Tuesday, 29 July, 2014

ಬಲಾತ್ಕಾರ...ಅದೆಲ್ಲೋ ದೂರದಲ್ಲಿ,
ಬಣ್ಣಗಳ ಲೋಕದಲ್ಲಿ,
ಹಣ ಮತ್ತು ಹೆಸರಿನ
ಗಳಿಕೆಗಾಗಿ ,
ಬಟ್ಟೆಯ ಬಿಚ್ಚುತ್ತಿದ್ದ
ಒಂದಷ್ಟು ಜನ
ಹೆಣ್ಣು ಮಕ್ಕಳಿಗೆ;
ತಾವೇ ಹಚ್ಚಿದ
ಈ ಕಿಚ್ಚು ಇನ್ನೆಲ್ಲೋ
ಹೆಣ್ಣು ಕುಲದ
ಅಮಾಯಕರ
ಸುಟ್ಟು ಬಿಟ್ಟೀತೆನುವ
ಪ್ರಜ್ಞೆಯೇ ಇದ್ದಿರಲಿಲ್ಲ.

ಬೆಂಬಲಹಿರಿದು ಕತ್ತಿಯ
ಕತ್ತರಿಸಿಬಿಡಿ ಹೆಂಗೆಳೆಯರೇ
ಕಾಮುಕರ ಕುತ್ತಿಗೆಯ,
ಇದೆಯಿದಕೆ ನನ್ನ ಬೆಂಬಲ;
ಆದರದೇ ಕತ್ತಿಯಂಚಲಿರಲಿ
ತೆವಲಿಗಾಗಿ ಬಟ್ಟೆ ಬಿಚ್ಚುವ
ನಟೀಮಣಿಯರ ಕುತ್ತಿಗೆ,
ಇದು ನನ್ನ ಹಂಬಲ.

ಕೂಸು ...ಕೆನ್ನಯ ತುಂಬಾ
ನೀರ ಹನಿಗಳು....
ಅವುಗಳಲಿ
ಮೋಡದ
ಕೂಸುಗಳು
ಬರಿಯ
ಬೆರಳೆಣಿಕೆಯಷ್ಟೇ,
ಮತ್ತೆಲ್ಲವನೂ
ಹೊತ್ತು ಹೆತ್ತಿದ್ದು
ನನ್ನೀ ಕಂಗಳೇ...

ನಾಚಿಕೆನೇಸರನಿಗೂ
ನಾಚಿಕೆಯೇನೋ
ಕಾಣಿಸುತ್ತಿಲ್ಲ
ಕಣ್ಣಿಗೆ ....
ಮಳೆರಾಯನು
ಬುವಿಯ ಬಿಡದೇ
ಮುತ್ತಿಡುವ
ಈ ರೀತಿಗೆ....

ಕೇಕುಗೆಳತೀ
ಚೂರಿಯೊಂದನು
ಕೈಯಲ್ಲಿಟ್ಟು
ಒಳಹೋದಾಗ
ಕೇಕಿನ
ನಿರೀಕ್ಷೆಯಲ್ಲಿದ್ದೆ
.
.
.
.
.
ನೀ ಮಾಮೂಲಿಯಂತೆ
ನೀರುಳ್ಳಿಯನ್ನೇ ತರೋದೇ...?

ಕಳ್ಳಮೇಘರಾಜ
ಬುವಿಯ
ಮೇಲೆ ಸುರಿಸಿದ
ಮಳೆ ನೀರ
ಮುತ್ತುಗಳನು..
ರವಿ ಮೆಲ್ಲಗೆ
ಮೋಡದ
ಮರೆಯಿಂದಲೇ
ಒಂದೊಂದಾಗಿ
ಕದಿಯುತ್ತಿದ್ದಾನೆ.

ಲೇಡಿ ಡಾಕ್ಟರ್...


ಅವಳ ನಗುವಿನ
ಸೂಜಿ ಮನದಾಳಕೆ
ಇಳಿಯುತ್ತಿದ್ದಂತೆ
ನಾ ನನ್ನೂರ
ಬಿಟ್ಟು ಕನಸಲಿ
ಅವಳ ಜೊತೆ
ಸುತ್ತತೊಡಗಿದೆ ಸಿಡ್ನಿ...
.
.
.
.
.
.

ಈಗ ನನಗೊಂದೇ ಕಿಡ್ನಿ

ಸಾಧ್ಯತೆ..ಪ್ರೇಮ ನಿವೇದನೆ
ಮಾಡಿದೊಡನೆ...
ಆಕೆ ನನ್ನ
ಕೆನ್ನೆಯ ತೋರಿಸೆಂದಾಗ
ಹಾಳಾದ ಮುತ್ತಿನ
ಕನಸೇಕೆ ಕಂಡೆ..?
.
.
.
.
.
ಕಪಾಳ ಮೋಕ್ಷದ
ಸಾಧ್ಯತೆ ಯಾಕೆ
ಹೊಳೆಯಲೇ ಇಲ್ಲ...?

ನಿದ್ದೆಗೆಳತೀ ....
ಕಣ್ಣ ತುಂಬಾ
ಕಾಡುವ ನಿದ್ದೆ
ಕಣ್ ಮುಚ್ಚಿದರೆ
ಅಲ್ಲೂ ನೀನಿದ್ದೆ

ಮೋಸ...?ಬಿಡದೆ ಕಣ್ಣೀರ
ಸುರಿಸುತ್ತಿದ್ದ
ಮೇಘರಾಜನ
ಬಳಿ ನಾ ಕೇಳಿದೆ
.
.
.
.
ನೀನೂ ಪ್ರೀತಿಯಲಿ
ಮೋಸಹೋಗಿಬಿಟ್ಟೆಯಾ...

ಕರಗುನನ್ನವಳ
ಹೃದಯಕ್ಕಿಂತಲೂ
ಒಂದು ಕೈ
ಮೇಲು
ನನ್ನ ಮೊಬೈಲ್
ಬ್ಯಾಟರಿ ...
.
.
.
ಅದೆಷ್ಟು ಬೇಗ
ಕರಗುತ್ತದೆ.

ಗೊಂದಲ...ಏನು ಮಾಡಲಿ...?
ನಿನ್ನ ಕೈ ಬೊಗಸೆಯ
ಪೂರ್ತಿ ಆವರಿಸಿ ಬಿಡಲೇ...?
ಅಥವಾ ನಿನ್ನ
ಕಣ್ ಕಡಲಾಳದಲಿ
ಮುಳುಗಿಬಿಡಲೇ....

ನೀನಿಲ್ಲ...ಅದೆಲ್ಲೋ ಇಲ್ಲೇ...
ನನ್ನ ಬೆನ್ನ ಹಿಂದೆ
ನೀ ನಿಂತಿರುವಂಥಾ
ಹಿತವಾದ ಅನುಭವ...
ಎದುರು ಬಾರದೆ
ಸತಾಯಿಸುವ ಹಾಗೆ...
ಈ ರೀತಿ
ಅನಿಸಿದಾಗಲೆಲ್ಲಾ
ಹಿಂತಿರುಗಿ
ನೋಡಿ ನೋಡಿ
ಸಾಕಾಗಿ ಹೋಗಿದೆ
ನೋಡಿದಾಗ
ನೀನಿರುವುದೇ ಇಲ್ಲ...
ಸಾಕು ಇನ್ನೆಂದೂ
ನಾ ಹಿಂತಿರುಗುವುದಿಲ್ಲ
ಕರೆದರೂ ನೀ ನನ್ನ
" ಓ ನನ್ನ ನಲ್ಲ "
ನನ್ನ ಪಾಲಿಗೆ ನೀನಿಲ್ಲ
ನಿನ್ನ ಪಾಲಿಗೆ ನಾನಿಲ್ಲ

ಮಳೆಯ ಮುಂಜಾವು...ಹಗಲಾಗಿದ್ದರೂ
ಇನ್ನೂ ಇರುಳ
ಜಡವನು
ಕಾಯ್ದಿಡುವಂತಿದೆ
ಈ ಮಳೆಯ
ಮುಂಜಾವು..
ಜೀವನೋತ್ಸಾಹವ
ನಮ್ಮೊಳಗೆ
ತುಂಬುವ
ನೇಸರನಿಗೂ
ಇದೆ ಈಗ
ಮೋಡಗಳ
ಬಂಧನದ ನೋವು

ಸನ್ಯಾಸಿ...ಕೈಕೊಟ್ಟವಳನ್ನು
ಮರೆತು
ಸನ್ಯಾಸಿಯಾಗೋಣ
ಅಂತಂದರೆ...
.
.
.
.
.
.
.
ಹಾಳದ್ದು
ಪ್ರೇಮಕವನ
ಗೀಚೋದು
ನನಗೆ
ಚಟವಾಗಿಬಿಟ್ಟಿದೆ.

ಹಾದಿ....ಗೆಳತೀ...
ಇನ್ನು ಮುಂದೆ...
ನಿನ್ನ ಮನೆಯ
ಹಾದಿಯನೆಂದೂ
ನಾ ತುಳಿಯಲಾರೆ...
.
.
.
.
.
.
.
.
ಆ ಕೆಸರು ದಾರಿಗೆ
ಕಾಂಕ್ರೀಟು
ಹಾಕುವವರೆಗೆ..

ಎದ್ದು ಹೋದೆ


ಅದೆಷ್ಟು ಬೇಗ
ನನ್ನ ಬಾಳಿಂದ
ಎದ್ದು ಹೋದೆ
ಗೆಳತೀ...
.
.
.
.
.
.
.
.
.
ಮಳೆಗಾಲದಲಿ
ನಮ್ಮ ರೋಡಿನಲಿ
ಟಾರು ಎದ್ದು
ಹೋದಂತೆ....

ಮಿಂಚು ....ಅವಳ ನೋಡಿ
ಹಲವಾರು ಬಾರಿ ನಾ
ಕಣ್ಣು ಹೊಡೆದರೂ
ಅವಳಿಂದ ಯಾವುದೇ
ಪ್ರತಿಕ್ರಿಯೆ ಬಂದಿರಲಿಲ್ಲ ....
.
.
.
.
.
.
ಮನೆಗೆ ಬಂದಾಗಲೇ
ಗೊತ್ತಾಗಿದ್ದು ....
ಅವಳೆದುರು ಮಿಂಚಲು
ಹಾಕಿಕೊಂಡಿದ್ದ
ಕಪ್ಪು ಕನ್ನಡಕವ
ನಾ ತೆಗೆದಿರಲೇ ಇಲ್ಲ

ಮೃಷ್ಟಾನ್ನಪ್ರಿಯೇ ....
ನಿದಿರೆಯಾ
ಎಲೆಯಲ್ಲಿ
ಬಡಿಸಿಟ್ಟ
ಮೃಷ್ಟಾನ್ನ
ಭೋಜನ
ನಿನ್ನ ಕನಸು

ಜಾರುಬಂಡಿ..ಮಳೆಹನಿಯೆನುವ
ಚಿಣ್ಣರನ್ನೆಲ್ಲಾ
ಮರ ಗಿಡಗಳೆನುವ
ಉದ್ಯಾನದಲಿನ
ಎಲೆಗಳ
ಜಾರುಬಂಡಿಯಲಿ
ದೂಡಿ ಬಿಡುತ್ತಿದ್ದಾನೆ
ಮಾರುತರಾಜ...

ನನ್ನೊಳಗಿನ ಸೂರ್ಯಾಸ್ತಕಣ್ಣೀರ ಕಡಲು
ಕೈಬೀಸಿ ಕರೆಯುತಿದೆ
ಬಾ ನನ್ನೊಡಲೊಳಗೆ..
ಜಗಕೆ ನಗುವಿನ
ಬೆಳಕ ನೀಡಿದ್ದು ಸಾಕು...
ಉಳಿದಿರುವ ಈ ಹೊತ್ತಲ್ಲಾದರೂ
ನಿನ್ನೊಳಗಿನ ನೋವಿಗೆ
ಸಮಯವನು ನೀಡು...
ಚಿಂತಿಸದಿರು...
ತಮ್ಮ ತಮ್ಮ ಸುಖದ
ತಾರೆಗಳಲಿದೆ ಜನರ ದೃಷ್ಟಿ
ನಿನ್ನ ನೋಡುವವರ್ಯಾರು...?

ಪೂಜೆನಿತ್ಯ ಪೂಜೆಯಲಿ
ನನ್ನನ್ನೇ ಬಳಸಿಕೊಳ್ಳುತ್ತಿದ್ದವಳು
ಇಂದೇಕೆ ನನ್ನ
ದೂರವಿಟ್ಟಿದ್ದಾಳೆ....?
ಎನ್ನುವ ಬಗೆಹರಿಯದ
ಪ್ರಶ್ನೆ .....
.
.
.
.
.
.
.
.
ಲಟ್ಟಣಿಗೆಯ ತಲೆಯೊಳಗೆ

ಯೋಧನಾಸೆ...ಬೆಟ್ಟದಾ ಮೇಲೆ ಕುಳಿತು
ಶತ್ರು ಸುರಿಸುತಿದ್ದ
ಗುಂಡಿನ ಮಳೆಗೆ
ಎದೆಗೊಟ್ಟು ಮೇಲೇರುತ್ತಿದ್ದ
ನಮ್ಮ ಯೋಧನಿಗಿದ್ದದ್ದು...
ಆ ಬೆಟ್ಟದಾ ತುದಿಯಲ್ಲಿ
ನಮ್ಮ ಭಾವುಟವನು
ಹಾರಿಸುವುದೊಂದೇ ಆಸೆ...

ಮುಖವಾಡಕತ್ತಲು
ಮತ್ತೆ
ಬಂದಿದೆ ....
ಕೆನ್ನೆಯಲಿನ
ಕಣ್ಣೀರಿಗಂಟಿದ್ದ
ನಗುವ
ಮುಖವಾಡವನು
ಕಿತ್ತು ಹಾಕಲು

ಆಯ್ಕೆ....ಉಪ್ಪುನೀರ
ಕಡಲಿಂದ,
ಬರಿಯ
ಸಿಹಿಹನಿಗಳನಷ್ಟೇ
ಆಯ್ಕೆ ಮಾಡಿ,
ಮೋಡದಾ
ಬೊಗಸೆಯಲಿ
ಹಿಡಿದಿಟ್ಟು,
ನಮಗಾಗಿ
ಬುವಿಯ ಮೇಲೆ
ಸುರಿಸುವೆಯಲ್ಲಾ...
ಓ ನೇಸರನೇ
ನಿನ್ನಾಯ್ಕೆಯ
ತಾಳ್ಮೆಗೆ...
ಜಾಣ್ಮೆಗೆ...
ನನ್ನದಿದೋ...
ಮುಂಜಾನೆಯ
ಮನದಾಳದ
ನಮಸ್ಕಾರ...

ಭೀಷ್ಮ...


ನಾನೂ ಭೀಷ್ಮನೆ...
ನಿತ್ಯವೂ ಅವಳ
ಮೋಸದಾಟದ
ಕಹಿ ನೆನಪಿನ
ಬಾಣದ ಮೇಲೆಯೇ
ನನಗೆ ನಿದಿರೆ...

ಚಿತೆ..ಮುಂಜಾನೆಯ
ನೇಸರನಿಂದ
ಎರವಲು ಪಡೆದ
ಬೆಳಕಿನಾ ಕೊಳ್ಳಿಯಿಂದ
ಇರುಳೆಲ್ಲಾ ಹೊತ್ತು
ಸಾಗಿದ ಅವಳ
ಕನಸಿನ ಹೆಣವ
ಕೊನೆಗೂ ಸುಟ್ಟು
ಅತ್ತು ಬಿಟ್ಟೆ...

ಮೆಡಲ್ಲು....ಕಾಮನ್ ವೆಲ್ತ್ ಗೇಮ್ಸಿನಲಿ
ತನ್ನ ಪತಿಗೆ
"ಗೋಲ್ಡ್ ಮೆಡಲು"
ಸಿಕ್ಕಿದೆ...
ಎನುವ ಸುದ್ದಿ
ಪ್ರಸಾರವಾದದ್ದೇ ತಡ...
.
.
.
.
.
.
.
.
ಪತ್ನಿ ಓಡಿ ಹೋಗಿ
ಅಕ್ಕಸಾಲಿಗನಲ್ಲಿ
ಲಕ್ಷ್ಮೀ ಸರವೊಂದನ್ನು
ಆರ್ಡರ್ ಮಾಡಿದ್ದಾಳಂತೆ...

ಆಸ್ತಿಕ ನಾಸ್ತಿಕತನಗೆ
ಗೊತ್ತಿಲ್ಲದೇ
ಇರುವುದನ್ನೆಲ್ಲಾ
ದೇವರೆನ್ನುವವ
ಆಸ್ತಿಕ...
ತನಗೆ
ಗೊತ್ತಿಲ್ಲದಿರುವುದನು
ಅದು ಇಲ್ಲವೇ ಇಲ್ಲ
ಎಂದೆನುವವ
ನಾಸ್ತಿಕ...

ವಿಜಯ ದಿನ....


ಸದ್ದು ಮಾಡದೆ ಕದ್ದು ಒಳ ಬಂದವರಿಗೆಲ್ಲಾ
ತಮ್ಮ ಬಲಿಷ್ಠ ಮುಷ್ಟಿಯ ಗುದ್ದುಗಳನಿತ್ತು
ಎದ್ದು ಬಿದ್ದು ಓಡೋಡಿ ಹೋಗುವಂತೆ
ಮಾಡಿದ ವೀರರಿಗಿದೋ ನನ್ನ ನಮನ...

ಕಾಗದದ ದೋಣಿ...


ಅದೆಂಥಾ ಹುಚ್ಚು ಆಸೆ ಗೆಳತೀ...
ನೀನೆಂಬ ಕಡಲ ಸೇರುವ ಆಸೆ,
ಸಣ್ಣ ನೀರ ಹರಿವಿನಲಿ
ತೇಲಿ ಬಿಟ್ಟ ಕಾಗದದ ದೋಣಿ ನಾನು
ಏರಿಳಿತಗಳ ದಾಟಿ
ಸಾಗಹಾಕುವ ಹುಟ್ಟು ನನ್ನ ಬಳಿ ಇಲ್ಲ
ಅದು ಹೇಗೆ ಗುರಿ ಮುಟ್ಟಿಯೇನು..?
ಇಲ್ಲೇ ಎಲ್ಲೋ ನಿನ್ನ
ನೆನಪುಗಳೆಂಬ ಕಸದ ನಡುವೆ ಸಿಲುಕಿ
ಒದ್ದೆಯಾಗಿ, ಮುದ್ದೆಯಾಗಿ
ಕೊಳೆತು ಹೋದೇನು...
ನಿನ್ನ ನಾನೆಂದೂ ಸೇರಲಾರೆನು..
ನಿನ್ನ ನಾನೆಂದೂ ಸೇರಲಾರೆನು...

ಮಳೆ ಮತ್ತು ಬಾಲ್ಯ...


ಈ ದಟ್ಟವಾದ ಕರಿಮೋಡ
ಬರಿಯ ಮಳೆಹನಿಯ ಸುರಿಸುವುದಲ್ಲ
ನೆನಪುಗಳನೂ ಉಕ್ಕೇರಿಸುತ್ತದೆ...
ನನಗಿನ್ನೂ ನೆನಪಿದೆ....
ಬಾಲ್ಯದ ಮಳೆಗಾಲದ ಆ ದಿನಗಳು...

ಹೊಸದಾಗಿ ತೆಗೆದುಕೊಂಡಿದ್ದ
ನೋಟು ಬುಕ್ಕಿನ ನಡುಹಾಳೆಯದು,
ದೋಣಿಯಾಗಿ ಮನೆಯೆದುರಿನ
ನೀರ ಹರಿವಿನಲಿ ತೇಲಿ ಹೋಗುತ್ತಿತ್ತು...
ಮನೆಯ ಛಾವಣಿಯಿಂದ ಕೆಳಗೆ
ಧುಮ್ಮುಕ್ಕುತಿದ್ದ ಹನಿಗಳೆಲ್ಲವೂ
ನನ್ನಂಗೈಯ ರಂಗಮಂಟಪದಲಿ
ಕುಣಿದು ಕುಪ್ಪಳಿಸುತ್ತಿತ್ತು....
ಸಾಲುಸಾಲಾಗಿ ಶಾಲೆಗೆ ಸಾಗುವಾಗ
ಗೆಳೆಯರ ಕೊಡೆಗಳದು
ಬೀಸುಗಾಳಿಗೆ ತೆಪ್ಪವಾದಾಗ
ನಗೆಯ ಬುಗ್ಗೆಯದು ಪುಟಿದೇಳುತಿತ್ತು..
ರೋಡಿನಲಿ ನಿಂತ ನೀರಿನ ಮೇಲೆಯೇ
ನಾನನ್ನ ಬರಿಯ ಸೈಕಲ್ ಟಯರನು
ವೇಗದಲಿ ಓಡಿಸಿದಾಗ, ಮೇಲಕ್ಕೆ
ಚಿಮ್ಮುತ್ತಿದ್ದ ಸಾಲು ನೀರಬಿಂದುಗಳು
ನನ್ನ ರೋಮಾಂಚನಗೊಳಿಸುತಿತ್ತು...
ಒದ್ದೆ ಬಟ್ಟೆಯ ವಾಸನೆ,
ಒಲೆಯ ಬುಡದಲಿ ಬಿಡಿಸಿಟ್ಟ ಒದ್ದೆ ಪುಸ್ತಕ
ನೆನೆದ ಕೂದಲನು ಒಣ ಬೈರಾಸಿನಿಂದ
ತಿಕ್ಕಿ ಒರೆಸುತ್ತಿದ್ದ ಅಮ್ಮನ ಕಾಳಜಿ...
ಹೀಗೆಯೇ ಈ ಮಳೆಗಾಲದಲ್ಲಿ
ಮನದ ಬುವಿಯಲ್ಲೂ ಬಿಡದ
ನೆನಪಿನ ಜಡಿಮಳೆ...

ಸನ್ನೆ....


ಗೆಳತೀ...
ನಿನ್ನ ನೋಡಿ
ನಾನೊಂಟಿ ಕಣ್ಣಿನ
ಸನ್ನೆಯ ಮಾಡಿದಾಗ
ನೀ ನನಗೆ
ಕಣ್ಣ ಸನ್ನೆ
ಮಾಡಿದರೆ ಸಾಕಿತ್ತು
.
.
.
.
.
.
.
.
ನಿನ್ನಣ್ಣನಿಗೆ ಕೈ ಸನ್ನೆ
ಯಾಕೆ ಮಾಡಬೇಕಿತ್ತು...?

ಕಣ್ಣೀರು...


ತನ್ನ ಪ್ರೇಯಸಿಯ
ನೋಡದೆ ಹಲವು
ದಿನವಾಯಿತಲ್ಲ..
ಎಂದು ಸೂರ್ಯನೂ
ಅತ್ತಿರಬಹುದು...
ಸುರಿವ ಮಳೆಯ
ನಡುವಲಿ ಆ ರವಿಯ
ಕಣ್ಣೀರೂ...
ಇದ್ದಿರಬಹುದು...
ಹುಡುಕುವವರ್ಯಾರು...?

ಪ್ರಾರ್ಥನೆ


ಬಾಳಿನಲಿ ಕಷ್ಟದ
ಕತ್ತಲನು ಕೊಡಲೇಬೇಡ
ಅನ್ನುತ್ತಿಲ್ಲ....
ಆ ಕತ್ತಲ ಜೊತೆಗೆ
ಅದರರಿವಿಲ್ಲದಂತೆ
ಸಾಗಹಾಕುವ
ಸುಖನಿದ್ರೆ ಕೊಡು..
ಅದು ಕರಗುವ
ಹೊತ್ತಿಗೆ ಸರಿಯಾಗಿ
ಬಾಳಿನಾಗಸದಿ
ನಗೆಯ ನೇಸರನ
ಬಿಟ್ಟು ಬಿಡು...

ಯೌವನ


ಮೋಡದಾ ತೆರೆಯ
ಮರೆಯಲೇ ಕಾರ್ಯಾಚರಿಸು
ನೇಸರ....
ವಸುಧೆಗಿಂದು ಬೇಕಾಗಿದೆ
ಮೇಘರಾಜನ ಪ್ರೇಮಧಾರೆ
ಮೆದುವಾಗಲಿ ಅವಳ
ಮೈ-ಮನ...
ತುಂಬಿ ತುಳುಕಲಿ
ಹಸಿರಿನ ಯೌವನ

ರಂಗವಲ್ಲಿ


ಏನೋ ದೊಡ್ಡ ಕವಿಯಂತೆ,
" ನನ್ನೆದೆಯ ಅಂಗಣದಲಿ
ಮುತ್ತಿನ ಚುಕ್ಕೆಯಿಟ್ಟು
ಬಗೆಬಗೆಯ ಭಾವಗಳ
ಬಣ್ಣದ ಹುಡಿಯ ಬಳಸಿ
ಹಾಕೊಂದು ಪ್ರೀತಿಯ
ರಂಗವಲ್ಲಿ " ಎಂದು
ನಾನವಳಲ್ಲಿ ಹೇಳಬಾರದಿತ್ತು.
.
.
.
.
.
ಸರಿ,
ಮೊದಲು ಸಾರಿಸಿ
ಗುಡಿಸಬೇಕಲ್ಲವೇ...
ಎಂದು ಸಗಣಿ
ಹುಡುಕಲು
ಹೊರಟಿದ್ದಾಳೆ..

ಮಸಿ...


ಗೆಳತೀ....
ನಿನ್ನೆಡೆಗೆ ಬರುವ
ಕಟುದೃಷ್ಟಿಗಳಿಗೆ
ಎದೆಯೊಡ್ಡಿ ,
ನಿನಗೇನಾಗದಂತೆ
ನೋಡಿಕೊಳ್ಳುವ
ನಿನ್ನ ತುಟಿಯಂಚಿನ
ಪಕ್ಕದ ದೃಷ್ಟಿಬೊಟ್ಟಿನ
"ಮಸಿ" ನಾನಾಗುವಾಸೆ

ಪ್ರಪೋಸ್...


ನೀನು ನನ್ನ
ಬಾಳಲ್ಲಿ ಸದಾ " ಸ್ಟೇ "
ಮಾಡುವುದಾದರೆ " ರಿಂಗ್ "
ಒಂದನು ತೊಡಿಸಿ
ನನ್ನ ಜೀವನದ ಬಂಡಿಯ
" ಸ್ಟೇರಿಂಗ್ "ನೇ
ನಿನ್ನ ಕೈಗೆ
ಕೊಟ್ಟು ಬಿಡುವೆ ಗೆಳತೀ..

ಮಿಡಿತ...ಮದುವೆಯ ಮುನ್ನ
ನನಗಾಗಿಯೇ ಇತ್ತು
ನನ್ನವಳ ಹೃದಯ ಬಡಿತ
ಮದುವೆಯ ನಂತರ
ನನಗಾಗಿಯೇ ಇದೆ
ನನ್ನವಳ ಬರಿಯ ಬಡಿತ

ಹನಿ...


ಜೋರಾಗಿ ಸುರಿಯದಿರು
ನನ್ನವಳ ನೆನಪಿನ
ಓ ಮಳೆ ಹನಿಯೇ...
ನಾ ಪ್ರತಿ ಹನಿಯೂ
ನೀಡುವ ತಂಪಿನನುಭವವನು
ಸವಿಯಬೇಕಾಗಿದೆ...

ಮಳೆ...


ಮಳೆಗಾಲದಲೊಂದು
ದಿನ , ಬರೀ
ಒಂದೇ ಕೊಡೆ
ಹಿಡಿದುಕೊಂಡು
ಅವಳ ಜೊತೆ
ಹೆಜ್ಜೆ ಹಾಕುತ್ತಿದ್ದೆ..
ಮನಸೊಳಗೆ
ಇನ್ನಷ್ಟು ಸನಿಹಕೆ
ಬಂದಾಳೆಂಬ
ಸಣ್ಣ ಭರವಸೆ...
.
.
.
.
.
.
ಹಾಳಾದ್ದು
ಮಳೆಯೇ ಬರಲಿಲ್ಲ.

ಅಪ್ಪ...


ಯಾವೊಂದು
ಹಿತವಚನವನೂ,
ಆದರ್ಶಗಳನು
ನನಗೆ
ಹೇಳಿಕೊಟ್ಟವರೇ
ಅಲ್ಲ ನನ್ನಪ್ಪ...
ಬದಲಾಗಿ
ನನ್ನೆದುರು
ಆ ರೀತಿ
ಬಾಳ್ವೆಯ ನಡೆಸಿ
ತೋರಿಸಿಕೊಟ್ಟರು.

ಕರಗು..ಕರಗಿ ನೀರ
ಹನಿಹನಿಯಾಗಿ
ಕೆಳಗುರುಳೋ
ಬಯಕೆ ಹೊತ್ತ
ಮೋಡಗಳೆಷ್ಟೋ...?
ನನ್ನ ಕಣ್ಣಿನಾಗಸದಲಿ.

ಮೋಡ ಹೆಣ್ಣು...


ಮೋಡ ಹೆಣ್ಣು...
ಬರಿಯ ನೀರ
ಹನಿಗಳನು ಹೆರುವ
ಕಾರಣಕಲ್ಲ...
.
.
.
.
ಒಬ್ಬರಿಗೊಬ್ಬರು
ಗುದ್ದಾಡುವಾಗ
ಆ ಪರಿಯ ಸದ್ದು
ಮಾಡಲು
ಇನ್ಯಾರಿಗೆ ಸಾಧ್ಯ...

ಮುಂಜಾನೆ ಮಳೆ


ಜಿನುಗುವ
ಮಳೆ ಹನಿಯ
ನಡುವೆಯೇ
ಹರಡುತಿದೆ ಎಲ್ಲೆಡೆ
ಮಂದ ಬೆಳಕು,
ಬೀಸುತಿಹ
ತಂಪುಗಾಳಿಗೆ
ತೆರೆದುಕೊಳ್ಳುತ್ತಿದೆ
ಮೆಲ್ಲಮೆಲ್ಲನೆ,
ಬಿಸಿಲಿಗೆ ಬಸವಳಿದ
ಜನರ ಬದುಕು.

ಕಣ್ಣು...ನಾಲಿಗೆ


ಕಣ್ಣು ಹೃದಯ ಹೇಳಿದಂತೆ...
ನಾಲಿಗೆ ಬುದ್ದಿ ಹೇಳಿದಂತೆ
ಅನ್ನೋದು ಗೊತ್ತಾಗಿದ್ದು
ನಿನ್ನಿಂದಲೇ ಗೆಳತೀ...
ಪ್ರತಿ ನೋಟದಲ್ಲೂ
ಇನ್ನಿಲ್ಲದ ಪ್ರೀತಿ ಸುರಿಸುತ್ತಿದ್ದ
ನಿನ್ನ ಕಣ್ಣಿನ ಮಾತನ್ನು
ಕೊನೆಗೂ ನಿನ್ನ
ನಾಲಗೆ ಉಚ್ಚರಿಸಲೇ ಇಲ್ಲ.

ವಿಶ್ವ ಪರಿಸರ ದಿನ...


ಮನುಜ ತನ್ನ
ದುಡಿಮೆಯ
ಬದಿಗಿಡುತ್ತಾ
ಸೌಲಭ್ಯಗಳ
ಪಡೆವಾಸೆಗೆ,
ಸೋಮಾರಿತನದ
ಉಳಿವಿನ
ಹೋರಾಟಕ್ಕೆ
ಬಲಿಯಾಗಿದ್ದು
ಪರಿಸರ

ಇರುಳು...ಅವಳ ಕನಸೆನುವ
ಚೆಲುವ ಬೊಂಬೆಯ
ಮೇಲೆ ಹಿಡಿಯತೊಡಗಿದ
ಮರೆವೆನುವ ಸೂಕ್ಷ್ಮ
ಧೂಳಿನೆಳೆಯ,
ಊದಿ ಸ್ವಚ್ಛಗೊಳಿಸೋ
ಸಮಯ ಈ ಇರುಳು.