Sunday, 29 July, 2012

ಪಡೀಲ್ ನಲ್ಲಿ ನಡೆದ ರೇವ್ ಪಾರ್ಟಿ ಮತ್ತು ಅದರ ಮೇಲಿನ ದಾಳಿ.. ಒಂದು ವಿಶ್ಲೇಷಣೆ...

ಇವತ್ತು ಕನ್ನಡ ನ್ಯೂಸ್ ಚಾನಲ್ ನೋಡೋ ಹಾಗೇ ಇಲ್ಲ ನಿನ್ನೆಯಿಂದ ರೆಸಾರ್ಟ್ ದಾಳಿ ಅನ್ನೋ ಹೊಸ ಚ್ಯೂಯಿಂಗ್ ಗಮ್ ಸಿಕ್ಕಿದೆ ಅದರ ಸಿಹಿರಸ ಮುಗಿಯೋವರೆಗೆ ಜಗೀತಾನೆ ಇರ್ತಾರೆ...(ಈ ನ್ಯೂಸ್ ಚಾನಲ್ ನವರ ವಿಶೇಷತೆ ಏನು ಅಂದ್ರೆ ತಮ್ಮ ಅನುಭವಕ್ಕೆ ಸಿಹಿ ಹೋಗಿದೆ ಅಂತ ಗೊತ್ತಾದ್ರೂ ನೋಡೋರು ಥೂ ಉಗೀರ್ರೀ ಅದನ್ನ ಅನ್ನೋವರೆಗೆ ಜಗೀತಾನೆ ಇರ್ತಾರೆ)
ಇನ್ನು ಈ ಘಟನೆಯ ಕುರಿತು ...
ಮೊದಲಾಗಿ ಎಲ್ಲಾರೂ ಹೇಳುತ್ತಿರುವುದು... ಹೆಣ್ಣು ಮಕ್ಕಳಿಗೆ ಹೊಡೆಯೋದು ನಮ್ಮ ಸಂಸ್ಕೃತೀ ನಾ... ಹೆಣ್ಣನ್ನು ಪೂಜಿಸೋ ದೇಶ ನಮ್ಮದು ಅಂತ... ಖಂಡಿತಾ ಒಪ್ಪೋಣ ಹೆಣ್ಣನ್ನು ಪೂಜಿಸೋ ದೇಶ ನಮ್ಮದು... ಹಾಗಂತ ಸೀತೆ, ದ್ರೌಪದಿ, ತಾರ ಇಂತಹ ಹೆಣ್ಣನ್ನು ಪೂಜಿಸುತ್ತೇವೆಯೇ ಹೊರತು ಪೂತನಿ, ಶೂರ್ಪನಖಿ ಇಂತವರನ್ನು ಪೂಜಿಸೋಲ್ಲ.. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಕೂಡ ಶೂರ್ಪನಖಿಯನ್ನು ದಂಡಿಸುವುದೇ ಸರಿ ಎಂದ. ಇದರ ಅರ್ಥ ವ್ಯಕ್ತಿಗೆ ಪೂಜೆ ಅಲ್ಲ ಅದು ವ್ಯಕ್ತಿತ್ವಕ್ಕೆ ಪೂಜೆ ಅನ್ನೋದು. ಸಾಮ ದಾನ ಭೇದ ದಂಡ ಇವೆಲ್ಲವನ್ನೂ ಉಪಯೋಗಿಸುವಂತೆ ನಮ್ಮ ಧರ್ಮ ಹೇಳಿಕೊಟ್ಟಿದೆ... ಬಹುಶ ಮಾಧ್ಯಮದವರು ತೋರಿಸದೇ ಇರುವಂತಾ ವಿಷಯ ಆಸುಪಾಸಿನ ಜನರ ಅಭಿಪ್ರಾಯ... ನಾನು ಪೇಪರಿನಲ್ಲಿ ಓದಿದಂತೆ ಹತ್ತಿರದ ಜನ ಪೋಲೀಸರಲ್ಲಿ ಈ ರೇವ್ ಪಾರ್ಟಿಗಳ ಬಗ್ಗೆ ತಿಳಿಸಿದ್ದಾರೆ ಆದರೂ ಸಕಾಲದಲ್ಲಿ ಇದರ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ... ಪೋಲೀಸರೇ ಕ್ರಮ ಕೈಗೊಂಡಿದ್ದರೆ ಇಂತಾ ಸಂಘಟನೆಗಳು ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದರೇ...??
ಇಲ್ಲಿ ನಡೆದದ್ದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ... ಆದರೂ ಮಾಧ್ಯಮದವರ ಪ್ರಶ್ನೆ ಹೆಣ್ಣು ಮಕ್ಕಳನ್ನು ಅಸಭ್ಯವಾಗಿ ನಡೆಸಿಕೊಂಡರು ಅಂತಾ ನಾನು ಈ ದೃಶ್ಯಗಳನ್ನು ನೋಡಿದಾಗ ನನಗೆ ಅನ್ನಿಸಿದ್ದು... ಅವರನ್ನ ಮಾಧ್ಯಮಕ್ಕೆ ತೋರಿಸುವಾಗ ಆ ಹುಡುಗಿಯರ ಕೊಸರಾಟದಿಂದಾಗಿ ಅಸಭ್ಯವಾಗಿ ಕಂಡಿದೆ ಅದಕ್ಕೆ ಕಾರಣ ಅವರು ಹಾಕಿಕೊಂಡಿದ್ದ ಬಟ್ಟೆ ಬಹುಶ ಇದೇ ಹೆಣ್ಣು ಮಕ್ಕಳು ಚೂಡಿದಾರ್ ಹಾಕಿದ್ದರೆ ಇದೇ ರೀತಿಯ ಎಳೆದಾಟ ಅಸಭ್ಯವಾಗಿ ಕಾಣುತ್ತಿರಲಿಲ್ಲ.... ವಿಚಿತ್ರ ಎಂದರೆ ಯಾವ ಅನೈತಿಕ ಚಟುವಟಿಕೆಯನ್ನು ಇವರು ಮಾಡುತ್ತಿದ್ದರೋ ಅದು ಯಾರಿಗೂ ಅಸಭ್ಯವಾಗಿ ಕಾಣುತ್ತಿಲ್ಲ ಅಂದರೆ ಕ್ರಿಯೆ ಅಸಹ್ಯಕರವಾಗಿದ್ದರೂ ಅದು ಅಸಭ್ಯವಾಗಿ ಕಾಣದೆ ಪ್ರತಿಕ್ರಿಯೆ ಮಾತ್ರ ಅಸಹ್ಯಕರವಾಗಿ ಕಂಡಿದೆ.
ಇನ್ನು ಇಲ್ಲಿನ ಕ್ರಿಯೆಯ ಬಗ್ಗೆ ಅಂದರೆ ನಾವೇನು ರೇವ್ ಪಾರ್ಟಿ ಅನ್ನುತ್ತಿದ್ದೇವೋ ಅದರ ಕುರಿತು ನಮ್ಮ ಸಂಸ್ಕೃತಿಗೆ ಹೇಳಿಸಿದಂತಾದ್ದು ಅಲ್ಲ ಆದರೆ ಅಲ್ಲಿನವರು ಹೇಳುತ್ತಿರುವುದು ಇದು ಬರ್ತ್ ಡೇ ಪಾರ್ಟಿ ಎಂದು... ಬಹುಶ ಬರ್ತ್ ಡೇ ಪಾರ್ಟಿಗೆ ಬೆಡ್ ರೂಮ್ ಗಳ ಅವಶ್ಯಕತೆ ಏನು ಅನ್ನುವುದು ನನಗಂತೂ ತಿಳಿದಿಲ್ಲ...ಇಂತಹಾ ಬರ್ತ್ ಡೇ ಪಾರ್ಟಿ ನಮಗೆ ಬೇಕಾ...?
ಇನ್ನು ಮಾಧ್ಯಮದವರ ಕುರಿತು ಮೊದಲಾಗಿ ತಮಗೆ ಸುದ್ದಿ ಸಿಕ್ಕ ಕೂಡಲೇ ಪೋಲೀಸರಿಗೆ ತಿಳಿಸದೆ ತಮ್ಮ ಟಿ.ಆರ್.ಪಿ ಯ ಕುರಿತು ಯೋಚಿಸಿ ಪದೇ ಪದೇ ಇದನ್ನೇ ತೋರಿಸುತ್ತಿರುವುದು. ಇಂತಹಾ ವಿಷಯವನ್ನು ಮತ್ತಷ್ಟು ದೊಡ್ಡದು ಮಾಡುತ್ತಿರುವ ಕಾರಣ ಈ ದಾಳಿ ನಡೆಸಿದವರು ಹಿಂದು ಸಂಘಟನೆಗಳು ಅನ್ನುವುದು, ಇನ್ಯಾವುದೋ ಕೋಮಿನವರು ಮಾಡಿದಿದ್ದಲ್ಲಿ ಒಂದು ಬಾರಿ ಬ್ರೇಕಿಂಗ್ ನ್ಯೂಸ್ ಅಂತ ಹಾಕಿ ಸುಮ್ಮನೆ ಇದ್ದು ಬಿಡುತ್ತಿದ್ದರು.
ಇಷ್ಟಾಗಿಯೂ ಹುಡುಗಿಯರ ಮೇಲೆ ಕೈ ಎತ್ತಿದ್ದು ಸರಿಯಲ್ಲ ಅಂತಾನೆ ಹೇಳಬಹುದು ಯಾಕೆಂದರೆ ಪೆಟ್ಟಿಗೆ ಬಗ್ಗೋ ಹುಡುಗ ಹುಡುಗಿಯರಲ್ಲ ಇವರು. ನನಗನ್ನುತ್ತೆ ಇಂತಾವರಿಗೆ ಪೆಟ್ಟು ಕೊಟ್ಟು ತಮ್ಮ ಸಂಘಟನೆಯ ಹೆಸರು ಹಾಳು ಮಾಡಿಕೊಳ್ಳುವುದಕ್ಕಿಂತ ಮಾರ್ಮಿಕ ಪೆಟ್ಟು ಕೊಡಬೇಕಿತ್ತು... ಇಂತಾಹವರನ್ನೆಲ್ಲ ರೆಡ್ ಹ್ಯಾಂಡ್ ಆಗಿ ಹಿಡಿದು ಪೋಲೀಸರು ಮತ್ತು ಮಾಧ್ಯಮದ ಮುಂದೆ ಕೂರಿಸಿ ಪ್ರಶ್ನೆಗಳ ಸುರಿಮಳೆ ಮಾಡಿ ಆದರ ಮುಲಕ ಅವರ ನಿಜ ಬಣ್ಣವನ್ನು ಬಯಲು ಮಾಡಬೇಕಿತ್ತು.ಅಲ್ಲಿ ನಡೆಯುತ್ತಿದ್ದುದು ಏನು ಅನ್ನುವುದನ್ನು ಜಗತ್ತಿಗೆ ಸಾರಿ ಹೇಳಬೇಕಿತ್ತು.ಆವಾಗ ಸಂಘಟನೆಗೂ ಒಳ್ಳೆ ಹೆಸರು ಬರುತ್ತಿತ್ತು.
ಇಲ್ಲಿ ಮತ್ತೂ ಒಂದು ದೊಡ್ಡ ತಪ್ಪು ಪಾಲಕರದ್ದು , ತಮ್ಮ ಮಕ್ಕಳ ಬಗ್ಗೆ ಒಂದಷ್ಟು ಗಮನ ಕೊಡೋದು ಅವರ ಕರ್ತವ್ಯ ಅಲ್ವಾ... ಮಕ್ಕಳಿಗೆ ದುಡಿಯೋ ಮಾರ್ಗವನ್ನಷ್ಟೇ ತೋರಿಸಿ, ನೀವು ದುಡಿದ ಹಣವನ್ನು ಬೇಕಾಬಿಟ್ಟಿ ಅವರಮೇಲೆ ಸುರಿಯಬೇಡಿ...ದುಡಿದು ತಿನ್ನುವಂತೆ ಮಾಡುವುದೇ ನಿಜವಾದ ಪಾಲಕರ ಲಕ್ಷಣ.ಮಕ್ಕಳ ಖರ್ಚು ಹದ್ದು ಮೀರಿದರೆ ಅವರು ಎಡವುತ್ತಿದ್ದಾರೆ ಎಂದು ತಾನೆ ಅರ್ಥ. ಎಲ್ಲರೂ ನಮ್ಮ ಸಂಸ್ಕೃತಿಯ ರಕ್ಷಣೆಗೆ ತೊಡಗಿದರೇ ಇಂತಹಾ ಘಟನೆಗಳು ಖಂಡಿತಾ ನಡೆಯಲಾರವು. ಮುಂದೆ ಇಂತಹಾ ಪಾರ್ಟಿಗಳು ನಡೆಯದೇ ಇರಲಿ ಇಂತಹಾ ದಾಳಿಗಳು ಕೂಡ ನಡೆಯದೇ ಇರಲಿ...

---ಕೆ.ಗುರುಪ್ರಸಾದ್

ಎಡವಿದವರ್ಯಾರು..?ಬೆಳೆದು ದೊಡ್ಡವರಾಗಿ ದುಡಿದು
ತಮ್ಮ ಕಾಲ ಮೇಲೆ ತಾವು ನಿಲ್ಲುವ ಮುನ್ನವೇ
ತಂದೆತಾಯಿಯರು ದುಡಿದುದನು
ತಮ್ಮ ಅಸಹ್ಯ ಮೋಜಿಗಾಗಿ
ಪೋಲು ಮಾಡಿದರಲ್ಲ ಈ ಯುವ ಜನತೆ,
ಇವರು ಎಡವಿದವರೇ...?

ಈ ನೆಲದ ಸಂಸ್ಕೃತಿಯ ತಿಳಿಹೇಳದೆ
ಹಣಗಳಿಕೆಯ ಹುಚ್ಚು ಕುದುರೆಯನ್ನೇರಿ
ಗಮನವೀಯದೆ ಹಣದ ಹೊಳೆ ಹರಿಸಿ
ಮಕ್ಕಳ ಅಸಭ್ಯತೆಯ ಕಡೆ
ದೂಡಿ ಬಿಟ್ಟರಲ್ಲ ಈ ಪಾಲಕರು,
ಇವರು ಎಡವಿದವರೇ..?

ನಡೆಯುತ್ತಿದ್ದ ತಪ್ಪುಗಳ ತಿದ್ದಿ
ನಮ್ಮದಾಗಿಹ ಸಂಸ್ಕೃತಿಯ ಹಾದಿಯ
ತೋರಿಸುವ ಸಲುವಾಗಿ
ಕಾನೂನನ್ನು ಕೈಗೆತ್ತಿಕೊಂಡರಲ್ಲ
ಸಂಘಟನೆಯೊಂದರ ಬಿಸಿರಕ್ತದ ಯುವಕರು.
ಇವರು ಎಡವಿದವರೇ...?

ಸಾಮಾಜಿಕ ಕರ್ತವ್ಯವ ಮರೆತು, ತಾವು ಮಾಡಿದ್ದೇ ಸರಿ,
ಜನರ ಮುಂದೆ ಸತ್ಯವ ತೆರೆದಿಡುವುದೇ ನಮ್ಮ ಗುರಿ,
ಎಂದು ತಮ್ಮ ಆದಾಯ ಏರಿಸಿಕೊಳ್ಳುವ ಸಲುವಾಗಿ
ನಡೆದ ಘಟನೆಯನೇ ಮತ್ತೆ ಮತ್ತೆ ತೋರಿಸಿ
ಮನೆಮಂದಿಗೆಲ್ಲ ಮುಜುಗರವ ತಂದಿತ್ತರಲ್ಲ
ಈ ಮಾಧ್ಯಮದವರು...
ಇವರು ಎಡವಿದವರೇ...?

ಉತ್ತರ ಸಿಗದೇ ತತ್ತರಿಸುತಿದೇ ಈ ಮನ
ಇವರುಗಳಲ್ಲಿ ನಿಜಕೂ ಎಡವಿದವರ್ಯಾರು..??

---ಕೆ.ಗುರುಪ್ರಸಾದ್
 

Saturday, 28 July, 2012

ವಿಜಯ ದಿನಕಾರ್ಗಿಲ್ಲೆನುವ
ಪರ್ವತ ತುದಿಯ
ಕೊರೆವ ಚಳಿಯಲ್ಲಿ,
ಹೃದಯದೊಳಗಿನ
ದೇಶಪ್ರೇಮದ ಕಿಚ್ಚನ್ನೇ
ದೇಹಕ್ಕೆ ಬೆಚ್ಚಗಿನ
ಬಟ್ಟೆಯನ್ನಾಗಿಸಿ,
ತಾಯಿ ಭಾರತಿಯ
ಮಾನ ರಕ್ಷಣೆಗಾಗಿ
ಕೆಚ್ಚೆದೆಯ ಮುಂದಿರಿಸಿ,
ನೆರೆಯ ಮತಾಂಧ
ದೇಶದ ಸೈನಿಕರ
ಕೊಚ್ಚಿಕೊಂದು ಹಾಕಿ,
ವಿಜಯಮಾಲೆಯ
ಭಾರತಾಂಬೆಯ
ಕೊರಳಿನ ಅಮೂಲ್ಯ
ಹಾರವನ್ನಾಗಿಸಿದ
ಭಾರತದ ಧೀರ ಯೋದರಿಗೆ
ನನ್ನ ನುಡಿ ನಮನ

ಸಮಯ...

ಪ್ರೇಮಧಾರೆಯ
ನಾ ಹರಿಸುತ್ತಿದ್ದಾಗ,
ನಿನಗಾಗಿ ನನ್ನಲ್ಲಿ
ಸಮಯವಿಲ್ಲ,
ಎಂದು ಮೂದಲಿಸಿ
ಹೋದವಳು,
ನಿಂತು ಕಾಯುತ್ತಿದ್ದಾಳೆ
ಮಸಣವೆನುವ
ಯಮನರಮನೆಯ
ಹೆಬ್ಬಾಗಿಲಿನಲ್ಲಿ,
ಸಮಯದ ಮಾಪಕವ
ಹಿಡಿದು ತನ್ನಯ
ಕೈಯಲ್ಲಿ,
ನನ್ನಿಯನ ಜೊತೆಗೊಂದಿಷ್ಟು
ಸಂತಸದ ಕ್ಷಣಗಳ
ಕೊಡು ಎನುವ
ಈಡೇರದ ಬೇಡಿಕೆಯ
ಮುಂದಿಡುತ್ತಿದ್ದಾಳೆ,
ಕಟು ಹೃದಯಿ
ಆ ಯಮನಲ್ಲಿ.

ಕೋಪ

ಬಿಡುತ್ತಿಲ್ಲ ವರುಣ
ಭುವಿಯೆಡೆಗೆ
ತಂಪು ನೀರ
ಹನಿಗಳ ಬಾಣ,
ಇದೇ ಹೊತ್ತಲ್ಲಿ
ರವಿ ವಿರಮಿಸದೆ
ಬಿಡುತ್ತಿದ್ದಾನೆ
ಭುವಿಯೆಡೆಗೆ ತನ್ನ
ಸುಡುವ ಉರಿಕಿರಣ,
ಬಿಡದೆ ನನ್ನ
ಕಾಡುತಿರುವ ಪ್ರಶ್ನೆ.
ಇಳೆಯ ಮೇಲೆ
ಇವರಿಬ್ಬರಿಗಿರುವ
ಈ ತರದ ಕೋಪಕ್ಕೆ
ಏನಿರಬಹುದು ಕಾರಣ...?

ನೆಲೆ

ಅವಳ ಸುಂದರ
ಕನಸುಗಳಿಗೆ
ಅಲೆಮಾರಿಯಾಗುವ
ಭಯವಿತ್ತಂತೆ
ಈ ಗಾಢ ಕತ್ತಲಿನಲ್ಲಿ,
ನಕ್ಕು ನಾನಂದೆ
ಭಯವ ತೊರೆದು
ಶಾಶ್ವತವಾಗಿ ನೆಲೆಸಿಬಿಡು,
ನನ್ನ ನಿದಿರೆಯಾ
ಭವ್ಯ ಬಂಗಲೆಯಲ್ಲಿ.

Saturday, 21 July, 2012

ಕಳ್ಳತನ


ಚೆಲುವಿನ ಮುಖದಲ್ಲಿ
ಬೆಲೆಬಾಳುವ
ಸುಂದರ ನಗುವಿದ್ದರೂ
ಅದನಲ್ಲೇ ಬಿಡಲು
ಬಯಸಿತೆನ್ನ ಮನ,
ಬದಲಾಗಿ ಹೊಂಚು
ಹಾಕುತಿದೆ ಕದಿಯಲು,
ಇಂತಾ ಅಸಂಖ್ಯ
ನಗುವ ಬಚ್ಚಿಟ್ಟುಕೊಂಡಿರುವ
ಅವಳ ಹೃದಯವೆನುವ
ತಿಜೋರಿಯನ್ನ.

Tuesday, 17 July, 2012

ಹೀಗೊಂದು ಕೊಲೆ..


ನೆತ್ತರು ಚಿಮ್ಮಿರಲಿಲ್ಲ..
ಚೀತ್ಕಾರದ ಸದ್ದೂ ಕೇಳಿಸಿರಲಿಲ್ಲ
ಸುತ್ತಮುತ್ತಲಿನ ಜನಕೆ
ಶವವೂ ಕಾಣಿಸುತ್ತಾ ಇಲ್ಲ
ಆದರೂ ಕೊಲೆಯೊಂದು ನಡೆದಿತ್ತು
ಕೊಲೆಯಾದ ರೀತಿಯೂ ವಿಚಿತ್ರ..
ಯಾವುದೇ ಹರಿತವಾದ
ಆಯುಧಗಳ ಬಳಕೆಯಾಗಿಲ್ಲ,
ಘೋರ ವಿಷಪ್ರಯೋಗವೂ ಆಗಿರಲಿಲ್ಲ
ಆದರೂ ಕೊಲೆಯೊಂದು ನಡೆದಿತ್ತು.
ಕೇಳಿದವರಾರು ನಂಬಲಾರರು
ಈ ರೀತಿ ಆಗುವುದುಂಟೇ.. ಎಂದಾರು..
ಯಾಕೆಂದರೆ ಕೊಲೆಯಾಗಿದ್ದು ನನ್ನ ಆತ್ಮ..
ನಾನು ನನ್ನವಳೆಂದುಕೊಂಡಿದ್ದಾಕೆ ಕೊಲೆಗಾರ್ತಿ
ಪ್ರೀತಿಯ ಬಲೆಯಲ್ಲಿ ಬೀಳಿಸಿ
ಮೋಸವೆನುವ ಮಾರಕಾಯುಧದಿಂದ
ಕರುಣೆ ತೋರದೆಯೇ ಕೊಂದು ಬಿಟ್ಟಳು..
ಈಗ ನನ್ನ ಆತ್ಮಕ್ಕೆ ಚೈತನ್ಯವಿಲ್ಲ
ಅದರ ಮನೆಯಂತಿದ್ದ ನನ್ನ ದೇಹವೇ
ಈಗ ಆ ಸತ್ತ ಆತ್ಮದ ಗೋರಿ..
ಹೀಗೊಂದು ಸಾವಿಗೆ ಅಳುವವರೂ ಯಾರಿಲ್ಲ
ಯಾಕೆಂದರೆ ಈ ಸಾವಿನರಿವು ನನ್ನವರಿಗಿಲ್ಲ..
ಹೇಳಹೊರಟೆನಂದರೂ ಕಾಡುವುವು
ಅವರ ಹಲವು ಪ್ರಶ್ನೆಗಳು.
ಕೊಲೆಯಾದುದೆಲ್ಲಿ..ಸತ್ತಿರುವ ದೇಹವೆಲ್ಲಿ..
ಸತ್ತದ್ದು ಹಾಗಿರಲಿ, ಸೋತು ಹೋದೇನು
ಜನರಿಗೀ ಸತ್ಯವ ಬಿಡಿಸಿ ತಿಳಿ ಹೇಳುವಲ್ಲಿ..
ಹಾಗಾಗಿ ಸುಮ್ಮನಿದ್ದೇನೆ..
ಸತ್ತ ಆತ್ಮದ ಸಾವಿಗೆ ನಾನೊಬ್ಬನೇ
ಅಳುತ್ತಾ, ಜಗದ ದೃಷ್ಟಿಯಲ್ಲಿ ಬದುಕಿದ್ದೇನೆ.

Sunday, 15 July, 2012

ಪಶ್ಚಿಮದ ಪ್ರವಾಹ..


ಭರತ ಖಂಡದಲೀಗ ಹೊಸತೊಂದು ಹುಚ್ಚು ಪ್ರವಾಹ
ಪಶ್ಚಿಮದ ಸಂಸ್ಕೃತಿಯನೇ ಅನುಸರಿಸುವ ಹುಚ್ಚು ವ್ಯಾಮೋಹ.
ಯುವಜನತೆಗಂತೂ ಈ ಪ್ರವಾಹದಲೇ ಕೊಚ್ಚಿ ಹೋಗುವಾಸೆ,
ಜಗದ ಮೊದಲ ಭವ್ಯ ಸಂಸ್ಕೃತಿಯ ನುಚ್ಚುನೂರುಮಾಡುವಾಸೆ.

ಉಡುಗೆಯೂ ಅವರದೇ... ಅಡುಗೆಯೂ ಅವರದೇ...
ಆಡುವ ನುಡಿಯಂತೂ ಅವರದೇ ಆಗಿ ಹೋಗಿದೆ.
ಕಟ್ಟುಪಾಡಿನ ಆಚರಣೆಗಳೆಲ್ಲವೂ ಮುಢನಂಬಿಕೆಗಳಂತೆ,
ಹುಚ್ಚು ಮಾತನಾಡುತಿಹರು, ಆಚರಣೆಯ ತಿರುಳನರಿಯದೆ.

ಶತಮಾನದ ಬಿರುಗಾಳಿಗುರುಳದೇ ಇದು ನಿಂತಿರುವುದು
ನಮ್ಮತನದ ತಾಯಿಬೇರು ಬೀಡು ಬಿಟ್ಟಿರುವ ಆಳದಿಂದ.
ಅದನೇ ಕಿತ್ತೊಗೆದು ಬಿಡುವ ಹುಚ್ಚು ಕೆಲಸವ ಮಾಡುತಿಹರು
ತಪ್ಪು ಹಾದಿಯ ತುಳಿದಿರುವ ಜನ, ತಮ್ಮ ಅಜ್ಞಾನದ ಪರಮಾವಧಿಯಿಂದ

ಆಗಸದ ಸೂರ್ಯನನು ನೋಡಿ ಎಚ್ಚರಗೊಳ್ಳಿರಿ ಭಾರತೀಯರೇ..
ಪೂರ್ವದ ಹಾದಿಯಲಿರಲು ಮಾತ್ರ ಅವನ ಬೆಳಕು ಪ್ರಖರ.
ಪಶ್ಚಿಮದ ಹಾದಿಯನು ತುಳಿದಂತೆಲ್ಲಾ ಮಂದನಾಗುವನವನು
ಮತ್ತೂ ಮುಂದುವರಿದರೆ ಮುಳುಗಿಸಿ ಬಿಡುವುದವನನು ವಿನಾಶವೆಂಬ ಸಾಗರ.

ಸವಾಲು


----------
ಸದಾನಂದ ಗೌಡರ
ಒಂದೇ ಒಂದು ಸವಾಲು,
ಯಡ್ಡಿಯ ಬಾಯಿ ಮುಚ್ಚಿಸಲು;
ಕಿತ್ತೊಗೆದರೇನಂತೆ ನನ್ನ ಅಧಿಕಾರವ,
ತಾಕತ್ತಿದೆಯೇ..ನಿಮಗೆ
ನನ್ನ ನಗುವನಿಲ್ಲವಾಗಿಸಲು.

ಅಮಲುಇರುಳ ಸಂಚಿಗೆ
ಬಲಿಯಾಗಿ ನೇಸರನು
ಅಸ್ತಂಗತನಾಗಿರಲು,
ಜಗದ ಜನರ
ತಲೆಗೇರುತಿದೆ
ನಿದಿರೆಯೆಂಬ ಅಮಲು.

..

ದೇವ ಕಣವಿಜ್ನಾನಿಗಳಿಗೆ
"ದೇವಕಣ"
ಸಿಕ್ಕಿ ಬಿಟ್ಟಿತಂತೆ,
ಅವರನ್ನುವಂತೆ
ಇದೇ ಸೃಷ್ಟಿಗೆ
ಮುಲ ಕಾರಣ.
ಅವರು ಅಜ್ನಾನಿಗಳೋ
ನಾನು ಅಜ್ನಾನಿಯೋ
ನನಗೇ ಗೊತ್ತಿಲ್ಲ
ನನಗನ್ನಿಸಿದಂತೆ
ಈ ಜಗದ ಅಣು ಅಣುವಿನಲ್ಲೂ
ಇದೆ ಈ ದೇವಕಣ

Tuesday, 3 July, 2012

ವರ್ಷಧಾರೆ..

ಆಗಸದಿ ಕಣ್ಣಾಡಿಸಿದರೆ
ಸೂರ್ಯನ ಪತ್ತೆ ಇಲ್ಲ.
ಕಂಡದ್ದು ಬರಿಯ ಕಾರ್ಮುಗಿಲು.
ನೋಡುತ್ತಿದ್ದಂತೆಯೇ
ಮುತ್ತಿಕ್ಕತೊಡಗಿತೆನ್ನ ಮೊಗವ
ನೀರ ಸಣ್ಣ ಸಣ್ಣ ಹನಿಗಳು,
ತಂಪಿನನುಭವವ ಕೊಟ್ಟು
ಕಣ್ಣ ಮುಚ್ಚುವಂತೆ ಮಾಡಿತ್ತು.
ಒಂದರೊಳಗೊಂದು
ಬೆಸೆದುಕೊಂಡಿದ್ದ ಕರಗಳನು
ಬಿಚ್ಚುವಂತೆ ಮಾಡಿತ್ತು.
ಮನವು ಆನಂದದಲಿ ಅದೆಲ್ಲಿ
ತೇಲಿ ಹೋಗಿತ್ತೋ ನಾನರಿಯೆ.
ನನ್ನ ತನುವಿನ ಮೇಲೆ
ಸುರಿದ ಅಮೃತದ ವರ್ಷಧಾರೆಯು
ರವಿಯಿರದ ಬಾನನೂ
ಮೆಚ್ಚುವಂತೆ ಮಾಡಿತ್ತು.