Monday 25 August, 2014

ಸ್ನೇಹ....



ಬಾಲ್ಯದಲಿ
ಒಬ್ಬರ
ಹೆಗಲ
ಮೇಲೊಬ್ಬರು
ಕೈ ಹಾಕಿ
ನಡೆಯುವುದೇ
ಗಾಢ
ಸ್ನೇಹದ
ಕುರುಹು...

ವರ್ಕ್...



ಮೊದಲೆಲ್ಲಾ
ಯುವಜನತೆ..
ಚಿಂತೆಗೀಡಾಗುತ್ತಿದ್ದರು
ಸಿಗದಿದ್ದಾಗ "ವರ್ಕು "
ಇಂದು ಯುವಜನತೆ
ಚಿಂತೆಗೀಡಾಗುತ್ತಾರೆ
ಸಿಗದಿದ್ದಾಗ " ನೆಟ್ ವರ್ಕು

ನಾಗರ ಪಂಚಮಿ



ಬುಸುಗುಟ್ಟುವ
ಮಡದಿ
ಮನೆಯಲಿರಲು
ನಿತ್ಯವೂ
ನಾಗರ ಪಂಚಮಿಯೇ...

ಹೊಣೆ..



ನನ್ನ ಕಣ್ ಕಡಲ
ನೀರಿನುಬ್ಬರ ಇಳಿತಕೆ
ಅವಳ ನೆನಪಿನ
ಚಂದಿರನ ಗಾತ್ರವೇ
ನೇರ ಹೊಣೆ...

ಕರೆ....



ಕೇಳಿಸಲಿಲ್ಲವೆಂದು...
ಗಮನಕೊಡದೆ
ಸುಮ್ಮನಿರುವಂತಿಲ್ಲ...
ಯಮನ ಕೂಗಿಗೆ
ಓಗೊಡಲೇಬೇಕು...
ಸಂಬಂಧಗಳ
ಕೊಂಡಿಗಳನೆಲ್ಲಾ
ಕಳಚಿಕೊಂಡು
ಅವನೆಸೆವ ಪಾಶಕೆ
ಕೊರಳನೊಡ್ಡಲೇಬೇಕು...

ಸಾಂತ್ವಾನ....



ನಾನೇನೂ ಸಾಂತ್ವಾನದ
ಮಾತುಗಳನಾಡದೇ ಹೋದೆ...
ಪತಿಯ ಕಳೆದುಕೊಂಡ
ನನ್ನಕ್ಕನ ಕಣ್ಣೀರಿಗೆ
ಅಣೆಕಟ್ಟನು ಕಟ್ಟಲಾರದೆ
ಅಸಹಾಯಕನಾಗಿ ನಾ ನಿಂತು ಬಿಟ್ಟೆ...

ಮನದಾಳದ ತುಂಬಾ
ತಡಕಾಡುತಲಿದ್ದೆ...
" ನಾನೇಕೆ ಬದುಕಲಿ...? "
ಎನುವ ಅವಳ ಪ್ರಶ್ನೆಗೆ
ಉತ್ತರವಾಗಬಲ್ಲ ಶಬ್ದಗಳೇನಾದರೂ
ಸಿಕ್ಕೀತೆ....?
ಎನುವ ಆಸೆಯಿಂದ...
ಅಲ್ಲೂ ನಿರಾಸೆ,
ನಾ ಮತ್ತೊಮ್ಮೆ ಸೋತು ಹೋದೆ.

ಬಲು ದಿಟ್ಟೆ ನನ್ನಕ್ಕ
ಕಷ್ಟಗಳಿಗಂಜುವವಳಲ್ಲ...
ನನ್ನ ಜೀವನದ ಹಾದಿಯಲೇ
ಏಕೆ ಇಷ್ಟೊಂದು ಮುಳ್ಳುಗಳೆಂದಾಗ
ಉತ್ತರವ ಕೊಡಲಾಗದೇ
ತಡವರಿಸುತ್ತಲೇ ಇದ್ದೆ...

ನಿನ್ನಾಟವ ನಿಲ್ಲಿಸೆಂದು
ನಾನೆಂದೂ ಗೋಗರೆಯುವುದಿಲ್ಲ,
ನಿನ್ನ ಜರೆಯುವುದಿಲ್ಲ,
ಹೇ ಭಗವಂತ...
ನೊಂದ ನನ್ನವರ
ಸಂತೈಸುವ ಶಕ್ತಿ ಕೊಡು...
ಎಂದಷ್ಟೇ ಅಂಗಲಾಚುತ್ತೇನೆ...
ಎಂದಷ್ಟೇ ಅಂಗಲಾಚುತ್ತೇನೆ...

ಭ್ರಮೆ....



ಜೀವನದ
ಪ್ರವಾಹದಲ್ಲಿ
ನಮ್ಮನ್ನೆಲ್ಲಾ
ಕೊಚ್ಚಿಕೊಂಡು
ಹೋಗುವಂತೆ
ತೇಲಿಬಿಟ್ಟಿದ್ದಾನೆ
ಭಗವಂತ...
ನಮಗೋ
ಈಜುತ್ತಿದ್ದೇವೆ
ಎನ್ನುವ ಭ್ರಮೆ...

ದೀಪ....


ದೇಹವೆನುವ
ಹಣತೆಯೊಳಗೆ
ಆಯಸ್ಸಿನ ಎಣ್ಣೆ...
ಉರಿವ ದೀಪ
ಬದುಕು...
ಹಿಗ್ಗಿಸುವ
ಕುಗ್ಗಿಸುವ
ಕುಣಿದಾಡಿಸುವ
ಕೊನೆಗೊಮ್ಮೆ
ಆರಿಸುವ ಶಕ್ತಿ
ಗಾಳಿಯೆನುವ
ಪರಮಾತ್ಮನದು

ಆರೋಗ್ಯ


ಕಹಿ ಗುಳಿಗೆಯ
ರುಚಿಯು ನಾಲಗೆಯ
ಮೇಲಷ್ಟೇ....
ಕಾಲದ ನೀರ
ಧಾರೆಯೊಂದಿಗೆ
ಕಹಿಯೂ ಕರಗಿ
ನಗುವಿನಾರೋಗ್ಯ
ತನುವನಾವರಿಸೀತು...

ಕಾಲ



ಮೋಡ ಮುಸುಕಿ
ರವಿಯ ಮರೆಯಾಗಿಸಿದರೇನು...?
ರವಿ ಮೂಡದೆ
ಕಡಲೊಳಗೇ ಇದ್ದು ಬಿಡುವನೇ...?
ತನ್ನನೇ ಬಂಧಿಸುವ
ಮೋಡಗಳಿಗೂ ಒಂದಿಷ್ಟು ಕಾಲ
ಎಂದು ತನ್ನ ಹಾದಿಯಲಾತ
ಹೆಜ್ಜೆ ಹಾಕುವುದ ಮರೆತು ಬಿಡುವನೇ...?

ಸಮಾಧಿ...



ಭಗವಂತ ತಂದಿಟ್ಟ
ಪರಿಸ್ಥಿತಿಯೆನುವ
ಮಣ್ಣಿನ ಕುಸಿತದಡಿಯಲ್ಲಿ
ಮನಸ್ಸಿನ ಏನೇನೋ
ಯೋಚನೆಗಳು...
ಯೋಜನೆಗಳು...
ಎಲ್ಲವೂ ಸಮಾಧಿಯಾಗಿದೆ.

ಚಿಕಿತ್ಸೆ



ಕಷ್ಟದ ಜೊತೆ
ಮಿಲನವಾದಗಲೆಲ್ಲಾ
ಕಣ್ಣು , ಕಣ್ಣೀರ
ಕೂಸುಗಳ
ಹೆರುವುದು ಇದ್ದಿದ್ದೆ....
ಅದಕ್ಕೆಲ್ಲಿದೆ
ಸಂತಾನಹರಣ
ಚಿಕಿತ್ಸೆಯ ವ್ಯವಸ್ಥೆ...?

ಎದೆ ಬಡಿತ...


ಅವಳಂದಳು,
ನನ್ನೆದೆಯ ಭಾಗವ
ನೋಡಿ...
ಹೃದಯ ಅಷ್ಟೊಂದು
ಜೋರಾಗಿ
ಬಡಿಯುತ್ತಿದೆಯಲ್ಲಾ...
ಯಾರಿಗಾಗಿ...?
.
.
.
.
.
.
.
.
.
ನಾನಂದೆ...
ಕಿಸೆಯೊಳಗಿರುವ
ಮೊಬೈಲು,
ವೈಬ್ರೇಶನ್
ಮೋಡ್ ನಲ್ಲಿದೆ
ಮಾರಾಯ್ತಿ...

ತ್ರಿವರ್ಣ ಧ್ವಜ...


ಜೋತಾಡುತಲಿದೆ
ಅಂಗಡಿಗಳೆದುರಲಿ...
ನಾಳೆ ಮುಗಿಲೆತ್ತರಕ್ಕೆ
ಏರಿ ಹಾರಾಡುವ
ಕನಸನು ಕಟ್ಟಿ...
ಸೂರ್ಯನಿಳಿದಂತೆ
ನಾಡಿದ್ದು ಕಾಲ ಕಸವಾಗಿ
ಅದರಾಚೆಗೆ
ಸೇರೀತು ಕಸದ ಬುಟ್ಟಿ.

ಅಭಿನಂದನೆ...



ನಾಲ್ಕು ದಿಕ್ಕಿಗೆ ಮುಖಮಾಡಿ
ಕುಳಿತಿಹ ನಾಲ್ಕು ಸಿಂಹಗಳೇ
ಕಾವಲು ಭಟರು...
ನಡುವೆ ಉದ್ದನೆಯ ಕಂಬ,
ಗಗನವನು ಚುಂಬಿಸಲು
ಹೊರಟ ತ್ರಿವರ್ಣಿಗೆ ಮಾರ್ಗದರ್ಶಿ..
ಆ ಪಥದಾದಿಯಲಿ
ಪಾಶ ಬಂಧನಕೊಳಗಾಗಿ
ಮುದುಡಿ ಕುಳಿತು...
ಮೆಲ್ಲಮೆಲ್ಲನೆ ಮೇಲೇರಿ
ತುದಿಯ ತಲುಪಿದೊಡನೆ
ಬಂಧನವ ಕಳಚಿ, ಅರಳಿ
ತನ್ನೊಳಗಿನ ಪುಷ್ಪವನೇ
ಮಳೆಯಾಗಿಸಿ....
ಬೀಸುವ ಗಾಳಿಯ ನಿರ್ದೇಶನಕೆ
ತಕ್ಕಂತೆ ಕುಣಿದಾಡುವ
ನಮ್ಮಭಿಮಾನದ ಸಂಕೇತಕೆ
ನನ್ನದಿದೋ ವಂದನೆ...
ಭರತಖಂಡದ ಮಕ್ಕಳೆಲ್ಲರೆದೆಯಲಿ
ರಾಷ್ಟ್ರಪ್ರೇಮವ ದೀಪ ಉರಿಸುವ
ಸ್ಪೂರ್ತಿ ಚಿಲುಮೆಗೆ
ಇದೋ ಅಭಿನಂದನೆ....

ವಂದೇ ಮಾತರಂ....



ಅಂದು ಪ್ರತಿಯೊಬ್ಬ
ಭಾರತೀಯನೊಳಗೆ
ಸ್ವಾತಂತ್ರ್ಯದ
ಕಿಚ್ಚು ಹಚ್ಚಿದ್ದ
ವಂದೇ ಮಾತರಂ
ಹಾಡಿಗೆ ಈಗ
ಬರೀ ಅರ್ಧ ಸ್ವಾತಂತ್ರ್ಯ..
ದೇಶಭಕ್ತಿಯ ಕವಿಭಾವದ
ಉತ್ಕಟತೆಯ ಕೊನೆಯ
ಸಾಲುಗಳಿಗೆ ಇಂದಿಗೂ
ಹಾಡದಿರುವ ಬಂಧನ

ಸ್ವಾತಂತ್ರ್ಯ...?


ಗೆಳತೀ...
ನಿನ್ನದೇ
ನೆನಪುಗಳ
ಬಂಧನದೊಳಗಿರುವ
ನನಗೆಂದು
ಸಿಕ್ಕೀತು
ಸ್ವಾತಂತ್ರ್ಯ...?

ಆಗಮನ...



ಅದೆಲ್ಲೋ
ದೂರದಲ್ಲೊಂದು
ವೇಣುನಾದ
ಕೇಳಿದಂತಾಗುತಿದೆ...
ಜ್ಞಾನದ
ಬೆಳಕೊಂದು
ಮೂಡುತಿರುವಂತಿದೆ...
ತನ್ನ ಹುಟ್ಟು
ಹಬ್ಬವನಾಚರಿಸಲು
ಬುವಿಗೆ ಹೊರಟಿಹನೇ
ಆ ಶ್ರೀಕೃಷ್ಣ....

ಕಟುಸತ್ಯ.



ಸುತ್ತಲಿರುವ ಗೋಪಿಕೆಯರ
ಬಳಗವನು ನೋಡಿ,
ಹೆಚ್ಚಿನ ಹುಡುಗರೆಲ್ಲರೂ
ಶ್ರೀಕೃಷ್ಣನಂತಾಗಬೇಕೆನುವ
ಬಯಕೆಯ ಬೆಳೆಸಿಕೊಳ್ಳುತ್ತಾರೆ;
ಅವನೋರ್ವ ಬ್ರಹ್ಮಾಚಾರಿ
ಎನುವ ಕಟು ಸತ್ಯವನರಿಯದೆ...

ಕಾಯುವಿಕೆ...



ಮೋಡದಾ
ಅಂತರಪಟ
ಅದೆಷ್ಟು ಹೊತ್ತು
ಇದ್ದೀತೆಂದು
ಕಾಯುತಿದ್ದ
ನೇಸರನ
ಕಾಯುವಿಕೆಗೆ
ಕೊನೆಗೂ
ಅಂತ್ಯ ಎದುರಾಗಿದೆ.
ಹಸಿರ
ಸೀರೆಯನುಟ್ಟ
ನಳನಳಿಸುವ
ವಸುಧೆಯ
ಕಂಡಾಗ
ಮತ್ತೆ ರವಿಯ
ಮನ ಸೋತಿದೆ.

ಗುಡಿಸಲು...



ನಾನೊಬ್ಬ ಗುಡಿಸಲ ನಿವಾಸಿ
ಎನ್ನುವುದು ಅರಿತಿದ್ದರೂ
ಅದೇನೋ ಹಗಲುಗನಸು..
ಅದನೊಪ್ಪಿ ನೀಬಂದು
ಬಿಡುವಿಯೇನೋ ಎಂದು...
ಅದಕಾಗಿಯೇ ತಾನೆ
ಗೇಟನು ಅರ್ಧ ತೆರೆದಿಟ್ಟದ್ದು...

ದಾಹ



ನನ್ನ
ತಲೆದಿಂಬಿನ
ದಾಹ
ತೀರಿಸಲು
ಸಜ್ಜಾಗುತಿದೆ
ನನ್ನೀ
ಕಂಗಳು

ಅಪಘಾತ



ಮತ್ತೆ ಮತ್ತೆ
ಸಣ್ಣ ಮಟ್ಟಿನ
ಅಪಘಾತಕ್ಕೊಳಗಾಗುತ್ತಿತ್ತು,
ಮೇಕಪ್ಪು ಪ್ರಿಯೆಯೊಬ್ಬಳ
ಟೂ ವೀಲರ್ ಗಾಡಿ...
.
.
.
.
.
.
.
ಕಾರಣ,
ಹಿಂಬದಿಯ ವಾಹನಗಳನ್ನು
ತೋರಿಸುವ ಬದಲಾಗಿ
ಅವಳ ಮುಖವನ್ನೇ
ತೋರಿಸುತ್ತಿದ್ದ
ಅದರೆರಡು ಕನ್ನಡಿ.

ಸಾವು



ಮೈಯೊಳಗಿಂದ
ನೀರ ನೆತ್ತರು
ಹರಿದು
ಹೋಗಿ ಹೋಗಿ
ಮೋಡಕ್ಕೆ
ಸಾವಾಯಿತೇ....?

ಬಂಧನ..



ಕಡಲ ನೀರ
ಬಂಧನವ
ಬಿಡಿಸಿ ಬಂದ
ಭಾಸ್ಕರ,
ಮುಚ್ಚಿದ್ದ ರೆಪ್ಪೆಯ
ಬಾಗಿಲನು ತೆರೆದು,
ಸೆರೆಯಲ್ಲಿದ್ದ
ಕನಸುಗಳನು
ವಾಸ್ತವದಾಗಸದಲಿ
ಹಾರಲು ಬಿಟ್ಟ..

ಜುಟ್ಟು..



ಅದೇನಾದರೂ ಆಗಲಿ
ತನ್ನ ಜುಟ್ಟು
ತನ್ನ ಪತ್ನಿಯ ಕೈಗೆ
ಸಿಗದಿರುವಂತೆ
ಮಾಡಲೇಬೇಕು
ಎಂದು ವಾರವಿಡೀ
ಯೋಚಿಸಿದ
ಹೊಸ ಮದುಮಗ;
ಮರುದಿನ
ಬೆಳಗೆದ್ದವನೇ
.
.
.
.
.
.
.
.
.
.
ತಲೆಯನು ನುಣ್ಣಗೆ
ಬೋಳಿಸಿಕೊಂಡು ಬಂದ

ಪಾರಿತೋಷಕ



ಗೆಳತೀ ....
ನಿನ್ನ ಮುಖದ
ಗೆಲುವಿನ
ನಗೆಯ
ಪಾರಿತೋಷಕ
ಪಡೆಯಲು
ತಾನೇ
ನಾ
ಸೋಲುವುದ
ಕಲಿತದ್ದು...