Wednesday 30 May 2012

ವಿಳಂಬ..


ಅವಳ ಕೊರಳಿಗೆ
ಪ್ರೇಮ ನಿವೇದನೆ
ಎನುವ ಹಾರವನು
ಹಾಕುವ ಸಲುವಾಗಿ
ಅತಿ ಸುಂದರ
ಶಬ್ದಗಳ ಸುಮಗಳಿಗಾಗಿ
ಹುಡುಕಾಡುತ್ತಿದ್ದೆ,
ಆ ಕಲ್ಪನೆಯ ಹಾರ
ಸಿದ್ಧವಾಗುವಷ್ಟರಲ್ಲಿ
ಯಾರೋ ಒಬ್ಬಾತ
ಬೆಲೆಬಾಳುವ ತಾಳಿಯ
ಅವಳ ಕುತ್ತಿಗೆಗೆ
ಕಟ್ಟಿಬಿಟ್ಟಿದ್ದ....

Saturday 26 May 2012

ಕವಿತೆ....
ಕಲ್ಪನೆಯ
ತತ್ತಿಗೆ
ಏಕಾಂತದ
ಕಾವು
ಸಿಕ್ಕಾಗ
ಬಿರಿದು
ಹೊರಬಂದ
ಪುಟ್ಟ ಮರಿ
ಈ ಕವಿತೆ..

Tuesday 22 May 2012

ಜಪ


ಈಗೆನ್ನ
ಮನಸು
ಮಾಡುತಿದೆ
ನಿದಿರೆಯಾ
ಜಪ,
ಸಾಧನೆಯ
ಕನಸ
ಕಾಣುವುದು
ಅದರ
ಒಂದು ನೆಪ.

ನಿರಾಸೆ..


ಆಗಸದ
ರಣಾಂಗಣದಲಿ
ಮಳೆಹನಿಯ
ಶರವ ಬಿಡಲು
ಸಜ್ಜಾಗಿದ್ದಂತೆ
ಕಂಡರೂ..
ಕಾರ್ಮುಗಿಲೆನುವ
ವೀರ ಯೋಧರ
ಪಡೆ ನಡೆಸಿದ್ದು
ಬರಿಯ
ಪಥಸಂಚಲನ...

ತಪ್ಪು


ಸಾವ ಕಾಣತೊಡಗಿತು ಕತ್ತಲು
ಬೆಂಬಿಡದೆ ಕಾಡಿದ ಮುಪ್ಪಿಂದ,
ಜಾರತೊಡಗಿತು ಇಬ್ಬನಿಯ ಮುತ್ತುಗಳು
ಗಿಡ ಮರಗಳೆಲೆಯ ಚಿಪ್ಪಿಂದ;
ರವಿಯೆನುವ ಹೊಳೆವ ಕೂಸಿನ ಜನನವಾಯ್ತು
ಭುವಿಯ ಕಡಲೆನುವ ಗರ್ಭದಿಂದ.
ಸಂಯಮವ ಕಳೆದುಕೊಂಡ ಭೂದೇವಿ,
ಮತ್ತು ಇರುಳ ರಾಜನ ಒಂದು ತಪ್ಪಿಂದ.

Sunday 20 May 2012

ಲಕ್ಷಣ..


ನಗುವಿರದ ನನ್ನೀ
ಮೊಗದ ಭುವಿಗೆ
ಕಣ್ಣೀರಿನ
ಮಳೆ ಬರುವ
ಸಣ್ಣ ಲಕ್ಷಣ...
ಬಹುಶಃ
ಮನದಾಗಸದಲಿ
ಕವಿದ ಅವಳ
ನೆನಪೆನುವ
ಮೋಡವೇ
ಇದಕೆ ಕಾರಣ..


Monday 14 May 2012

ನೆರಳು..ಬೆಳಗುವಾ
ಜ್ಯೋತಿಯಂತಿದ್ದ
ಅವಳ ಬಳಿ
ಪ್ರೀತಿಸುವೆಯಾ
ಎಂದುಲಿಯಿತು
ನನ್ನ ಕೊರಳು..
ಅದಕವಳಂದಳು
ಸುಟ್ಟು ಬಿಡುವೆ
ಬಳಿ ಬಂದರೆ
ನೀನಿಲ್ಲಿಂದ ತೆರಳು..
ಅವಳೆನುವ ಬೆಳಕಿಗೆ
ಬೆನ್ನುಹಾಕಿ
ಹೊರಟಿರುವ
ನನ್ನ ಮುಂದೆ
ಇರುವುದೀಗ,
ನನ್ನೊಳಗಿರುವ
ಅವಳ ನೆನಪೆನುವ
ಬೃಹದಾಕಾರದ ನೆರಳು..Thursday 10 May 2012

ಮಾತೆ.. (ಚಿತ್ರಕ್ಕಾಗಿ ಬರೆದ ಸಾಲುಗಳು)ಹೆಣ್ಣಿನ ರೂಪವ ಮರದಲ್ಲಿ ಕಂಡೊಡನೆ
ನನಗನ್ನಿಸಿತು ಅದೂ ತಾಯಿಯೆಂದು,
ತನಗಾಗುವ ನೋವ ಮರೆತು,
ಕಲ್ಲೆಸೆದವರಿಗೆ ಹಣ್ಣ ಕೊಡುವುದು,
ತನ್ನಾಶ್ರಯಕೆ ಬಳಲಿ ಬಂದವರಿಗೆ
ತಂಪಾದ ನೆರಳಕೊಡುವುದು,
ವಾತಾವರಣದಲಿಹ ವಿಷವನೆಲ್ಲಾ ನುಂಗಿ
ಜಗಕೆ ಪ್ರಾಣವಾಯುವ ಕೊಡುವುದು,
ಮರದಲಿರುವ ಪ್ರತಿಯೊಂದು ಗುಣಗಳೂ
ತಾಯಿಯನು ತಾನೆ ಹೋಲುವುದು...

ಕೈಸೆರೆ


ಪ್ರೀತಿಯ ದೊಡ್ಡ ಅಲೆಯಾಗಿ
ನನ್ನ ಬಳಿ ಹೊರಟಾಗ
ಅವಳೊಂದು ಕಡಲಿನ ತೆರೆ,
ಆದರೇಕೋ ನನ್ನ ಮುಟ್ಟುವ
ಕ್ಷಣದಲ್ಲಿ ಆಗುವಳಾಕೆ
ಬರಿಯ ಕನಸಿನ ನೊರೆ,
ಮತ್ತೆ ಮತ್ತೆ ನನ್ನ ಬಳಿ
ಬರುವಂತೆ ಕಂಡರೂ
ಪ್ರತಿ ಸಾರಿಯೂ ನಾನಾಗುವೆ
ನಿರಾಸೆ ಮತ್ತು ದುಃಖದ ಕೈಸೆರೆ

Saturday 5 May 2012

ಭ್ರಮೆ


ಅಬ್ಬಾ ತಡೆಯಲಾಗುತ್ತಿಲ್ಲ
ಈ ಎದೆಯೊಳಗಿನ ಉರಿ
ಎನುವ ಮಾತ ಕೇಳಿಸಿಕೊಂಡ
ನನ್ನ ಮಾಜಿ ಪ್ರೇಯಸಿ
ಅದು ತನ್ನಿಂದಾಗಿ ಎಂದುಕೊಂಡು
ಮುಖದಲ್ಲಿ ತೋರಿಸಿಯೇ ಬಿಟ್ಟಳು
ಒಂದು ಅಹಂಕಾರದ ನಗು;
ಈ ಉರಿಯ ಹಿಂದಿರುವ ಕಾರಣ
ಅವಳಿಗೇನು ಗೊತ್ತು,
ಗೆಳೆಯನ ಮದುವೆಯಲ್ಲಿ
ಗಟ್ಟಿಯಾಗಿ ಉಂಡ ಕಾರಣ
ನನ್ನನ್ನು ಕಾಡುತ್ತಿತ್ತು
ಹಾಳಾದ ಹುಳಿತೇಗು..

ಸರಿಸಮ


ಘಜ್ನಿ ಎಂಬ ಯವನ ದೊರೆ
ಸೋಮನಾಥ ದೇಗುಲವ
ಹದಿನೇಳು ಬಾರಿ
ಮಾಡಿದನಂತೆ ಲೂಟಿ;
ಪ್ರತಿಕ್ಷಣವೂ ನನ್ನ ಹೃದಯ
ದೇಗುಲದಿಂದ ನೆಮ್ಮದಿಯ
ಲೂಟಿ ಮಾಡುತ್ತಿರುವ ಅವಳಿಗೆ,
ಇವ ಆದಾನೇ ಸರಿಸಾಟಿ..??

ಪ್ರಶ್ನೆ..ಕಡಲ ತೀರದ
ಮರಳ ರಾಶಿಯಲಿ
ಕುಳಿತು ನಿನ್ನನೇ
ನೋಡುತಲಿದ್ದೆ...
ಬಾನಿನಲಿ ನಿನ್ನ
ರಂಗಿನೆರಚಾಟವ 
ನನ್ನೀ ಕಂಗಳಲಿ 
ಸೆರೆಹಿಡಿಯುತಲಿದ್ದೆ
ಇಷ್ಟೊಂದು ಬಗೆಯ
ಬಣ್ಣಗಳ ನೀ ಹೇಗೆ
ಸೃಷ್ಠಿಸುವೆ ಎಂದು
ಮನವ ಕಾಡುತ್ತಿದ್ದ
ಪ್ರಶ್ನೆಯ ಕೇಳುವವನಿದ್ದೆ,
ಅಷ್ಟರಲೇ ಮುನಿಸಿಕೊಂಡು
ಕೆಂಪು ಕೆಂಪಾಗಿ
ನೀನೇಕೆ ಮುಳುಗಿ 
ಮರೆಯಾಗಿ ಹೋದೆ..?

Tuesday 1 May 2012

ಬೆಳಗಾಗುತಿದೆ
ಆಗಸದ ಚೆಲುವನೆಲ್ಲಾ
ನುಂಗಿಹಾಕಿದ್ದ ಕತ್ತಲಿನ
ಕಪ್ಪಗಿನ ಬಣ್ಣವ
ರವಿಯ ಬೆಳಕಿನ ಕಿರಣವು
ಮೆಲ್ಲನೆ ಅಳಿಸಿ ಹಾಕುತಿದೆ...
ಇರುಳಿನ ಭೀಕರತೆಗೆ ಹೆದರಿ
ಮೌನದ ನೀರವತೆಯಲ್ಲಿ
ಕಳೆದು ಹೋಗಿದ್ದ
ಶಬ್ದಗಳನೆಲ್ಲಾ ಕರೆತರುವ
ಸಲುವಾಗಿ ಹಕ್ಕಿಯು ಹಾಡುತಿದೆ...
ಕತ್ತಲಿನ ನೆಪವೊಡ್ಡಿ
ಆಲಸ್ಯಕ್ಕೆ ಮೊರೆ ಹೋಗಿ
ನಿದಿರೆಯಲಿ ಮುಳುಗಿಹೋಗಿದ್ದ
ಜೀವಿಗಳಿಗೆಲ್ಲ ಎಚ್ಚರವಾಗುತಿದೆ..
ಮುಂಜಾನೆಯಲಿ ಬೇಗನೆ ಎದ್ದು
ಜಗವ ಬೆಳಗೋ ಕಾಯಕವ
ಶುರುಮಾಡಿದ ನೇಸರನ ಕಂಡು
ಮನುಜನಿಗೆ ಮೆಲ್ಲನೆ
ತನ್ನ ಕಾಯಕದ ನೆನಪಾಗುತಿದೆ..
ಭುವಿಗೆ ಬೆಳಗಾಗುತಿದೆ...


ರವಿವಾರ


ತನ್ನದೇ ದಿನ ಎಂದು
ಹೆಚ್ಚಿನ ಸಡಗರವಿಲ್ಲ,
ಉಳಿದ ದಿನಗಳಂತೆಯೇ
ಬೆಳಕಿನೊಡೆಯ ಬಂದನಲ್ಲ,
ಆದರೆ ಭುವಿಯ ಮೇಲಿನ
ಜನರಿಗೆ ಹಾಗಲ್ಲ...
ರವಿವಾರವೆಂದರೇನೋ ಖುಷಿ,
ದುಡಿತಕ್ಕೆ ರಜೆ ಇರೋ ನೆಪದಲ್ಲಿ
ತಡವಾಗಿ ಏಳಬಹುದಲ್ಲ...

ಅಸಾಧ್ಯ


ಕಣ್ಣಿನ ರೆಪ್ಪೆಯೆನುವ
ಕದವ ಗಟ್ಟಿಯಾಗಿ
ಮುಚ್ಚಿಕೊಂಡಿದ್ದೆನಲ್ಲ...
ಮನದೊಳಗಿನ
ನೆನಪಿನ ಬಿರುಗಾಳಿಗೆ
ತೆರೆಯದಿರಲೆಂದು
ಕಣ್ಣಿನ ಸುತ್ತ ಕಪ್ಪಗಿನ
ಬಟ್ಟೆಯ ಸುತ್ತಿಕೊಂಡಿದ್ದೆನಲ್ಲ...
ಅಷ್ಟಾಗಿಯು
ಮನಸಿಗೆ ಸಮಾಧಾನವಿಲ್ಲದೆ
ತನುವನಾವರಿಸುವಂತೆ
ದಪ್ಪಗಿನ ಕಂಬಳಿಯ
ಹೊದ್ದುಕೊಂಡಿದ್ದೆನಲ್ಲ..
ಇಷ್ಟೆಲ್ಲಾ ಅಡೆತಡೆಗಳಿದ್ದರೂ
ಅವಳ ಕನಸುಗಳನ್ನು
ತಡೆಹಿಡಿಯೋಕೆ ಮಾತ್ರ
ನನ್ನಿಂದ ಸಾಧ್ಯವಾಗಲೇ ಇಲ್ಲ...

ಸವಾಲು


ಕಾರ್ಮುಗಿಲುಗಳೊಂದಾಗಿ
ಸೂರ್ಯನನೆ ಮರೆಮಾಚಿರಲು
ಜಗವನಾವರಿಸಿತು
ರವಿಯಿರದ ಸಮಯದಂತಾ ಕತ್ತಲು,
ಮತ್ತೆ ತಮ್ಮೊಳಗೆ ತಾವೆ
ಕಚ್ಚಾಡಿ, ಸಿಡಿಲ ಸಿಡಿಸಲು
ಭುವಿಯನಾವರಿಸಿತು
ರವಿಯಿರುವ ಸಮಯದಂತಾ ಹೊನಲು,
ಅಬ್ಬಾ..! ನೀರಹನಿಗಳಿಂದಾದ
ಈ ಕಪ್ಪಗಿನ ಮೋಡಗಳು
ಭುವಿಯ ಬೆಳಗೋ ಭಾಸ್ಕರನಿಗೆ
ಹಾಕುತಿದೆಯೇ ಸವಾಲು..??