Saturday, 15 October 2011


ಒಂದು ಕಣ್ಣೀರ ಹನಿ

ಜಗದ ತೀಕ್ಷ್ಣ ಕಂಗಳಿಗೆ ಕಾಣದಂತೆ
ಕದ್ದು ಮುಚ್ಚಿಟ್ಟಿದ್ದ ನನ್ನ 
ಒಡಲಾಳದ ನೋವಿನ ಕತೆಯ
ಸಾರಿ ಹೇಳಿತೆ..?
ನನ್ನ ಕಣ್ಣಿನಾ ಹೊಸ್ತಿಲನು ದಾಟಿ 
ಹೊರಗೋಡಿ ಬಂದ
ಒಂದು ಸಣ್ಣ ಕಣ್ಣೀರ ಹನಿ.

ಕುತೂಹಲದಿ ನೋಡುವ ಜನರ
ಮುಂದೆ ಅಂಕದ ಪರದೆಯನೆಳೆದು
ಒಳಗೊಳಗೆ ನಡೆದಿತ್ತು;
ಮನದ ವಿರಹದುರಿಯ ನಾಟಕವು
ಈ ನಗುವಿನಂಕದ ಪರದೆಯನೆ
ಸರಿಸಿಬಿಟ್ಟಿತೇ..?
ನನ್ನ ಕಣ್ಣಂಚಿನಿಂದ ಹೊರಗೋಡಿ ಬಂದ
ಒಂದು ಸಣ್ಣ ಕಣ್ಣೀರ ಹನಿ.

ಸೂರ್ಯನಂತೆಯೇ ಅಗಾಧವಾದ
ನೋವಿನಾ ಬೆಂಕಿಯುಂಡೆಗಳನೊಳಗಿರಿಸಿ
ಭುವಿಗೆ ಚೂರೂ ಕಾಣದಂತೆ
ನಲಿವಿನಾ ಮೋಡಗಳ ಮುಂದಿರಿಸಿದ್ದೆ;
ಗಾಳಿಯಾಗಿ ಬಂದು ಈ ಮೋಡವನೇ
ದೂರ ಕೊಂಡೊಯ್ದು, ಧಗಧಗನೆ
ಉರಿವ ದೇಹವನು ತೋರಿಸಿಬಿಟ್ಟಿತೇ..?
ನನ್ನ ಕಣ್ಣೊಳಗೆ ಸೆರೆಯಾಳಾಗಿದ್ದ;
ಕಣ್ ರೆಪ್ಪೆಯ ಕೂದಲಿನ ಕಂಬಿಗಳನೇ
ಕಿತ್ತು ಹೊರಗೋಡಿ ಬಂದ
ಒಂದು ಸಣ್ಣ ಕಣ್ಣೀರ ಹನಿ.

No comments:

Post a Comment