Sunday 30 October 2011

ಮತ್ಯ ಕನ್ಯೆ

ನಿದಿರೆಯಾ ಕೊಳದಲ್ಲಿ
ಅತ್ತಿತ್ತ ಈಜಾಡೋ
ಕನಸುಗಳೆಂಬ 
ಜಲಚರಗಳು
ಇರುವುದದೆಷ್ಟೋ.
ಆದರೂ ಪ್ರತಿ ಸಲವೂ
ನನ್ನ ಯೌವನದ ಗಾಳಕ್ಕೆ
ಸಿಕ್ಕಿ ಬಿದ್ದದ್ದು ಬರೀ 
ನನ್ನವಳೆನುವ ಮತ್ಯಕನ್ಯೆ.

Monday 24 October 2011


ಪ್ರೇಮ ಪತ್ರವೇ

ಪ್ರೀತಿಯ ಸಾಲುಗಳಲಿನ ಮುತ್ತಿನಾಕ್ಷರವೇ
ನೀರಿನಾ ಹನಿಯಂತೆ ಸುರಿಯಬಾರದೇ?
ಅದ ಕೊಂಡೊಯ್ಯೋ ಪ್ರೇಮಪತ್ರವೆಂಬ ಮೇಘವೇ
ನನ್ನ ಸೌಖ್ಯವನು ತಿಳಿಸಿ ಅವಳ ಸಂತೈಸಲಾಗದೆ ?

ಕಾದಿಹಳು ದಿನ ನಿತ್ಯ ಈ ಮಳೆ ಬಂದರೂ
ಬರಗಾಲದಿ ಮಳೆಯನು ಆಶಿಸುವರಂತೆ
ನಿನ್ನ ಸುರಿಯುವಿಕೆಗೆ ಸ್ವಲ್ಪ ತಡವಾದರೂ
ಆಗುವುದಂತೆ ಆಕೆಗೆ ಚಿತೆಯನೇರಿ ಬಿಡುವಂತೆ ಚಿಂತೆ

ಅವಳೆನಗೆ ತಿಳಿಸಬಯಸುವ ವಿಷಯಗಳಿರಬಹುದು ಹಲವು
ಆವಿಯಂತೆ ಅವುಗಳನು ಹೀರಿ ನೀ ಬಾ ಬೆಳಕಿನ ವೇಗದಲಿ
ಇಂಗಿ ಹೋದ ನನ್ನ ಮನದ ಪ್ರೀತಿಯ ಕೊಳವು
ತುಂಬಿ ತುಳುಕಲಿ, ನೀ ತಂದ ಜಲಧಾರೆಯಿಂದಲಿ.

Sunday 23 October 2011


ಮಳೆ

ನನ್ನ ದೇಹಕ್ಕಂಟಿಕೊಂಡಿದೆ
ನರರು ಮಾಡಿರುವ ಪಾಪದ ಕೊಳೆ
ಈ ಹೊಲಸು ಕೊಳೆಯನು
ನೀನಾದರೂ ಬಂದು ತೊಳೆ
ಎಂದು ಮೇಘರಾಜನೊಡನೆ
ಹೇಳಿರುವಳೇನೋ ಇಳೆ
ಅದಕಾಗಿಯೆ ಇರಬೇಕು
ಬರುತಿರುವುದು ಜೋರಾದ ಮಳೆ.

ನಿವೇದನೆ

ಚೆಲುವೆ ನೀ
ನನ್ನನು ಪ್ರೀತಿಸು
ಎಂದು ನಾ
ಮಾಡಿದ್ದೆ ನಿವೇದನೆ
ಮಾಡಲಾರೆ
ಎಂದು ಹೇಳಿ
ಕೊಡಬಹುದೇ ನನಗೆ
ನೀ-ವೇದನೆ?

Saturday 22 October 2011ಕತ್ತಲಿನ ಕೋಣೆಯಲಿ
ಏಕಾಂಗಿಯಾಗಿ ಅಳುತಿರಲು
ನಾ ನನ್ನವಳ ನೆನೆದು;
ಜಗಕಿದನು ತೋರಿಸಿ 
ಜನರ ನಗಿಸಲು
ಬಂದೆಯಾ ಬೆಳಕೆ
ಕಿಟಕಿಯನು ತೆರೆದು.

Thursday 20 October 2011ಯಾರಂದವರು ಉಸಿರಿರಲೇಬೇಕೆಂದು;

ಈ ಜಗದೊಳಗೆ ನಾ ಬದುಕಿರಲು

ಏನಿಲ್ಲದೆಯೂ ಬದುಕ ಬಲ್ಲೆ ನಾ

ಹೆತ್ತೊಡಲ ಬಿಗಿಯಪ್ಪುಗೆಯಲಿ ನಾನಿರಲು.

ಸಾಯುವುದಾದರು ಹೇಗೆ?

ಅವಳುಸಿರೇ ನನ್ನುಸಿರಾಗಿರಲು.
ನನ್ನಿನಿಯನಿಗಿರಲು 

ಅಷ್ಟೊಂದು ದೊಡ್ಡ

ಅರಮನೆ;

ನನಗಾಗಿ

ಅದನವನು 

ಬಿಟ್ಟು ನನ್ನ 

ಬಳಿ ಬರುವನೆ?Wednesday 19 October 2011


ಬುದ್ಧಿವಂತ ಪಾರಿವಾಳ

"ಬುದ್ಧಿವಂತ ಪಾರಿವಾಳಗಳು"
ಎಂದು ಮಾರಾಟ ಮಾಡುತ್ತಿದ್ದ
ಹಕ್ಕಿ ಮಾರಾಟಗಾರನಿಂದ ತಂದ
ಪಾರಿವಾಳದ ಬುದ್ಧಿಮತ್ತೆಯ ಬಗೆಗೆ
ನನಗಿರಲಿಲ್ಲ ಅಷ್ಟೊಂದು ವಿಶ್ವಾಸ
ನಾನದನು ಕೊಂಡು ಕೊಂಡಾಗ;
ತಲೆದೂಗಲೇ ಬೇಕಾದ
ಅದರ ಬುದ್ಧಿವಂತಿಕೆಯ
ಪರಿಚಯವಾಯಿತೀಗ;
ನಾ ಕೊಟ್ಟ ಪ್ರೇಮಪತ್ರವನು
ನನ್ನ ಪ್ರೇಯಸಿಗೆ ಬದಲಾಗಿ
ಅದು ಅದನವಳಪ್ಪನಲಿ
ಕೊಂಡೊಯ್ದು ಕೊಟ್ಟಾಗ.

ಅಂತರ

ನನ್ನ ಅವಳ
ನಡುವಿನ
ಪ್ರೀತಿಯನವಳು
ಮುರಿದ
ನಂತರ;
ನಮ್ಮಿಬ್ಬರ
ನಡುವಲಿ
ಉಂಟಾಗಿದೆ
ಸಾವಿರ
ಮೈಲುಗಳ
ಅಂತರ

Tuesday 18 October 2011


ಬೋಳು ಮರದಂತೆ 

ನಗ್ನವಾಗದಿರು
ನನ್ನವಳ ಮೊಗವೆ
ನಗು ಎನುವ
ಉಡುಪನು ಧರಿಸದೆ;
ಅಂದವಾಗಿರದದು
ಎಲೆಗಳಿಲ್ಲದ
ಬೋಳು ಮರದಂತೆ
ಹಸಿರು ಜೊತೆಗಿಲ್ಲದೆ.

ಅತ್ತೆ

ಪೋಸ್ಟ್ ಮ್ಯಾನ್ ತಂದು
ಕೊಟ್ಟ ಕಾಗದವನು ಓದಿ
ನಾ ಒಳಗೊಳಗೆ
ಬೇಸರದಿ ಅತ್ತೆ.
ವಿಷಯವಿಷ್ಟೆ
ಈ ದೀಪಾವಳಿಗೆ
ಮನೆಗೆ ಬರುವರಂತೆ
ನನ್ನ ಅತ್ತೆ.

Monday 17 October 2011


ಆಗ-ಈಗ

ನನ್ನವಳ ಮುಖದಲ್ಲಿ
ನಗೆಯ ಮೋಡ ಕವಿದು
ಮಾತಿನ ಮಳೆಯಾಗುತಿತ್ತು
ಅಂದು ನನ್ನ ಕಂಡಾಗ;
ಮೋಡ ಕವಿಯುವುದಿರಲಿ,
ಮಳೆ ಬರುವುದು ಹಾಗಿರಲಿ,
ಇಲ್ಲವೇ ಇಲ್ಲ ನೋಟವೆಂಬ
ತಂಗಾಳಿ ಕೂಡ, ನನ್ನೆಡೆಗೆ ಈಗ.
ಕೆ.ಪಿ.ಟಿ ಕ್ಯಾಂಟೀನು

ಎಲ್ಲಾ ಕಾಲೇಜುಗಳಲಿ ಇರುವಂತೆ ಇದೆ
ನಮ್ಮ ಕೆ.ಪಿ.ಟಿಗೂ ಒಂದು ಕ್ಯಾಂಟೀನು.
ದೊರೆಯುವುದು ಊಟ ಮತ್ತು ನಾಲ್ಕಾರು ಬಗೆಯ ತಿಂಡಿಗಳು
ಆದರೆ ಬಯಸಬಾರದು ಅದರೊಳಗೆ ನಾವು ರುಚಿಯನ್ನು.

ಒಳಹೊಕ್ಕು ತಿಂಡಿಗಾಗಿ ಹಣ ನೀಡಿದೊಡನೆ ನಮ್ಮ
ಕೈ ಸೇರುವುದು ಮರಣವಿರದ, ಬಲಹೀನ ಕೂಪನ್ನು;
ಸವೆದರೂ ಸಾಯದೆ ಅತ್ತಿಂದಿತ್ತ ಇತ್ತಿಂದತ್ತ ಓಡಾಡಿ
ಉಳಿಸಿಕೊಡುವುದದು ಮಾಲೀಕರಿಗೆ ಪ್ರಿಂಟಿಂಗ್ ಚಾರ್ಜನ್ನು.

ಊಟ, ದೋಸೆಗಳ ತಿನ್ನಲಿಲ್ಲಿ ಅಡ್ಡಿಯಿಲ್ಲ
ಆದರೆ "ಬನ್ಸು" ತಿನ್ನಲು ಮಾತ್ರ ಸ್ವಲ್ಪ ಕಷ್ಟ
ಬುತ್ತಿ ತರುವ ವಿದ್ಯಾರ್ಥಿಗಳು ಸಾಂಬಾರನು ಕೊಳ್ಳುವರು
ಆಗದಿದ್ದರೂ ಅದು ಅವರ ನಾಲಿಗೆಗೆ ಇಷ್ಟ.

ತೆಂಗಿನ ತುರಿಗಳು ಉಪ್ಪುಖಾರದ ನೀರಿನಲಿ ತೇಲುತ್ತಿದ್ದರೆ
ಅದುವೇ ಇಲ್ಲಿನ "ಸಾಂಬಾರು"
ಬರಿಯ ತೆಂಗಿನ ತುರಿಯು ಒತ್ತೊತ್ತಾಗಿದ್ದರೆ
ಅದಕೆ "ಚಟ್ನಿ" ಎನ್ನುವ ಹೆಸರು.

ಗಶಿಯೊಳಗೆ ಇರುವುದು ೩ ಬಗೆಗಳು
ಮೊನ್ನೆಯ "ಸೌತೆ", ನಿನ್ನೆಯ "ಹೆಸರು", ಇಂದಿನ "ಬೀಟ್ ರೂಟು"
ಮೂರು ದಿನದ ಗಶಿಯನ್ನು ಒಂದು ಮಾಡುವ ಉದ್ದೇಶ
ವೇಸ್ಟು ಆಗದಿರಲೆಂದು, ಮೊನ್ನೆ ನಿನ್ನೆಯ ಟೇಸ್ಟು.

ಬೇರೆಡೆಗೆ ಹೋಲಿಸಿದರೆ ರೇಟು  ಕಡಿಮೆಯಾಗಿರುವುದರಿಂದ 
ಬಡ ವಿದ್ಯಾರ್ಥಿಗಳು ತೋರಲಾರರು ಪ್ರತಿಭಟಿಸುವ ಧೈರ್ಯ .
ಆದುದರಿಂದ ಇಲ್ಲಿಗೇ ಬರುತ್ತಿರುತ್ತಾರೆ;
ಮನಸಿದ್ದು ಅಲ್ಲ, ಇದು ಅವರಿಗೆ ಅನಿವಾರ್ಯ

Sunday 16 October 2011

ಯುಗ ಯುಗಕೂ
ಸಾಕ್ಷಿಯಾಗಿರುವ
ಸಾವಿಲ್ಲದ ಸೂರ್ಯನಿಗೂ
ದಿನವೊಂದರಲೇ
ಹುಟ್ಟು ಸಾವುಗಳು
ಬರುವುದು
ಕವಿಯಿಂದ;
ಉರಿಕಿರಣಗಳ ಬಿಟ್ಟು
ಈ ಕವಿಗಳ
ಸುಟ್ಟು ಹಾಕಬೇಕೆಂದೆನಿಸಿದರೂ
ಸುಡಲಾಗಲಿಲ್ಲವಂತೆ
ಕಂಡಾಗ ಕಾವ್ಯದ 
ರಸದೌತಣವ
ಉಂಡವರ ಆನಂದ.
ದೊಡ್ಡ
ಸಾಧನೆಯ
ಕನಸುಗಳು
ಉದಯಿಸಲು
ಬಾನ
ರವಿಯ
ಅಂತ್ಯ
ಅನಿವಾರ್ಯ
ತಾನೆ

Saturday 15 October 2011


ಸಾವಿದೆ

ಚಿಗುರಿಗೆ ಪುನರ್ ಜನ್ಮವಿಲ್ಲದೆ, ಹಸಿರಿಗಿಲ್ಲಿ ಸಾವಿದೆ.
ನನ್ನ ಪ್ರೀತಿ ಎಂಬ ಮರವು, ಇಂದು ಒಣಗಿ ಹೋಗಿದೆ.

ನೀರ ಹನಿಗೂ ಸ್ಥಾನವಿಲ್ಲದೆ, ತಂಪಿಗಿಲ್ಲಿ ಸಾವಿದೆ.
ನನ್ನ ಪ್ರೀತಿ ಎಂಬ ನದಿಯಲಿ, ನೀರೆಲ್ಲಾ ಆರಿ ಹೋಗಿದೆ.

ಆಗಸದಿ ಮೋಡವು ಇಲ್ಲದೆ, ಮಳೆಯ ಹನಿಗೆ ಸಾವಿದೆ.
ನನ್ನ ಪ್ರೀತಿ ಎಂಬ ಭುವಿಯಲಿ ಬರವು ಬಂದಂತಾಗಿದೆ.

ಅವಳ ಪ್ರೀತಿಯ ನೋಟವಿಲ್ಲದೆ, ನನ್ನ ಪ್ರೀತಿಗೆ ಸಾವಿದೆ
ನನ್ನ ಪ್ರೀತಿ ಎಂಬ ತನುವಲಿ ಆತ್ಮ ಇರದಂತಾಗಿದೆ.

ನನ್ನ ಬಾಳಲಿ ನಿನ್ನ ಪ್ರೀತಿ ಇಲ್ಲದೆ, ನನ್ನ ಸುಖಕೆ ಸಾವಿದೆ
ಇಂದೆನ್ನ ಬಾಳಲಿ, ನಗುವು ಮಾಯವಾಗಿದೆ; ನೋವು ಅಮರವಾಗಿದೆ.

ಮೃತ್ಯು

ಆಸೆಗಳನು ತೊರೆದವನಿಗೆ ಅದೇ ಏಕೈ ಆಸೆ
ಆಸೆಗಳ ಹೊತ್ತವನಿಗೆ ಅದು ಅತ್ಯಂತ ಕೆಟ್ಟ ಗಳಿಗೆ
ಯೋಗಿಯೋರ್ವನಿಗೆ ಅದು ಸಂತಸದ ಕ್ಷಣ
ಯೋಧನೋರ್ವನಿಗೆ ಅದು ವೀರತ್ವದ ಸಂಕೇತ
ಆತ್ಮಹಂತಕನಿಗೆ ಅದು ಪರಮೋಚ್ಛ ಗುರಿ
ಆಂಜನೇಯನಿಗೋ ಅದು ಎಟುಕಲಾರದ ಹಣ್ಣು
ಕವಿಗೆ ಅದು ಕವಿತೆಯ ಕೊನೆಯ ಸಾಲಿನ ಪೂರ್ಣ ವಿರಾಮ
ರವಿಗೆ ಅದು ದಿನ ನಿತ್ಯದ ಸಾಮಾನ್ಯ ನೋಟ
ಕೊಲೆಯ ಮಾಡುವವಗೆ ಅದು ಕಾಯಕ
ಅಪರಾಧಿಗೆ ಅದು ನ್ಯಾಯಾಲಯದ ಅತಿ ದೊಡ್ಡ ಉಡುಗೊರೆ
ಒಟ್ಟಿನಲಿ, ನೋಡಿ ಅಪರಿಚಿತ; ಕೇಳಿ ಪರಿಚಿತ.
ಯಾವ ಕ್ಷಣದಲಿ ಯಾವ ಸ್ಥಳದಲಿ ಯಾವ ಸ್ಥಿತಿಯಲಿ
ಬರುವುದೋ ತಿಳಿಯದು ನಮ್ಮ ಬಾಳ ಪಯಣದಲಿ
ಜಾತಿ, ಅಂತಸ್ತುಗಳ ಬೇಧವಿಲ್ಲದೆ ಬರುವುದು ಮಾತ್ರ ಖಂಡಿತ
ಬಂದೊಡನೆ ಸಿಗುವುದು ನಾವುಗಳೆಂಬ ಹಕ್ಕಿಗೆ
ಸಮಸ್ಯೆಗಳೆಂಬ ಪಂಜರದಿಂದ ಆಗಸದೆಡೆಗೆ ಹಾರುವ ಸ್ವಾತಂತ್ರ್ಯ.

ಪತಿ ಪತ್ನಿ

ಪತಿಯರೆಲ್ಲರೂ ಕಡಲೊಡಲಿನ
ಅಬ್ಬರದ ದೈತ್ಯ ಅಲೆಗಳಂತೆ
ನೋಡುಗರಿಗೆ ಕಂಡರೂ
ಎಲ್ಲರನು ನುಂಗುವಂತೆ;
ಪತ್ನಿಯರೆನುವ ದಡದ ಬಳಿ ಬರುತ್ತಿದ್ದಂತೆ
ತಗ್ಗಿ ಬಗ್ಗಿ ಕುಗ್ಗಿ ಬರುವಂತೆ
ಅಬ್ಬರವೂ ನೊರೆಯಾಗಿ ಮರೆಯಾಗುವುದಂತೆ.

ಒಂದು ಕಣ್ಣೀರ ಹನಿ

ಜಗದ ತೀಕ್ಷ್ಣ ಕಂಗಳಿಗೆ ಕಾಣದಂತೆ
ಕದ್ದು ಮುಚ್ಚಿಟ್ಟಿದ್ದ ನನ್ನ 
ಒಡಲಾಳದ ನೋವಿನ ಕತೆಯ
ಸಾರಿ ಹೇಳಿತೆ..?
ನನ್ನ ಕಣ್ಣಿನಾ ಹೊಸ್ತಿಲನು ದಾಟಿ 
ಹೊರಗೋಡಿ ಬಂದ
ಒಂದು ಸಣ್ಣ ಕಣ್ಣೀರ ಹನಿ.

ಕುತೂಹಲದಿ ನೋಡುವ ಜನರ
ಮುಂದೆ ಅಂಕದ ಪರದೆಯನೆಳೆದು
ಒಳಗೊಳಗೆ ನಡೆದಿತ್ತು;
ಮನದ ವಿರಹದುರಿಯ ನಾಟಕವು
ಈ ನಗುವಿನಂಕದ ಪರದೆಯನೆ
ಸರಿಸಿಬಿಟ್ಟಿತೇ..?
ನನ್ನ ಕಣ್ಣಂಚಿನಿಂದ ಹೊರಗೋಡಿ ಬಂದ
ಒಂದು ಸಣ್ಣ ಕಣ್ಣೀರ ಹನಿ.

ಸೂರ್ಯನಂತೆಯೇ ಅಗಾಧವಾದ
ನೋವಿನಾ ಬೆಂಕಿಯುಂಡೆಗಳನೊಳಗಿರಿಸಿ
ಭುವಿಗೆ ಚೂರೂ ಕಾಣದಂತೆ
ನಲಿವಿನಾ ಮೋಡಗಳ ಮುಂದಿರಿಸಿದ್ದೆ;
ಗಾಳಿಯಾಗಿ ಬಂದು ಈ ಮೋಡವನೇ
ದೂರ ಕೊಂಡೊಯ್ದು, ಧಗಧಗನೆ
ಉರಿವ ದೇಹವನು ತೋರಿಸಿಬಿಟ್ಟಿತೇ..?
ನನ್ನ ಕಣ್ಣೊಳಗೆ ಸೆರೆಯಾಳಾಗಿದ್ದ;
ಕಣ್ ರೆಪ್ಪೆಯ ಕೂದಲಿನ ಕಂಬಿಗಳನೇ
ಕಿತ್ತು ಹೊರಗೋಡಿ ಬಂದ
ಒಂದು ಸಣ್ಣ ಕಣ್ಣೀರ ಹನಿ.

Friday 14 October 2011


ಕಾರಣ

ಮನದ ಪುಟದಲೆನ್ನ
ಬರೆದಿರುವೆ ನಿನ್ನ ಹೆಸರನ್ನ
ಕಾರಣವೇನು ಗೊತ್ತೇ ಚಿನ್ನ
ಹಾಕಿರುವೆಯಲ್ಲಾ ನೀಯೆನ್ನ
ಹೃದಯದೇಗುಲಕೆ ಕನ್ನ

ಎನ್ನ ಸ್ಥಿತಿ

ನೀನೆಂದು ಕರೆದೆಯೋ ಎನ್ನ
ಓ ಚೆಲುವ ಸುಂದರಾಂಗ
ಆ ಕ್ಷಣದಲೇ ಆಯಿತೆನ್ನ
ಬ್ರಹ್ಮಚರ್ಯ ವೃತವು ಭಂಗ
ಬಯಸುತಿದೆ ಚೆಲುವೆ ಈಗೆನ್ನ
ಮನವು ನಿನ್ನಯಾ ಸಂಗ
ಈ ಪರಿಯ ನುಡಿಯನ್ನೇ
ನುಡಿಯುತಿದೆಯೇ ನಿನ್ನಂತರಂಗ

ಚಂದದರಸಿ

ಮದುವೆಗೆ ಮುನ್ನ
ನುಡಿವರೆಲ್ಲ ಗಂಡಸರು
ನನ್ನವಳು ಚಂದದರಸಿ
ಮದುವೆಯ ನಂತರ ಕೇಳಿದರೆ
ಕೋಪದಲಿ ಕೆಂಪಾಗಿ
ನುಡಿವರು "ಅವಳೋ ಬ್ರಹ್ಮರಾಕ್ಷಸಿ"

ಮುಳುಗಿಸದಿರು

ನಿನಗೆನ್ನಲ್ಲಿ ಪ್ರೀತಿಯಿದೆ
ಎಂಬ ಕಲ್ಪನೆಯ ಕಡಲಲ್ಲಿ
ತೇಲಾಡುತ್ತಿರುವೆ.
ಇದು ಬರಿಯ ಭ್ರಮೆಯೆಂದು ತಿಳಿಸಿ
ನನ್ನ ದುಃಖ ಸಾಗರದಲ್ಲಿ
ಮುಳುಗಿಸದಿರು ಚೆಲುವೆ.

ರೋದನ

ಕೇಳಿಸದು
ಯಾರಿಗೂ
ನನ್ನ ಮನಸೊಳಗಿನ
ರೋದನ
ಯಾಕೆಂದರೆ
ಅದಕಿಲ್ಲ
ಶಬ್ದದ ಆಲಿಂಗನ

Wednesday 12 October 2011


ನಗು

ಎನ್ನ ಮನವು
ಕಂಡ ಕ್ಷಣದಿಂದ
ನಿನ್ನ ಮುಗುಳುನಗು;
ಹೇಳುತಿದೆ
ಸಾರಿ ಸಾರಿ
ಆಗು ನೀ ನನ್ನವಳಾಗು.

ರಿಡಕ್ಷನ್ ಸೇಲು

ಸೀರೆಯೊಂದನು
ನನ್ನಮ್ಮನಿಗೆಂದು ಕೊಂಡೆ
ಊರಿಗೆ ಬಂದಿದ್ದಾಗ
ಭಾರೀ ರಿಡಕ್ಷನ್ ಸೇಲು;
ಈಗ ಆ ಸೀರೆಯನು
ಉಪಯೋಗಿಸುವುದು ನಾನೇ,
ಯಾಕೆಂದರೆ ಆಗಿರುವುದದು
ಈಗ ಬರೀ ರುಮಾಲು.

ಕಾರಣ

ಹುಡುಗಿ ನಿನ್ನ
ಪ್ರೀತಿಸದಿರಲು ನಾ
ಹಲವಾರು ಕಾರಣಗಲಿವೆ;
ಅವುಗಳಲಿ ಒಂದು
ಇದೆಯಲ್ಲಾ ನಿನಗೆ
ಮುಖದ ತುಂಬಾ ಮೊಡವೆ.

Monday 10 October 2011


ಕೊರತೆ

ಪ್ರಿಯೆ, ನನಗಿದ್ದರೂ
ನಿನ್ನ ಬಗೆಗೆ
ಮನದಲಿ ಪ್ರೀತಿಯೊರತೆ,
ಪ್ರೀತಿಸಗೊಡದು
ನನ್ನ ಮುಖದಲ್ಲಿನ
ಚೆಲುವಿನ ಕೊರತೆ.


ಬಿಳಿಮೋಡ

ನೀನಿರಲು ಸುಂದರ
ಎಂದೆನಿಸಬಹುದು
ಪ್ರತೀ ಮುಸ್ಸಂಜೆ ;
ಆದರೆ ನೀನೋ
ನೀರ ಹನಿಗಳನು
ಹೆರಲಾಗದೊಂದು ಬಂಜೆ.


ಭ್ರಾಂತು

ನೋಡಲು ನಾನವಳ ಕಣ್ಣನು
ಅದು ಹತ್ತಿರ ಬಾರೋ ಅಂತು.
ಅದನೇ ಅವಳ ಬಳಿ ಹೋಗಿ ಹೇಳಿದೆ
ಅದಕವಳಂದಳು ನಿನಗೆಲ್ಲೋ ಭ್ರಾಂತು

ನೋಯುತಿದೆ

ಚೆಲುವೆಯರು ನನ್ನ ನೋಡದಿದ್ದಾಗ
ನನ್ನ ಮನಸು ನೋಯುತ್ತಿರಲಿಲ್ಲ
ಯಾಕೆಂದರೆ ಅವರಲ್ಲಿದ್ದುದು
ನನಗೆ ಕೇವಲ ಆಕರ್ಷಣೆ.
ಆದರೆ ಮನಸು ನೋಯುವುದು;
ಪ್ರಿಯೆ, ನೀ ನೋಡದೆ ಕುಳಿತರೆ
ಯಾಕೆಂದರೆ ನಿನ್ನ ಮೇಲೆನಗಿರುವುದು
ನಿಜವಾದ ಪ್ರೀತಿ ಕಣೆ.

ಸಂಗಾತಿ

ಮಾಡಿಕೊಳ್ಳ ಬಯಸುವರು
ಇಂದಿನ ಯುವಕರು
ಯುವತಿಯರ ಸಂಗ-ಅತಿ;
ಆದರೆ ಬಯಸಲಾರರು
ಅವರನ್ನೇ ಮಾಡಿಕೊಳ್ಳಲು
ಜೀವನದ "ಬಾಳಸಂಗಾತಿ"

Wednesday 5 October 2011


ಆಸೆ

ಪ್ರಿಯೆ, ನಿನ್ನ
ಚೆಲುವಿಗೆ
ಸಮನಾದ
ರೂಪ ಎನಗಿಲ್ಲ.
ಆದರೂ
ಮನದಲಿಹ ಆಸೆ
ಆಗಬೇಕು
ನಾ ನಿನ್ನ ನಲ್ಲ.

ಮನದನ್ನೆ

ನೋಡಿದ್ದೇ
ಆಕೆಯನು
ನಾನು ನಿನ್ನೆ;
ಅಷ್ಟರಲೇ
ಆದಳಾಕೆ
ನನ್ನ ಮನದನ್ನೆ.
ಯಾಕೆಂದರೆ

ಗೆಳೆಯನಾದರೂ
ಕೊಡಿಸಲಾರ
ಒಂದು ಗ್ಲಾಸ್ ಜೂಸು;
ಯಾಕೆಂದರೆ,
ಸ್ವಭಾವದಲಿ ಆತ 
ಭಾರಿ ಕಂಜೂಸು.


ಲೇಡಿ-ಕಿಲಾಡಿ

ದಾರಿಯಲಿ ಬರುತ್ತಿದ್ದಳೋರ್ವಳು ಲೇಡಿ
ಅವಳನು ಕಂಡನೋರ್ವ ಕಿಲಾಡಿ
ಆಕೆಯ ನಡಿಗೆಯ ಕಂಡು ಮಾಡಿದನು ಲೇವಡಿ
ಗಮ್ಮತ್ತು ಆದದ್ದು ಅಲ್ಲೇ ನೋಡಿ
ಕೋಪದಲಿ ಆಕೆ ಆದಳು ಚಾಮುಂಡಿ
ತೋರಿಸಿಯೇಬಿಟ್ಟಳು ಆಕೆಯ ಕರಾಟೆಯ ಮೋಡಿ
ಆಸ್ಪತ್ರೆಯಲಿರೋ ಆತನ ಎಲುಬೆಲ್ಲಾ ಆಗಿದೆಯಂತೆ ಈಗ ಪುಡಿ ಪುಡಿ


ಲಲ್ಲೂ

ಬಿಹಾರದ ಭೂಪ ಲಲ್ಲೂ
ದೇಹವೋ ಅವನದು ಗುಂಡು ಕಲ್ಲು
ಹಣವನು ಕಂಡರೆ ಸುರಿಸುವನು ಜೊಲ್ಲು
ಧ್ಯೇಯ ಅವನದು; ಹಣಕಾಗಿ ಯಾರಬೇಕಾದರೂ ಕೊಲ್ಲು
ಅನ್ಯಾಯವೇ ತುಂಬಿದೆ ಅವನ ರಕ್ತದ ಹನಿ ಹನಿಯಲ್ಲೂ
ಆದ್ದರಿಂದ ಆಗಲೇಬೇಕು ಅವನಿಗೆ ಗಲ್ಲು
ನನ್ನದಲ್ಲ; ಇದು ಅಲ್ಲಿನ ಜನತೆಯ ಸೊಲ್ಲು

ಪೋಲೀಸ್

ಆಗುವುದು
ಪೋಲೀಸರ
ಆಗಮನ
ಆದ
ಮೇಲೆ
ಕಳ್ಳಕಾಕರ
ಪಲಾಯನ

ರೈತ

ಹೊಲ ಗದ್ದೆಯಲಿ ದುಡಿಯುತಾ
ಬೆಳೆ ಬೆಳೆಯುವನು ಬೆವರ ಸುರಿಸುತಾ
ಪ್ರತಿ ನಿಮಿಷವೂ ಕೆಲಸದಲೆ ನಿರತ
ಬೆಳೆದ ಬೆಳೆಯನು ದೇಶದ ಜನತೆಗೆ ನೀಡುತಾ
ದೇಶೋದ್ಧಾರಕಾಗಿ ಶ್ರಮಿಸುವ ಈತ
ನಿಜವಾದ ದೇಶಭಕುತ

Tuesday 4 October 2011


ಜಡದಿಂದ
ಮಲಗಿರುವ
ತನುವಿಗೆ
ಜಡ ಕಳೆಯಲೇನು
ಬೇಕು?
ರವಿಯ
ಹೊನ್ನ ಕಿರಣ
ಸಾಕು.
ದಿನ ನಿತ್ಯದ
ಕಾಯಕದ
ನೆನಪು
ಸಾಕು.

ಚಂದಿರ

ಆಕಾಶವೆನುವ
ಅಂಗಡಿಯಲಿ
ಕಪ್ಪು ಬಣ್ಣದ
ಹೊದಿಕೆಯ ಹಾಸಿ
ತಾರೆಗಳೆನುವ
ಹೊಳೆಯುವ
ಮುತ್ತು, ರತ್ನ
ವಜ್ರ, ವೈಢೂರ್ಯಗಳ
ಮಾರಲು ಕುಳಿತ
ವ್ಯಾಪಾರಿ
ಭೂ ರಮೆ

ಆ ಮೇಘರಾಜನ ಉಡುಗೊರೆ
ಭೂ ದೇವಿಗೀ ಹಸಿರು ಸೀರೆ
ಅದನುಟ್ಟು ನಿಂತ ಆಕೆಯ ಕಂಡರೆ
ಅಸೂಯೆ ಪಟ್ಟಾಳು ದೇವಲೋಕದಪ್ಸರೆ

ಕುಹೂ ಕುಹೂ ಎಂದು ಇಂಪಾಗಿ ಕುಗುತಾ
ಈಕೆಯಂದವ ಕೋಗಿಲೆ ಹೊಗಳುತಿದೆ ಹಾಡುತ
ಜುಳು ಜುಳು ನಾದವ ಮಾಡಿ ; ಹರಿಯುತಿದೆ ನದಿ ಬಳಕುತ
ಕೋಗಿಲೆಯ ಹಾಡಿಗೆ ತಾನೂ ಧ್ವನಿ ಸೇರಿಸುತ

ಇಣುಕಿಣುಕಿ ನೋಡುವನು ರವಿ ಈಕೆಯಂದ
ಗಗನ ಪೂರ್ತಿ ಇರುವ ಮೋಡದ ಮರೆಯಿಂದ
ಸ್ಪರ್ಶಿಸುವನು ಆಕೆಯ ತನ್ನ ಬೆಳ್ಳಿ ಕಿರಣದಿಂದ
ಆಲಿಂಗಿಸಲಾಗದ ನೋವ ಮರೆತು ಆನಂದದಿಂದ