Wednesday, 29 February, 2012

ನಮ್ಮ ಪ್ರಧಾನಂತ್ರಿಯ

ಅಂಕಿತನಾಮ

"ಮನ ಮೋಹನ ಸಿಂಗ್"

ಸದ್ಯದ ಪರಿಸ್ಥಿತಿಯಲ್ಲಿ

ಅವರ ಅನ್ವರ್ಥ ನಾಮ

"ಮೌನ ಮೋಹನ ಸಿಂಗ್"

Monday, 27 February, 2012


ಬೆಳಕಿರದ ಹೊತ್ತಿನಲಿ,
ಸದ್ದಿರದ ಸಮಯದಲಿ ನಡೆಯುತ್ತಿದ್ದ
ಇರುಳ ರಾಜನ ಅಟ್ಟಹಾಸವ
ನಿಲ್ಲಿಸಲು ಬಂದೆಯಾ ರವಿಯೇ..
ಹೆದರಿರುವ ತರುಲತೆಗಳ ಮೈಯಲ್ಲಿ
ಇಬ್ಬನಿಯ ಬೆವರು ಕಂಡು ಬಂದೆಯಾ ರವಿಯೇ..
ಕಾರಿರುಳ ಅಕ್ರಮವನೆಲ್ಲಾ ಕಾಣಲಾಗದೇ
ಮಂಜಿನ ಮುಸುಕಿನಲಿ ಅಡಗಿ ಕುಳಿತ
ಭುವಿಯ ಹೊರಗೆ ಕರೆ ತರಲು ಬಂದೆಯಾ ರವಿಯೇ..
ಬೆಚ್ಚಿ ಬಿದ್ದು ಆಗಸದಿ ಹಾರಲಾಗದೇ
ಮರದಲ್ಲೇ ಚಿಲಿಪಿಲಿ ಎಂದು ಅಳುತ್ತಿದ್ದ
ಹಕ್ಕಿಗಳ ಸಂತೈಸಲೆಂದು ಬಂದೆಯಾ ರವಿಯೇ
ಕನಸಿನಾ ಲೋಕದಲೇ ತೇಲಾಡುತ್ತಿರುವ
ಮನುಜರನೆಲ್ಲಾ ಬಡಿದೆಬ್ಬಿಸಿ ದುಡಿದು
ಸಾಧಕರಾಗುವ ಚೈತನ್ಯವನು ಕೊಡಲು ಬಂದೆಯಾ ರವಿಯೇ
ಇನ್ನಾದರೂ ಹೇಳು ರವಿಯೇ.. ನೀ ಕಡಲಿನಾಳದಿಂದ
ಆಗಸಕೆ ಪ್ರತಿದಿನವೂ ಬರುವುದಾದರೂ ಏಕೆ..???


ಕಟ್ಟು ಮಸ್ತಾದ ದೇಹ, 
ಕಣ್ಣೊಳಗೆ ಸ್ವಾತಂತ್ರ್ಯದ ಕನಸು
ಮನದೊಳಗೆ ಸದಾ ಕ್ರಾಂತಿಯ ಜ್ವಾಲಾಮುಖಿ
ಮೆದುಳಿನಲಿ ನೂರಾರು ಯೋಜನೆಗಳು
ಆಂಗ್ಲ ಜನರ ಹುಟ್ಟಡಗಿಸುವ ಯೋಚನೆಗಳು
ಇವರ ಗರಡಿಯಲೇ ಬೆಳೆದು ನಿಂತರು
ಭಗತಸಿಂಗರಂತಾ ಕ್ರಾಂತಿಕಾರಿಗಳು
ಆಂಗ್ಲ ಸಿಪಾಯಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಾ
ಬೀಗುತ್ತಿದ್ದರು ತನ್ನ ಮೀಸೆಯನು ತಿರುವುತ್ತಾ
ಬಿಳಿಯರ ಕೈಗೆ ಸಿಗಲಾರೆ ಎನುವ ಮಾತನುಳಿಸುವ ಸಲುವಾಗಿ
ತನ್ನ ತಾನೆ ಹತ್ಯೆಗೈದವರಿವರು
ತಾಯಿ ಭಾರತಿಗೆ ತನ್ನ ನೆತ್ತರನೇ ಅರ್ಪಿಸಿದರಿವರು
ಮಹಾನ್ ಕ್ರಾಂತಿಕಾರಿ ಚಂದ್ರಶೇಖರ ಆಜಾದರಿವರು

ಅಪ್ರತಿಮ ದೇಶಭಕ್ತ  ಚಂದ್ರಶೇಖರ ಆಜಾದರಿಗೆ ನನ್ನ ಸಣ್ಣ ನುಡಿ ನಮನಕಸಿದು ತಿನ್ನುವ ತಾಕತ್ತು ನನಗಿಲ್ಲ
ಆದರೂ ಹೊಟ್ಟೆ ಹಸಿದಿದೆಯಲ್ಲ
ಉಳ್ಳವರು ತಿಂದುಳಿದುದನು ಚೆಲ್ಲಿದರೇ ಹೊರತು
ನನ್ನೊಳಗಿನ ಹಸಿವಿನ ಕುರಿತು ವಿಚಾರಿಸಲಿಲ್ಲ
ನನ್ನ ಬಳಿ  ಕರೆದು ತಿನ್ನಲೇನೂ ಕೊಡಲಿಲ್ಲ
ಆದರೂ ಅವರ ಬಗೆಗೆ ಮುನಿಸಿಕೊಳ್ಳುವುದಿಲ್ಲ
ಚೆಲ್ಲಿರುವ ಆಹಾರವಾದರೇನಂತೆ ನನ್ನ ಹಸಿವ ನೀಗಿಸುವುದಲ್ಲ
ಮಿಗಿಲಾಗಿ ಈ ತುತ್ತು ಭೂತಾಯಿಯ ಬಟ್ಟಲಿನಲ್ಲಿಹುದಲ್ಲ


ಅವಳ ಉಡುಗೊರೆ

ನನ್ನ ಮತ್ತವಳ
ಪ್ರೇಮ ಗೀತೆಯಲಿ
ಪದಗಳ ಕಾಣಿಕೆ
ನನ್ನದೇ ಆಗಿತ್ತು.
ನಿನ್ನ ಕೊಡುಗೆ
ಏನೆಂದು ಕೇಳಿದಾಗ
ಕೊಡುವೆ ಕೊನೆಯಲ್ಲಿ
ಎನ್ನುವುದು ಅವಳ
ಉತ್ತರವಾಗಿತ್ತು,
ಅವಳ ಮಾತಿನ
ಗೂಡಾರ್ಥ ಅರಿಯದೇ
ಕಾತರದಿಂದ ಕಾದೆ,
ಉಡುಗೊರೆ ಪಡೆದಾಗಿನ
ಸಂತಸ ನನ್ನ ಪಾಲಿಗಿರಲಿಲ್ಲ
ಕಾರಣ....
ನನ್ನ ಪ್ರೇಮಕಾವ್ಯಕ್ಕೆ
ಪೂರ್ಣ ವಿರಾಮವೇ
ಅವಳ ಉಡುಗೊರೆಯಾಗಿತ್ತು.

Thursday, 23 February, 2012


ಕವಿಯೋರ್ವ
ಇದ್ದಾಗ
ಏಕಾಂತದಲಿ
ಪ್ರಶಾಂತವಾದ
ಪ್ರಕೃತಿಯ
ಮಡಿಲಲ್ಲಿ;
ಖಾಲಿ ಹಾಳೆಯೊಂದಿಗೆ
ಇರಲು ಲೇಖನಿಯೊಂದು
ಅವನ ಕೈಯಲ್ಲಿ
ಹಾಕವವರಾರು
ಅವನ ಕಲ್ಪನೆಯ
ಕಾವ್ಯ ತೋಟಕ್ಕೆ
ಪೂರ್ಣವಿರಾಮದ ಬೇಲಿ

Wednesday, 22 February, 2012


ಮನಸಿನಾ ಕೋಣೆಯೊಳಗೇ
ಇರಬಯಸುವ ನನ್ನ ನಗು
ಅವಳು ಕಣ್ಣೆದುರು ಬಂದೊಡನೆ
ಓಡೋಡಿ ಹೊರ ಬಂದು
ತುಟಿಯ ಹೊಸ್ತಿಲಲೇ
ಕುಳಿತುಕೊಳ್ಳುವುದೇಕೆ..???

Tuesday, 21 February, 2012


ಪ್ರತಿ ದಿನವೂ ಬೆಳ್ಳಂಬೆಳಗ್ಗೆ
ಬಲು ಬೇಗನೆ ತಪ್ಪದೇ
ಏಳುತ್ತಾನಲ್ಲ ಈ ಸೂರ್ಯ;
ಎಂದು ಹಾಕುವವನಿದ್ದೆ
ಅವನಿಗೊಂದು ದೊಡ್ಡ ಸಲಾಮು.
ಇಂದು ನಾನು ಬೇಗನೆ
ಎದ್ದಾಗಲೇ ಸತ್ಯ ಗೊತ್ತಾಗಿದ್ದು
ಅಷ್ಟು ಬೇಗನೆ ಏಳಲು
ಅವನಿಟ್ಟುಕೊಂಡಿದ್ದಾನೆ
ಹಕ್ಕಿಗಳ ಇಂಚರದ ಅಲರಾಮು.


ಇರುಳು
ಪೂರ್ತಿ
ಇರಬಯಸಿ,
ಆಗಸದೂರಿಂದ
ಬಂದ
ಸೂರ್ಯನೆಂಬ
ಅತಿಥಿಯನು 
ಮನೆಯೊಳಗೆ
ಕರೆತರಲು,
ಕದವ ತೆರೆದು
ಬಂದನೇ
ಈ ಕಡಲ 
ಮನೆಯ
ಯಜಮಾನ.

Thursday, 16 February, 2012
ಮನೆಯಂತೆಯೇ ನನ್ನ ಮನವೂ ಖಾಲಿಯಾಗಿಹುದು
ಅವನಿರದ ಮನೆಯು ಇಂದೇಕೋ ಬೇಡವಾಗಿಹುದು.

ಬರಡು ಭೂಮಿಯಲಿ ಕುಳಿತು ನಾ ಕಾಯತೊಡಗಿದ್ದೆ
ಆ ಕಾರ್ಮುಗಿಲಂತೆಯೆ ಕಣ್ಣೀರ ಹಿಡಿದಿಟ್ಟುಕೊಂಡಿದ್ದೆ

ನಾನರಿಯೆ ಅದ್ಯಾವ ಕಳ್ಳದಾರಿಯಲಿ ಹೊರಬಂತೆನ್ನ ಕಣ್ಣೀರು
ಒಂದೊಂದಾಗಿ ಸೇರಿ ಮಾಡಿತೇ ಈ ಬರಡು ಭೂಮಿಯನೇ ಹಸಿರು

ಸಂತೈಸಲು ಬಾರದಿರಿ ನನ್ನ, ಅವ ಬಾರದೆ ನಾನೆಲ್ಲಿಗೂ ಬರಲಾರೆ
ಕಾಯುವೆನಿಲ್ಲೇ, ಅವನಿಗಲ್ಲದೆ ಮತ್ತಾರಿಗೂ ನನ್ನೀ ಮುಖವ ತೋರಲಾರೆTuesday, 14 February, 2012

ಅಪ್ಸರೆ
ಕಣ್ ಮುಚ್ಚಿ ಅವಳ
ರೂಪವ ನೋಡಿದರೆ
ಸಂಶಯವೇ ಇಲ್ಲ
ಚೆಲುವಿನಲಿ ನನ್ನವಳು ಅಪ್ಸರೆ
ಈ ರೀತಿ ಹೇಳೋಕೆ
ಇನ್ನೂ ಒಂದು ಕಾರಣವಿದೆ
ಅದೇನು ಗೊತ್ತಾ..
ಕಾಣಲು ಸಿಗೋದೆ ಇಲ್ಲ ಆಕೆ
ನಾನು ಕಣ್ ತೆರೆದರೆ.

ನಮ್ಮ ಕಾಲೇಜಿನಲಿ
ಕೆಲವು ಹುಡುಗರ
ಹೃದಯದಲಿ ಮನೆಮಾಡಿಹ
ಅವಳು ನಿಜಕೂ ಸುರಸುಂದರಿ;
ಪ್ರೇಮಿಗಳ ದಿನ ಇಂದೆಂದು
ಎಲ್ಲ ಹುಡುಗರು ಕೆಂಪು ಗುಲಾಬಿಯ
ಕೊಡಲು ಅವಳ ಬಳಿ ಹೋದರೆ
ಪಡಕೊಂಡು ನಕ್ಕು ಬಿಡಬೇಕೇ ಆ ವಯ್ಯಾರಿ;
ಮತ್ತೆ ಕ್ಷಣ ಮಾತ್ರದಲಿ ಅಲ್ಲಿರುತ್ತಿರಲಿಲ್ಲ
ತಪ್ಪಿಸಿಕೊಂಡು ಆಗುತ್ತಲಿದ್ದಳವಳು
ಅವಳಪ್ಪನ ಅಂಗಡಿ ಕಡೆ ಪರಾರಿ;
ಸೇಫ್ಟಿಗೆ ಅಂತ ತಿಳ್ಕೋಬೇಡಿ..
ಇದು ಪಕ್ಕಾ ಬಿಸಿನೆಸ್ಸುರೀ
ಹೇಗೆ ಅಂತೀರಾ... 
ಅವಳಪ್ಪ ಗುಲಾಬಿ ಹೂವಿನ ವ್ಯಾಪಾರಿ.

ಗುಲಾಬಿಯ ಮಾತುಗಳು..
ಇಂದೇಕೋ ಮಾಲಿ ಬಲು ಬೇಗನೆ ಬಂದ
ಮಾಲೀಕನೇ ಕಳುಹಿಸಿದನಂತೆ.
ಕಿತ್ತು ತನ್ನಿ ನನ್ನ ಮತ್ತು ನನ್ನ ಬಳಗವ ಎಂದನಂತೆ.
ಹೆತ್ತೊಡಲಿಂದ ಬೇರ್ಪಡಿಸುವುದು ಯಾಕೆ?
ನಾ ಕೇಳಿದ ಪ್ರಶ್ನೆಗೆ ಮಾಲಿ ನಕ್ಕು ನುಡಿದ
"ಇಂದು ಪ್ರೇಮಿಗಳ ದಿನ ತಾನೆ"
"ನಿನಗೆ ಬಹು ಬೇಡಿಕೆ ಮಾರುಕಟ್ಟೆಯಲಿ"
ನಾ ಮನದೊಳಗೇ ಅತ್ತೆ..
ಪ್ರೇಮಿಗಳ ದಿನದಲ್ಲಿ ನನಗೇಕೆ ಈ ಶಿಕ್ಷೆ?
ನನ್ನ ಮೈ ಬಣ್ಣ ಅವರ ಭಾವನೆಯ ಬಿಂಬಿಸುವುದಂತೆ.
ಅವರೊಳಗೆ ನನ್ನ ವಿನಿಮಯ ಪ್ರೇಮದ ಸಂಕೇತವಂತೆ.
ಯಾಕೆ ಅವರಿಗೇನು ಮಾತು ಬಾರದೆ..?
ನಾನೇಕೆ ಬಲಿಯಾಗಬೇಕು ಇವರ ಪ್ರೇಮಕ್ಕೆ..
ಕಾಲ ಕಸವಾಗುವುದಷ್ಟೇ..ಯುವತಿಯ ಮುಡಿಯಲ್ಲಿ ನೆಲೆಯಿಲ್ಲ,
ಹಿಂದಿನ ಕಾಲದಂತಲ್ಲ ಯುವತಿಯರಿಗಿಂದು ನನ್ನ ಮುಡಿವ ಮನಸಿಲ್ಲ.
ಪ್ರಿಯಕರನ ತೋಳ್ತೆಕ್ಕೆಯ ಸೇರಿದೊಡನೆ ಕಸದ ತೊಟ್ತಿಗೆ ನನ್ನ ಎಸೆವರಲ್ಲ.
ಭಗವಂತನ ಪಾದದಲಿ ನೆಲೆಯ ಕಾಣುವ ನನ್ನ ಬಯಕೆಯ
ಅರ್ಥವಿರದ ಆಚರಣೆಯ ನೆಪದಲ್ಲಿ ನುಚ್ಚು ನೂರುಗೊಳಿಸಿದರಲ್ಲ.

Saturday, 11 February, 2012


ನಿನ್ನೆ ರಾತ್ರಿಯಿಡೀ
ಪ್ರೇಯಸಿ "ವಸುಧೆ"ಯ
ಕಾಣದೆ ಚಡಪಡಿಸುತ್ತಿದ್ದ
ದಿನಕರನಿಂದು
ಮುಂಜಾವಿನ
ಹಕ್ಕಿಗಳ
ಇಂಚರವನಾಲಿಸಿದ
ಕೂಡಲೇ ಓಡೋಡಿ
ಮುಡಣದ ದಿಬ್ಬವನೇರಿ
ನೀಲಾಕಾಶದೆಡೆ ಹಾರಿ
ಮೋಡದ ಮರೆಯಲ್ಲಿ
ಪ್ರೇಯಸಿಯ ನೋಡಿದರೆ
ಅವನಿಗೆ ಕಂಡದ್ದು
ಬಿಳಿಯ ಮಂಜು
ಮತ್ತು ಭುವಿಯ
ಗಾಢ ಆಲಿಂಗನ.


Friday, 10 February, 2012ತಾಯಿಯ ರೋದನ

ಯಾರಂದವರು ಇವಳು(ಭೂತಾಯಿ)
ಸಹನಾಮೂರ್ತಿ ಎಂದು?
ಕರುಣಾಮಯಿ ಎಂದು?
ಮಮತೆಯ ತೊಟ್ಟಿಲೆಂದು?
ನವಮಾಸ ಹೊತ್ತು ಹೆತ್ತು
ಇವಳ ಮಡಿಲಲಿ ನನ್ನ ಕಂದಮ್ಮಗಳ
ಬಿಟ್ಟಿದ್ದೇ ತಪ್ಪಾಯಿತೇನೋ...
ಅವುಗಳ ಬೆಚ್ಚಗಿನ ಸ್ಪರ್ಶ
ಇವಳ ಅಂತರಂಗದಲಿ
ಮಮಕಾರವನೆಬ್ಬಿಸಿದವೇನೋ..
ತಾ ಹೆರದ ಮಕ್ಕಳ ತುಂಟಾಟ
ಇವಳೊಳಗಿನ ಹೊಟ್ಟೆಕಿಚ್ಚನು
ಹೆಚ್ಚಿಸಿದವೇನೋ..
ಅದಕಾಗಿ ಸಣ್ಣಗೆ ನಡುಗಿ
ಈ ಕಂದಮ್ಮಗಳ ಬರಸೆಳೆದಳೇನೋ..
ನನ್ನ ಗರ್ಭದೊಳಗಿಂದ ಬಂದ
ಮುತ್ತು ರತ್ನದಂತಾ ಕೂಸುಗಳ
ತನ್ನ ಗರ್ಭದೊಳಗಿರಿಸಿಕೊಂಡಳೇನೋ..

Tuesday, 7 February, 2012ಹಸಿದ ಹೊಟ್ಟೆಗೆ ಈ ಕ್ಷಣದಲಿ ಬೇಕೆನಿಸಿದೆ ತಿನಿಸು 
ತೆರೆದು ಬಾಯಿಯನು ಕಾಣುತಿಹೆವು ಆಹಾರದ ಕನಸು
ಬಾ ತಾಯೆ, ನೀ ಬಂದು ನಮಗೇನನ್ನಾದರೂ ಉಣಿಸು
ನಮ್ಮುದರದೊಳಗಿನ ಹಸಿವೆಯುರಿಯ ನೀನೀಗ ತಣಿಸು


ರಾಜ್ಯದ ಮಂತ್ರಿಯಾಗಿ
ಗಂಭೀರವಾಗಿ ಚಿಂತಿಸಿ
ನೋಡಬೇಕಿತ್ತು ಅಭಿವೃದ್ಧಿಯ
"ನೀಲ ನಕಾಶೆ"
ಅದರೆ ನಮ್ಮ ರಾಜ್ಯದ
ಇಬ್ಬರು ಮಂತ್ರಿಗಳಿಗೆ
ವಿಧಾನಸೌಧದೊಳಗೂ
"ನೀಲಿ ಚಿತ್ರದ" ನಶೆಮೂಡಣದ ದಿಬ್ಬವನು
ನೋಡದೆಯೆ ಎಡವಿ ಬಿದ್ದ
ಕೆಂಪಾದ ಸೂರ್ಯನ
ದೇಹದೊಳಗಿಂದ
ಹರಿದು ಬಂದ
ಬಿಳಿಯ ರಕ್ತ ಕಣಗಳು
ಆಗಸದ ನೆಲದ
ಮೇಲೆಲ್ಲಾ ಬಿದ್ದು
ಜಗಕೆ ಬೆಳಕಾಯಿತೇ...?

ಅವಳೊಂದಿಗೆ ಕಳೆದ
ಮಧುರ ಕ್ಷಣಗಳನ್ನೆಲ್ಲಾ
ನಾ ಅಳಿಸಿ ಹಾಕುತ್ತಿದ್ದೆ;
ಮತ್ತೆ ಮತ್ತೆ ಬಿಡದೆ
ನೆನಪಾಗಿ ಬಂದು
ಅವಳು ನನ್ನ ಅಳಿಸುತ್ತಿದ್ದಳು.

ನಾ ಮಾಡುತಿದ್ದ ಕೆಲಸದಿಂದ
ನನ್ನ ಮನದ ಹಾಳೆ
ಹರಿದು ಹೋಯಿತು
ಅವಳು ಮಾಡಿದ ಕೆಲಸದಿಂದ
ನನ್ನ ಕಣ್ಣಿಂದ ಕಣ್ಣೀರು
ಹರಿದು ಹೋಯಿತು.

ಕರೆಯುತಿಹಳು ಮೆಲುದನಿಯಲಿ ನಿದಿರಾದೇವಿ
ಬಾ ನೀಯೆನ್ನ ಬಳಿ ಇದು ಮಲಗುವಾ ಹೊತ್ತು
ಕೈಗಳನಗಲಿಸಿ ಆಲಿಂಗನಕೆ ಕರೆದು
ಕಂಗಳಿಗೆ ಕೊಡುವಳು ನಿದಿರೆಯ ಮುತ್ತು

ಪದಗಳೇಕೋ ಮುನಿಸಿಕೊಂಡಿವೆ
ಹೊರಬರದೇ ಒಳಗೆಲ್ಲೋ ಅವಿತುಕೊಂಡಿವೆ
ಕಲ್ಪನೆಯ ಕಡಲಲ್ಲಿ
ಕವಿತೆಗಳೆನುವ ಅಲೆಗಳು
ನಿರಂತರವಾಗಿ ಕಾಗದದ
ದಡಕೆ ಬರಬಹುದೆಂದುಕೊಂಡಿದ್ದೆ,
ಕಣ್ ತೆರೆದು ನೋಡಿದರೆ
ನನ್ನೊಳಗಿದ್ದುದು ಪದಗಳ ಸಣ್ಣಕೊಳ
ಕವಿತೆಯ ದಾಹದಲಿ ಬಂದವರಿಗೆ
ಗುಟುಕು ನೀರನ್ನಷ್ಟೇ ಕೊಟ್ಟಿರುವೆ.
ತೇವವಿರದೆ ಬಿರುಕು ಬಿಟ್ಟ
ನೆಲವನೀಗ ಕಂಡೊಡನೆ
ಸುಮ್ಮನೆ ಕೈಯ ಕಟ್ಟಿ ಕುಳಿತಿರುವೆ,
ನನ್ನಳುವಿನಿಂದಲೇ ಬರಡು
ಭೂಮಿಯ ಹಸನಾಗಿಸಬೇಕೆಂದಿರುವೆ.

Friday, 3 February, 2012ಪ್ರತಿ ದಿನವು ದುಡಿದು ದಣಿದಿದ್ದರೂ
ಕಡಲೆನುವ ಪ್ರಿಯತಮೆಯ ಬಳಿ ಸಾಗಲು
ನಿನ್ನಾರವಿಂದವು ನಾಚಿಕೆಯಲಿ ಕೆಂಪಾಗುವುದೇಕೆ?
ಪ್ರತಿದಿನವೂ ಅವಳ ಕೆನ್ನೆಗೆ ಮುತ್ತಿಡುವ ಹೊತ್ತಿಗೆ
ಅವಳ ತನುವಿಗೆ ಕನಕಾಬಿಷೇಕವನೇ ಮಾಡುವೆಯಲ್ಲ
ಇಂತಹಾ ಪ್ರೇಮದ ಪರಾಕಾಷ್ಠೆಯು ಜಗಕೆ ಕಾಣುತ್ತಿಲ್ಲವೇಕೆ?


"ಸಿಗರೇಟು" ಎನುವವಳು ಅದೆಷ್ಟು ಕೆಟ್ಟವಳಾದರೇನು
ಅವಳುದರದಿಂದಲೇ ಹೊರ ಬಂದವನು ನಾನು
ಯಾರದರೂ ಬಂದು ಅವಳ ಚುಂಬಿಸಿದರೆ ಸುಮ್ಮನಿರುವೆನೇ
ಅವರ ತನುವಿನೊಳ ಹೊಕ್ಕು ಮೆಲ್ಲನೆ ಪ್ರಾಣವನೆ ಕಿತ್ತೊಗೆಯುವೆನು.

Wednesday, 1 February, 2012


ಪೇಟೆಯ ಮದ್ಯದಲ್ಲಿ
"ಸುಲಭ್ ಶೌಚಾಲಯ"ವ
ಕಂಡೊಡನೆ
ಹೊಟ್ಟೆಯೊಳಗಾಗುತ್ತಿದ್ದ
ತಳಮಳವ
ನೀಗಿಸಿಕೊಳ್ಳುವುದರಲ್ಲಿ
ನನಗೇನೂ
ಸಂಶಯವಿರಲಿಲ್ಲ;
ಮನಸೊಳಗೆ ಅಂದುಕೊಂಡೆ
ಆಹಾ ಕೆಲಸ
"ಸುಲಭ"ವಾಯಿತಲ್ಲ;
ಆದರೆ ಹಿಡಿದ
ಕೆಲಸವ ಮುಗಿಸೋ
ಮುನ್ನವೇ,
ನಿಂತು ಹೋದ ನೀರನ್ನು
ಕಂಡಾಗ ಮನಸು
ಅತ್ತು ಹೇಳತೊಡಗಿತು
ಇನ್ನು ಇಲ್ಲಿಂದ
ಹೊರ ಹೋಗೋದು
ಅಷ್ಟೊಂದು "ಸುಲಭ"ವಲ್ಲ.