Friday, 26 July, 2013

ಮನೆ...



ಅನಿಸುವುದು ಕೆಲವೊಮ್ಮೆ
ದೊಡ್ಡ ಮನೆಯ
ಬದಲಿಗೆ ಇರಬೇಕಿತ್ತು
ಸಣ್ಣ ಗುಡಿಸಲು.
ಕಾರಣವಿಷ್ಟೇ...
ಸುಲಭವಾಗುವುದಲ್ಲ
ನನಗೆ ಬೆಳಗಾತ
ಮನೆಯ ಗುಡಿಸಲು.

ಮರೆವು


ಅವಳೆನ್ನ ಮರೆತಂತೆ
ನನಗೂ ಅವಳ
ಮರೆತು ಬಿಡುವುದು
ದೊಡ್ಡ ವಿಷಯವಲ್ಲ,
ಹೇಳಿದರೆ ನಿಜಕೂ
ನೀವು ನಂಬಲಿಕ್ಕಿಲ್ಲ,
ಅದೆಷ್ಟು ಬಾರಿ ನಾನವಳ
ಸಂಪೂರ್ಣವಾಗಿ ಮರೆತಿಲ್ಲ...

ಬದಲಾವಣೆ



ಹಿಂದೆಲ್ಲಾ ಹುಡುಗಿಯರು
ಮುಸುಕಿನ ಮುಂಜಾನೆಯಲಿ
ಮಿಂದು ಶುಚಿಯಾಗಿ
ಹಾಕುತ್ತಿದ್ದರು ಮನೆಯ
ಮುಂದೆ ಚಂದದ ರಂಗವಲ್ಲಿ;
ಈಗ ಅಂತಹ ದೃಶ್ಯಗಳು
ಕಾಣಲು ಸಿಗುವುದೇ ಇಲ್ಲ ,
ಬದಲಾಗಿ ವಿಫಲರಾಗುತ್ತಿದ್ದಾರೆ
ಮುಂಜಾನೆ ಬೇಗನೇ
ಬೆಡ್ಡಿನಿಂದ ಮೇಲೇಳುವಲ್ಲಿ.

ಇರುಳ ಮಳೆ



ಆಗಸದಿ ಒಂಟಿಯಾಗಿದ್ದ
ಚೆಲುವ ಚಂದಿರನ
ಆವರಿಸಿ ಮುತ್ತನಿತ್ತ
ಕರಿಮೋಡ.....
ಶಶಿಯ ಮೊಗದ
ಮುತ್ತಿನ ಕಲೆಯ
ಕಂಡೊಡನೆ ,
ನಾಚಿ ನೀರಾಗಿಬಿಟ್ಟಿತು.

ತೋರಣ



ಇರುಳಿನಲಿ
ಧರೆಗೆ
ಧಾರೆಯಾಗಿ
ಇಳಿದ
ವರುಣ ;
ನನ್ನ ಮನೆಯ
ಛಾವಣಿಯ
ತುದಿಯಲಿ
ಚಂದದಿ ಕಟ್ಟಿದ
ಮಳೆಹನಿಯ
ತೋರಣ

ಹರಸಾಹಸ



ಹಲ್ಲಿನ ತೂತೆನುವ
ಸೆರೆಮನೆಯ
ಸೇರಿರುವ,
ಸಾಸಿವೆಯನು
ಕಡ್ಡಿಯೆನುವ
ಆಯುಧವಿಲ್ಲದೆ
ಬಂಧಮುಕ್ತಿಗೊಳಿಸುವುದು
ಹರಸಾಹಸವೆ ತಾನೇ ...

ಅಂದು-ಇಂದು


ಅವಳಂದು ನನ್ನ
ನೋಡಿ ನಕ್ಕ
ಕ್ಷಣದಿಂದ
ಮನದಲ್ಲೇ
ಮಾಡತೊಡಗಿದ್ದೆ
ಪ್ರೇಮ ಸಾಹಿತ್ಯದ ಕೃಷಿ...
ಇಂದು ನನಗೆ
ಕೈಕೊಟ್ಟಾಗಿನಿಂದ
ಕಾವಿಯನು ಧರಿಸಿ
ಗಡ್ಡವನು ಬೆಳೆಸಿ
ಆಗಬೇಕೆಂದಿರುವೆ
ನಾನೊಬ್ಬ ಋಷಿ

ಪ್ರೇಯಸಿ



ನನ್ನ ಕೋಣೆಯ
ಕಿಟಕಿಯನು
ತೆರೆದಿಟ್ಟಿದ್ದೇನೆ,
ಸದ್ದಿಲ್ಲದೆ ಮೆಲ್ಲಗೆ
ಒಳ ಬರಲೆಂದು
ನನ್ನ ಪ್ರೇಯಸಿ...
ನನ್ನ ಅದೃಷ್ಟಕ್ಕೆ
ಗುಯ್ ಗುಡುತ್ತಾ
ಒಳ ಬಂದಿದ್ದು
ನೆತ್ತರ ಹೀರೋ
ದೊಡ್ಡ ದೊಡ್ಡ ನುಸಿ...

ಅಚ್ಚರಿ



ಕಪ್ಪಗಿನ
ಮೋಡವದು
ಕರಗಿ
ಬುವಿಯ
ಗೋಡೆಯ
ತುಂಬಾ
ಹಸಿರು
ಬಣ್ಣವ
ಬಳಿದದ್ದು
ಹೇಗೆ ...?

ನೋವು



ಅವಳ
ವಾಸ್ತವದಿ
ನಾ ಪಡೆದು
ಕೊಳ್ಳಲೇ ಇಲ್ಲ ;
ಆದರೂ ಯಾಕೋ
ಕಳಕೊಂಡ
ನೋವು
ಕಾಡುತಿದೆಯಲ್ಲಾ...?

ತೆರೆ...


ಕತ್ತಲಾದಂತೆ
ಕಣ್ ರೆಪ್ಪೆಗಳು
ಮುಚ್ಚುವಂತೆ
ಕಂಡರೂ ಅದು
ಮುಚ್ಚುವುದಲ್ಲ ,
ವಾಸ್ತವದಿ ಅದು
ನಿದಿರೆಗಾಗಿ
ತನ್ನ ತಾ
ತೆರೆದು ಕೊಳ್ಳುವುದು.

ಅ-ಕ್ರಮ



ಇದ್ದಿರಲೇ
ಬೇಕಂತೆ
ರಾಜ್ಯದಲಿ
"ಹಸ್ತ"ದ ಸರ್ಕಾರ ;
ಆವಾಗಲೇ ಹಾಕುವುದಂತೆ
ನಮ್ಮ ರಾಜ್ಯಪಾಲರು ,
ಯೋಜನೆಗಳಿಗೆ
ತಮ್ಮ ಹಸ್ತಾ-ಕ್ಷರ .

ಮುಗ್ಧತೆ



ಬೆಳೆದಂತೆಲ್ಲಾ
ಮೆಲ್ಲಗೆ
ಕಳಕೊಳ್ಳುವ
ನಮ್ಮೊಳಗಿನ
ಅಮೂಲ್ಯ
ಸಂಪತ್ತೇ...
ಈ ಮುಗ್ಧತೆ

ತಣಿಸು



ಬಿಡದೆ ಸುರಿದ
ಮಳೆಹನಿಯು
ಇಳೆಯ ತನುವ
ತಣಿಸುತಿದೆ.
ಅವಳ ನೆನಪಿನ
ಸವಿ ಭಾವ ಬಿಂದುಗಳು
ನನ್ನ ಮನವ
ತಣಿಸುವಂತೆ

ಸರಿಯಾದ ಸಮಯ



ಹೇಳಿದ ಜಾಗಕ್ಕೆ
ಸರಿಯಾದ ಸಮಯದಲಿ
ಭೇಟಿಗೆ ಬರುವುದೇ
ಇಲ್ಲ ನನ್ನಾಕೆ ;
ವಿಚಾರಿಸಿದಾಗ ಗೊತ್ತಾಯ್ತು
ಉದ್ಯೋಗವನಿತ್ತು ಅವಳ
ಈ ರೀತಿ ಕೆಡಿಸಿದ್ದು
ನಮ್ಮ ಹವಾಮಾನ ಇಲಾಖೆ .

ಜೊತೆ



ಮುದ್ದಿನ ಸಾಕು
ನಾಯಿಗಳೇ ಜೊತೆ ,
ನಗರವಾಸಿಗಳ
ಮಾರ್ನಿಂಗ್ ವಾಕಿಗೆ ;
ಅದೇ ಹಳ್ಳಿಗರಿಗೆ
ಬೆಳ್ಳಂಬೆಳಗ್ಗಿನ ನಡಿಗೆಗೆ
ಜೊತೆ ನೀಡುವುದು
ತಾಮ್ರದ ತಂಬಿಗೆ .

ಮುತ್ತು



ನನ್ನ ನಿದಿರೆಯೆನುವ
ಚಿಪ್ಪಿನೊಳಗಿದೆ,
ಅವಳ
ಕನಸೆನುವ
ಹೊಳೆವ ಮುತ್ತು .

ವ್ಯತ್ಯಾಸ



ಹಾಸಿಗೆಯಲಿ
ತನ್ನ ನೆಚ್ಚಿನ
ನಾಯಿ ಮರಿಯ,
ಸರಸದಲಿ
ಮುದ್ದಿಸುತಿದ್ದ
ತನ್ನ ಪತ್ನಿಯನು
ಹೊರಕೋಣೆಯಲಿ
ತೆಪ್ಪಗೆ ಕುಳಿತಿದ್ದ
ಪತಿರಾಯ
ಕಂಡೊಡನೆ
ಮನದೊಳಗೆ
ಗುನುಗುನಿಸಿದನಂತೆ;
ನಾಯಿಗೂ
ನಾಯಿ ಪಾಡಿಗೂ
ಅದೆಂಥಾ ವ್ಯತ್ಯಾಸ .

ಹೀಗೊಂದು ಸಂಶಯ



ಹೀಗೊಂದು ಸಂಶಯ
ಮೈಯನೊದ್ದೆಗೊಳಿಸಿದ್ದು
ಆಗಸದಿಂದುರಿದ
ಮಳೆ ನೀರಹನಿಯೋ...?
ಅಥವಾ
ಅವಳಿತ್ತ ವಿರಹದುರಿಗೆ
ಕಣ್ಣ ತೊರೆದ
ಕಣ್ ನೀರ ಹನಿಯೋ...?

ವಿಪರ್ಯಾಸ



ಹಸಿರ ಮೈದಾನದಲಿ
ಆಡಿ ಗೆದ್ದವರಿಗೆ
ಕೋಟಿ ಹಣದ
ಗಂಟು ;
ಜರಿದ
ಬೆಟ್ಟ ಗುಡ್ಡದಲಿ
ಪ್ರಾಣವ
ಒತ್ತೆಯಿಟ್ಟು
ಜೀವಗಳನುಳಿಸಿ
ಮನವ ಗೆದ್ದವರಿಗೆ
ಸದಾ ನಿರ್ಲಕ್ಷ್ಯದ ನಂಟು.

ಜಾರು...



ನಿನ್ನ ನೆನಪಾದೊಡನೆ
ಪ್ರೇಮ ಕೂಪದೆಡೆ
ಜಾರಿ ಹೋಗುವೆನಲ್ಲಾ...
ನೀನೇನು ಪಾಚಿಯೊ...?
ಇಲ್ಲ ಪಿಶಾಚಿಯೋ...?

ಚಿಗುರು



ನನ್ನೀ ಮೊಗದ
ನೆಲದ ತುಂಬಾ
ನಗುವೆನುವ
ಹಸಿರು ಹುಲ್ಲು
ಚಿಗುರಿರಲು,
ನನ್ನೊಡಲಿಗೆ
ಬಿದ್ದ ಅವಳ
ನೆನಪಿನ
ಮಳೆಹನಿಯೇ
ಕಾರಣ

ಕಳೆ....



ನನ್ನಿರುಳ
ನಿದಿರೆಗೊಂದು
ಕಳೆ....
ನನ್ನವಳ
ಸುಂದರ
ಕನಸು

ಹಾಲ್ಬೆಳಕು



ಮೈತುಂಬಿದ
ಪೂರ್ಣ ಚಂದಿರ
ಧರೆಗೆ ಧಾರೆಯೆರೆದ
ಹಾಲ್ಬೆಳಕನು,
ಕರಿದಾದ
ದೈತ್ಯ ಮೇಘಗಳು
ಇಳೆಗೇನೂ
ದಕ್ಕದಂತೆ
ನಡುವೆಯೇ
ಪೂರ್ತಿಯಾಗಿ
ಕುಡಿದು ಬಿಟ್ಟಿದ್ದವು.

ಶುಭ್ರ


 
ಮೋಡವೆನುವ
ನಸುಗಪ್ಪು ಕೊಳೆ
ಮಳೆಯಾಗಿ
ಇಳೆಗಿಳಿದು
ಸಾಗರವೆನುವ
ಮೂಲೆಯ ಸೇರಿ
ಆಗಸವಾಯಿತು ಶುಭ್ರ

ಅಪ್ಪುಗೆ



ಬೆಳಕಿನಾಟ ಮುಗಿದು
ಕತ್ತಲ ಪರದೆ
ಎಳೆದಿದ್ದೇ ತಡ
ಒಬ್ಬರನ್ನೊಬ್ಬರು
ಬರಸೆಳೆದಪ್ಪುವ
ಬಯಕೆ ನನ್ನೀ
ಕಣ್ಣ ರೆಪ್ಪೆಗಳಿಗೆ.

ಆಯಸ್ಸು


ನನ್ನ ಕಾಡುವುದನೇ
ಕಾಯಕವಾಗಿಸಿಕೊಂಡಿರುವ
ಅವಳ ನೆನಪುಗಳಿಗೇಕೆ
ಇಂಥಾ ಸುಧೀರ್ಘ
ಆಯಸ್ಸು.....?

ಕೊಬ್ಬು



ಮೋಡ ತಂದಿತ್ತ
ತಿನಿಸ ತಿಂದು
ನದಿಗಳ ಮೈಯಲ್ಲಿ
ಜಮೆಯಾಗಿದೆ
ಜಗವನಳಿಸುವಂಥಾ ಕೊಬ್ಬು

ಗುರುತು



ಇಟ್ಟ ಹೆಜ್ಜೆಯ
ಗುರುತನ್ನು
ಉದ್ದನಾಗಿಸಿ
ಆಕಾಶವ
ತೋರಿಸಿತ್ತು
ನೆಲಕ್ಕಂಟಿದ
ಪಾಚಿ

ರೂಪ



ಕರಗಿ ನಿರಾಗದ
ಮುಗಿಲ ಮೋಡದಲ್ಲಿ
ನನ್ನ ಆಸೆ
ಕಂಗಳಿಗೆ ಕಾಣಿಸಿದ್ದು
ಅವಳದೇ ರೂಪ

ರಜೆ


ಮುಗಿಲ
ಶಾಲೆಯಲ್ಲಿ
ಅತ್ತಿತ್ತ
ಓಡಾಡಿ
ಬೆವರ
ಸುರಿಸುತ್ತಿದ್ದ
ಮೋಡಗಳಿಗೆ
ಇಂದೇಕೋ
ರಜೆ
ಘೋಷಿಸಿದ್ದಾರೆ .

ಆತಿಥ್ಯ...



ಬುವಿಯ ಸೇರುವ
ಹಾದಿಯ ನಡುವೆ
ಮಳೆಹನಿಗಳಿಗೆ
ತರುಲತೆಗಳ
ಮೈಮನದಲೊಂದು
ಸಣ್ಣ ಆತಿಥ್ಯ..
ಗಿಡಮರಗಳ ಈ
ಅದ್ಭುತಾತಿಥ್ಯದ
ಸವಿಯನುಂಡ
ಮಳೆಹನಿಗಳು
ಈ ಆಶ್ರಯವ
ತೊರೆಯುವಾಗ
ಮಾಡುತಿದೆ ಆಲಸ್ಯ..

ವಿಚಿತ್ರ ಉತ್ತರ...



ಅಬ್ಬರದ ಗುಡುಗು
ಗುಡುಗುತಿರಲು
ಎದೆಗುಂದದೆ
ನಿರಾಳವಾಗಿ
ಹಾದಿಯಲಿ
ನಡೆಯುತಿದ್ದಾತನ
ನಿಲ್ಲಿಸಿ ಮೆಲ್ಲಗೆ
ನಿಮಗೆ ಭಯವಿಲ್ಲವೇ..?
ಎಂದು ಕೇಳಿದ
ಪ್ರಶ್ನೆಗೆ...
ಆತನಿತ್ತ ಉತ್ತರ
ಬಲು ವಿಚಿತ್ರವಾಗಿತ್ತು.
.
.
.
.
ನಾನೊಬ್ಬ
ಅಮ್ಮಾವ್ರ ಗಂಡ.

ಗುರಿ ಸೇರುವ ಮುನ್ನ...



ಬಹಳ ಪ್ರೀತಿಯಿಂದ
ಬಿಳುಪಿನ ದಪ್ಪ ಕಾಗದದ
ತುಂಬಾ ಮುದ್ದು ಮುದ್ದಾಗಿ
ನಾ ಬರೆದ ಪ್ರೇಮ ಪತ್ರ ,
ನನ್ನವಳ ಕಣ್ ಕಡಲಲ್ಲಿ
ತೇಲಿ ತೇಲಿ ಅವಳ ಮನದ
ಸಾಗರವ ಸೇರುವ ಮುನ್ನ,
ಅವಳ ತುಂಟ ತಮ್ಮನ
ಕೈಸೇರಿ ಕೆಸರು ನೀರಲ್ಲಿ
ದೋಣಿಯಾಗಿ ತೇಲಿ ಹೋಗಿ
ಹತ್ತಿರದ ಚರಂಡಿಯಲ್ಲಿ
ಮುಳುಗಿ ಬಿಟ್ಟಿತ್ತು.

ತೋಯುವಾಸೆ..



ನೆನಪಿನಾ ಮೋಡದಿಂದ
ಸುರಿಯುವ ಅವಳ
ಕನಸುಗಳೆನುವ
ಮಳೆಹನಿಗಳಿಗೆ,
ಈ ಇರುಳ
ಬಯಲಿನಲಿ
ನನ್ನ ನಾ
ತೆರೆದಿಡುವಾಸೆ;
ಅದು ನೀಡುವ
ಮುದದ
ತಂಪನನುಭವಿಸಿ
ಮುಂಜಾನೆಯವರೆಗೂ
ಅದೇ ಭಾವದಲಿ
ತೋಯುವಾಸೆ..

ಗೀಚಕ...



ಓದುಗರ ಕಣ್ಣಲ್ಲಿ
ಕವಿಯೆಂದು
ಗುರುತಿಸಿಕೊಳುವ
ಭಾವವೇ ರೋಚಕ;
ಆದರೂ ಆ
ಹಾದಿಯಲಿ ಸಾಗಲಾಗದೆ
ಬರಿಯೆ ಗೀಚಿ ಗೀಚಿ
ನಾನಾಗಿಹೆ " ಗೀಚಕ "

ಶಾಶ್ವತ...



ಸಂಭಂಧಗಳ
ಹೊಸ ಹೊಸ
ಚಿಗುರೆಲೆಗಳು
ಅದೆಷ್ಟೇ ಮೂಡಿದರೂ
ಮುಂದೊಂದು ದಿನ
ಮುನಿಸಿನ ಬಿರುಗಾಳಿಗೋ
ಅಥವಾ ಸಾವಿನೊಂದಿಗೋ
ಉದುರಿ ಹೋಗುವುದದು;
ನಾನೆನುವ ಮರವ
ಎತ್ತರಕೆ ಬೆಳೆಸಿದ
ಪರಮಾತ್ಮನೆನುವ
ತಾಯಿ ಬೇರೊಂದೆ
ನನಗನಿಸಿದಂತೆ
ಶಾಶ್ವತವಾಗುಳಿಯುವುದು.

ದಾನ...

ಮುಸ್ಸಂಜೆಯಲಿ
ಆ ರವಿಯು
ಕತ್ತಲ ಸಾವು
ತನ್ನ ಬಳಿಗೋಡಿ
ಬರುತಿರುವುದ ಕಂಡು
ನಗುನಗುತ ಜಗಕೆ
ತನ್ನ ಚಿನ್ನದೊಡವೆಗಳ
ದಾನ ಮಾಡತೊಡಗಿದ

ನೆನೆಯುವಾಸೆ



ಮನದ ಮುಗಿಲ
ತುಂಬೆಲ್ಲಾ
ಅವಳ .ನೆನಪಿನದೇ
ಮೋಡ;
ನೆನೆಯಲೆಂದೇ
ಕೈಯಗಲಿಸಿ
ನಿಂತಿದ್ದೇನೆ
ಸುರಿಯದಿರಬೇಡ.

ಜೈ ಜವಾನ

ಭರತ ಭೂಮಿಯ ವೀರ ಯೋಧರಿಗಿದೋ ನನ್ನ ನಮನ
ಮಾಡಿದರಂದು ಒಳಬಂದ ಪಾಕ್ ಯೋಧರ ನಿರ್ನಾಮ ಹವನ
ನೆರೆಯ ಧೂರ್ತ ನರಿಗಳ ಕುತಂತ್ರ ಯೋಜನೆಯ ಹನನ
ಭೂರಿ ಭೋಜನವನಿತ್ತು ಸಂತಸಪಡಿಸಿದರು ಯಮನ
ಕಳೆದುಕೊಂಡಿದ್ದ ಕಾರ್ಗಿಲಿನದಾಯಿತು ಭವ್ಯ ಪುನರಾಗಮನ
ದುರ್ವಿಧಿ.. ಆಳುತಿಹ ಭೂಪರು ಕೊಡುತಿಲ್ಲ ಈ ಸಾಧನೆಯೆಡೆ ಗಮನ
ಆದರೂ ಬೇಸರದಿ ಕುಗ್ಗದಿರು, ಕೆಚ್ಚೆದೆಯ ಓ ಜವಾನ
ನಿಮ್ಮೀ ಯಶೋಗಾಥೆಯ ಹಾಡುವೆವು ನಾವ್ ಪ್ರತಿದಿನ
ಈ ಹಾಡ ಹಾಡುತಲೇ ಕಳೆಯಲಿ ನಮ್ಮ ಜೀವನ