Tuesday 31 January, 2012




ನಿನ್ನ ಪತ್ರವೇನೋ ಬಂದು ಸೇರಿತು ಇನಿಯಾ

ಆದರೆ ನೀನೇ ಬಂದಂತಾಗಲಿಲ್ಲ

ಪತ್ರದಲಿನ ಪದಗಳೆಲ್ಲವೂ ಸ್ಪರ್ಶಿಸಿದವೆನ್ನ

ಆದರವು ನಿನ್ನಂತೆ ನನ್ನ ಮುದ್ದಿಸಲಿಲ್ಲ.

ಸೂರ್ಯ ಮತ್ತು ಭುವಿಯು 
ಒಂದಾಗೋ ಹೊತ್ತು
ಪ್ರಿಯೆ ನಾ ಕೊಡಲೇ 
ನಿನ್ನ ಹಣೆಗೊಂದು ಮುತ್ತು.

Sunday 29 January, 2012


ಮುಂಜಾವಿನಿಂದ ಮುಸ್ಸಂಜೆಯವರೆಗೆ
ಬಣ್ಣ ಬಣ್ಣದ ತೊಡುಗೆಗಳ ತೊಟ್ಟು
ನೀಲಿ ನೀಲಿ ಪರದೆಯ ಮುಂದೆ
ತನ್ನ ಪಾತ್ರವನಾಡಿ ಬಳಲಿದನು ನೇಸರ.
ಇದುವೇ ಸರಿಯಾದ ಸಮಯವೆಂದು
ತಾರೆಗಳ ತಂಡವನೇ ಕರೆತಂದು
ಕಪ್ಪು ಬಣ್ಣದ ಪರದೆಯನು ಎಳೆದು
ಆಗಸದ ರಂಗಮಂಟಪವನಾವರಿಸಿದನು ಚಂದಿರ

Saturday 28 January, 2012



"ಪ್ರೀತಿಸುವ ನಾಟಕವನಾಡಿ


ಅವಳೆನ್ನ ಮರೆತಳೇ.."


ಈ ಮಾತುಗಳ


ನಾನಂತೂ ಮನದೊಳಗೇ


ಮೆಲುಕು ಹಾಕಿದ್ದೆ


ಶಬ್ದಗಳ ರೋಪ ನೀಡದೆ


ಕಣ್ಣೀರ ಕೊಳದಲ್ಲಿ


ಜಲ ಸಮಾಧಿಮಾಡಿದ್ದೆ


ಅದು ಹೇಗೆ ಅರ್ಥವಾಯಿತೋ


ನನಗಂತೂ ಗೊತ್ತಿಲ್ಲ


ಆ ಕ್ಷಣವೇ ಗೋಡೆಯ


ಮೇಲಿನ ಹಲ್ಲಿ ಲೊಚಗೊಟ್ಟಿದ್ದೇಕೆ..?



ಕರಿದಾದ ಕತ್ತಲಿಗೆ ಮುಪ್ಪಡರಿತೇ...
ತಾರೆಗಳ ತೋಟವದು ಬರಡಾಯಿತೇ..
ನೀರವ ಮೌನವೂ ಮರೆಯಾಯಿತೇ..
ಅದ್ಯಾರು ಉರಿಸಿದರೋ ನಾ ಕಾಣೆ
ಮುಡಣದ(moodana)ಮುಲೆಯಲಿ(mooleyali) ರವಿಯೆನುವ ಹಣತೆ
ಕಡಲ ನೀರಿನೆಣ್ಣೆಯ ಬಳಸಿ ಅದು ಪ್ರಜ್ವಲಿಸತೊಡಗಿತೇ..

Thursday 26 January, 2012

ಜಾಣೆ ಅವಳು
ನನ್ನ ಮನದಲ್ಲಿ 
ನಿಂತುಕೊಳ್ಳಲಿಲ್ಲ.
ನೆಲೆ ನಿಂತದ್ದು
ನನ್ನ ಕಣ್ ರೆಪ್ಪೆಯ
ಒಳಭಾಗದಲ್ಲಿ.
ಈಗ ನಾನವಳ
ಮರೆಯಬೇಕೆಂದರೂ
ಮರೆಯಲಾಗುತ್ತಿಲ್ಲ;
ಕಣ್ಣ ಮುಚ್ಚದೆಯೆ 
ನಾ ಬದುಕುವಂತಿಲ್ಲ.
ಕಣ್ಣ ಮುಚ್ಚಿದೊಡನೆ
ಅವಳೇ ಕಾಣುವಳಲ್ಲ.

---K.GP

Tuesday 24 January, 2012


ಬನ್ನಿ ಮುದ್ದಾದ
ಪದಗಳೇ
ನನ್ನ ಮನದ
ಮನೆಯಿಂದ;
ಮಿಂಚುತ್ತಲಿರಿ
ನೀವು ತೊಡುವ
ಬಣ್ಣ ಬಣ್ಣದ
ಭಾವನೆಯ
ಧಿರಿಸಿನಿಂದ;
ಅಚ್ಚುಕಟ್ಟಾಗಿ
ನಿಂತುಕೊಂಡು
ಕವಿತೆಯೆನುವ
ಗುಂಪಾಗಿ
ಹಂಚಿಬಿಡಿ
ನೋಡುಗರ
ಕಣ್ಣಿಗಾನಂದ.


ಅಂದು ಹೊರಗಿನ ಬ್ರಿಟಿಷರು
ಇಂದು ನಮ್ಮೊಳಗಿನ ಭ್ರಷ್ಟರು
ಅಂದಿನಿಂದ ಇಂದಿನವರೆಗೂ
ನಿರಂತರವಾಗಿ ಹರಿದು ಬರುತಿಹುದು
ತಾಯಿ ಭಾರತಿಯ ಕಣ್ಣಲ್ಲಿ ಕಣ್ಣೀರು..
ಕೂಗಿ ಕರೆ ತಾಯೇ
ನಿನಗಾಗಿ ವೀರ ಮರಣವನಪ್ಪಿದ
ಕೆಚ್ಚೆದೆಯ ಪರಾಕ್ರಮಿಗಳ...
ಇಂದಿನ ನಿನ್ನ ಸಂತಾನದಲಿ
ಇರುವವರೆಲ್ಲರೂ ನಿರ್ವೀರ್ಯರು..
ನಿನ್ನ ನೋವಿಗೆ ಸ್ಪಂದಿಸುವ
ಮನವಿರದ ಬರಿಯ ಶರೀರಗಳು..
ಶತಮಾನದಾಚೆ ಇಂದಿನ ದಿನದಂದೇ
ನೀ ಹೆತ್ತು ಜಗಕರ್ಪಿಸಿದ್ದೆ ಒಬ್ಬ ಗಂಡುಗಲಿಯ
ಅಪ್ರತಿಮ ಸೇನಾನಿಯ, ಅದಮ್ಯ ಸಾಹಸಿಯ.
ಇಂದು ಕೂಡ ಅಂತಹಾ ಪುತ್ರನೋರ್ವನ
ಇರುವಿಕೆಯ ಅಗತ್ಯತೆಯ ಮನಗಾಣೆಯಾ..
ನಿನ್ನ ಬಗೆಗಿನ ಪ್ರೇಮವನು ಮರೆತು
ಗಾಢ ನಿದ್ದೆಯಲಿಹ ನಿನ್ನದೇ ಮಕ್ಕಳನೆಬ್ಬಿಸಲು
ಮತ್ತೊಮ್ಮೆ ಸುಭಾಸರ ಹೆತ್ತು ಕೊಡು ತಾಯೆ..
ಅವರ ಮಾತೃಭಕ್ತಿಯ ಮತ್ತೊಮ್ಮೆ ನಿನ್ನಕಣ್ತುಂಬ
ನೋಡಿ, ಸಂತಸದ ಕಣ್ಣೀರ ಹರಿಸಿಬಿಡು ತಾಯೆ..

Friday 20 January, 2012


ನನ್ನ ಹೆಂಡತಿಯ
ಪ್ರಮುಖ ಅಸ್ತ್ರ;
ಪ್ರತಿಸಾರಿಯೂ,
ತನ್ನದಾದ ಗುರಿ,
ನನ್ನ ತಲೆಯ
ಘಾಸಿಗೊಳಿಸಿದಾಗ
"ಫಟ್" ಎಂದು
ಸದ್ದು ಬಂದರೂ;
ಅದನವಳೂ,
ಜೊತೆಗೆ ಜಗವೂ
"ಲಟ್"ಅಣಿಗೆ
ಅನ್ನುವುದ್ಯಾಕೆ..??
ಕಾಮನ್ ವೆಲ್ತ್

ಕ್ರೀಡಾಕೂಟದ

ಹಗರಣದ ರೂವಾರಿ

ಸುರೇಶ್ ಕಲ್ಮಾಡಿ;

ಜಾಮೀನು ಸಿಕ್ಕಿದ್ದೇ ತಡ

ಓಡೋಡಿ ಬಂದ್ರಂತೆ

ತಿಹಾರ್ ಜೈಲನ್ನು


ಖಾಲಿ-ಮಾಡಿ.

Tuesday 17 January, 2012


ಏನು ಬರೆಯಲಿ? ನಾನೇನು ಬರೆಯಲಿ?
ಬರೆವ ಮನಸಿರುವುದೇನೋ ನಿಜ
ಚೆಲುವಾದ ಕವನ ಬರೆಯಲು
ಮನ ಚಡಪಡಿಸುತಿಹುದೂ ನಿಜ
ಆದರೆ ನನ್ನೊಳಗಿನ ಈ ಬಯಕೆಗೆ
ಈ ಕ್ಷಣ ಪದಗಳ ಸಹಕಾರವಿಲ್ಲ,
ಭಾವನೆಗಳ ಸಹಯೋಗವಿಲ್ಲ.
ಅಂದೆಂದೋ ನನ್ನ ಮನದ ಮನೆಗೆ ಬಂದಿದ್ದ
ಚೆಲುವಾದ ಪದಪುಂಜಗಳೆನುವ
ಅತಿಥಿಗಳಿಗೆ ನಾ ಕೊಟ್ಟ ಆತಿಥ್ಯ
ಸಾಕಾಗಲಿಲ್ಲವೇನೋ...
ಅದಕಾಗಿ ಇಂದವರ ಆಗಮನದ
ನಿರೀಕ್ಷೆ ಇದ್ದರೂ..
ಆ ಅತಿಥಿಗಳು ಆಗಮಿಸಲಿಲ್ಲ.
ಮುಖ ತಿರುಗಿಸಿ ಹೊರಟು ಹೋಗಿಹರು
ದೂರದ ಮರೆವಿನೂರಿಗೆ.
ಸ್ವಾಗತಿಸಲು ನಿಂತ ಮನಕೆ
ಕಂಡದ್ದು ನಿರಾಶೆಯೆಂಬ ಆಗಂತುಕರು.
ಆದರೂ ಮನವು  ತನ್ನ ತಾ ಸಂತೈಸುತಿಹುದು...
ಈ ರೀತಿ..
ಕವಿತೆಯೆಂಬುದು ಮಾನವನ
ಮನದೊಳಗೆ ಮುಡುವಂತಾದ್ದಲ್ಲ;
ಅದರ ಸೃಷ್ಠಿಕರ್ತ ಭಗವಂತ.
ಕವಿಯೆನುವವನು ಬರಿಯ ಬಳಪ ಅವನಿಗೆ.
ನಾನೆನುವ ಬಳಪವನು ಬಳಸಿಕೊಂಡು
ನನ್ನ ಹರಸಿಯಾನು ಆ ದೇವ
ಒಂದಲ್ಲ ಒಂದು ದಿನ.
ಅಂದು ಆ ಮುಲಕವಿಯನು ಹೊಗಳದೆ
ಈ ಬಳಪವನು ಹೊಗಳಿಯಾರು
ಜಗದೊಳಗಿನ ಕಾವ್ಯಪ್ರಿಯರೆಂಬ ಕುರುಡು ಜನ.

Sunday 15 January, 2012


ಭಾರತೀಯ ಸೈನಿಕನ ಮಾತುಗಳು... ನನಗನಿಸಿದಂತೆ...


ಉಬ್ಬಿದ ಎದೆಯ ಮೇಲೆ ಧೈರ್ಯದ ಕವಚವಿರಲು
ತಾಯಿ ಭಾರತಿಯ ಅಭಯಹಸ್ತ ಶಿರದ ಮೇಲಿರಲು
ರಣರಂಗದಲಿ ಮುಂದಡಿಯಿಡಲು ನಮಗಾವ ಅಂಜಿಕೆ
ನಮ್ಮೆಡೆ ಬರಲು, ಪ್ರತಿ ಹೆಜ್ಜೆಯ ನಮ್ಮೆಡೆಗಿಡಲು
ನೂರು ಬಾರಿ ಯೋಚಿಸಿಯೂ ಅಂಜಿಕೆಯುರುವುದು ಇಬ್ಬರಿಗೆ
ಒಂದು ನಮ್ಮೆದುರಿರುವ ರಿಪುವಿಗೆ,
ಮತ್ತೊಂದು ಮೃತ್ಯುದೇವತೆ ಆ ಯಮನಿಗೆ...

Wednesday 4 January, 2012

ಚಿತ್ರ ಕವನ




ಕಾರ್ಮುಗಿಲೇ ನೀ ಸ್ಪೋಟಿಸಿ
ನನ್ನ ಕೊಚ್ಚಿಕೊಂಡೊಯ್ಯಬಾರದೇ..
ಕಡಲಿನ ಅಬ್ಬರದ ಅಲೆಗಳೇ...
ನನ್ನ ನಿನ್ನೆಡೆಗೆ ಬರಸೆಳೆದುಕೊಳ್ಳಬಾರದೇ...


ಕಾಮುಕನೋರ್ವನ ಹಸಿವಿಗಾಹಾರವಾಗಿ ಹೋದೆನೇ..
ಅದೆಷ್ಟು ಪ್ರತಿಭಟಿಸಿದರೂ ಶೀಲವನುಳಿಸಿಕೊಳ್ಳಲಾರದೇ ಹೋದೆನೇ..


ಇನ್ನೇಕೆ ಈ ಜೀವನವು..


ಸಮಾಧಿಯೇ, ನಿನ್ನ ಮನೆಯ ಬಾಗಿಲನು
ಬಡಬಡನೆ ಬಡಿಯುತಿಹುದು ನಿನಗಿನ್ನೂ ಕೇಳದೇ..
ಒಡಲಲಿ ಉಸಿರಿರುವುದ ಕಂಡು ಕದವ ತೆರೆಯದಿರಬೇಡ..
ಆತ್ಮವೇ ಇಲ್ಲ, ಶೀಲವಿರದ ನನ್ನೀ ತನುವಿಗೆ
ನಿನ್ನೊಡಲೆ ಬೇಕೆಂದೆನಿಸುತಿದೆ, ನೊಂದ ನನ್ನ ಮನಸಿಗೆ..

Tuesday 3 January, 2012


ಮುರಿದ ಬಿಲ್ಲಿನ
ಸಂಗದಿಂದಲಿ
ಬಾಣವೊಂದು
ತನ್ನ ಗಮ್ಯವನು
ಸೇರಲುಂಟೆ..??
ಅಂತೆಯೇ
ಮುರಿದ ಮನದ
ಸಂಭಂದದಿಂದಲಿ
ಪ್ರೇಮದ ಪಯಣ
ರಮ್ಯವಾಗಲುಂಟೇ..??