Tuesday 17 July, 2012

ಹೀಗೊಂದು ಕೊಲೆ..


















ನೆತ್ತರು ಚಿಮ್ಮಿರಲಿಲ್ಲ..
ಚೀತ್ಕಾರದ ಸದ್ದೂ ಕೇಳಿಸಿರಲಿಲ್ಲ
ಸುತ್ತಮುತ್ತಲಿನ ಜನಕೆ
ಶವವೂ ಕಾಣಿಸುತ್ತಾ ಇಲ್ಲ
ಆದರೂ ಕೊಲೆಯೊಂದು ನಡೆದಿತ್ತು
ಕೊಲೆಯಾದ ರೀತಿಯೂ ವಿಚಿತ್ರ..
ಯಾವುದೇ ಹರಿತವಾದ
ಆಯುಧಗಳ ಬಳಕೆಯಾಗಿಲ್ಲ,
ಘೋರ ವಿಷಪ್ರಯೋಗವೂ ಆಗಿರಲಿಲ್ಲ
ಆದರೂ ಕೊಲೆಯೊಂದು ನಡೆದಿತ್ತು.
ಕೇಳಿದವರಾರು ನಂಬಲಾರರು
ಈ ರೀತಿ ಆಗುವುದುಂಟೇ.. ಎಂದಾರು..
ಯಾಕೆಂದರೆ ಕೊಲೆಯಾಗಿದ್ದು ನನ್ನ ಆತ್ಮ..
ನಾನು ನನ್ನವಳೆಂದುಕೊಂಡಿದ್ದಾಕೆ ಕೊಲೆಗಾರ್ತಿ
ಪ್ರೀತಿಯ ಬಲೆಯಲ್ಲಿ ಬೀಳಿಸಿ
ಮೋಸವೆನುವ ಮಾರಕಾಯುಧದಿಂದ
ಕರುಣೆ ತೋರದೆಯೇ ಕೊಂದು ಬಿಟ್ಟಳು..
ಈಗ ನನ್ನ ಆತ್ಮಕ್ಕೆ ಚೈತನ್ಯವಿಲ್ಲ
ಅದರ ಮನೆಯಂತಿದ್ದ ನನ್ನ ದೇಹವೇ
ಈಗ ಆ ಸತ್ತ ಆತ್ಮದ ಗೋರಿ..
ಹೀಗೊಂದು ಸಾವಿಗೆ ಅಳುವವರೂ ಯಾರಿಲ್ಲ
ಯಾಕೆಂದರೆ ಈ ಸಾವಿನರಿವು ನನ್ನವರಿಗಿಲ್ಲ..
ಹೇಳಹೊರಟೆನಂದರೂ ಕಾಡುವುವು
ಅವರ ಹಲವು ಪ್ರಶ್ನೆಗಳು.
ಕೊಲೆಯಾದುದೆಲ್ಲಿ..ಸತ್ತಿರುವ ದೇಹವೆಲ್ಲಿ..
ಸತ್ತದ್ದು ಹಾಗಿರಲಿ, ಸೋತು ಹೋದೇನು
ಜನರಿಗೀ ಸತ್ಯವ ಬಿಡಿಸಿ ತಿಳಿ ಹೇಳುವಲ್ಲಿ..
ಹಾಗಾಗಿ ಸುಮ್ಮನಿದ್ದೇನೆ..
ಸತ್ತ ಆತ್ಮದ ಸಾವಿಗೆ ನಾನೊಬ್ಬನೇ
ಅಳುತ್ತಾ, ಜಗದ ದೃಷ್ಟಿಯಲ್ಲಿ ಬದುಕಿದ್ದೇನೆ.

No comments:

Post a Comment