Friday 14 December, 2012

ಚಿಕ್ಕಪ್ಪಾ, ನೀವು ಮಾಡಿದ್ದು ಎಷ್ಟು ಸರಿ....??

ಬರುವ ತಿಂಗಳಿನಲಿ ಊರಿಗೆ ಬರುವೆನೆಂದು ಮೊನ್ನೆ ಹೋದವರು
ಇನ್ನೆಂದಿಗೂ ಹಿಂತಿರುಗಿ ಬರಲಾಗದೂರಿಗೆ ಹೊರಟು ಹೋದದ್ದು,..ಎಷ್ಟು ಸರಿ..?

ಬಲುಬೇಗನೆ ಎದ್ದು ಬೆಳಗಾತ ನಿದ್ದೆ ಬರುವುದಿಲ್ಲ ಎನುತಿದ್ದವರು
ಸೂರ್ಯ ನಡು ನೆತ್ತಿಗೆ ಬಂದರೂ, ಮನೆಯೊಳಗೆ ಹಾಗೇ ಮಲಗಿದ್ದುದು ... ಎಷ್ಟು ಸರಿ..?

ಹೇಳದೆ ಹೋದರೂ, ಮಕ್ಕಳೊಳಗಿನ ನೋವೆನಗೆ ಕಾಣಿಸುವುದೆನುತಿದ್ದವರು
ಅಗಲಿಕೆಯ ನೋವಿನಲಿ ಬೊಬ್ಬಿಡುತ್ತಿದ್ದರೂ ಕಾಣಿಸದವರಂತೆ ಸುಮ್ಮನಿದ್ದುದು... ಎಷ್ಟು ಸರಿ..?


ಮೊದಲು ಸುರಿದ ಭಾಂದವರ ಕಣ್ಣೀರು, ಮತ್ತೆ ಸ್ನಾನಕಾಗಿ ಹೊಯ್ದ ಬಿಸಿ ನೀರು
ಮೈಯ ತಾಕಿದಾಗಲೂ ಎಚ್ಚರಗೊಳ್ಳದೇ ಸುಮ್ಮನೆ ಮಲಗಿದ್ದುದು... ಎಷ್ಟು ಸರಿ...?

ಹೆಗಲ ಮೇಲೆ ಹೊತ್ತೊಯ್ದು, ರಾಶಿ ಕಟ್ಟಿಗೆಯ ಮಂಚದಲಿ ಮಲಗಿಸಿದಾಗ
ಮೆತ್ತಗಿರದ ಕಟ್ಟಿಗೆಯು ಬೆನ್ನ ಚುಚ್ಚುತಿದೆಯೆಂದು ಏಳದಿದ್ದುದು ... ಎಷ್ಟು ಸರಿ...?

ನಿಮ್ಮ ಮಗ ಕಣ್ಣ ಕೆಂಪಗಾಗಿಸಿ, ಒಳಗೆ ಹೊತ್ತಿ ಉರಿಯುತಿದ್ದ ದುಃಖದ ಉರಿಯನ್ನೆ ಕೊಳ್ಳಿಯಾಗಿಸಿದಾಗಲೂ
ತನುವು ಉರಿಯುತಿದೆ ಎಂದು ಮೈಕೊಡವಿ ಎದ್ದು ಕೆಳಗಿಳಿಯದಿದ್ದುದು.. ಎಷ್ಟು ಸರಿ...?

ಭವಬಂಧನದ ಬೇಡಿಗಳನೆಲ್ಲಾ ಕಳಚಿ, ಹಾಯಾಗಿ ದೇವ ಸನ್ನಿಧಿಯ ಸೇರಿ
ಬರಿಯ ನೆನಪುಗಳ ಕತ್ತಲ ಕೋಣೆಯಲ್ಲಿ, ನಮ್ಮನ್ನೆಲ್ಲಾ ಬಂಧಿಸಿದಿರಲ್ಲಾ.. ನೀವು ಮಾಡಿದ್ದು ಎಷ್ಟು ಸರಿ...?

No comments:

Post a Comment