Tuesday 28 August, 2012

ಪಯಣ

ಕನಸೆನುವ
ನಾವೆಯನೇರಿ
ಹೊರಟಿದೆ,
ನಿದಿರೆಯಾ
ನದಿಯಲ್ಲಿ
ನನ್ನದೊಂದು
ಪಯಣ;
ಎಚ್ಚರವೆನುವ
ದಡವ ಸೇರುವಾಸೆ,
ಬರುವ ಮುನ್ನ
ಮೂಡಣದಿ
ಸೂರ್ಯ ಕಿರಣ.

ಬಂಧಮುಕ್ತಿ..


ನೀರ ಹನಿಗಳೆನುವ
ಮುದ್ದಾದ ಮಕ್ಕಳು,
ಬಂಧನದ ಬೇಸರದಿ

ಕುಳಿತುಕೊಂಡಿದ್ದರು
ಕಾರ್ಮೋಡವೆನುವ
ದೊಡ್ದ ಶಾಲೆಯಲಿ;
ಗುಡುಗೆನುವ ಗಂಟೆ
ಬಾರಿಸಿದ ತಕ್ಷಣ
ಸ್ವತಂತ್ರರಾದಂತೆ
ಭುವಿಯೆನುವ
ಮನೆಯೆಡೆಗೆ,
ಓಡೋಡಿ ಬರುತಿಹರು
ಈಗ ಆತುರಾತುರದಲಿ

ಉಪಚಾರ

ಹಗಲಿನಲಿ ಸುಳಿವಿರದೆ
ಸಂಜೆಯಾದಾಗ
ಹಠಾತ್ತನೆ ಬಿದ್ದ
ನಾಲ್ಕು ಹನಿಯ
ಸಣ್ಣ ಮಳೆಯನು
ಕಂಡಾಗ ನನಗನಿಸಿದ್ದು;
ಇದು ಮತ್ತಿನ್ನೇನು ಅಲ್ಲ,
ಇದುವರೆಗಿದ್ದ ಉರಿಬಿಸಿಲ
ಝಳಕೆ ಬಳಲಿ ಬೆಂಡಾಗಿ,
ಮೂರ್ಛೆ ಹೋದಂತಾದ
ವಸುಧೆಯ ವದನಕೆ
ನೀರ ಚಿಮುಕಿಸುತಲಿ
ಮೇಘರಾಜ ಇಳೆಯ
ವಾತ್ಸಲ್ಯದಿಂದ ಉಪಚರಿಸಿದ್ದು

ಬೇಲಿ

ನನ್ನವಳ ನೆನಪುಗಳೆನುವ
ಮುರಿದ ಆಟಿಕೆಗಳ
ಗಂಟು ಮೂಟೆಯನು
ಹೊತ್ತು ಕೊಂಡು,
ನಗು ನಗುತಲೆ
ಬಂದು ಬಿಟ್ಟಿದೆ
ಕಾಡುವ ಕತ್ತಲು;
ಒಂದೊಂದಾಗಿ
ತೋರಿಸಿ
ಅಣಕಿಸುತ್ತಿದ್ದರೂ...
ಹೊರಗೋಡಿ
ಬರುವಂತಿಲ್ಲ,
ಇರುವುದಲ್ಲ
ನಿದಿರೆಯ ಬೇಲಿ
ನನ್ನ ಸುತ್ತಲೂ.

ದ್ರೋಹ

ಅದೊಂದು ದೊಡ್ದ ಆಸ್ಪತ್ರೆ...
ಅಲ್ಲಿ ಒಳಗಿದ್ದವರೆಲ್ಲರದ್ದೂ
ಒಂದೊಂದು ತರಹದ ಆತಂಕ,
ತಮ್ಮದೇ ಆದ ವೇದನೆ,
ಸಹಿಸಿಕೊಳ್ಳಲಾಗದ ನೋವುಗಳು
ಸಾವಿನ ಭಯ,
ಇನ್ನೊಂದಿಷ್ಟು ಜನರ ಕಂಗಳಲ್ಲಿ.
ಮುಖವು ಮೌನವನೇ
ಬಿಂಬಿಸುತ್ತಿದ್ದರೂ..
ಬಿಕ್ಕಿ ಬಿಕ್ಕಿ ಅಳುವ
ಸದ್ದು ಒಳಗೆಲ್ಲಿಂದಲೋ
ಕಿವಿಗಪ್ಪಳಿಸುತ್ತವೆ,
ಇಂತಹಾ ದುಃಖದ
ಮೋಡವಿಲ್ಲಿ ಕವಿದಿದ್ದರೂ,
ಇರುವ ಹೆಚ್ಚಿನವರೆಲ್ಲರ
ಕಣ್ಣಾಲಿಗಳು ತುಂಬಿದ್ದರೂ..
ಬಾಗಿಲ ಬಳಿಯಲ್ಲೊಂದಷ್ಟು
ಜನ ಬೆಡಗಿಯರು
ಮುಖಕೂ , ತುಟಿಗಳಿಗೂ
ಒಂದಷ್ಟು ಬಣ್ಣವ ಮೆತ್ತಿ
ಸಿಂಗರಿಸಿಕೊಂಡು ,
ಸೌಂದರ್ಯ ಪ್ರದರ್ಶಿಸುತಲೇ
ಕಾರ್ಯನಿರತರಾಗಿರುವುದು
ಮಾನವೀಯತೆಗೊಂದು
ದ್ರೋಹವಲ್ಲದೇ ಇನ್ನೇನು...?

ವ್ಯರ್ಥ ನಿರೀಕ್ಷೆ.

ಮೌಢ್ಯದ ಕತ್ತಲು ಸರಿದು
ನನ್ನ ಮನವೆನುವ
ಭುವಿಯ ಮೇಲೆ
ಕಾವ್ಯರವಿಯ ಆಗಮನದ
ನಿರೀಕ್ಷೆಯಲಿದ್ದೆ..
ಸೂರ್ಯೋದಯ ಆಗಲೇ ಇಲ್ಲ
ಈಗ ಮನಸ್ಸಿಗೆ ಬೇಸರ
ಇದಕಾಗಿ ಬಲು ಬೇಗನೆದ್ದು
ಹಾಳು ಮಾಡಿಕೊಂಡೆನಲ್ಲ
ನನ್ನ ಸೊಗಸಿನ ನಿದ್ದೆ.

ಗುರಿ


ಮುಂಜಾನೆಯಲೇ
ಅನಂತ ದೂರದಿಂದ
ಹೊರಟ ರವಿಕಿರಣಕೆ,
ಇಳೆಯ ತನುವ
ಮೃದುವಾಗಿ
ಸ್ಪರ್ಶಿಸುವ ತವಕ,
ರೆಂಬೆ ಕೊಂಬೆಗಳ
ಅಡ್ಡಿಗಳನೆದುರಿಸಿಯೂ
ಈ ಆಸೆಯ ಕೊನೆವರೆಗೂ
ಹಿಡಿದಿಟ್ಟುಕೊಳುವುದದು,
ತನ್ನ ಗುರಿ ಭುವಿಯ
ಮುಟ್ಟುವ ತನಕ

ಹೆಣ್ಣು

ಈ "ಫೇಸ್ ಬುಕ್"
ಎನುವುದೊಂದು ಹೆಣ್ಣು,
ಎಂಬುದರ ಬಗ್ಗೆ
ನನಗೀಗ ಸಂಶಯವಿಲ್ಲ;
ಅದರೊಡನೆ ಹೇಳಿಕೊಂಡ
ನನ್ನೊಳಗಿನ ಭಾವನೆಯ
ಗುಟ್ಟಾಗಿರಿಸದೆ ನೋಡುಗರ
ಜೊತೆಗೆಲ್ಲಾ ಹಂಚಿಕೊಳುವುದಲ್ಲ..

Tuesday 21 August, 2012

ಈಡೇರದ ಬೇಡಿಕೆ..



ದಣಿದ ರವಿಯನು
ಕಡಲಾಳಕ್ಕೆ ದೂಡಿ,
ಜಗವನಾವರಿಸಿ
ಜನರ ದೃಷ್ಟಿಯಿಂದ
ಎಲ್ಲವನೂ
ಮರೆಮಾಚುವಂತೆ
ಮಾಡಿದ ಇರುಳರಾಜನಲಿ
ಭಿನ್ನವಿಸಿದೆ,
ಕಾಡುತಿರುವ
ನನ್ನವಳ ನೆನಪನ್ನು
ಕಾಣಿಸದಂತೆ
ಮಾಡುವೆಯಾ ಎಂದೆ,
ಈಗ ನೋಡಿದರೆ
ನೇಸರನ ಸೋಲಿಸಿದವನ
ಪೌರುಷವೇ ಅಡಗಿಹೋಗಿದೆ,
ಈಡೇರಿಸಲಾಗದ
ನನ್ನ ಬೇಡಿಕೆಯು
ಅವನ ಕತ್ತನ್ನೇ ಬಾಗಿಸಿದೆ.

---ಕೆ.ಗುರುಪ್ರಸಾದ್



ಎಲ್ಲಿಗೆ..?

ಕತ್ತಲಿನ
ಹಾದಿಯಲಿ
ಕುಣಿ ಕುಣಿದು
ಸಾಗುತ್ತಿದ್ದ
ಕನಸುಗಳ
ಮೆರವಣಿಗೆ;
ಸೂರ್ಯನಾಗಮನ
ಆದೊಡನೆ ಚದುರಿ
ಚೆಲ್ಲಾಪಿಲ್ಲಿಯಾಗಿ
ಓಡಿ ಹೋದದ್ದಾದರೂ
ಎಲ್ಲಿಗೆ..?

ಪಾನಕ

ದಿನವಿಡೀ ದುಡಿದು
ದಣಿದ ದೇಹದ
ದಾಹ ತೀರಲು
ಅತೀ ಆವಶ್ಯಕ;
ಈ ಕತ್ತಲೆನುವ
ಪಾತ್ರೆಯಲಿರುವ
ನಿದಿರೆಯೆಂಬ
ಸಿಹಿಯಾದ ಪಾನಕ.

ಪಲಾಯನ

ಚಿನ್ನದ ಮೊಟ್ಟೆಯೆಂದು
ಭಾವಿಸಿ ಆಗಸದಿಂದ
ಕದ್ದು ತನ್ನ ಒಡಲಿನ
ಬಂಧನದಲ್ಲಿಟ್ಟ ಕಡಲರಾಜನಿಗೆ,
ಮುಸುಕಿನ ಮುಂಜಾನೆಯಲಿ
ಚಳ್ಳೆಹಣ್ಣು ತಿನ್ನಿಸಿ;
ಕೆಂಪು ಬಟ್ಟೆಯ
ಹೊದ್ದು ಮೂಡಣದ
ದ್ವಾರದಿಂದಲಿ ಹೊರಗೋಡಿ,
ಮೋಡದ ಮರೆಯಲ್ಲೇ
ತನ್ನೂರು ಸೇರಿ ನಿಟ್ಟುಸಿರ ಬಿಟ್ಟು
ಸಂತಸದಿ ನಗುತ್ತಿದ್ದಾನೆ
ನೇಸರ, ಜಗವನೆಲ್ಲಾ ಬೆಳಗಿಸಿ.

ಸಾಮ್ಯತೆ...

ಬಿಡದೆ
ಧಾರಾಕಾರವಾಗಿ
ಸುರಿಯುತ್ತಿರುವ
ಮಳೆಯನ್ನು
ಕಂಡಾಗ
ಥಟ್ಟನೆ ನನಗೆ
ನೆನಪಾದದ್ದು
ನನ್ನವಳ
ಬೈಗುಳ..

ಹೊಸ ಬೇಡಿಕೆ

ಹಳೆಯ
ಬೇಡಿಕೆ ಇದ್ದದ್ದು
ಮಳೆ ಬರಲಿ ಎಂದು,
ಇಳೆಯ ದಾಹ ತೀರಿ
ಹೊಸ ಕಳೆಯು
ಮೂಡುವವರೆಗೆ ,
ಈಗ ಒಂದು
ಹೊಸ ಬೇಡಿಕೆ,
ಕ್ಷಮಿಸಿ ಬಿಡು
ವರುಣ ದೇವ
ಕೇಳಿಕೊಂಡಿದ್ದು
ಹೆಚ್ಚಾಗಿದ್ದರೆ,
ಮಳೆಯು ಬಾರದಿರಲಿ
ನಾವೆಲ್ಲ ಮುಳುಗುವವರೆಗೆ.

ಧ್ವಜ ವಂದನ



ನೀಲಿ ನೀಲಿ ಬಾನಿನಲ್ಲಿ, ಧ್ವಜವು ಅರಳಲಿ
ಬೀಸೋ ಗಾಳಿಯ ತಾಳದಂತೆ ತನುವ ಕುಣಿಸಲಿ

ನಾಲ್ಕು ಸಿಂಹದ ನಡುವಲಿದ್ದ ಕಂಬದ ತುದಿಯನೇರಿ
ಪಾಶ ಬಂಧನವ ಕಡಿದುಕೊಂಡಿತು ಹೂವ ನಗೆಯ ಬೀರಿ

ಕಾಣಬಹುದು ಮೂರು ಬಣ್ಣದ ಜೊತೆಯಲೊಂದು ನೀಲಿ ಚಕ್ರವ
ಚೆಲುವ ನೋಡಿ ತುಂಬಿಕೊಳುವ ದೇಶಭಕ್ತಿಯ ಭಾವವ

ದೇಶ ಭಕ್ತಿಗೀತೆಯಿಂದ ಅದರ ಅರ್ಚನೆಗೈಯುವ
ವಂದೇ ಮಾತರಂ ಎನುತಾ ಮಂಗಳಾರತಿ ಬೆಳಗುವ

ಬನ್ನಿ ಭಾರತೀಯರೇ ಬಾವುಟಕೆ ನಾವು ವಂದಿಸೋಣ
ದೇಶಪ್ರೇಮದ ಕವಚ ತೊಟ್ಟು, ಅದರ ಘನತೆಯ ಕಾಪಾಡೋಣ..

Tuesday 7 August, 2012

ಛಾನ್ಸು..

ಅದೇನ್ ಕೆಲ್ಸಾ
ಮಾಡಿದ್ರೋ ಗೊತ್ತಿಲ್ಲ
ನಮ್ಮ ಉಪರಾಷ್ಟ್ರಪತಿ
ಹಮೀದ್ ಅನ್ಸಾರಿ;
ಆದ್ರೂ ಕೊಟ್ಟೇ ಬಿಟ್ರು
ನೋಡಿ ನಮ್ಮ ಶಾಸಕರು
ಅವರಿಗೇ ಛಾನ್ಸು
ಇನ್ನೊಂದ್ಸಾರಿ

ಅಪೇಕ್ಷೆ

ಅಭಿನಂದನೆ,
ಪ್ರೋತ್ಸಾಹವೆನುವ
ನೀರ ಸುರಿಸಿ,
ನಾನೆಂಬ ಗಿಡದಿಂದ
ಕಾವ್ಯ ಕುಸುಮವ
ಬಯಸುತಿಹ
ನಿಮಗೆಲ್ಲಾ
ನನ್ನ ಅಸಹಾಯಕ
ಮೌನದುತ್ತರ
"ನಾನೊಂದು
ಹೂವ ಬಿಡಲಾಗದ
ಮುಳ್ಳಿನ ಗಿಡ".

ಗೆಳೆತನ

ಹಗೆತನದ
ಕತ್ತಲು ಕಳೆದು
ನಮ್ಮ ನಿಮ್ಮೆಲ್ಲರ
ಬಾಳಿನ ಶುಭ್ರ
ಆಕಾಶದಲಿ ;
ಮೂಡಿ ಬರಲಿ
ಗೆಳೆತನದ
ಹೊಳೆವ ರವಿ
ಸಂತಸದ ಬೆಳಕ
ಚೆಲ್ಲುತಲಿ.

ಕನಸು

ಕನಸುಗಳೆನುವ
ನಕ್ಷತ್ರಗಳು
ಫಳಫಳನೆ
ಹೊಳೆಯಲು
ಬೇಕಾಗಿರುವುದು
ನಿದಿರೆಯೆನುವ
ಕಪ್ಪು ಆಗಸ.

ಉಪವಾಸ.

ಸಾಕಾಯಿತಂತೆ
ಅಣ್ಣಾ ಮತ್ತು
ಅವರ ತಂಡಕ್ಕೆ
ಮಾಡಿ ಮಾಡಿ
ಉಪವಾಸ;
ಇನ್ನೇನಿದ್ರು
ಇವರದ್ದು
ಭೂರಿ ಭೋಜನ
ಸಿಗೋ ಹೋಟೇಲ್
"ರಾಜಕೀಯ"ದ
ಸಹವಾಸ.

ಪೈಪೋಟಿ

ಬರದ ಬೇಗೆಯಲಿ
ಬೆಂದು ಹೋದ
ಬಡ ಜನರ
ಕಂಗಳಿಂದ
ಹರಿದು ಹೋದ
ಕಣ್ಣೀರ ಹನಿಗಳಿಗೆ
ಪೈಪೋಟಿ
ಕೊಡುವ ನೆಪದಲ್ಲಾದರೂ
ಬರಬಾರದೇ..
ಓ ಮಳೆಹನಿಯೆ..

ಸಂಚು..

ಜೀವನದ ಪ್ರತಿಯೊಂದು
ಹಂತದಲೂ
ನನ್ನ ಸಂತೋಷವ
ಕಂಡು ನನಗಿಂತಲೂ
ಹೆಚ್ಚು ಖುಷಿಪಡುತ್ತಿದ್ದ
ನನ್ನ ಮುದ್ದಿನ ಅಮ್ಮ,
ಇತ್ತೀಚಿಗೆ ಬದಲಾಗುತ್ತಿದ್ದಾಳೆ;
ಬ್ರಹ್ಮಚರ್ಯದಲ್ಲಿನ
ನನ್ನ ಸಂತೋಷವ
ಕಂಡು ಹೊಟ್ಟೆಕಿಚ್ಚು
ಪಡುತ್ತಿದ್ದಾಳೆ,
ನನ್ನ ಈ ಸಂತಸವ
ಪೂರ್ತಿಯಾಗಿ ನಿಲ್ಲಿಸುವ
ಸಲುವಾಗಿ,
ತನ್ನ ಮೃದು ಹೃದಯವ
ಕಲ್ಲಿನಂತೆ ಕಠೋರವಾಗಿಸಿ
ಮದುವೆಯೆನುವ
ಸೆರೆಮನೆಗೆ ದೂಡಿ ಬಿಡುವ
ಸಂಚು ರೂಪಿಸುತ್ತಿದ್ದಾಳೆ.