Saturday, 25 January, 2014

ಹವ್ಯಾಸ...ನನ್ನ ಮನದರಮನೆಗೆ
ಆಗಾಗ ಬರುವ
ನನ್ನವಳ ನೆನಪಿಗೆ..
ನನ್ನ ಕಣ್ಣ
ಪಂಜರದಲಿನ
ಕಣ್ಣೀರ ಖಗಗಳನು,
ಬಂಧನದಿಂದ
ಮುಕ್ತಗೊಳಿಸುವುದೇ...
ಬಲು ಮೆಚ್ಚಿನ
ಹವ್ಯಾಸ....

ರಾಜಾಜ್ಞೆ...ಪ್ರಿಯೆ, ನನ್ನ ಹೃದಯದ
ರಾಜ ಸಿಂಹಾಸನದಲಿ
ನೀನೇ ಕುಳಿತಿರುವೆ...
ಎಂದು ಅವಳ ಬಳಿ
ಹೇಳಲೇಬಾರದಿತ್ತು..
ಈಗ ಮಾತು ಮಾತಿಗೂ
ಇದು ರಾಜಾಜ್ಞೆ...
ಪಾಲಿಸಲೇಬೇಕು
ಅನ್ನುತ್ತಿದ್ದಾಳೆ.

ಪ್ರಬುದ್ಧ ಪ್ರಶ್ನೆ...?" ಆಸೆ "ಯ
ತೊರೆಯುವವನೇ
ಬುದ್ಧನಾಗಲು
ಸಾಧ್ಯವಂತೆ...
ಹಾಗಾದರೆ
ಬುದ್ಧನಾಗುವ
" ಆಸೆ "
ಹೊತ್ತವ ಹೇಗೆ
ಬುದ್ಧನಾದಾನು...?
ಎನುವುದೇ
ನನ್ನನ್ನಿಕ್ಕಟ್ಟಿಗೆ
ಸಿಲುಕಿಸಿರುವ
ಪ್ರಬುದ್ಧ ಪ್ರಶ್ನೆ...?

ಮಾತುನಸುಕಿನ
ಮುಂಜಾವಿನಲೇ
ಬಂದು ಬಿಡುವೆ
ಎಂದು ವಸುಧೆಗಿತ್ತ
ತನ್ನ ಮಾತನ್ನ
ಎಂದಿಗೂ ರವಿ
ಮುರಿಯುವುದೇ ಇಲ್ಲ

ಜಲಪಾತನನ್ನಯಾ
ಕಣ್ಣಗುಡ್ಡೆಯಲಿದೆ;
ಅವಳ ಹೆಸರಿನ
ಧುಮ್ಮಿಕ್ಕುವ
ದೊಡ್ಡ ಜಲಪಾತ.
ಆದರಿನ್ನೂ ಅದು
ಜನರ ಕಣ್ಣಿಗೆ
ಬಿದ್ದೇ ಇಲ್ಲ.

ಚಿತ್ತಾರಚಂದ್ರ ಬಿಡಿಸಿದ್ದ
ಬಿಳಿ ಚುಕ್ಕಿಗಳ
ಚಿತ್ರವನಳಿಸಿ;
ಆಗಸದ ತುಂಬೆಲ್ಲಾ
ಕ್ಷಣಕೊಂದರಂತೆ
ವರ್ಣರಂಜಿತ
ಚಿತ್ತಾರಗಳ
ಬಿಡಿಸತೊಡಗಿದ
ನೇಸರ,
ಅಬ್ಬಾ....
ಪ್ರತಿಯೊಂದು
ಚಿತ್ತಾರವೂ
ಅದೆಷ್ಟು ಸುಂದರ.

ಬರಹ...

ನನ್ನ ಹೃದಯದಲಿ
ಸೊಗಸಾಗಿ
ಮತ್ತೆ ಮತ್ತೆ ನಿನ್ನ ಹೆಸರ
ಬರೆಯುತ್ತಲಿದ್ದೆ...
ಆದರೇನು ಮಾಡಲಿ..
ಅದಾಗಲೇ ಬ್ರಹ್ಮ
ಅವಳ ಹೆಸರ ಇನ್ನೊಬ್ಬನ
ಹಣೆಯಲ್ಲಿ ಬರೆದು ಬಿಟ್ಟಿದ್ದ.

ಅಂಚೆಪೆಟ್ಟಿಗೆಅವಳ ಹೆಸರಿಗೆ
ಬರೆದ ಸಾವಿರ
ಪ್ರೇಮಪತ್ರಗಳಿಗೆಲ್ಲಾ...
ನನ್ನ ಮನೆಯ
ಕಸದ ಬುಟ್ಟಿಯೇ
ಅಂಚೆ ಪೆಟ್ಟಿಗೆ.

ವ್ಯತ್ಯಾಸ...

ಪುಟ್ಟ ಮಗುವಿರುವಾಗ
ಒಂದು ಚಾಕಲೇಟಿಗಾಗಿ
ಅಪ್ಪನ ಸುತ್ತ
ಸುತ್ತು ಹಾಕುತ್ತಿದ್ದ
ಮಗಳಿಂದು...
ಇನಿಯನ ಜೊತೆ
ಸರಸದಲಿ
ಮಾತನಾಡಲೋಸುಗ..
ಅಪ್ಪನಿಗೆ ಚಾಕಲೇಟೊಂದ
ಕೊಟ್ಟು,
ಪಾರ್ಕಿನ ಸುತ್ತ
ಓಡಿಸುತ್ತಿದ್ದಾಳೆ.

---ಕೆ.ಗುರುಪ್ರಸಾದ್
(ಜಾಹೀರಾತೊಂದನ್ನು ನೋಡಿದಾಗ ಅನಿಸಿದ್ದು...)

ಉತ್ತರಾಯಣ...

ಸಪ್ತಾಶ್ವದ
ರಥದ ಪಥವ
ತಿರುಗಿಸುವನಂತೆ
ಅರುಣ...
ಇನ್ನು
ನೇಸರನದು
ಉತ್ತರದೆಡೆಗೆ
ಪಯಣ.

ಕೂಸುನನ್ನ ಕಣ್
ರೆಪ್ಪೆಗಳ
ಮೈಥುನಕ್ಕೆ
ಹುಟ್ಟುವ
ಕೂಸು;
ನನ್ನವಳ
ಕನಸು.

ಏಕಾಂತ...ಪ್ರಿಯೇ.."ಏಕಾಂತ"ದಲಿ
ನಿನ್ನ ನೆನಪು ಬಂದು
ಕಣ್ಣೀರು ಹರಿದು ಹೋಗಿ
ಕಂಗಳು ಸ್ವಚ್ಛವಾಗುತ್ತದೆಯೋ
ಇಲ್ಲವೋ ನಾ ಕಾಣೆ
ಆದರೆ
.
.
.
.
.
.
ಮೂಗಂತೂ ಸ್ವಚ್ಛವಾಗುತ್ತದೆ.

ಕನಸು

ಕಂಡ
ಸೊಗಸಾದ
ಕನಸುಗಳನೆಲ್ಲಾ
ಕಿತ್ತುಕೊಳಲು
ಬಂದೇಬಿಟ್ಟ
ಭಾಸ್ಕರ

ಕಚಗುಳಿ

ರವಿಯು ತಾ,
ತನ್ನ ಬೆಳ್ಳಿಕಿರಣದ
ಕೋಟಿ ಕೈಗಳಿಂದ
ಗಿಡಗಳಿಗಿಡುತಿಹ
ಕಚಗುಳಿಯ
ಪರಿಣಾಮ,
ಅವುಗಳೆಲ್ಲಾ
"ಹೂ" ನಗೆಯ
ಬೀರುತಿದೆ.

ಖಾಲಿ...

ಅವಳು...
ಅವಳೆನುತ
ಕಲ್ಪಿಸಿ
ಏನೇನೋ
ಬರೆಯೋದು
ನನ್ನದೊಂದು
ಸಣ್ಣ ಖಯಾಲಿ;
ಆದರೆ ವಾಸ್ತವ...
ಅವಳಿಗಾಗಿಹ
ನನ್ನೀ ಹೃದಯ
ಸಿಂಹಾಸನ
ಮೊದಲಿನಿಂದಲೂ
ಖಾಲಿ ಖಾಲಿ.

ನಗುಅವಳ ನಗುವನು
ಸರಿಸಮನಾದ
ಪದಪುಂಜವಾಗಿಸುವಲ್ಲಿ
ನಾನೇಕೆ
ಪದೇ ಪದೇ
ಸೋಲುತ್ತೇನೆ..?

ಹಳತು-ಹೊಸತು


ಹಳೆಯ ಸವಿನೆನಪು,
ಹೊಸ ವರುಷಕೆ
ಹಳೆಯ ಕ್ಯಾಲೆಂಡರಿನ
ಹಾಳೆಗಳೇ...
ನನ್ನ ನೋಟ್ ಬುಕ್ಕಿನ
ಹೊಸ ಅಂಗಿ.

ಭಾಸ್ಕರಜಗಕೆ
ಹಸಿರು,
ಜನಕೆ
ಹಸಿವಿನ
ಅರಿವು ,
ತಂದಿತ್ತದ್ದು
ನೀನೇ..

ನೆನಪುಮುಳುಗಿ ಹೋದ
ನೇಸರನ ಸಾವಿನ
ನೋವನು ನುಂಗಿ,
ಅವನ ಬೆಳಕಿನ
ನೆನಪನೇ
ಬೆಳದಿಂಗಳಾಗಿಸಿ
ಜಗದೆಲ್ಲೆಡೆ
ಹಂಚತೊಡಗಿದ
ಚಂದಿರ

ಹೀಗೇಕೆ...?ಅವಳು
ನಕ್ಕಾಗಲೆಲ್ಲಾ,
ನನ್ನ
ಮುಚ್ಚಿರುವ
ಹೃದಯದ
ಕದವನು
ಯಾರೋ
ತಟ್ಟಿದಂಥಾ
ಅನುಭವ,
ನನಗಾವುದು
ಯಾಕೋ...

ಚೂರಾದ ಹೃದಯ

ನನ್ನೀ ಹೃದಯವನು
ಚೂರುಚೂರಾಗುವಂತೆ
ಒಡೆದು, ಹಾಗೆಯೇ
ಹೊರಟು ಹೋದಿಯಲ್ಲೇ...
ಕಲ್ಲು ಹೃದಯದವಳೇ
ಎಂದು ನಾ ಕೂಗಿದೊಡನೆ
ತಿರುಗಿ ಬಂದ ಆಕೆ
ಕೊಟ್ಟಿದ್ದು...
.
.
.
.
.
.
.
ಐದು ರೂಪಾಯಿಯ
ಫೆವಿಕ್ವಿಕ್.

ಹೆಜ್ಜೆ....

ಅವಳು
ನನ್ನೆಡೆಗಿಟ್ಟ
ಮೊದಲ
ಹೆಜ್ಜೆಯೇ
ಗುರುತೇ
ನನ್ನೆದೆಯ
ಮನೆಯ
ಅಂಗಳದ
ರಂಗವಲ್ಲಿ

ಸ್ವಾಮಿ ವಿವೇಕ ಆನಂದನೂರೈವತ್ತು ವರುಷಗಳ ಹಿಂದೊಮ್ಮೆ
ಭಾರತದಲುದಯವಾಗಿತ್ತು
ದಿವ್ಯತೇಜವೊಂದು...
ಭರತ ಮಾತೆಯ ಮುಖದ
ವಿಷಾದದಳುವ ನಿಲ್ಲಿಸಲು...
ರಾಮಕೃಷ್ಣರ ಗರಡಿಯಲಿ
ಪಳಗಿ ಸಜ್ಜಾಗಿ,
ಹೆಜ್ಜೆಯಿಟ್ಟರು ವಿದೇಶದೆಡೆಗೆ...
ಸನಾತನ ಧರ್ಮದ ಸುಗಂಧವ
ಜಗದಗಲದಿ ಪಸರಿಸಲು...
ಸಹೋದರತೆಯ ಭಾವ ಹರಡಿ
ಕರಾಡತನವ ಸೂರೆಗೈದು
"ವಿವೇಕವೂ ಆನಂದವೂ"
ಆಗಿಬಿಟ್ಟರು... ಇಡಿಯ ವಿಶ್ವಕೆ...
ಮರಳಿ ಭಾರತಕೆ ಆಡಿಯಿಟ್ಟು
ಭರತ ಮಾತೆಯ ಮಕ್ಕಳಲಿನ
ಜಡವ ತೊಳೆಯತೊಡಗಿದರು...
ಭಾರತಾಂಬೆಯ ಪಾದದಡಿಯಲಿ
ಕುಳಿತು ಅವಳನೇ ತಪಗೈದು
ಧನ್ಯರಾದರು....
ಅವಳ ದಿವ್ಯದರ್ಶನವ ಪಡೆದು,
"ಏಳಿ ಎದ್ದೇಳಿ" ಎನುವ ರಣಘೋಷ
ಅವರಿಲ್ಲವಾದರೂ ಮೊಳಗುತಿದೆ ಇಂದಿಗೂ
ಆದರೂ ನಮ್ಮಲ್ಲಿ ಮಲಗಿರುವವರಿಹರು...
ಮಾತೃಧರ್ಮದ ರಕ್ಷಣೆಯ ಮರೆತು...
ಗುರಿಯನೆಂತು ತಲುಪುವುದು...?
ಎಚ್ಚರವಾಗುವ ಬಯಕೆಯೇ ಇಲ್ಲದಿರೆ...?
ಪ್ರತಿ ಮನದ ವಿವೇಕವದು ಜಾಗೃತವಾಗಿ
ತಾಯಿ ಭಾರತಿಯ ಮೊಗದಲಾನಂದ
ಕಾಣಲು ನಾವೆಲ್ಲರೂ "ವಿವೇಕ"ರಂತಾಗಲೇ ಬೇಕು
ಉತ್ಸಾಹದುಕ್ಕಿನ ಮಾಂಸ ಖಂಡಗಳ
ಬೆಳೆಸಿಕೊಳ್ಳೋಣ ಭಾರತೀಯರೇ...
ದುಷ್ಟಸಂಹಾರಕೆ ಕೈಬೆರಳ ಮುಷ್ಟಿಯಾಗಿಸೋಣ..
ಬನ್ನಿ ದೇಶಭಕ್ತ ಬಾಂಧವರೇ...ಎದ್ದೇಳೋಣ ಬನ್ನಿ...
ಭವ್ಯ ಭಾರತ ನಿರ್ಮಾಣವೇ ನಮ್ಮ ಏಕೈಕ ಗುರಿಯೆನ್ನಿ..

---ಕೆ.ಗುರುಪ್ರಸಾದ್

ಸಿಡಿಲ ಸಂತ ವಿವೇಕಾನಂದರ ಜನ್ಮದಿನದ ಹಾರ್ದಿಕ ಶುಭಾಶಯಗಳು.... ಅವರ ವ್ಯಕ್ತಿತ್ವವನು ಪದಗಳಲಿ ಬಂಧಿಸಿಡಲು ಸಾಧ್ಯವಿಲ್ಲ ಆದರೂ ಇದು ನನ್ನ ಪಾಲಿನ ಸಣ್ಣ ನುಡಿ ನಮನ