Thursday, 5 June 2014

ವಸ್ತ್ರಾಪಹರಣ...


ವೈಭವದ ರಾಜ ಸಭೆ...
ಸಭೆಯಲ್ಲೊಂದಷ್ಟು ಜನ
ಧರ್ಮಜ್ಞಾನವ ಅರೆದು
ಕುಡಿದವರು....
ಸಿಂಹಾಸನದ ಮೇಲೊಬ್ಬ
ಕುರುಡು ರಾಜ,
ಮಕ್ಕಳ ಹುಚ್ಚಾಟವ
ಹುರಿದುಂಬಿಸುತ್ತಿದ್ದ.
ಮತ್ತೊಂದಿಷ್ಟು ಜನ
ಸೋಲರಿಯದ ಶೂರರು...
ರಾಜ ಹಾಕಿದ್ದ ಅನ್ನದ
ರುಚಿಯ ಮೆಲುಕು ಹಾಕುತ್ತಿದ್ದರು...
ಬರಿಯ ಓದಿಗಾಗಿ
ಧರ್ಮಜ್ಞಾನವ ಓದದೆ,
ಮನನ ಮಾಡಿ
ಮನದೊಳಗಿಳಿಸಿದ್ದ
ಮಂತ್ರಿ ಮಾತ್ರ ಧಿಕ್ಕರಿಸಿ
ಸಭೆಯ ತೊರೆದು ಹೋಗಿದ್ದ.
ಅದ್ಯಾವುದೋ ಧರ್ಮದ ಕುಣಿಕೆಗೆ
ಕೊರಳನೊಡ್ಡಿದ್ದ ಪಾಂಡವರು
ಸತ್ತು ಹೋಗಿದ್ದ ತಮ್ಮ
ಪೌರುಷದ ಶವದ ಮುಂದೆ
ಕಣ್ಣೀರಿಳಿಸದೆ ಬಿಕ್ಕಳಿಸುತ್ತಿದ್ದರು...
ಸಭೆಯ ನಡುವಲ್ಲೊಬ್ಬಳು
ಅಸಹಾಯಕ ಹೆಣ್ಣು...
ಕಣ್ಣೀರ ಮಳೆಯ ಬಿಡದೆ
ಸುರಿಸುತ್ತಾ....
ಅವರಿವರ ಅಂಗಲಾಚುತ್ತಿದ್ದಳು..
ದುಷ್ಟರ ದೊಡ್ದ ಪಡೆಯೊಂದು
ಸೆಳೆಯುತಿತ್ತವಳ ಸಹನೆಯ ಸೀರೆಯ
ಒಂದು ಕೈಯಲ್ಲಿ ನೆರಿಗೆ;
ಇನ್ನೊಂದು ಕೈಯ ಚಾಚಿ
ರೋದಿಸಿದಳು ಸಭೆಯ ಮುಂದೆ
ರಕ್ಷಣೆ ಕೊಡುವವರಿಲ್ಲವೇ ಈ ನಾರಿಗೆ...?
ಹುಲು ಮಾನವರೆಂತು ರಕ್ಷಿಸಿಯಾರು...?
ಎನುವ ಪ್ರಜ್ಞೆ ಮೂಡಿದೊಡನೆ
ಬೆತ್ತಲಾಗುವ ಭಯವ ತೊರೆದು...
ಬಿಟ್ಟು ಬಿಟ್ಟಳು ನೆರಿಗೆಯ ಮೇಲಿದ್ದ ಕೈಯ,
ದೀನಳಾಗಿ ಬೇಡಿದಳು ಗೋವಿಂದನ
ತನ್ನನ್ನೇ ತಾ ಸಮರ್ಪಿಸುತಾ...
ಆ ಸಮರ್ಪಣೆಯ ಭಕ್ತಿಗೊಲಿಯದವನೇ
ಆ ಭಗವಂತ...?
ಕೊಟ್ಟು ಬಿಟ್ಟ ಅಕ್ಷಯ ವಸ್ತ್ರವ.
ಸೆಳೆಯ ಹೊರಟವನು
ಬಸವಳಿದು ಬಿದ್ದಾಗ....
ಆ ಅಬಲೆಯ ಮೆಯಲ್ಲಿ
ವಸ್ತ್ರವದು ಹಾಗೇಯೇ ಇತ್ತು...
ದುರುಳರ ಪಡೆಯ
ದುರಂಹಕಾರದ ವಸ್ತ್ರಾಪಹರಣವಾಗಿತ್ತು
ಧರ್ಮ ಸಂಸ್ಥಾಪಕನಿಂದ
ಅಧರ್ಮದ ಜಯವೆನುವ
ವಸ್ತ್ರದ ಅಪಹರಣವಾಗೇ ಬಿಟ್ಟಿತ್ತು...

No comments:

Post a Comment