Sunday 3 June, 2012

ಬಾರೆಯಾ ಮಳೆಹನಿಯೇ...


ಸತಾಯಿಸುತಿರುವೆ ಏಕೆ ಕಾರ್ಮುಗಿಲೇ...
ಮಳೆಹನಿಯ ಒಂದೊಂದಾಗಿ ಸುರಿಸಬಾರದೇ...
ಸೂರ್ಯನ ಕಡುಕೋಪಕ್ಕೆ, ಉರಿ ಕಿರಣದ ತಾಪಕ್ಕೆ
ಒಳಗಾಗಿ ಬಿರುಕು ಬಿಟ್ಟಿದೆ ಎನ್ನೊಡಲು,
ಔಷಧದ ರೂಪದಲಿ ಹರಿಯಬಿಡಬಾರದೆ ನಿನ್ನೊಡಲ ಹನಿಯ,
ಬಿರುಕೆನುವ ಈ ಗಾಯದ ನೋವ ನಿವಾರಿಸಲು

ಈಗ ನಿನ್ನ ಗರ್ಭದೊಳಗಿದ್ದರೂ ಅವು ನಿನ್ನ ಸ್ವಂತ ಮಕ್ಕಳಲ್ಲ
ಆ ರವಿಯ ತೀಕ್ಷ್ಣ ಕಿರಣಗಳ ಸಹಾಯದಿಂದ
ನನ್ನ ಒಡಲಿಂದಲೇ ಸೆಳೆದೊಯ್ದ ಕೂಸು ತಾನೆ ಅವುಗಳು,
ಮತ್ತೆ ನನ್ನೆಡೆಗೆ ಕಳುಹಿಸಿ ಕೊಡುವೆಯೆಂಬ
ನಂಬಿಕೆಯಲಿ ಬಿಟ್ಟು ಕೊಟ್ಟಿದ್ದೆ ಆ ನೀರ ಹನಿಗಳ
ಈಗಲಾದರೂ ಮನಸು ಮಾಡು, ನನಗವುಗಳ ಹಿಂತಿರುಗಿಸಲು,

ನಾ ಹೆತ್ತ ಮನುಜನಾ ಹಾಹಾಕಾರದ ಕೂಗು ಕೇಳಿಸದಾಯಿತೇ..
ಪ್ರಾಣದ ಉಳಿವಿಗಾಗಿ ಚಡಪಡಿಸುತಿರುವುದು ಕಾಣದಾಯಿತೇ..
ಕಂಡರೂ ಕಾಣದಂತೆ ಗಾಳಿಯ ಜೊತೆ ಪರಾರಿಯಾಗಿ ಬಿಡಬೇಡ,
ಮೈಕೊಡವಿ ಮಳೆಹನಿಯ ನನ್ನೆಡೆಗೆ ಸುರಿಸಿಬಿಡು...
ಕಾರಣವೇ ನೀನಾಗಿಬಿಡು, ನನ್ನಲಿಹ ಜೀವ ಸಂಕುಲದ ಪ್ರಾಣವುಳಿಯಲು,
ಮತ್ತೆ ನಾ ಹಸಿರೆನುವ ನಗೆಯ ಬೀರಿ, ಜಗಕೆ ಚೆಲುವ ಪಸರಿಸಲು.

No comments:

Post a Comment