಟು

ಜಿಹಾದಿ

ಸಿಡಿದ ಸಿಡಿತಲೆಗೆ
ಜೀವಗಳೊಂದಿಷ್ಟು
ಬಲಿಯಾಗಿ ಹರಿದಿದೆ
ಒಂದೆಡೆ ರಕ್ತದ ನದಿ;
ಇನ್ನೊಂದೆಡೆ
ಬಲಿಯಾದವರ ಆಪ್ತರು
ಹರಿಸುತ್ತಿದ್ದಾರೆ
ಧಾರಾಕಾರದಿ ಕಣ್ಣೀರ ನದಿ;
ಈ ನದಿಗಳಿಂದಲೇ
ದಾಹವ ತೀರಿಸುವ
ಬಯಕೆಯೇ ನಿನದು...?
ಅದೆಲ್ಲೋ ಮರೆಯಲಡಗಿರುವ
ಓ ಮತಾಂಧ ಜಿಹಾದಿ...?

ಉಡುಗೊರೆ

ಆಯಾಸದಿಂದ
ಬಳಲಿರುವ
ತನುವಿಗೆ
ಇರುಳ
ರಾಜನ
ಊಡುಗೊರೆ
ಈ ಸುಖನಿದ್ರೆ

ಹೊಸ ಭಾಸ್ಕರ

ಲೋಕ(ಆಯುಕ್ತ)ಕ್ಕೆ
ಭಾಸ್ಕರ(ರಾವ್)ನ
ಉದಯ
ಲಂಚಕೋರರೆಲ್ಲರಿಗೆ
ಈತ ಕಾಣಿಸಲಿ
ದುರ್ಗತಿಯ

ಕೆಂದುಟಿ...??

ತುಟಿಯ ಬೆಸೆದು
ಕೆಂಪಗಾಗಿಸುವೆಯಾ ನಲ್ಲೆ
ಎಂದು ಪಿಸುಗುಟ್ಟಿದ
ಪ್ರಿಯತಮ ಅತ್ತಿತ್ತ
ಹುಡುಕತೊಡಗಿದ
ಪಾರ್ಕಿನಲೊಂದು ಪೊದೆ ;
ಬರಿಯ ತುಟಿಯಷ್ಟೇ ಅಲ್ಲ
ಪೂರ್ತಿ ಮುಖವೀಗ
ಕೆಂಪು ಕೆಂಪು;
ಕಾರಣ... ಸಿಕ್ಕಿತಲ್ಲ
ನೈತಿಕ ಪೋಲೀಸರಿಂದ
ಹಿಗ್ಗಾ ಮುಗ್ಗಾ ಒದೆ

ದುರಂತ ಪ್ರೇಮ

ಈ ಕಾಲದ
ಹೆಚ್ಚಿನ ಪ್ರೀತಿಗಳು
ಹುಟ್ಟುವುದು
ಉಡುಗೊರೆಗಳ
ಅರಮನೆಯಲ್ಲಿ..
ಶೀಲವೆನುವ
ಉಸಿರ ಕಿತ್ತು
ಅಲ್ಪಾಯುವನಾಗಿಸಿ
ಹೂತು ಬಿಡುವರು
ಮೆಲ್ಲಗೆ, "ಮರೆವು"
ಎನುವ ಮಸಣದಲ್ಲಿ..

Thursday 14 February 2013

ಗು-ಲಾಬಿ

ಆತ , ಆಕೆಗೆ
ನಗುಮುಖದಿ ಕೊಟ್ಟನಿಂದು
ಒಂದು ಸುಂದರ
ಕೆಂಪು ಗುಲಾಬಿ;
ಯಾಕೆಂದು ಕೇಳಿದಾಗ
ಆತನಿತ್ತ ಉತ್ತರ
ಪ್ರೇಮ ವ್ಯವಹಾರದಲಿ
ಇದೊಂಥರಾ "ಲಾಬಿ"

ನಿಜವಾದ ಪ್ರೇಮಿ...

ಮೊದಲ ಇಣುಕು ನೋಟದಲಿ
ನಾಚಿಕೆಯಲಿ ಕೆಂಪು ಕೆಂಪಾಗಿ
ಮತ್ತೆ ದಿನವಿಡೀ ವಸುಧೆಯನೇ
ನೋಡು ನೋಡುತಾ
ಸಂತಸದಿ ಬೆಳಗಿ ಹೊಳಪಾಗಿ,
ಮುಸ್ಸಂಜೆಯ ಅಗಲಿಕೆಯಲಿ
ಬೇಸರದಿ ಸಿಡುಕಿ ಕೆಂಪಾಗಿ,
ಛಲ ಬಿಡದ ವಿಕ್ರಮನಂತೆ
ಮತ್ತೆ ಮತ್ತೆ ಮೂಡಣದಿ ಮೂಡಿ,
ನೋಟದಲೇ ಪ್ರೇಮಧಾರೆಯನೆರೆಯುವ
ದಿವಾಕರನೇ ನಿಜವಾದ ಪ್ರೇಮಿ...

ರದ್ದು...

ಪ್ರೇಮಿಗಳ ದಿನ
ನಾಳೆಯೆಂದು
ಇಂದಿನಿರುಳ
ಕನಸೊಳಗಿನ
ಭೇಟಿಯನು
ರದ್ದುಗೊಳಿಸದಿರು
ಗೆಳತೀ...

ಕಿಸ್ ಡೇ..

ಮುತ್ತಿಗೂ ಒಂದು
ದಿನವಿದೆಯಂತೆ,
ಅಪ್ಪಟ ದೇಸಿಗನಿಗೆ
ಈ ಪರದೇಸಿ
ಆಚರಣೆಯ
ಬಗೆಗೇನು ಗೊತ್ತು...?
ನಮ್ಮತನವನು
ಅಪ್ಪಿಕೊಂಡವರಿಗೆ
ಗೊತ್ತಿರುವುದೊಂದೆ,
ಈ ದೇಶದಲಿ
ಮುತ್ತೆನುವುದು
ಗಂಡ ಹೆಂಡಿರ
ವೈಯಕ್ತಿಕ ಸೊತ್ತು.

Wednesday 13 February 2013

ಇದೆಂಥಾ ಘೋರ ಅನ್ಯಾಯ...ದೇಶದಾ ಹೃದಯವನೇ ಸುಡಲೆಂದು ಬಂದವನ
ದಶಕಗಳ ಕಾಲ ಪೋಷಿಸಿತು ಸರ್ಕಾರ ಜೈಲಿನಲಿ
ಸರ್ವೋಚ್ಛ ನ್ಯಾಯಲಯವೇ ತೀರ್ಮಾನಿಸಿದ ಉಗ್ರನಿಗೆ
ತಡವಾಗಿಯಾದರೂ ಶಿಕ್ಷೆ ಜಾರಿಯಾಯಿತು, ಗುಪ್ತ ರೀತಿಯಲಿ

ಅಂದು ಹೋರಾಡಿ ವೀರಮರಣವನಪ್ಪಿದ ಜನರ ಬಂಧುಗಳ ಸಂತೃಪ್ತಿಗೊಳಿಸಬೇಕಿತ್ತು,
ಮುಚ್ಚುಮರೆಯಿರದೆ ಉಗ್ರನನು ತೆರೆದ ಮೈದಾನದಲಿ ಗಲ್ಲಿಗೇರಿಸಿ,
ಆದರೆಂಥಾ ವಿಪರ್ಯಾಸ... ಸಂಭ್ರಮಿಸಿದವರನೆಲ್ಲಾ ದೂರುತಿದೆ ಮಾಧ್ಯಮ
ಪ್ರಚೋದಿಸುತಿಹರಿವರೆನುವ ಮಾತನು ಪದೇ ಪದೇ ಬಿತ್ತರಿಸಿ.

ಇದೆಂಥಾ ಇಬ್ಬಗೆಯ ನೀತಿ, ಅಸುರನಂತವನ ಮರಣಕೆ ಸಂಭ್ರಮಿಸುವುದು ತಪ್ಪಂತೆ,
ಆದರತ್ತ ಉಗ್ರನ ಬಹಿರಂಗವಾಗಿ ಬೆಂಬಲಿಸಿದವರ ದೇಶನಿಷ್ಠೆಯನು ಕೇಳುವವರಾರಿಲ್ಲ..
ತುತ್ತುಣಿಸಿದ ತಾಯಿ ಭಾರತಿಯ ಮಡಿಲಲ್ಲೇ ಕುಳಿತು ಬೆನ್ನಿಗೆ ಚೂರಿ ಹಾಕುವವರ ಮರೆಗಿರಿಸಿ
ದೇಶಸೇವೆಯನೇ ವೃತ್ತಿಯಾಗಿಸಿದವರನು ಭಯೋತ್ಪಾದಕರೆಂದು ಜರೆಯುವರಲ್ಲ

ತಾರೆಗಳು...ಕಪ್ಪಗಿನ
ಆಗಸದ
ತೋಟದಲಿ
ಅರಳಿ
ನಿಂತಿರುವ
ಚೆಲುವಿನ
ಹೂವುಗಳು;
ಈ ಹೊಳೆವ
ತಾರೆಗಳು

ಜೊತೆಕಂಡಿರುವ
ಸಾವಿರ
ಕನಸುಗಳ
ನೆನಪುಗಳು
ಮನದಲಿ
ಬೇರೂರಿದೆ;
ಅದರ
ಪೂರೈಕೆಗಾಗಿ
ದುಡಿವ
ತನುವಿಗೆ
ಹಗಲಿನೊಡೆಯ
ಭಾಸ್ಕರನ
ಜೊತೆಯಿದೆ

ಪ್ರೇಮ ನಿವೇದನೆ...

ಹೃದಯದರಮನೆಗೆ ಒಮ್ಮೆ
ಭೇಟಿ ನೀಡೆಯಾ, ಗೆಳತಿ;
ಅಲ್ಲಿ ಉರಿಸಿರುವೆ ನಿನಗಾಗಿ
ಸಾವಿರ ಪ್ರೇಮದ ಜ್ಯೋತಿ

ಆ ಜ್ಯೋತಿಗಳ ಬೆಳಕಲಿ
ನಿನ್ನ ಚೆಲುವ ನಗು ಹೊಳೆಯಲಿ
ನಿನಗಾಗಿರುವ ನನ್ನ ಪ್ರೀತಿಯು
ನಿನ್ನ ಕಂಗಳಿಗೂ ಕಾಣಲಿ

ನಿನಗಾಗಿ ಶೃಂಗರಿಸಿದ ನನ್ನ
ಮನದರಮನೆಯ ಕಣ್ತುಂಬಾ ನೋಡು
ಅದು ನಿನಗೆ ಹಿಡಿಸಿದರೆ
ಅಲ್ಲೇ ನೆಲೆ ನಿಲ್ಲುವ ಮನವ ಮಾಡು

ಹೇಳೇ ಗೆಳತಿ ನಿನ್ನೊಪ್ಪಿಗೆಯ
ಅಪ್ಪುಗೆಗೆ ನಾ ತೋಳನಗಲಿಸಲೇ...
ಇಲ್ಲವಾದಲ್ಲಿ ಪ್ರೇಮ ನಿವೇದನೆಗಾಗಿ
ನಿನ್ನೆದುರು ನಾ ಮೊಣಕಾಲೂರಲೇ...

ಅರ್ಜಿ...

ರಾಷ್ಟ್ರ ಪತಿಯ
ಕುರ್ಚಿಯಲ್ಲಿ ನೀವು
ಕುಳಿತುಕೊಳ್ಳಬೇಕಾಯ್ತು ನೋಡಿ,
ಓ.. ಪ್ರಣವ್ ಮುಖರ್ಜಿ;
ತಿರಸ್ಕರಿಸಿ ತಿಪ್ಪೆಗೆಸೆಯೋಕೆ
ಕಸಬ್ ಮತ್ತು
ಅಫ್ಜಲ್ ಗುರುವಿನ
ಕ್ಷಮಾದಾನದ ಅರ್ಜಿ.

ಸಿಹಿ-ಕಹಿ ಸುದ್ದಿ

ಈ ದಿನ ಸಿಕ್ಕಿದೆ
ಒಂದು ಸಿಹಿ ಸುದ್ದಿ
ಇನ್ನೊಂದು ಕೈ ಸುದ್ದಿ
ಅಲ್ಲಿ ಕೇಂದ್ರ ಸರ್ಕಾರದವರು
ತಡವಾಗಿಯಾದರೂ
ಅಫ್ಜಲ್ ಗುರುವಿಗೆ
ಮರಣದಂಡನೆ ಕೊಟ್ಟರು;
ಇತ್ತ ರಾಜ್ಯ ಸರ್ಕಾರದವರು
ನಮ್ಮವರಿಗೆ ಕುಡಿಯಲು
ನೀರಿಲ್ಲದಿರುವುದ ಕಂಡರೂ
ಬದಿಯ ರಾಜ್ಯಕೆ
ನೀರು ಹರಿಸಿಯೇ ಬಿಟ್ಟರು.

ಹೃದಯದ ಗತಿ ಏನು...?

ಚಲಿಸುತ್ತಿದ್ದ ಬಸ್ಸಲ್ಲಿ ಒಬ್ಬಾಕೆ
ಚೆಲುವಿನ ಮಂದಹಾಸ ಬೀರಿ
ಗುನುಗುನಿಸತೊಡಗಿದಳು
" ನೀ ಸನಿಹಕೆ ಬಂದರೆ
ಹೃದಯದ ಗತಿ ಏನು..? "
ಅವಳ ಬದಿಯ ಸೀಟು
ಖಾಲಿಯಾಗಿತ್ತು, ಹೋಗಿ ಕುಳಿತೆ,
ಅವಳ ಹೃದಯದ ಗತಿ
ಏನಾಗುವುದೆಂದು ನೋಡ ಬಯಸಿ;
ಇನ್ನೊಂದು ಸ್ಟಾಪಿನಲಿ
ಇಳಿದು ಹೋಗುವವರೆಗೂ
ಅವಳ ಹೃದಯದ ಗತಿಯಲ್ಲಿ
ಏನೂ ಏರು ಪೇರಿಲ್ಲ...
ಅದೆಲ್ಲವೂ ನನ್ನ ಪಾಲಿಗೆ.
ನಾನೀಗ ಗುನುಗುನಿಸುತ್ತಿದ್ದೇನೆ,
" ಕಳ್ಳಿ ಇವಳು, ಅಯ್ಯೋ ಕಳ್ಳಿ ಇವಳು
ಪರ್ಸು ಕದ್ದೇ ಬಿಟ್ಟಳು ಕಣ್ಣಲ್ಲೇ ಯಾಮಾರಿಸಿ"

ಹೊಳೆವ ತಾರೆ

ಮರೆಯಲಿದ್ದ
ತಾರೆಗಳೆಲ್ಲ
ಕತ್ತಲಾದಂತೆ
ಬಾನನಾವರಿಸಿ
ಮಿನುಗಿದಂತೆ,
ನನ್ನವಳ
ಸವಿ ನೆನಪಿನ
ಕನಸುಗಳು
ನಿದಿರೆಯಾಗಸದ
ಕತ್ತಲಲಿ
ಹೊಳೆವ
ತಾರೆಗಳಾದೀತೇ...?

Thursday 7 February 2013

ಮಾಯಆಗಸದ ತುತ್ತತುದಿಯಿಂದ
ಬುವಿಯೆಡೆಗೆ ಉರುಳಿ
ಜಾರಿದುದರಿಂದಲಾಯಿತು
ರವಿಯ ಮೈಯಲ್ಲಿ ಕೆಂಪು ಗಾಯ;
ಆ ಗಾಯದ ಉರಿಯ
ನೋವ ತಣಿಸಿಕೊಳಲೆಂದು
ಕಡಲ ನೀರಿಗಿಳಿದವ, ಅಲ್ಲಿಯೂ ಜಾರಿ
ಕಡಲೊಳಗೆ ಮುಳುಗಿ ಮಾಯ

ಚುಕ್ಕಿಆಗಸದ ತುಂಬೆಲ್ಲಾ
ಹರಡಿಕೊಂಡಿದ್ದ
ಕತ್ತಲ ಅಟ್ಟಹಾಸದ
ಕಹಿ ಅಧ್ಯಾಯಕ್ಕೆ
ಪೂರ್ಣ ವಿರಾಮ,
ಈ ರವಿಯೆನುವ
ಮೂಡಣದ
ಬಿಳಿ ಚುಕ್ಕಿ.

ಸುಳಿವು...ತಿಳಿಸದೆ ತೊರೆದು
ಹೋದವಳ ಕುರಿತೆಲ್ಲವನು
ಅಳಿಸಿ ಹಾಕಿರುವೆ...
ಎಂಬ ಭ್ರಮೆಯಲಿ
ನಿರಾಳನಾಗಿದ್ದೆ ;
ಏಕಾಂತದ ಬೆಳಕೊಂದು
ಮನದ ಮೂಲೆಗಿಳಿದು
ಅವಳವಿತಿರುವ ಸುಳಿವ
ಕೊಟ್ಟ ಕ್ಷಣದಿಂದಲೇ,
ನಾ ಅಳುವಿನ ಕಡಲೊಳಗೆ
ಮುಳುಗತೊಡಗಿದ್ದೆ.

ಅಧಿಕಾರಆಗಸದ
ರಂಗಿನಲಿ
ಆಗುತಿದೆ
ಮೆಲ್ಲಮೆಲ್ಲಗೆ
ಬದಲಾವಣೆ..
ರವಿ ಕಡಲ
ಸೇರಿದಾಗಿನಿಂದ,
ಬಾನಿನ ಮೇಲೆ
ಕತ್ತಲ ಕಪ್ಪು
ಬಣ್ಣದ್ದೇ
ಅಧಿಕಾರ
ಚಲಾವಣೆ.

ವಾಸ್ತವ..

ನಡಿಗೆ ನಡಿಗೆಯೆಂದು
ದೊಡ್ದ ಭಾಷಣವ ಬಿಗಿದು
ವೇದಿಕೆಯಿಂದಿಳಿದೊಡನೆ
ನಾಯಕರುಗಳೆಲ್ಲಾ ಕಾರಿನೊಳಗೆ...
ಅವರ ಬಿರುಸಿನ
ಮಾತನಾಲಿಸಿದ
ಬಡ ಕಾರ್ಯಕರ್ತರದಷ್ಟೇ
ನಿಜವಾದ ಬಿಸಿಲ ನಡಿಗೆ

ಅಭದ್ರತೆ

ಆ ದೇಶದಲಿರುವ
ಸಮಸ್ತ ಹಿಂದೂ
ಅಲ್ಪಸಂಖ್ಯಾತರಿಗಿಲ್ಲ
ಎಳ್ಳಷ್ಟೂ ಸುರಕ್ಷತೆ;
ಆದರಲ್ಲಿನ ಮಂತ್ರಿಗೆ
ಕಾಡುತಿರುವ ಚಿಂತೆ
ಭಾರತದ ಒಬ್ಬ ನಟನಿಗೆ
ಕಾಡುತ್ತಿರುವ ಅಭದ್ರತೆ.

ಗಮನ

ಕಾಂಗ್ರೆಸ್ ನಡಿಗೆ 
ಸಾಮರಸ್ಯದ ಕಡೆಗೆ
ಆದರೆ ಅವರ

ನಿಜವಾದ ಗಮನ
ಕೋಟಿ ನುಂಗಿ 

ಬೆಳೆದಿರೋ ಬೊಜ್ಜನ್ನು 
ಕರಗಿಸುವ ಕಡೆಗೆ

ಪುಟ್ಟ ನೇಸರ...ಕಡಲ ಮಾತೆ
ತಾ ಹೆತ್ತ ಕಂದನ
ಮೈತೊಳೆದು,
ಹೊಳೆವ ಬಂಗಾರದ
ಉಡುಗೆಯನು
ತೊಡಿಸಿ, ಸಿಂಗರಿಸಿ
ಹಾಯಾಗಿ ಮಲಗಿರಲಿ
ಎಂದು ಹಾಕಿದಳೇ
ಬಾನಿನಲಿ ತೂಗು ಹಾಕಿದ್ದ
ಮೋಡದಾ ತೊಟ್ಟಿಲಿಗೆ...
ಇಣುಕಿಣುಕಿ ಮುದ್ದು
ಕಂದನ ನೋಡಿ
ಓಡಾಡತೊಡಗಿದ
ಬಾನಾಡಿಗಳು
ಚಿಲಿಪಿಯ ಜೋಗುಳವ
ಹಾಡತೊಡಗಿದವೇ...
ಹಾಯಾದ ನಿದಿರೆ
ಬರಲೆಂದು
ಈ ಪುಟ್ಟ ನೇಸರನಿಗೆ...