Wednesday, 29 October, 2014

ಮದರಂಗಿಅದ್ಯಾರದೋ
ಹೆಸರಿನ ಮದರಂಗಿ
ಅವಳ ಕೈಯ ತುಂಬಾ
ನಳನಳಿಸುತಿರಲು,
ಅದ ನೋಡಿದ
ಅವಳ ಮೊಗದಿ
ಹೂನಗೆಯು ಅರಳಿರಲು,
ಅವಳ ಖುಷಿಯೇ
ನನ್ನ ಖುಷಿಯೆನುವ
ಹಾಳು ಬಯಕೆಯೊಂದು
ಈಡೇರಿತ್ತು...
ಮರುಕ್ಷಣವೇ
ನನ್ನೇ ನಾ
ಕೊಂದು ಬಿಟ್ಟೆ,
ನನ್ನೊಳಗಿನ
ನೆತ್ತರ ಬಣ್ಣವನೆಲ್ಲಾ
ಆ ಮದರಂಗಿಗೇ
ಧಾರೆಯಿತ್ತು.

Monday, 27 October, 2014

ಕು-ತಂತ್ರಜ್ಞಾನ


ಪ್ರೀತಿಸುವೆಯಾ ನನ್ನ..?
ಎಂದು ಅವಳು
ವಾಟ್ಸ್ ಅಪ್ ನಲಿ
ಕೇಳಿದಾಗ..
ಹತ್ತು ಬಾರಿ
ಹೌದೆಂದು
ಕಳುಹಿಸಿದರೂ..
ಅದನವಳಿಗೆ
ಮುಟ್ಟಿಸದ
ಹಾಳು ನೆಟ್ ವರ್ಕು..
ಕಾದು ಕಾದು ಆಕೆ,
ಯಾಕೆ ಗೆಳತನವೂ
ಬೇಡವೇ..???
ಅಂದಾಗಲೇ
ಒಮ್ಮೆಗೇ
ಹತ್ತು ಹೌದುಗಳನು
ಕಳುಹಿಸಿಬಿಟ್ಟಿತ್ತು.

ಹಬ್ಬ....


ಅದೆಲ್ಲಿಯೋ ಒಬ್ಬ ಕುಂಬಾರ
ಮಣ್ಣ ಹದ ಮಾಡಿ
ಹಣತೆಯನು ತಯಾರಿಸಿದ.
ಇನ್ನೊಬ್ಬ ಗಾಣಿಗ
ಎಳ್ಳಿನಿಂದ ದೀಪದೆಣ್ಣೆಯ ಸೆಳೆದ.
ಮತ್ಯಾರೋ ರೈತ
ಹತ್ತಿಯ ಬೆಳೆದರೆ...
ಅದ್ಯಾವುದೋ ಮನೆಯಾಕೆ
ಆ ಹತ್ತಿಯ ತೀಡಿ
ಬತ್ತಿಗಳ ಮಾಡಿದಳು.
ಎಲ್ಲವನೂ ಕೊಂಡ ನಾ
ನನ್ನ ಮನೆಯ ಬೆಳಗಿದಂತೆ,
ಅವರ ಮನೆಯನೂ
ಅರಿವಿಲ್ಲದಂತೆ ಬೆಳಗಿಸಿದ್ದೆ,
ಈ ದೇಶಗಳ ಹಬ್ಬಗಳೇ ಹಾಗೇ,
ದೀಪದಿಂದ ದೀಪವ
ಬೆಳಗಿದಂತೆ...

ಜೋಗುಳ


ಅವಳ ಸವಿ
ಕನಸುಗಳ
ಜೋಗುಳವಿರಲು,
ಇರುಳೇ ಸಿಹಿಯಾಗಿ
ಕಹಿಯನಿಸುತಿದೆ
ಈ ಹಗಲು.

Saturday, 25 October, 2014

ಗೋಪೂಜೆ


ಅಂದೆಲ್ಲಾ
ಗೋವನು
ಸಿಂಗರಿಸಿ
ತಿನಿಸನಿತ್ತು
ಆರತಿ ಬೆಳಗುವುದೇ
ಗೋಪೂಜೆ,
ಇಂದು ಕಟುಕರ
ಕೈಯಿಂದ
ಗೋಮಾತೆಯನು
ರಕ್ಷಿಸಿದರೆ ಸಾಕು.
ಅದಕ್ಕಿಂತ
ಮಿಗಿಲಿನ್ನಾವ
ಪೂಜೆ..?

ಸದ್ದು


ಅವಳ
ಕನಸಿಗೆ
ಬೆಂಕಿ
ಹಚ್ಚಿದೆ,.
.
.
ಒಡೆದ
ಸದ್ದು
ಕೇಳಿಸಿದ್ದು
ಮಾತ್ರ
ನನ್ನೆದೆ
ಗೂಡಲ್ಲಿ

ಕೋಪ


ನನಗೆ
ಕೊಡಲ್ಪಟ್ಟ
ಸಿಹಿ ತಿಂಡಿಯ
ಖಾರದ
ಉರಿ
ಅದೆಷ್ಟಿತ್ತೆಂದರೆ...
.
.
.
.
ಕೂಡಲೇ
ಪೇಟೆಗೆ
ಹೋಗಿ
ನನ್ನವಳಿಗೆ
ಸೀರೆ
ಕೊಂಡು
ಕೊಳ್ಳುವಂತೆ
ಮಾಡಿತ್ತು .

ಧರ್ಮ ಸಂಕಟ


"ಮದ್ಯ(ಶರಾಬು)ದ"
ಅಂಗಡಿಯೊಂದರಲ್ಲಿ
ಅಂಗಡಿ ಪೂಜೆ .
ಅನುಮಾನದ
ಮನಸ್ಸಿಗೆ ,
.
.
.
.
.
ತೀರ್ಥ (ನಿಜವಾದ)
ತೆಗೆದು ಕೊಳ್ಳೋದೇ
ಧರ್ಮ ಸಂಕಟ.

Thursday, 23 October, 2014

ಬಾಲ್ಯ ಮತ್ತು ದೀಪಾವಳಿ...ನಿನ್ನೆ ಕತ್ತಲಿಗೆ
ಬೆಂಕಿ ಹಚ್ಚಿಯೂ
ತನ್ನ ತಾ
ಸ್ಫೋಟಿಸಿಕೊಳ್ಳದೆ
ಹುಲ್ಲಿನೆಡೆಯಲ್ಲಿ
ಅಡಗಿ ಕುಳಿತ
ಪಟಾಕಿಗಳಿಗೆ
.
.
ನಸುಕಿನಲೇ
ಹುಡುಕಾಟ

ಪಟಾಕಿಈ ಬಾರಿ ನಿನಗೆ
ಹಬ್ಬಕ್ಕೆ ನೆಕ್ಲೇಸು
ತಂದುಕೊಡುವೆನೆಂದು,
ನನ್ನವಳಿಗೆ ಹೇಳಿ
ತಂದು ಕೊಡಲೇ ಇಲ್ಲ.
.
.
.
.
.
.
.
.
.
.
ಅಬ್ಬಾ...ಪಟಾಕಿಯ
ಖರ್ಚು ಉಳಿಯಿತು.

ವ್ಯಾಕರಣ
ದಿವಾಳಿ ಅಲ್ಲ ಕಣೇ
ಅದು ದೀಪಾವಳಿ
ಎಂದು ತನ್ನಾಕೆಯ
ವ್ಯಾಕರಣ
ಸರಿ ಮಾಡಿದ
ಪತಿರಾಯ,
ಪತ್ನಿಯ ಶಾಪಿಂಗ್
ಮುಗಿಯುವಷ್ಟರಲ್ಲಿ
" ದಿವಾಳಿ " ಯೇ
ಸರಿ ಎಂದೆನ್ನತೊಡಗಿದ್ದ


Wednesday, 22 October, 2014

ಬೆಳಕ ನಗುಹಣತೆಯಾ
ತೊಟ್ಟಿಲಲಿ
ತೈಲಧಾರೆಯ
ಹೊದ್ದುಕೊಂಡು
ಜೋಡಿ
ಬತ್ತಿಗಳೆನುವ
ಅವಳಿ
ಕಂದಮ್ಮಗಳು
ಬೆಳಕ
ನಗುವ
ಬೀರಲಿ

ನಿನಗಾಗಿ..ಬಾಳ ಸಂಗಾತಿಯೇ..
ದೀಪಾವಳಿಯ
ಈ ಶುಭಗಳಿಗೆಯಂದು
ನಿನಗಾಗೇ
ನಾನುಳಿಸಿಕೊಂಡಿದ್ದೇನೆ.
.
.
.
.
.
.
.
.
.
.
.
ತಿಕ್ಕಿ ತೊಳೆಯಲೆನ್ನ
ಬೆನ್ನಿನಲೊಂದಿಷ್ಟು ಕೊಳೆ

Tuesday, 21 October, 2014

ದೀಪಾವಳಿ...ಅಭ್ಯಂಗ
ಸ್ನಾನವನು ಮಾಡಿ
ತನುವ ಕೊಳೆ
ಕಳಕೊಂಡಂತೆ,
ನಾವುರಿಸುವ
ಪ್ರತಿ ಹಣತೆಯ
ಬೆಳಕದು
ಕಣ್ಣ ಮೂಲಕ
ಮನವ ಹೊಕ್ಕು,
ಅಲ್ಲಿನೆಲ್ಲಾ
ಕೊಳೆಯ
ಸುಟ್ಟು ಹಾಕಲಿ...Monday, 20 October, 2014

ನಾಟಕಮುಂಜಾನೆಯಲಿ
ನೇಸರ , ಬಾನ
ರಂಗಮಂಟಪದ
ಕಪ್ಪು ಪರದೆಯ
ಸರಿಸುತ್ತಿದ್ದಂತೆ
ಹಕ್ಕಿಗಳು
ಹಿನ್ನಲೆ ಗಾಯನವ
ಹಾಡತೊಡಗಿದವು.
ತರುಲತೆಗಳೆಲೆಗಳು
ಇಬ್ಬನಿಯ
ಕಣ್ಣೀರ ಸುರಿಸುವ,
ಮೊಗ್ಗುಗಳು ಹಿಗ್ಗಿ
ಅರಳಿ ಖುಷಿಯ
ತೋರಿಸುವ
ಅಭಿನಯವ
ಮಾಡುತಿರಲು
ಆಧುನಿಕ
ಮನುಜ ಮಾತ್ರ
ಮುಸುಕಿನೊಳಗೆ
ತನ್ನ ತಾ
ಬಚ್ಚಿಟ್ಟುಕೊಂಡಿದ್ದ.

ವಿಪರ್ಯಾಸ
ಓದಿ ಪ್ರೀತಿಗೊಪ್ಪಲೇ
ಬೇಕೆಂದು, ನಾ
ಅವಳ ಕುರಿತಾಗಿ
ಬರೆಯ ಬೇಕೆಂದುಕೊಂಡ
ಪ್ರೇಮಗೀತೆಯ
ಕೂಸನು, ಕಲ್ಪನೆಯ
ಬಸಿರಿಂದ ಹೆತ್ತು
ಹೈರಾಣಾಗುವಷ್ಟರಲ್ಲಿ
.
.
.
.
.
.
ಅವಳದ್ಯಾರನ್ನೋ
ಕಟ್ಟಿಕೊಂಡು ಎರಡು
ಮಕ್ಕಳ ಹೆತ್ತು
ಹೈರಾಣಾಗಿದ್ದಳು.

Saturday, 18 October, 2014

ಕವಿತೆ...ಮುತ್ತಿನಂಥಾ
ಪದಗಳು
ಚದುರಿದೆ,
ಭಾವನೆಯ
ದಾರವದು
ಕಾದು ಕುಳಿತಿದೆ,
ಆದರೂ
ಪೋಣಿಸಿ
ಕವಿತೆಯಾ
ಮುತ್ತಿನಹಾರ
ಮಾಡುವ
ಕಲೆಯನರಿಯದ
ನನ್ನೀ ಮನ,
ಒಳಗೊಳಗೇ
ಕೊರಗಿದೆ

---ಕೆ.ಗುರುಪ್ರಸಾದ್
(ಚಿತ್ರಕ್ಕಾಗಿ ಬರೆದಿದ್ದು)

ಭಾವಯಾನ


ಮನದೊಳಗೆದ್ದ
ಭಾವನೆಗೆ
ಅದೇಕೋ ಅಲ್ಲಿ
ಉಸಿರುಕಟ್ಟಿಂದಂತಾಗಿ
ಸ್ವಾತಂತ್ರ್ಯದ
ಉತ್ಕಟ ಆಸೆಯಿಂದ
ಪದಗಳಾಗಿ
ಬಾಯ ಕದದೆಡೆಗೆ
ಓಡಿ ಬಂದರೆ,
ಬುದ್ದಿಯಾಜ್ಞೆಗೆ
ಬದ್ದವಾಗಿದ್ದ
ತುಟಿಗಳು
ತೆರೆದುಕೊಳ್ಳಲೇ ಇಲ್ಲ ;
ಮತ್ತದಕೆ
ಕಾಣಿಸಿದ್ದು
ಕಣ್ಣ ಸಣ್ಣ
ಕಿಟಕಿಗಳು,
ಥಟ್ಟನೆ ಕಣ್ಣೀರ
ಹನಿಯಾಗಿ
ಭದ್ರವಾಗಿರದ
ರೆಪ್ಪೆಗಳ ದೂಡಿ
ಹೊರಗದು
ಬಂದೇ ಬಿಟ್ಟಿತಲ್ಲ.

ಶತ್ರು


" ಏಳು, ಎದ್ದೇಳು..
ಅವಳು ಬರಿಯ
ನಿನ್ನ ಕನಸಿಗಷ್ಟೇ
ಸೀಮಿತ..."
ಎಂದು ನಕ್ಕು
ತನ್ನ ಬೆಳ್ಳಿಕಿರಣದಿಂದ
ನನ್ನ ತಿವಿದೆಬ್ಬಿಸಿ,
ಅಣಕಿಸಿ,
ಮುಗಿಲಿಗೇರುವ
ಸೂರ್ಯನೇ
ನನ್ನ ಮೊದಲ ಶತ್ರು

ಕನಸು


ಗೆಳತೀ...
ನಿನ್ನ ಮನಸಿಂಗಳವ
ತುಳಿಯಲು ಬಿಡದಿದ್ದರೂ
ಪರವಾಗಿಲ್ಲ...
ಕನಸಲ್ಲೊಂದಿಷ್ಟು
ಜಾಗ ಕೊಡು..
ಒಂದೆರಡು ಕ್ಷಣಕೆ
ಎಚ್ಚರವಾದರೂ
ಪರವಾಗಿಲ್ಲ,
ಸಂತೈಸಲು ಬರುವ
ನಿನ್ನಮ್ಮನಿಗೆ
ಕೆಟ್ಟಕನಸೆಂದು
ಹೇಳಿ ಬಿಡು

ಪಯಣ...


ಗುರಿಯನೇನೂ
ಇಟ್ಟುಕೊಂಡಿಲ್ಲ.
ತೀರವ ಸೇರುವೆನೋ..?
ಸಾಗರದೊಳಗೆ
ಮುಳುಗುವೆನೋ...?
ಭಗವಂತನಿಚ್ಛೆಯನೇ
ನನ್ನಿಚ್ಛೆಯನ್ನಾಗಿಸಿದ್ದೇನೆ,
ಪಯಣದ ಸುಖವನ್ನಷ್ಟೇ
ಅನುಭವಿಸ ಹೊರಟ,
ಅವ ಸೃಷ್ಟಿಸಿದ
ಕಾಲವೆಂಬ
ಪ್ರವಾಹದಲಿ
ತೇಲಿ ಸಾಗುವ
ಒಣಗಿದೆಲೆಯಾಗಿದ್ದೇನೆ.

ಅಪ್ಪುಗೆ


ಬಿಗಿದಪ್ಪಿಕೊಳ್ಳಿ
ಕಣ್ ರೆಪ್ಪೆಗಳೇ,
ನಿಮ್ಮಾಲಿಂಗನ
ಸಡಿಲವಾದಂತೆಲ್ಲಾ
ನನ್ನವಳು
ಮರೆಯಾಗುತ್ತಾಳೆ

ನಿರೀಕ್ಷೆ...


ಚೆಲುವಿನಲಿ
ನಾನಿಟ್ಟಿದ್ದ
ನಿರೀಕ್ಷೆಗಳ
ಮಟ್ಟವ
ಮೀರಿದ
ಚೆಲುವೆಗೆ
ನಾನು
ಒಪ್ಪಿಗೆಯಾಗದಿರಲು
ಕಾರಣ...
ನನಗೆ
ತಲುಪಲಾಗದಷ್ಟು
ಎತ್ತರದಲ್ಲಿ
ಅವಳಿಟ್ಟುಕೊಂಡಿದ್ದ
ಚೆಲುವಿನ
ನಿರೀಕ್ಷೆ.

ರಜೆ- ಸಜೆ


ಭರ್ಜರಿ ಬೋಜನವ
ಹೊಟ್ಟೆಗಿಳಿಸಿದ ಜನರು
ಆರಾಮವಾಗಿರಲು ಕಾರಣ
ಹಬ್ಬಕ್ಕೆ ಸಿಕ್ಕಿದ ರಜೆ;
ಆದರವರ ಹೊಟ್ಟೆಗೀಗ
ತಿಂದದ್ದನ್ನು ಕರಗಿಸೋಕಂತ
ಸಿಕ್ಕಿದೆ, ಓವರ್ ಟೈಮ್ ಸಜೆ

ಭಾವಶೂನ್ಯ...


ಮುಂಜಾನೆಯಲಿ
ಕವಿಭಾವದ
ಮನಗಳೊಳಗೆ
ರಮ್ಯ ರಮಣೀಯ
ಭಾವೋತ್ಪತ್ತಿಯ
ಮಾಡುವ ನೇಸರ,
ತಾನು ಮಾತ್ರ
ಭಾವಶೂನ್ಯನಾಗಿ
ಜಗವ ಬೆಳಗುವ
ಕಾಯಕದಲೇ
ತಲ್ಲೀನನಾಗಿದ್ದಾನೆ.

Friday, 10 October, 2014

ತಿನಿಸು...ಕಂಗಳು
ಹೇಳಿತೆನ್ನಲಿ
ಅವಳ
ರೂಪವೇ
ನನ್ನ
ಮೆಚ್ಚಿನ
ತಿನಿಸು,
ನೀನದನೇ
ನನಗೆ
ಮತ್ತೆ ಮತ್ತೆ
ತಿನಿಸು.

Thursday, 9 October, 2014

ತಿನಿಸು...


ಕಣ್ಣ ಹೊಟ್ಟೆ
ತುಂಬಿದ್ದರೂ
ನಿದಿರೆಯಾ
ತಿನಿಸನು
ಇನ್ನಷ್ಟು
ಮೆಲ್ಲುವಾಸೆ...

ಇಂಟರ್ನೆಟ್


ನಿದಿರೆಯಾ
ಇಂಟರ್ನೆಟ್
ಆನ್ ಇಡೋ
ತವಕ ,
ಅವಳ
ಕನಸುಗಳನೆಲ್ಲಾ
ಡೌನ್ ಲೋಡ್
ಮಾಡೋ
ತನಕ.

ಆಹುತಿ...ಅದೇಕೋ ಮುಸ್ಸಂಜೆ ಕಾಡುತ್ತದೆ,
ಕೆಂಪು ಕೆಂಪಾದ ಬಾನು
ಕೈ ಬೀಸಿ ಕರೆಯುತ್ತದೆ,
ಬಾ ನನ್ನಂಗಣದಲಿ
ಉದುರಿಸು ನಿನ್ನ
ರಕ್ತ ಕಣ್ಣೀರನು,
ನಾ ಹೊತ್ತೊಯ್ದು
ಸಾಗರದ ಮಧ್ಯದಲ್ಲಿ
ಯಾರಿಗೂ ಗೊತ್ತಾಗದಂತೆ,
ಅದನು ಹೂತು ಬಿಡುವೆ
ಎಂದು ಸಂತೈಸುತ್ತದೆ,
ನಾನೋ ಆ ಆಗಸದ
ತುಂಬಾ ಹರಡಿಹ
ಮೋಡಗಳೆಡೆಯಲ್ಲಿ ಮರೆಯಾಗಿ
ಒಂದಿಷ್ಟು ಹೊತ್ತು
ನನ್ನಷ್ಟಕ್ಕೇ ಕೊರಗಿ ,
ನನ್ನಂತೆ ಒಂಟಿಯಾಗಿಹ
ನೇಸರನನು ಸಾಗರಕೆ
ತಳ್ಳಿಬಿಡಲು ಪ್ರಯತ್ನಿಸುತ್ತೇನೆ,
ನೀನಾದರೂ ಸುಖದ
ಸಾಗರದಲಿ ಮುಳುಗಿಕೋ ಎಂದು,
ಮತ್ತೆ ಮೆಲ್ಲನೆ ನಾ ಸಜ್ಜಾಗುತ್ತೇನೆ
ಕನಸಾಗಿ ಕಾಡುವ ನೆನಪಿನಾಗ್ನಿಗೆ
ಆಹುತಿಯಾಗುತ್ತೇನೆ...

Wednesday, 1 October, 2014

ಶಾಪ
ಹುಟ್ಟುವಾಗಲೇ
ಪಡೆದಿದ್ದ
ಸಾವಿನುಡುಗೊರೆಯ
ಸೂಕ್ತ ಕಾಲಕ್ಕೆ
ಕೈಗಿಡುವ
ಭಗವಂತನಿಗೆ
ಅವರಿವರಿಂದ
ಸಿಗುವುದು
ಬರೀ ಶಾಪ

ಗಾಯ
ಭೋರ್ಗರೆವ
ನೀರ ಸೆಳೆತದಿಂದ
ಕೈಹಿಡಿದು ಮೇಲೆತ್ತಿ
ಬದುಕನುಳಿಸಿ ಕೊಟ್ಟ
ಯೋಧನಿಗೆ.....
ಕೈಯ ಮುಗಿಯುವಾಗ
ಆ ಮತಾಂಧ
ಯುವಕನಿಗೆ
ಕಾಣಿಸಿದ್ದು.......
ಅದೇ ಚಿರಪರಿಚಿತ ಮುಖ,
ಮತ್ತು ಅಂದು
ಅವನ ಅಭಿಮಾನಕ್ಕೆ
ಕಾರಣವಾಗಿದ್ದ
ಹಣೆಯ ಮೇಲೆ
ಒಣಗಿ ಕಲೆಯನುಳಿಸಿದ್ದ
ಕಲ್ಲೆಸೆತದ ಗಾಯ

ಪರಾರಿ

ಪುಟ್ಟ ರವಿ
ಕತ್ತಲ ಕತ್ತು
ಹಿಸುಕಿದ್ದೇ ತಡ
ಕೋಟಿ ತಾರೆಯರು
ಪರಾರಿ ....
ಈ ಪರಾರಿಯಾದವರ
ಹುಡುಕಾಟಕ್ಕೆಂದೇ
ಶುರುವಾಗಿದೆ
ಆಗಸದಲಿ
ನೇಸರನ ಸವಾರಿ