Tuesday, 17 January 2012


ಏನು ಬರೆಯಲಿ? ನಾನೇನು ಬರೆಯಲಿ?
ಬರೆವ ಮನಸಿರುವುದೇನೋ ನಿಜ
ಚೆಲುವಾದ ಕವನ ಬರೆಯಲು
ಮನ ಚಡಪಡಿಸುತಿಹುದೂ ನಿಜ
ಆದರೆ ನನ್ನೊಳಗಿನ ಈ ಬಯಕೆಗೆ
ಈ ಕ್ಷಣ ಪದಗಳ ಸಹಕಾರವಿಲ್ಲ,
ಭಾವನೆಗಳ ಸಹಯೋಗವಿಲ್ಲ.
ಅಂದೆಂದೋ ನನ್ನ ಮನದ ಮನೆಗೆ ಬಂದಿದ್ದ
ಚೆಲುವಾದ ಪದಪುಂಜಗಳೆನುವ
ಅತಿಥಿಗಳಿಗೆ ನಾ ಕೊಟ್ಟ ಆತಿಥ್ಯ
ಸಾಕಾಗಲಿಲ್ಲವೇನೋ...
ಅದಕಾಗಿ ಇಂದವರ ಆಗಮನದ
ನಿರೀಕ್ಷೆ ಇದ್ದರೂ..
ಆ ಅತಿಥಿಗಳು ಆಗಮಿಸಲಿಲ್ಲ.
ಮುಖ ತಿರುಗಿಸಿ ಹೊರಟು ಹೋಗಿಹರು
ದೂರದ ಮರೆವಿನೂರಿಗೆ.
ಸ್ವಾಗತಿಸಲು ನಿಂತ ಮನಕೆ
ಕಂಡದ್ದು ನಿರಾಶೆಯೆಂಬ ಆಗಂತುಕರು.
ಆದರೂ ಮನವು  ತನ್ನ ತಾ ಸಂತೈಸುತಿಹುದು...
ಈ ರೀತಿ..
ಕವಿತೆಯೆಂಬುದು ಮಾನವನ
ಮನದೊಳಗೆ ಮುಡುವಂತಾದ್ದಲ್ಲ;
ಅದರ ಸೃಷ್ಠಿಕರ್ತ ಭಗವಂತ.
ಕವಿಯೆನುವವನು ಬರಿಯ ಬಳಪ ಅವನಿಗೆ.
ನಾನೆನುವ ಬಳಪವನು ಬಳಸಿಕೊಂಡು
ನನ್ನ ಹರಸಿಯಾನು ಆ ದೇವ
ಒಂದಲ್ಲ ಒಂದು ದಿನ.
ಅಂದು ಆ ಮುಲಕವಿಯನು ಹೊಗಳದೆ
ಈ ಬಳಪವನು ಹೊಗಳಿಯಾರು
ಜಗದೊಳಗಿನ ಕಾವ್ಯಪ್ರಿಯರೆಂಬ ಕುರುಡು ಜನ.

No comments:

Post a Comment