ಒಂದೊಂದಾಗಿ
ಮನದೊಳಗೆ
ಬೀಡುಬಿಟ್ಟಿದ್ದ
ಅವಳ ಬಗೆಗಿನ
ಬಯಕೆಗಳ
ಉಸಿರುಕಟ್ಟಿಸುತ್ತಿದ್ದೇನೆ,
ನನ್ನದೇ
ಕುತ್ತಿಗೆಯ
ಹಿಸುಕ ತೊಡಗಿತ್ತವು.
ವಿಲವಿಲನೆ
ಒದ್ದಾಡುವುದ
ಕಂಡು ಕರುಳು
ಸುಟ್ಟು ಹೋದಂತಾಗುತ್ತಿದ್ದರೂ,
ಸಹಿಸಿಕೊಳ್ಳುತ್ತಿದ್ದೇನೆ.
ಬಯಕೆಯ ಬೇಡಿಯಿರದ
ಮುಕ್ತ ಜೀವನದ
ಹೊಸ ಬಯಕೆಯ
ಪಡೆಯುವುದಕೆ,
ಬಂದದ್ದನ್ನು
ಬಂದಂತೆ
ಸ್ವೀಕರಿಸುವ
ಗುಣವೊಂದಕೆ
ಹಾಲುಡಿಸುತ್ತಿದ್ದೇನೆ.
ಅದೇ ನನ್ನ
ಮನಕೆ ನೆಮ್ಮದಿಯ
ತಂದೀತೆನುವ ಬಯಕೆ
ಶಾಂತ ಚಿತ್ತದಿಂದ
ಚಿಂತನೆಗೈದು
ಬೆಲೆಕೊಡತೊಡಗಿದ್ದೇನೆ,
ಭಗವಂತನಾಟದ
ಪಾತ್ರಧಾರಿಗಳಿಗೆ
ಇದೇ ಸರಿಯಾದದ್ದು
ಎನುವ ಪ್ರಾಜ್ಞರ ಅಭಿಮತಕೆ.
No comments:
Post a Comment