Sunday 30 September 2012

ಉಡುಗೊರೆ..

ಕಣ್ರೆಪ್ಪೆಯ ಹೊದಿಕೆಯನು
ಮೆಲ್ಲನೆ ಹೊದಿಸಿ,
ಕೊಟ್ಟೆ ಮುಂಜಾನೆಯವರೆಗೆ
ಆರಾಮವೆನುವ ನಿದಿರೆ;
ಇದು ಜಗದ ಕ್ರೂರತೆಯ
ನೋಡಿ ಬಳಲಿದ
ನನ್ನೀ ಕಂಗಳಿಗೆ
ನನ್ನ ಪ್ರೀತಿಯ ಉಡುಗೊರೆ

Friday 28 September 2012

ವಿಶಾಲ ಜಗತ್ತು

ನಗುವಿನ ಮೊಗವನು ತೋರಿಸಿ
ಮರೆಯಾಗಿ ಹೋದವಳ
ಹುಡುಕಲು ಹೊರಟಾಗಲೇ
ನನಗೆ ಗೊತ್ತಾಗಿದ್ದು..
ಈ ಜಗತ್ತು ಅದೆಷ್ಟು ವಿಶಾಲ

ಕನಸು-ನನಸು

ರಾತ್ರಿ ನಾ
ಕಂಡ ಕನಸು
ಕನಸಾಗಿಯೇ
ಉಳಿಯದಿರಲೆಂದು,
ಬೆಳಕ ಚೆಲ್ಲುತ
ಓಡೋಡಿ ಬಂದ ರವಿ,
ಕನಸ ನನಸಾಗಿಸುವ
ಹಾದಿಯ ತೋರಲೆಂದು.

ಸರಸ....

ಇರುಳಲಿ ಬಾನಿಗೆ
ಕಾವಲಿರು ಎಂದು
ತನ್ನೊಡಲ ಬೆಳಕನಿತ್ತು,
ಕೋಟಿ ತಾರೆಗಳ
ಸೈನ್ಯವನೂ ಇತ್ತು,
ಕಡಲಿನಾಳದಲ್ಲಿನ
ಮತ್ಸ್ಯಕನ್ಯೆಯರೊಡನೆ
ಸರಸವಾಡಲು
ಹೋದ ಭಾಸ್ಕರನಿಗೆ,
ಚಂದಿರನ ಅಸಮರ್ಥತೆ
ಗೊತ್ತಾದದ್ದು ಬಾನಾಡಿಗಳ
ಇಂಚರವೆನುವ ಆರ್ತನಾದ
ಕೇಳತೊಡಗಿದಾಗ,
ಸಿಡುಕಿನ ಕೆಂಪು ಬಣ್ಣ
ಅವನ ಮೊಗವನಲಂಕರಿಸಿತ್ತು
ಸರಸವನು ನಿಲ್ಲಿಸಿ
ಅವರನೆಲ್ಲಾ ತೊರೆದು
ಮೂಡಣದ ಕದವ ತೆಗೆದು
ಆಗಸಕೆ ಬಂದಾಗ....

ನಂಬಿಕೆ

ಇರುಳ ಕರಾಳತೆಯ
ಸಹಿಸಿಕೊಳ್ಳಲಾಗದೇ,
ಹಾಸಿಗೆಯ ಹಳ್ಳದಲ್ಲಿ
ಮುಳುಗು ಹಾಕಿ,
ನಿದಿರೆಯೆನುವ
ಕೆಲವು ತಾಸಿನ
ಸಾವನರಸುವುದೇ
ನನ್ನ ಮನದ ಹವಣಿಕೆ;
ನಾಳೆ ಮುಂಜಾನೆಯಲಿ
ಮೂಡಣದ ಬೆಟ್ಟದಿಂದ
ಮೇಲೇರಿ ಬರುವ ರವಿ;
ಬೆಳಕ ಸಂಜೀವಿನಿಯ
ತಂದು ನನಗುಣಿಸಲು,
ಮರು ಜನ್ಮ ಪಡೆದೇನು
ಎನುವುದೆನ್ನ ನಂಬಿಕೆ

ಅವ್ಯಕ್ತ ಭಾವನೆ

ಮೊದಲ ನೋಟದಲಿ
ನಿನ್ನತ್ತ ಸೆಳೆದು,
ಎರಡನೆಯ ನೋಟದಲಿ
ನನ್ನ ಮನದಾಳಕಿಳಿದು
ಶಾಂತವಾಗಿದ್ದ ಮನದಲ್ಲಿ
ಅವ್ಯಕ್ತ ಭಾವನೆಯ ತಂದು,
ನಕ್ಕು ಮಾಯವಾದಿಯಲ್ಲೇ
ನನ್ನ ನೆಮ್ಮದಿಯ ಕೊಂದು

Thursday 20 September 2012

ಪಾತರಗಿತ್ತಿ...( My Mobile click...)ಮಧುವ ತುಂಬಿಕೊಂಡಿರುವ
ಹೂವುಗಳನರಸುತ್ತಾ
ತೋಟವನೆಲ್ಲಾ ಸುತ್ತಿ ಸುತ್ತಿ;
ಬಸವಳಿದು ಹಸಿರೆಲೆಯ
ಮೇಲೆ ಕುಳಿತುಕೊಂಡಿತೇ
ಈ ಚೆಲುವಿನ ಪಾತರಗಿತ್ತಿ...??

ಬಂದ್..

ಹೇಳದೇ ಕೇಳದೆ
ಧಿಡೀರ್ ಆಗಿ
ನಡೆಯುತ್ತಿದೆ
ಇತ್ತೀಚಿಗೆ
ಭಾರತದಲ್ಲಿ
"ಬಂದ್-ಗಳು"
ಅಪ್ಪಿ ತಪ್ಪಿ
ಆ ದಿನವೇ
ಶುಭ ಸಮಾರಂಭ
ನೀವು ಇಟ್ಟಿದಿದ್ರೆ
ಹೇಗೆ ಬರ್ತಾರೆ
ನಿಮ್ಮ "ಬಂಧುಗಳು"

ಸಿಂಹಾಸನ...

ಯೋಗ್ಯತೆಗೂ ಮೀರಿದ
ಗೌರವದ ಪದಗಳ
ಎತ್ತರದ ಸಿಂಹಾಸನದಲಿ
ಪ್ರೀತಿಯಿಂದ ಕುಳ್ಳಿರಿಸಿದ
ತಂಗಿಯ ಪ್ರೀತಿ ಅಪಾರ;
ನಿಜವ ನಾ ಹೇಗೆ
ಅವಳಿಗೆ ತಿಳಿಹೇಳಲಿ
ಸಿಂಹಾಸನವೆಂದು
ಕುಳ್ಳಿರಿಸಿದರೂ..
ನನ್ನ ಮನಸಿಗದೊಂದು
ಬಂಗಾರದ ಪಂಜರ.

ಸರಿಸಮ

ಸೌಂದರ್ಯದ ಅರ್ಥವನೀವ
ಪದಗಳನೆಲ್ಲಾ ಕಲೆಹಾಕಿ
ಚಂದದ ಕಾವ್ಯವನ್ನಾಗಿಸಿ
ನಿನ್ನ ಚೆಲುವಿಗೆ
ಸರಿಸಮವೆಂದು
ಅವಳಿಗೆ ಅದನರ್ಪಿಸಿದೆ,
ಆದರವಳ ಕಂಡೊಡನೆ
ಕಾವ್ಯದೊಳಗಿನ ಪದಗಳೆಲ್ಲ
ನಾವೀ... ಚೆಲುವಿಗೆ
ಸರಿಸಮರಲ್ಲ ಎನುತ
ಕಾವ್ಯ ಬಂಧನವ
ತೊರೆದು ಮರೆಯಾಗಿ.
ಖಾಲಿ ಹಾಳೆಯನೇ ಉಳಿಸಿದೆ..

Sunday 9 September 2012

ಕಾಣದ ಭಾಂಧವ್ಯ...


ನಗುತ ಕುಳಿತಿದ್ದೆ ನನ್ನ ಹೆತ್ತ ತಾಯ ಸೊಂಟದ ಮೇಲೆ
ನಮ್ಮಿಬ್ಬರ ದೂರ ಮಾಡಿದೆ ಬೀಸಿ ಬಂದ ಗಾಳಿಯಲೆ
ಜಗಕೇನು ಗೊತ್ತು ನಮ್ಮಿಬ್ಬರ ಭಾಂಧವ್ಯದ ಬೆಲೆ..?
ಕಂಡೀತು, ಸಹಾನುಭೂತಿಯ ದೃಷ್ಟಿಯಿಂದ ನೋಡಿದಾಗಲೇ..
ತರುವಿನೊಡನೆ ಬೆಸೆದಿದ್ದ ನನ್ನ ತನುವಿನ ಭಾಗದಲ್ಲಿ ನೆತ್ತರಿನ ಕಲೆ..

ಭಾವಾರ್ಥ..


ಗಾಢವಾಗಿ ಯೋಚಿಸಿದರೆ
ಅವಳದೇನೂ ತಪ್ಪಿಲ್ಲ,
ನನ್ನ ಕಂಡಾಗಲೇ
ಹೂ ನಗೆಯ ಬೀರುವಳು
ಎನುವುದಾಗಿತ್ತು
ನನ್ನ ಕಲ್ಪನೆ;
ಆ ನಗೆಗೊಂದು
ಭಾವಾರ್ಥ ಹುಡುಕಿ
ಅದು ಪ್ರೀತಿ
ಎಂದು ಸುಳ್ಳು
ಮಾಹಿತಿ ನೀಡಿದ್ದು
ನನ್ನದೇ ಹೃದಯ ತಾನೆ

ಆಶ್ರಯಬಾನಿನಿಂದುದುರಿದ ಮುತ್ತಿನಂಥಾ ನೀರ ಹನಿಗಳಿಗೆ
ಹೂವ ತನುವಿನಾಶ್ರಯ, ಜಾರಿ ಬುವಿಗೆ ಬೀಳುವವರೆಗೆ

ಕಠೋರ ಸತ್ಯ

ಕಲ್ಪನೆಯ ಗಾಳವನು
ತಿಳಿಯಾದ ಮನದ
ಭಾವನೆಯ ಸರೋವರದಲಿ
ಇಳಿಯಬಿಟ್ಟು
ಕಾಯುತ್ತಾ ಕುಳಿತಿದ್ದೇನೆ
ಕಾವ್ಯವೆಂಬ
ಸುಂದರ ಮೀನಿಗೆ.
ಆದರೆ ಈ ಕಾಯುವಿಕೆಗೆ
ಅಂತ್ಯವೇ ಇಲ್ಲ
ಎನುವುದು ಮಾತ್ರ
ಕಠೋರ ಸತ್ಯ.

Sunday 2 September 2012

ದೇಗುಲ...ಜಗದ ಇಂಚು ಇಂಚಿನಲೂ ಭಗವಂತನಿದ್ದರೂ
ಅವನಿಗೊಂದು ಆಲಯ, ಅದೇ ದೇವಾಲಯ,
ಪ್ರವೇಶದಾದಿಯಲೇ ಎತ್ತರದ ಗೋಪುರ
ಸೂರ್ಯ ಕಿರಣಗಳು ತಾಕಿದೊಡನೆ ಫಳಫಳನೆ
ಹೊಳೆವ ತುತ್ತತುದಿಯ ಮುಗುಳಿಗಳೆಷ್ಟು ಸುಂದರ,
ಬದಿಯಲೇ ಶುಭ್ರಜಲದಿಂದ ತುಂಬಿರುವ ಕಲ್ಯಾಣಿ,
ಅದರೊಳಗಿನ ನೀರ ತಲೆಗೆ ಚಿಮುಕಿಸಿದೊಡನೆ
ತನು-ಮನವೆರಡೂ ಪರಿಶುದ್ಧವಾದಂತಹ ಅನುಭವ.
ಪ್ರವೇಶದ್ವಾರದೆದುರು ಅಂಕು ಡೊಂಕಿರದ ಉದ್ದನೆಯ ಧ್ವಜಸ್ತಂಭ
ಅದರ ಬುಡದಲ್ಲೆ ಸಹಸ್ರ ಜ್ಯೋತಿಗಳಿಗೆ ಆಶ್ರಯವನಿತ್ತ ಎತ್ತರದ ಕಾಲು ದೀಪ
ತಲೆಬಾಗಿ ಒಳಹೊಕ್ಕೊಡನೆ ದೇವ ಮಂದಿರದ ದಿವ್ಯ ದರ್ಶನ
ದೇವಗಣಗಳಂತೆ ನಿಂತಿರುವ ಸಾಲು ಸಾಲು ಕಲ್ಲಿನ ಕಂಬಗಳು
ಪ್ರತಿ ಕಂಬದಲೂ ಅರಳಿ ನಿಂತಿದ್ದ ಕಣ್ಸೆಳೆವ ಶಿಲ್ಪ ವೈಭವ
ಪುರಾಣಗಳ ಕಥೆಗಳನೆಲ್ಲ ಕೆತ್ತಿರುವ ರೀತಿ ಬಲು ಅದ್ಭುತ,
ಮೌನದಲಿ, ಭಕ್ತಿ ಭಾವದಲಿ ಪ್ರದಕ್ಷಿಣೆ ಬರುತಿರುವ ಭಕ್ತ ವೃಂದ
ಕ್ಷಣಕ್ಷಣಕೂ ಢಣ್ ಢಣ್ ಅನ್ನೋ ಗಂಟೆಯ ಇಂಪು ನಿನಾದ
ಅಲ್ಲಲ್ಲಿ ಹಚ್ಚಿಟ್ಟ ಊದುಬತ್ತಿಯು ಪಸರಿಸುತಿದೆ ಪರಿಮಳವ
ಕಿವಿಗಿಂಪು ನೀಡುವ ಅರ್ಚಕ ವೃಂದದ ಮಂತ್ರ ಘೋಷ
ನಡುವಿನ ಗರ್ಭಗುಡಿಯೊಳಗೆ ಶಿಲ್ಪರೂಪದಿ ನೆಲೆ ನಿಂತ ಭಗವಂತ,
ಹಲವು ಬಗೆಯ ಹೂಗಳ ಅಲಂಕಾರ, ಸ್ವರ್ಣದೊಡವೆಗಳಿಂದ ಸಿಂಗಾರ
ನೇತು ಹಾಕಿದ್ದ ತೂಗು ದೀಪದ ಮಂದ ಬೆಳಕಿನಲಿ
ಅರ್ಚಕರು ಬೆಳಗುತಿಹ ದಿವ್ಯ ಮಂಗಳಾರತಿಯಲಿ
ಹೊಳೆವ ದೇವ ವದನವ ನೋಡಲೆಂತು ಸುಂದರ
ನಿನ್ನ ಪಾದಕೆ ಶರಣು, ಎಂದು ಭಕ್ತಿಯಿಂದಲಿ ನಮಿಸಿದೊಡನೆ
ದೇವಾಭಿಷೇಕದ ತೀರ್ಥವನು ಕಂಗಳಿಗೊತ್ತಿ ಸೇವಿಸಿದೊಡನೆ
ಮನದ ಕ್ಲೇಶ ಕಳೆದು ಹೋಗಿ, ಆಗುವರೆಲ್ಲರು ಹೃದಯದಿಂದ ನಿರ್ಮಲ
ಆಸ್ತಿಕರಿಗೆ ಆಧ್ಯಾತ್ಮಿಕ ಶಕ್ತಿ ಕೇಂದ್ರ, ಅದುವೇ ಬುವಿಯ ಮೇಲಿನ ದೇಗುಲ.

ಭಯ

ನೀರವ ಮೌನದ
ಒಳಗೊಂದಷ್ಟು
ಭಯಾನಕತೆಯ
ಮೆಲ್ಲಗೆ ಬೆರೆಸಿ
ಜಗವನಾವರಿಸಿ
ಜನರ ಹೆದರಿಸುತಿದೆ
ಭೀಕರ ಕತ್ತಲು;
ಕಣ್ ರೆಪ್ಪೆಯ
ಮುಚ್ಚಿಕೊಂಡು,
ಅದರೊಳಗಡೆ
ಸಿಹಿ ಕನಸ
ಇರಿಸಿಕೊಂಡು,
ನಿದಿರಾದೇವಿಯನು
ಅಪ್ಪಿಕೊಳಬೇಕೆಂದಿರುವೆ
ಈ ಭಯದಿಂದ
ನಾ ಪಾರಾಗಲು..

ಸಹನೆ

ಹಗಲಿರುಳೆನ್ನದೆ
ಸಾಗಿದೆ ಕಾರ್ಮುಗಿಲ
ಘನಘೋರ ಯುದ್ಧ,
ಗುಂಪು ಗುಂಪಾಗಿ
ವಸುಧೆಯ ಮೇಲೆ
ಮಾಡುತಿದೆ ದಾಳಿ,
ಆದರೂ ಭುವಿಯ
ಸಹನೆಯಲಿ ಏರುಪೇರಿಲ್ಲ,
ದಾಳಿಗೊಳಗಾದದ್ದು
ವಸುಧೆಯಾದರೂ
ಸೋತು ಹೋದದ್ದು
ಕಾರ್ಮುಗಿಲು,
ಇಳೆಯ ಸಹನೆಯನು
ಸಂಹರಿಸಲಾಗದೇ
ಬೀಸಿದ ತಂಗಾಳಿಯ
ಜೊತೆ ಪರಾರಿಯಾಯಿತಲ್ಲ..

ಉಡುಗೊರೆ


ಇರುಳು ಪೂರ್ತಿ
ತನ್ನ ಮನೆಯೊಳಗೆ
ಮಲಗಿ ನಿದ್ರಿಸಲು
ಅವಕಾಶವನಿತ್ತ
ಕಡಲದೇವಿಗೆ
ನೇಸರನ
ಪ್ರೀತಿಯ ಉಡುಗೊರೆ,
ಹೊಳೆವ ಈ
ಬಂಗಾರದ ಸೀರೆ.