Thursday 5 June, 2014

ಚಿಗುರು...


ಒಣಗಿದಂತಿದ್ದ ಮರಗಳಲ್ಲೂ
ಹಸಿರು ಚಿಗುರುತಿದೆ
ಕಾರಣ "ಯುಗಾದಿ ",
ಬಳಲಿದ ಭಾರತೀಯನ
ಎದೆಯಲ್ಲೂ ಹೊಸ ಆಸೆ
ಚಿಗುರುತಿದೆ..
ಕಾರಣ " ನರೇಂದ್ರ ಮೋದಿ "

ಬೇವು ಬೆಲ್ಲ



ನಿನ್ನ ಸವಿನೆನಪಿನ
ಬೆಲ್ಲದ ಸಿಹಿಯ
ಚಪ್ಪರಿಸಿ ಮೆಲ್ಲನೆ
ಕಣ್ತೆರೆದಾಗ
ನನ್ನೆದುರಿಗಿದ್ದಿದ್ದು
ನೀ ನನ್ನವಳಲ್ಲ
ಎನುವ ಕಹಿ
ಸತ್ಯದ ಬೇವು

ಫೂಲ್...


ಬೇಡ ಗೆಳತೀ..
ಇದೊಂದು ದಿನ
ಕನಸಲ್ಲಿ ಬಾರದಿರು...
ನಗುತ್ತಾ ಬಂದು
ಈ ದಿನಕೆ
ಶುಭಾಶಯವ ಕೋರಿ
ಹಿಂತಿರುಗದಿರು..

ಮುತ್ತು


ವಸುಧೆಯು
ಆ ಬದಿಯ
ಕೆನ್ನೆಯಲೊಂದಿಷ್ಟು
ಪಡೆದು ಮುಖ
ತಿರುಗಿಸಲು....
ಬಸವಳಿಯದ
ನೇಸರ...
ಈ ಬದಿಯ ಕೆನ್ನೆಗೂ
ಬೆಳಕಿನ ಮುತ್ತನು
ಕೊಡತೊಡಗಿದ.

ಯಂಗ್-ಏಜು


ರಿಲೇಶನ್ ಶಿಪ್
ಸ್ಟೇಟಸ್
ನೋಡಿದಾಗ
ಅನಿಸುತ್ತದೆ...
ಈಗ ಹೆಚ್ಚಿನ
ಯುವಕ
ಯುವತಿಯರು
ಯಂಗ್-ಏಜಿನಲೇ
ಎಂಗೇಜು...

ಭಯ ಮತ್ತು ನಗು...


ನುಂಗಿದ ಹಣ್ಣಿನ
ಜೊತೆಯಲಿದ್ದ
ಬೀಜವೊಂದು,
ಹೊಟ್ಟೆಯೊಳಗೇ
ಬೆಳೆದು ಮರವಾಗಿ,
ಕಿವಿಯ ತೂತಿನ
ಮೂಲಕ ಕೊಂಬೆ
ಹೊರಬರುವ..
ವಿಚಿತ್ರ ಕಲ್ಪನೆ
ಬಾಲ್ಯದಲಿ
ಭಯವ ತರುತಿತ್ತು.
ಆದರೀಗ ಅದರ ನೆನಪು
ಇನ್ನಿಲ್ಲದ ನಗುವ
ತರಿಸುತಿದೆ.

ಕಪಾಳಮೋಕ್ಷ


ಕೇಜ್ರಿವಾಲು
ಜನರ ಬಳಿ
ಕೇಳಿದ್ದು ವೋಟು ;
ಆದರೆ ಪಾಪ
ಸಿಗ್ತಾ ಇರೋದು
ಕೆನ್ನೆಗೆ ಏಟು.

ಸಂಘರ್ಷ...


ಸವಿಗನಸ
ತೋರಿಸುವ
ನಿದಿರೆ...
ಅದ ಪಡೆಯುವ
ಹಾದಿಯಲಿಹ
ಸಂಘರ್ಷವ
ಎಂದಿಗೂ
ತೋರಿಸುವುದಿಲ್ಲ

ಅರಿವು...


ಮೆಲ್ಲ ಮೆಲ್ಲಗೆ
ಹರಿದ ಬೆಳಕು
ಮೂಡಿಸಿದ್ದು
ಹಸಿವಿನರಿವು

ಕಾರಣ


ಅಲ್ಲೊಬ್ಬ ಹಳೆಯ
ನಟ ಹೇಳುತ್ತಿದ್ದ,
ನಾಯಕಿಯ
ಬಿಗಿದಪ್ಪುವ
ಸೀನನು ಮಾಡಲು
ಬಹಳ ಕಷ್ಟಪಟ್ಟೆ;
ಹಿಂದಿನಿಂದ
ಕಿಡಿಗೇಡಿಯೊಬ್ಬ
ಮೆಲ್ಲಗುಸಿರಿದ
"ಕಾರಣ ಡೊಳ್ಳುಹೊಟ್ಟೆ"

ತಾಸು...


ನಿನ್ನೆ ಕಿತ್ತುಕೊಂಡ
ಇಪ್ಪತ್ತನಾಲ್ಕು
ತಾಸುಗಳು
ಸಾಲಲಿಲ್ಲವೆಂಬಂತೆ
ಮತ್ತೆ ಬಂದಿದ್ದಾನೆ
ನೇಸರ...
ಇಂದಿನಿಪ್ಪತ್ತನಾಲ್ಕು
ತಾಸುಗಳ
ಕಿತ್ತುಕೊಳ್ಳಲು

ಸೈಲೆಂಟ್ ಮೋಡ್


ಆಫೀಸಿನಲ್ಲಿ ಬಾಸ್
ಬೈದಾರೆಂದು ಹೆದರಿ
ಮೊಬೈಲ್ ನ ಸೈಲೆಂಟ್
ಮೋಡಿನಲ್ಲಿಟ್ಟ ಗುಂಡ...
ಮನೆಗೆ ಬಂದವನೇ....
ಮೊಬೈಲ್ ಲೌಡ್ ಸ್ಪೀಕರ್
ಆನ್ ಮಾಡಿಬಿಟ್ಟು..
ಮನೆಯಾಕೆಗೆ ಹೆದರಿ
ತನ್ನನ್ನು ತಾನೇ
ಸೈಲೆಂಟ್ ಮೋಡ್ ಗೆ ಹಾಕಿ ಬಿಟ್ಟ.

ಹಾತೊರೆ...


ಬಳಿ ನೀ
ಬರದಿದ್ದರೇನು
ಗೆಳತಿ...
ಹೆಜ್ಜೆಯಿಡುವುದ
ನಾ ಮರೆವೆನೇ...?
ಬಾಳ ಹಾದಿಯ
ಪಯಣಕೆ
ಜೊತೆ ನೀಡಲು
ಕೋಟಿ ಕನಸುಗಳು
ತುದಿಗಾಲಲಿ ನಿಂತು
ಹಾತೊರೆಯುತಿದೆ.
ಅದರೊಂದಿಗೆ
ನಡೆದು ಬಿಡುವೆ
ಮೆಲ್ಲ ಮೆಲ್ಲನೆ.

ಕಾತರ



ಕಣ್ಣಂಚಿನಲಿಹ
ಕಣ್ಣೀರಿಗೂ
ಮಳೆಯ ಕಾತರ
ಅವಳ ಹೆಸರ
ಮರೆಸಿ
ಮೆಲ್ಲಗೆ
ಮಳೆನೀರ
ಜೊತೆ
ಜಾರಿಹೋಗುವ
ಆತುರ

ಕರಾಳ



ಅವಳ
ಕನಸುಗಳಿರುವುದರಿಂದಲೋ
ಏನೋ....
ಇರುಳು
ಸದಾ
ಕರಾಳವಾಗಿರುವುದು.

ನಿನ್ನಂತೆ...



ಆಕಾಶದಲಿಹ ಈಗಿನ
ಮೋಡವೂ ನಿನ್ನ
ಹೃದಯದಂತೆಯೇ
ಆಗಿದೆ ಗೆಳತೀ...
ನನ್ನ ಅಸಹಾಯಕತೆಯ
ಕಂಡರೂ...
ಕರಗುವುದೇ ಇಲ್ಲ

ಉಡುಗೊರೆ


ನಾಳೆಗಳ ನಿರೀಕ್ಷೆಯಿರದೆ
ನಿನ್ನೆ ಮಲಗಿದ್ದವ
ಇಂದು ಮೆಲ್ಲಗೆ
ಕಣ್ತೆರೆದು ನೋಡಿದರೆ..
ಆ ಭಗವಂತ
ಮತ್ತೊಂದು ದಿನವನ್ನು
ಉಡುಗೊರೆಯಾಗಿ
ಕೊಟ್ಟಿದ್ದಾನೆ.
ಪಾಲಿಗೆ ಬಂದದ್ದು
ಪಂಚಾಮೃತವೆಂದು
ಜಗದೊಳಗಿನ
ಜೀವನದಾನಂದವನು
ತಡಮಾಡದೆ ಇನ್ನಷ್ಟು
ಹೀರತೊಡಗುತ್ತೇನೆ.

ಬಯಕೆ...



ಒಂದೊಂದಾಗಿ
ಮನದೊಳಗೆ
ಬೀಡುಬಿಟ್ಟಿದ್ದ
ಅವಳ ಬಗೆಗಿನ
ಬಯಕೆಗಳ
ಉಸಿರುಕಟ್ಟಿಸುತ್ತಿದ್ದೇನೆ,
ನನ್ನದೇ
ಕುತ್ತಿಗೆಯ
ಹಿಸುಕ ತೊಡಗಿತ್ತವು.
ವಿಲವಿಲನೆ
ಒದ್ದಾಡುವುದ
ಕಂಡು ಕರುಳು
ಸುಟ್ಟು ಹೋದಂತಾಗುತ್ತಿದ್ದರೂ,
ಸಹಿಸಿಕೊಳ್ಳುತ್ತಿದ್ದೇನೆ.
ಬಯಕೆಯ ಬೇಡಿಯಿರದ
ಮುಕ್ತ ಜೀವನದ
ಹೊಸ ಬಯಕೆಯ
ಪಡೆಯುವುದಕೆ,
ಬಂದದ್ದನ್ನು
ಬಂದಂತೆ
ಸ್ವೀಕರಿಸುವ
ಗುಣವೊಂದಕೆ
ಹಾಲುಡಿಸುತ್ತಿದ್ದೇನೆ.
ಅದೇ ನನ್ನ
ಮನಕೆ ನೆಮ್ಮದಿಯ
ತಂದೀತೆನುವ ಬಯಕೆ
ಶಾಂತ ಚಿತ್ತದಿಂದ
ಚಿಂತನೆಗೈದು
ಬೆಲೆಕೊಡತೊಡಗಿದ್ದೇನೆ,
ಭಗವಂತನಾಟದ
ಪಾತ್ರಧಾರಿಗಳಿಗೆ
ಇದೇ ಸರಿಯಾದದ್ದು
ಎನುವ ಪ್ರಾಜ್ಞರ ಅಭಿಮತಕೆ.

ಚೆಂಡು..


ಉತ್ಸಾಹದ
ಬೆಳಕಿನ
ಚೆಂಡೊಂದು
ಮತ್ತೆ
ಪುಟಿದು
ಬಾನೆತ್ತರಕೆ
ಏರುತಿದೆ.

ಜ್ಞಾನದ ಹಾದಿ



ಮೈಲುಗಟ್ಟಲೆ
ನಡೆದು ಬಂದ
ಅಹಂಕಾರದಲಿ
ಮನವು
ಗಮ್ಯವನು
ನೋಡಬಯಸಿದಾಗ,
ಗಮ್ಯವನು
ತೋರಿಸದ
ಮುಂದಿನ
ಜ್ಞಾನದ ಹಾದಿ,
ನೀನಿಟ್ಟದ್ದು
ಬರಿಯ
ನಾಲ್ಕು ಹೆಜ್ಜೆಯಷ್ಟೇ
ಎಂದು
ಅಣಕವಾಡಿತು.

ಸಿಟ್ - ಸಿಟ್


ಮೊದಲ ದಿನವೇ
ಕಪ್ಪು ಹಣವ
ಶೋಧಿಸಿ
ವಾಪಾಸು ತರಲು
ಮಾಡಿದರಂತೆ
ನಮ್ಮ ಮೋದಿ
ಒಂದು ಸಿಟ್ (SIT)
ಇದನ್ನು ನೋಡಿ
ಮುಖವೆಲ್ಲಾ
ಕಪ್ಪ ಗಾಗಿ
ಹಳೆಯ ಕೆಲವು
ಮಂತ್ರಿಗಳಿಗೆ
ಬಂದಿದೆಯಂತೆ
ಕೊತಕೊತ
ಕುದಿಯುವ ಸಿಟ್

ಉದಯ



ಮೂಡಣದ
ಕಡಲಿಂದ
ನೇಸರನು
ತಾ ಬೇಗ
ಮೇಲೆಬಂದ;
ಆದರೂ
ಕವಿತೆಯಾ
ಸೂರ್ಯ
ಇನ್ನೂ ಮೂಡಿಲ್ಲ,
ನನ್ನ ಮನದ
ಕಡಲಿನಿಂದ

ಸಾವಿನ ಮನೆ..


ಮುಗಿಲು ಮುಟ್ಟುವ
ರೋದನ...
ಸಾವಿಗೆಲ್ಲರೂ
ಶಪಿಸುವವರೇ..
ಸಾವೋ...
ಮೆಲ್ಲ ಮೆಲ್ಲಗೆ
ಜೀವಂತವಾಗಿದ್ದಾಗ
ಕಾಣಿಸದ
ಒಳ್ಳೆಯ ಗುಣಗಳ,
ನೆರೆದವರ ಬಾಯಿಯಿಂದ
ಹೊರತರಿಸುವ
ಪ್ರಯತ್ನದಲೇ
ಮುಳುಗಿ ಹೋಗಿತ್ತು..

ಕಷ್ಟ ಸುಖ



ಎಲ್ಲರನೂ ಭ್ರಮೆಯಲೇ
ತೇಲಿಸುವ "ಸುಖ"ಕ್ಕೇನು ಗೊತ್ತು..?
ಜೀವನದ ತಿರುಳಿನರಿವ ತಿಳಿಸಿ
ಭಗವಂತನೆಡೆಗಿನ
ಹಾದಿಯ ತೋರಿಸುವುದು
" ಕಷ್ಟ "ದ ಕೆಲಸ
ಆದರೂ ಅದನು
ಬಯಸುವವರಾರಿಲ್ಲ,
ಬಯಸದಿದ್ದರೂ
ಕಾಲ ಕಾಲಕ್ಕೆ
ನಮ್ಮೆಡೆ ಬರುವುದನು
ಅದು ತಪ್ಪಿಸುವುದಿಲ್ಲ.

ಕುತೂಹಲ



ಅದೇ ಬಾನಿನ ಹಾದಿ...
ಆದರೂ ಪಯಣದ
ನಡುವಲಿ ಸಿಗುವ
ಮೋಡಗಳ್ಯಾವುದೋ...?
ಬಳಿ ಬಂದು
ಇಂಪಾದ ಹಾಡನುಲಿಯುವ
ಪಕ್ಷಿಗಳಾವುದೋ...?
ಭುವಿಯ ತುಂಬೆಲ್ಲಾ
ಚುರುಕುತನದಿ
ನಡೆಯುವ ನಾಟಕವದ್ಯಾವುದೋ..?
ಇದೇ ಕುತೂಕಹಲಗಳನಿಟ್ಟುಕೊಂಡು
ಪ್ರತಿ ದಿನವೂ
ಮತ್ತೆ ಮತ್ತೆ ಲವಲವಿಕೆಯಿಂದ
ಮೂಡಿ ಬರುತ್ತಾನೆ ನೇಸರ

ಮಡಿವಂತಿಕೆ...

ಗೆಳತೀ...
ಅದ್ಯಾಕೋ ಗೊತ್ತಿಲ್ಲ,
ಬರೆವ ಕವಿತೆಯಲೂ
ನನ್ನ ಮಡಿವಂತಿಕೆಯ
ಉಳಿಸಿಕೊಳ್ಳುವಾಸೆ,
ನೀ ತೊಟ್ಟ
ಬಟ್ಟೆಯೊಳಗಿಳಿಯುವುದಕಿಂತಲೂ
ನಿನ್ನ ಚೆಲುವ
ಮನದೊಳಗಿಳಿಯುವಾಸೆ.

ಕಣ್ಣೀರು...


ನರಹಂತಕ,
ಮೃತ್ಯುವಿನ
ವ್ಯಾಪಾರಿ,
ಹಾಗೆ ಹೀಗೆ
ಅಂತೆಲ್ಲಾ
ಕೋಟಿ
ಕಟುನುಡಿಗಳ
ಕೇಳಿಯೂ...
ಸುಮ್ಮನಿದ್ದ
ಎಂಟೆದೆಯ
ಬಂಟನ
ಭಾವನೆಯ
ಕಟ್ಟೆಯೊಡೆದು
ಕಣ್ಣಾಲಿಗಳು
ತೇವಗೊಂಡದ್ದು,
ತಾನು
ತಾಯಿಯೆಂದುಕೊಂಡಿದ್ದ
ಸಂಸ್ಥೆಗೆ
" ಕೃಪೆ " ಮಾಡಿದೆ,
ಎನುವ ಆಪ್ತರ
ಶಬ್ದ ಪ್ರಯೋಗ

ಸಂಶಯ...



ಕಲ್ಪನೆಯಲೇ
ಪ್ರೀತಿಸಿ
ಕನಸುಗಳ
ಪದವಾಗಿಸಿ
ನಾಲ್ಕಾರು
ಸಾಲು ಬರೆದು
ಹಾಯಾಗಿರಲೂ
ಬಿಡುತ್ತಿಲ್ಲವೀ
ಆಪ್ತರ
ಸಂಶಯದ
ಉರಿಬಾಣಗಳು

ಮಜ



ಬೆಳಗಾಗೆದ್ದು
ಜಡಮುರಿದು,
ಚಕಚಕನೆ
ಚಾಪೆಯ ಸುತ್ತಿ,
ಸಮತಟ್ಟಾಗದ
ತುದಿಗಳ
ನೆಲಕೆ ಬಡಿದು
ಸರಿಗೊಳಿಸಿ
ಕೋಣೆಯ
ಮೂಲೆಗೊರಗಿಸಿಡುವ
ಮಜ,
ದೊಡ್ಡ ಮಂಚದ
ಮೇಲಿನ ಮೆತ್ತನೆಯ
ಹಾಸಿಗೆಯಲಿ
ಮಲಗೋ
ಸಿರಿವಂತರಿಗಿಲ್ಲವೇ ಇಲ್ಲ.

ಕನಸು...



ಕನಸೆಂದರೆ ಸಾಕು
ಅದೇನೋ ಖುಷಿ,
ಅಲ್ಲೇ ತಾನೇ
ನೀ ತಿರಸ್ಕರಿಸದೆ
ನನ್ನನ್ನೊಪ್ಪುವುದು
ಬಳಿ ಬಂದು
ಬಿಗಿಯಾಗಿ ಅಪ್ಪುವುದು

ಧರ್ಮ ಸಂಕಟ


ನನ್ನವಳು ಬಲು ಜಾಣೆ,
ಚಾಯ್ ವಾಲಾ
ಮೋದಿಯ ಮೇಲೆ
ಅಭಿಮಾನ ಇರುವುದು
ಹೌದಾದಲ್ಲಿ...
ಹೋಗಿ ಒಂದು ಲೋಟ
ಚಾ ಮಾಡಿ ತನ್ನಿ,
ಅಂದಿದ್ದಾಳೆ,
ಧರ್ಮ ಸಂಕಟ,
ಮಾಡದೆ ವಿಧಿಯಿಲ್ಲ.

ನೆಮ್ಮದಿ...



ಮುಳುಗೋ ಸೂರ್ಯನಿಗೂ
ಇಂದು ನಿರಾಳತೆಯ ಭಾವ,
ಕಳೆದ ಹತ್ತು ವರ್ಷಗಳ
ಭಾರತಿಯ ಸಂಕಟಕಿಂದು
ಮುಕ್ತಿ ಸಿಕ್ಕಿದುದ ಕಣ್ಣಾರೆ ಕಂಡ,
ಕುತ್ತಿಗೆಯ ಬಿಗಿದು
ಹಿಡಿದಿದ್ದ " ಕೈ "ಯಿಂದ
ತಪ್ಪಿಸಿ ದೀರ್ಘಶ್ವಾಸವ
ಒಳಗೆಳೆದುಕೊಂಡುದುದ ಕಂಡ,
ಭಗವಂತ ನೆಲೆಸಿರೋ
ಭೂತಾಯಿಯ ಹೃದಯ
"ಕಮಲ" ಅರಳಿದುದ ಕಂಡ,
ಕಂಡು ಚಿಂತೆಗಳ ತೊರೆದು
ನಿಟ್ಟುಸಿರ ಬಿಟ್ಟು ಮರೆಯಾಗುತ
ನೆಮ್ಮದಿಯ ಸವಿಯನುಂಡ.

ಸೂರ್ಯಕಿರಣ..


ಕತ್ತಲೊಳಗಿನ
ಕರಾಳತೆಯು
ಒಳಹರಿದು
ಬಾರದಿರಲೆಂದು
ಮುಚ್ಚಿಟ್ಟ
ಕಣ್ ರೆಪ್ಪೆಯ
ಬಾಗಿಲಿನ
ಬೀಗವನು
ತೆರೆಯಲೆಂದೇ
ಸೂರ್ಯ
ಮಾಡಿಸಿಟ್ಟಿರುವ
ಕೀಲಿ ಕೈ...
ಈ ಬೆಳ್ಳಿ ಕಿರಣ

ತುಳಸೀ ಮಾಲೆಯಾಸೆ...




ಭೋಗದಾಸೆಯ
ಪಾಲಿಗೆ
ಕಲ್ಲಾದ ಮನವ,
ಹೊತ್ತ ಶರೀರದ
ಕುತ್ತಿಗೆಯ
ತಬ್ಬಿಕೊಳ್ಳೋ
ಉತ್ಕಟ ಆಸೆ..

ಧೈರ್ಯ...


ನೇಸರ ಅದೆಷ್ಟು
ಎತ್ತರಕ್ಕೇರಿದರೂ,
ಮುಸ್ಸಂಜೆಯಾಗುತ್ತಿದ್ದಂತೇ
ತನ್ನ ಬಳಿ ಬರಲೇಬೇಕು,
ಎನುವ ಶರಧಿಯ
ದೈರ್ಯದಷ್ಟೇ ಧೈರ್ಯ;
ನನ್ನ ಬಗೆಗೆ,
ನನ್ನವಳ ನೆನಪಿನ ಕಡಲಿಗೆ

ಹೆತ್ತವಳು ಯಾರು...?


ಮೂಡಣದ ಕಡಲಲ್ಲಿ
ಹುಟ್ಟಿ ಬಂದವನೆಂದರೂ
ನನಗೇಕೋ ಸಂಶಯ..
ನಾ ನೋಡಿದಾಗಲೆಲ್ಲಾ
ಮೋಡವೇ ರವಿಯ
ಪ್ರಸವಿಸುತ್ತಿತ್ತು...

ಅರಳು...


ಗಿಡಗಳ
ತುಂಬಾ
ಬೆಳೆದಿರುವ
ಮೊಗ್ಗುಗಳ,
ಮೆಲ್ಲನೆ
ಅರಳಿಸುವ
ಕಲೆಯ
ಇದುವರೆಗೂ
ಸೂರ್ಯ
ಇನ್ಯಾರಿಗೂ
ಹೇಳಿಕೊಟ್ಟಿಲ್ಲ.

ವಂದನೆ..



ಸುರಿಯ ತೊಡಗಿದ
ಮಳೆಗಿದೋ ವಂದನೆ.
ಈಗ ಮುಖದ ತುಂಬಾ
ನೀರ ಹನಿಗಳು.
ಬರಿಯ ಕಣ್ಣ
ಬುಡದಲ್ಲಷ್ಟೇ ಅಲ್ಲ,..
ಕೇಳುಗರಿಗೆ
" ಏನಿಲ್ಲ, ಕಣ್ಣಿಗೆ ಕಸ
ಬಿದ್ದಿತ್ತು, ಅಷ್ಟೇ "
ಎನುವ ಸುಳ್ಳು
ಹೇಳಬೇಕಾಗಿಲ್ಲ.

ಒಡವೆ..



ಒಡವೆಯ
ಗೊಡವೆಯನಿಲ್ಲದಂತೆ
ಮಾಡಿದ
ಅವಳ ಕೆನ್ನೆಯ
ಮೊಡವೆಗಳಿಗೆ
ನನ್ನ ಪರ್ಸು
ಸದಾ ಚಿರಋಣಿ

ಅಕ್ಷಯ ತೃತೀಯ


ಅವಳ
ಕನಸುಗಳೂ
ಅಕ್ಷಯ,
ಅವಳಿಂದಾಗಿ
ಕಣ್ಣೀರೂ..
ಅಕ್ಷಯ,
ಹಾಗಾಗಿ
ನನ್ನ ಪಾಲಿಗೆ
ಇವೆರಡೇ
ಪ್ರಥಮ
ಮತ್ತು
ದ್ವಿತೀಯ..
ಈ ದಿನ
ನಿಜಕ್ಕೂ
ತೃತೀಯ..

ಸೋಲು...


ಪ್ರೀತಿ
ಪಗಡೆಯಾಟದಲಿ
ಅವಳೆದುರು
ಮೋಸದಿಂದ
ಸೋತು ಹೋದೆ...
ಅಂದಿನಿಂದ
ನನ್ನ ಕನಸುಗಳಿಗೆ
ವನವಾಸ..
ನನ್ನೀ ಮೊಗದ
ನಗುವಿಗೆ
ಅಜ್ಞಾತವಾಸ

ಬಾಳ ದಾರಿ...



ಅವಳೇನೋ
ನೆನಪಿನ ಸೋಂಕಿರದೆ
ಹಗುರ ಹೆಜ್ಜೆಗಳಿಂದ
ಬಾಳ ದಾರಿಯಲಿ
ಬಲು ದೂರ
ಸಾಗಿಬಿಟ್ಟಳು..
ನಾನೋ...
ಅವಳ ನೆನಪಿನ
ಭಾರದ ಜೋಳಿಗೆಯ
ಹೊತ್ತು, ಪ್ರತಿ
ಹೆಜ್ಜೆಯನಿಡಲೂ
ಒದ್ದಾಡುತ್ತಿದ್ದೇನೆ.

ಕರವಸ್ತ್ರ


ಅವಳೊಂದು ವೇಳೆ
ನನ್ನ ಕರವಸ್ತ್ರವಾಗಿದ್ದಿದ್ದರೆ,
ಈ ರೀತಿಯಲಿ
ಬೆವೆರಿಳಿಸೋ
ಸೂರ್ಯ ನಾರಾಯಣನ
ನಾ ಖಂಡಿತವಾಗಿಯೂ
ಶಪಿಸುತ್ತಿರಲಿಲ್ಲ .

ಕಾಲಚಕ್ರ...



ಭಳಿರೆ ಭಗವಂತ ನಿನ್ನಾಟ...
ಕಾಲಚಕ್ರದಲಿ
ನಾನೆಂದೂ ಮೇಲೆಯೇ
ಎನುವವನಿಗೆ ಕಲಿಸಿದೆ ಬುದ್ಧಿ,
ತಂದೊಡ್ಡಿದೆ ನರಹಂತಕನೆನುವ
ಕಿರೀಟ ತೊಡಿಸಿದವನಿಗೆ
ಅದೇ ಕಿರೀಟಕೆ
ತಲೆಯೊಡ್ಡಬೇಕಾದ ಪರಿಸ್ಥಿತಿ,
ಭಳಿರೆ ಭಗವಂತ ನಿನ್ನಾಟ..
ಗೋವಿನ ಪ್ರಾಣದ ಬೆಲೆಯ
ವಸೂಲಿ ಮಾಡಿಯೇ ಬಿಟ್ಟೆ.
ಅಧರ್ಮದ ಗದ್ದುಗೆಯಲಿದ್ದ
ನಾಯಕನ ಬಾಯಿಗೆ
ದೊಡ್ಡ ಬೀಗವನೆ
ಜಡಿದು ಬಿಟ್ಟೆ...
ಎಲ್ಲುಂಟು ಸಾಲು ಮೈಕುಗಳು...?
ಎಲ್ಲುಂಟು ಚರ್ಚೆಯ ವೇದಿಕೆಗಳು...?
ಎಲ್ಲರಿಗೂ " ಕೈ - ಕೈ "
ಹಿಸುಕಿಕೊಳ್ಳುವಾಸೆ...
ಕಾಲಚಕ್ರದಡಿಯಲ್ಲಿ
ಬಿದ್ದಿದ್ದರೂ ಮೀಸೆಗೆ
ಮಣ್ನಾಗಲಿಲ್ಲ ಎಂದು
ತೋರ್ಪಡಿಸುವಾಸೆ..

ಶ್ರೀಕೃಷ್ಣ...



ಶ್ರೀಕೃಷ್ಣನಂತೆಯೇ ನಾ..
ಪದಗಳೆನುವ
ಗೋಪಿಕೆಯರ
ಜೊತೆ ಸದಾ
ಸರಸವಾಡುವಾಸೆ

ಬೆಳಕತ್ತಲು...



ಕತ್ತಲತ್ತ ಹೋಗುವವನೊಬ್ಬ.
ಬೆಳಕಿನೆಡೆ ಜಿಗಿಯ
ಬಯಸುವವನೊಬ್ಬ
ಜಗವೆ ಹಾಗೆ...
ಕೆಲವರಿಗೆ ಮೋಹದ
ಕತ್ತಲಾಕರ್ಷಣೆ
ಬೆರಳೆಣಿಕೆಯವರಿಗೆ
ಮೋಕ್ಷದ ಬೆಳಕಿನಾಕರ್ಷಣೆ.

ಉಡುಗೊರೆ



ಹೊತ್ತು ಹೊತ್ತಿಗೆ
ಕನಸಿನ ಸಿಹಿ
ಮುತ್ತನಿಡುವ
ನನ್ನವಳ ನೆನಪಿಗೆ
ಉಡುಗೊರೆಯಾಗಿ
ಬೇಕಾಗಿದ್ದು ನನ್ನ
ಕಣ್ಣೀರ ಮುತ್ತು...
ಪ್ರತಿಯೊಂದು ಬಾರಿಯೂ
ಕೊಟ್ಟು ಬಿಡುತ್ತೇನೆ.
ಪ್ರಸವದ ನೋವ
ಸಹಿಸಲಾರದೆ ಸತ್ತು...
ಕಣ್ಣ ಕೂಸುಗಳ ಹೆತ್ತು.

ಗುರುತು



ಗೆಳತೀ...
ನಿನ್ನಯ ಹೃದಯಕ್ಕೆ
ನಾ ನನ್ನಯ
ಮತವ ಹಾಕಿದೆ ;
ಇದೀಗ ನನ್ನ ಕೆನ್ನೆ
ನಿನ್ನ ಕೆಂದುಟಿಯ
ಕೆಂಪು ಶಾಯಿಯ
ಗುರುತಿಗೆ ಕಾದಿದೆ

ಬಾಡಿಗೆ...


ಇರುಳಲ್ಲಿ
ಮಲಗಲು
ಶರಧಿ
ಕೊಟ್ಟ
ಕೋಣೆಗೆ
ಬಾಡಿಗೆಯಾಗಿ
ನೇಸರ
ತಾನಿಂದು
ಹೊರಹೊಮ್ಮಿದ
ಬೆಳಕನ್ನೇ
ಅಡವಿಟ್ಟು ಬಿಟ್ಟ

ಸಾವು...



ಹಡೆದ ಕನಸಿನ
ಕೂಸುಗಳನು,
ಕಡು ಕತ್ತಲೆಯ
ಬೀದಿಯಲೇ ಬಿಟ್ಟು,
ಅನಾಥರನ್ನಾಗಿಸಿ
ಎಚ್ಚರದ ಯಮಪುರಿಯ
ಕಡೆಗೆ ಒಲ್ಲದ
ಮನಸಿಂದ ಮೆಲ್ಲಗೆ
ಹೆಜ್ಜೆಯನಿಡತೊಡಗಿದೆ
ನನ್ನ ನಿದಿರೆ.

ವಸ್ತ್ರಾಪಹರಣ...


ವೈಭವದ ರಾಜ ಸಭೆ...
ಸಭೆಯಲ್ಲೊಂದಷ್ಟು ಜನ
ಧರ್ಮಜ್ಞಾನವ ಅರೆದು
ಕುಡಿದವರು....
ಸಿಂಹಾಸನದ ಮೇಲೊಬ್ಬ
ಕುರುಡು ರಾಜ,
ಮಕ್ಕಳ ಹುಚ್ಚಾಟವ
ಹುರಿದುಂಬಿಸುತ್ತಿದ್ದ.
ಮತ್ತೊಂದಿಷ್ಟು ಜನ
ಸೋಲರಿಯದ ಶೂರರು...
ರಾಜ ಹಾಕಿದ್ದ ಅನ್ನದ
ರುಚಿಯ ಮೆಲುಕು ಹಾಕುತ್ತಿದ್ದರು...
ಬರಿಯ ಓದಿಗಾಗಿ
ಧರ್ಮಜ್ಞಾನವ ಓದದೆ,
ಮನನ ಮಾಡಿ
ಮನದೊಳಗಿಳಿಸಿದ್ದ
ಮಂತ್ರಿ ಮಾತ್ರ ಧಿಕ್ಕರಿಸಿ
ಸಭೆಯ ತೊರೆದು ಹೋಗಿದ್ದ.
ಅದ್ಯಾವುದೋ ಧರ್ಮದ ಕುಣಿಕೆಗೆ
ಕೊರಳನೊಡ್ಡಿದ್ದ ಪಾಂಡವರು
ಸತ್ತು ಹೋಗಿದ್ದ ತಮ್ಮ
ಪೌರುಷದ ಶವದ ಮುಂದೆ
ಕಣ್ಣೀರಿಳಿಸದೆ ಬಿಕ್ಕಳಿಸುತ್ತಿದ್ದರು...
ಸಭೆಯ ನಡುವಲ್ಲೊಬ್ಬಳು
ಅಸಹಾಯಕ ಹೆಣ್ಣು...
ಕಣ್ಣೀರ ಮಳೆಯ ಬಿಡದೆ
ಸುರಿಸುತ್ತಾ....
ಅವರಿವರ ಅಂಗಲಾಚುತ್ತಿದ್ದಳು..
ದುಷ್ಟರ ದೊಡ್ದ ಪಡೆಯೊಂದು
ಸೆಳೆಯುತಿತ್ತವಳ ಸಹನೆಯ ಸೀರೆಯ
ಒಂದು ಕೈಯಲ್ಲಿ ನೆರಿಗೆ;
ಇನ್ನೊಂದು ಕೈಯ ಚಾಚಿ
ರೋದಿಸಿದಳು ಸಭೆಯ ಮುಂದೆ
ರಕ್ಷಣೆ ಕೊಡುವವರಿಲ್ಲವೇ ಈ ನಾರಿಗೆ...?
ಹುಲು ಮಾನವರೆಂತು ರಕ್ಷಿಸಿಯಾರು...?
ಎನುವ ಪ್ರಜ್ಞೆ ಮೂಡಿದೊಡನೆ
ಬೆತ್ತಲಾಗುವ ಭಯವ ತೊರೆದು...
ಬಿಟ್ಟು ಬಿಟ್ಟಳು ನೆರಿಗೆಯ ಮೇಲಿದ್ದ ಕೈಯ,
ದೀನಳಾಗಿ ಬೇಡಿದಳು ಗೋವಿಂದನ
ತನ್ನನ್ನೇ ತಾ ಸಮರ್ಪಿಸುತಾ...
ಆ ಸಮರ್ಪಣೆಯ ಭಕ್ತಿಗೊಲಿಯದವನೇ
ಆ ಭಗವಂತ...?
ಕೊಟ್ಟು ಬಿಟ್ಟ ಅಕ್ಷಯ ವಸ್ತ್ರವ.
ಸೆಳೆಯ ಹೊರಟವನು
ಬಸವಳಿದು ಬಿದ್ದಾಗ....
ಆ ಅಬಲೆಯ ಮೆಯಲ್ಲಿ
ವಸ್ತ್ರವದು ಹಾಗೇಯೇ ಇತ್ತು...
ದುರುಳರ ಪಡೆಯ
ದುರಂಹಕಾರದ ವಸ್ತ್ರಾಪಹರಣವಾಗಿತ್ತು
ಧರ್ಮ ಸಂಸ್ಥಾಪಕನಿಂದ
ಅಧರ್ಮದ ಜಯವೆನುವ
ವಸ್ತ್ರದ ಅಪಹರಣವಾಗೇ ಬಿಟ್ಟಿತ್ತು...

ಜ್ಞಾನ ಪೀಠ



ತಾವು ಬರೆದಿದ್ದಕ್ಕಲ್ಲ,
ಬರಿಯ "ಅವರ"
ಕೃಪೆಯಿಂದಲೇ
ಸಿಕ್ಕಿರುವುದಂತೆ,
ಈ "(ಅ)ಜ್ಞಾನ ಪೀಠ"
ಹಾಗಾಗಿ ಅದರದೇ
ಋಣಸಂದಾಯಕ್ಕಾಗಿ
ಒಂದೆರಡು ಸಾಹಿತಿಗಳಿಂದ
ನಡೆಯುತಿದೆ
ಹಾದಿ ಬೀದಿಯಲಿ
ವೋಟಿನ ಗಿಳಿಪಾಠ

ಜೀವನ...



ಜೀವನವೇ ಹಾಗೆ..
ಕಲ್ಲುಗಳ ಕಷ್ಟಗಳ
ನಡುವೆಯೇ...
ತಲೆಯೆತ್ತಬೇಕು...
ಅವರಿವರ
ಕಟುನುಡಿಯ
ಕೊಳೆತೆಲೆಗಳನೇ
ಗೊಬ್ಬರವಾಗಿಸಿ
ಚಿಗುರೊಡೆಯಬೇಕು
ಬೆಳೆಬೆಳೆದು
ಹೆಮ್ಮರವಾಗಿ
ತಾ ನಿಂತ
ನೆಲಕೆ ಸೇವೆಯ
ನೆರಳುಣಿಸಬೇಕು

---ಕೆ.ಗುರುಪ್ರಸಾದ್
3K ಗುಂಪಿನ ಚಿತ್ರಕ್ಕೆ ಬರೆದ ಸಾಲು..

ಅದ್ಭುತ ಶಕ್ತಿ.


ನಾನೆದುರಿಗಿದ್ದರೂ
ನನ್ನ ನೋಡದೆ...
ಅದೆಲ್ಲೋ ನೆಲದ
ಮೇಲೆ....
ನನ್ನ ರೂಪಕಾಗಿ
ಹುಡುಕಾಡುವ
ನಿನ್ನ ನಗು ಹೊತ್ತ
ಬಾಗಿದ ಮೊಗದ
ನಾಚಿಕೆಯ ನೋಟಕಿದೆ,
ನನ್ನ ಸೋಲಿಸಿ
ನಿನ್ನ ಗುಲಾಮನಾಗಿಸುವ
ಅದ್ಭುತ ಶಕ್ತಿ.

ಇಷ್ಟ...



ನಾನೆಂದರೆ
ನನಗೇ ಇಷ್ಟವಿಲ್ಲ
ಕಾರಣ ಸ್ಪಷ್ಟ...
ಅವಳ ಬಳಿ
" ನೀನಿಷ್ಟ ಪಡದ
ಪ್ರತಿಯೊಂದನೂ
ನಾ ಇಷ್ಟಪಡುವುದಿಲ್ಲ"
ಎಂದು ಹೇಳಿದ್ದೇನಲ್ಲ.

ವಿಶ್ವ ಪರಿಸರ ದಿನ...



ಮನುಜ ತನ್ನ
ದುಡಿಮೆಯ
ಬದಿಗಿಡುತ್ತಾ
ಸೌಲಭ್ಯಗಳ
ಪಡೆವಾಸೆಗೆ,
ಸೋಮಾರಿತನದ
ಉಳಿವಿನ
ಹೋರಾಟಕ್ಕೆ
ಬಲಿಯಾಗಿದ್ದು
ಪರಿಸರ