Thursday 21 November, 2013

ಮನೆ...





ಅನಿಸುವುದು ಕೆಲವೊಮ್ಮೆ
ದೊಡ್ಡ ಮನೆಯ
ಬದಲಿಗೆ ಇರಬೇಕಿತ್ತು
ಸಣ್ಣ ಗುಡಿಸಲು.
ಕಾರಣವಿಷ್ಟೇ...
ಸುಲಭವಾಗುವುದಲ್ಲ
ನನಗೆ ಬೆಳಗಾತ
ಮನೆಯ ಗುಡಿಸಲು.

ಕಾರಣ





ಬಲುಬೇಗನೆ ಬರುವುದೆನಗೆ
ನಿದ್ರೆ, ಹೇಗೆಂದರೆ..
ಆಕಳಿಸಲು ತೆರೆದ ಬಾಯಿ
ಪೂರ್ತಿಯಾಗಿ ಮುಚ್ಚುವುದರೊಳಗೆ;
ಮತ್ತಿನ್ನೇನೂ ಅಲ್ಲ
ಇದೊಂದೆ ಕಾರಣ
ನನ್ನ ತೆರೆದ
ಬಾಯಿಯ ಗಾಢ ನಿದ್ರೆಗೆ.

ಆಧುನೀಕತೆ...



ಯುವಕ ಯುವತಿಯರ
ಮನದ ಮೇಲಪ್ಪಳಿಸಿದೆ
ಆಧುನೀಕತೆಯ ಭಾರೀ ಹೊಡೆತ;
ಹಾಗಾಗಿಯೆ ಕಾಣಸಿಗುವುದು
ಹುಡುಗಿಯರು ತೊಡುವ
ಉದ್ದ ಲಂಗದಲಿ ಭಾರೀ ಕಡಿತ;
ಮತ್ತು ಹುಡುಗರು ಹಾಕುವ
ಪ್ಯಾಂಟಿನ ಸೊಂಟ ಇರಬೇಕಾದ
ಸ್ಥಾನದಲಿ ಭಾರೀ ಇಳಿತ.

ಗರ್ವ ಭಂಗ...





ನೇಸರನಾಭಿಮಾನಿ
ನನ್ನೊಳಗಿನ ಕವಿ,
ರವಿಯ ನೂರು
ಬಗೆಯಲಿ ಬಣ್ಣಿಸಿದ;
"ನೂರು" ಸಂಖ್ಯೆಯ
ಗರ್ವ-ಭಂಗ ಮಾಡಲು
ಬೆಳಕಿನೊಡೆಯ
ನನ್ನೀ ಕಂಗಳಿಗೆ ಹೊಸ
ದೃಶ್ಯಕಾವ್ಯವನಿಂದು ಉಣ್ಣಿಸಿದ

ಮುಸುಕು...





ಗಟ್ಟಿಯಾದ ಕಲ್ಲು ಮತ್ತು
ಸಿಮೆಂಟಿನಿಂದಾದ ಕೊಠಡಿ
ಅದಕೆ ಭದ್ರವಾದ ದಪ್ಪ
ಹಲಗೆಯ ಮರದ ಬಾಗಿಲು,
ಅದೂ ತೆರೆಯದಿರದಂತೆ
ಹಿತ್ತಾಳೆಯ ದೊಡ್ಡ ಚಿಲಕ..
ಇವುಗಳೆಲ್ಲವೂ ಇದ್ದರೂ
ಕತ್ತಲಿನಲಾಗುವ ವಿಚಿತ್ರ
ಭಯವ ನಿವಾರಿಸಿದ್ದು..
ಮುರುಟಿದ ದೇಹವನಾವರಿಸಿದ
ತೆಳು ಹೊದಿಕೆಯ ಮುಸುಕು..

ಉರುಳು..





ಗಡಿಯಲಿಹ ಯೋಧರ
ತಲೆಗಳುರುಳುತಿರುವುದ
ಬಾರಿ ಬಾರಿ ಕಂಡರೂ...
ಕರುಳಲುರಿ ಬರದ,
ಕೋಪವದು ಕೆರಳದಿರದ
ರಾಜಕೀಯದ ದುರುಳರಿಗೆ
ಮತ ನಕಾರದ ಉರುಳನಿತ್ತು
ವೀರ ಯೋಧರ ಪಡೆಯ
ಬೆಂಬಲಕೆ ಕಟಿ ಬದ್ಧರಾಗೋಣ...