Friday, 15 July 2016

ಸೋಲು ಗೆಲುವು



ಹಾ ಸೋತಿದ್ದೇನೆ.
ಜಗದೊಳಗಿರುವ
ಪ್ರತಿಯೊಬ್ಬ
ಪತಿಯಂತೆಯೇ
ನಾನೂ ಕೂಡಾ
ಸೋತಿದ್ದೇನೆ...
ತವರು ಮನೆಗೆ
ಹೊರಟು ನಿಂತಾಗ
ಪತ್ನಿಯ ಮೊಗದಲ್ಲಿ
ಕಾಣ ಸಿಗುವ
ಆ ಹೊಳಪನು
ನಾ ನನ್ನ ಮನೆಯಲ್ಲೇ
ಸೃಷ್ಟಿಸುವುದರಲ್ಲಿ
ಸದ್ಯ ಸೋತಿದ್ದೇನೆ...
ಆದರೂ ಪ್ರಿಯೆ
ಹಾಗೇ ಸೋಲನೊಪ್ಪುವವ
ನಾನಲ್ಲ....
ಅದೇ ಹೊಳಪ
ನನ್ನ ಮನೆಗೆ
ಬರುವಾಗ
ಮೂಡಿಸುವುದಕೆ
ಬಿಡದೆ ಪ್ರಯತ್ನಿಸುತ್ತೇನೆ
ಒಂದಲ್ಲ ಒಂದು ದಿನ
ಗೆದ್ದು ತೋರಿಸುತ್ತೇನೆ.

ನಮನ



ನನ್ನವಳು
ಬಳಿ ಬಂದು
ನನ್ನ ಬಿಗಿದಪ್ಪಿಕೊಳಲವಳ
ಪ್ರೇರೇಪಿಸುವ
ಮುಗಿಲ ನಡುವಿನ
ಸಿಡಿಲ ಸದ್ದಿಗೆ
ನನ್ನ ಮನದಾಳದ
ಕೋಟಿ ನಮನ

ಬುದ್ಧಿವಂತ



ಭಗವಂತ
ಬಲು ಬುದ್ಧಿವಂತ
ನನಗೆ ಹೊಸವರುಷದಿ
ಬರಿಯ ಬೆಲ್ಲವನೇ
ಕೊಡು ಎಂದು
ಕೇಳಿದಾತನಿಗೆ
ನಗುತ ತಥಾಸ್ತು ಎಂದ
ಬೆಲ್ಲವನೇ ಪಡೆದವನಿಗೆ
ಮೊದ ಮೊದಲು
ಖುಷಿಯಾದರೂ
ಮತ್ತೆ ಮತ್ತೆ ಸಿಕ್ಕಿದ್ದು...
ಬೆಲ್ಲಕ್ಕೆ ಮುತ್ತಿಗೆ ಹಾಕಿದ
ಇರುವೆಯ ಕಡಿತ,
ಅದಕಾಗೇ ನಾ ಹೇಳಿದ್ದು
ಭಗವಂತ, ಬಲು ಬುದ್ದಿವಂತ

ತರ್ಪಣ



ಕೈಯಾರೆ
ಕತ್ತು ಹಿಸುಕಿ
ಕೊಲ್ಲಲ್ಪಟ್ಟ
ಆಸೆಯೊಂದಕ್ಕೆ
ಕಣ್ಣೀರ
ತರ್ಪಣ
ಬಿಡುವ
ಹಾಗಿಲ್ಲ

ಕೃತಿಚೌರ್ಯ



ಬೆಳದಿಂಗಳ
ಹೊರಸೂಸುವ
ಚಂದಿರನೆನುವ
ಕಾವ್ಯವನು
ತನ್ನ ಮುಖಪುಟದಿ
ಕೆತ್ತಿದ
ಕೆರೆಯ
ಕಾರ್ಯವದು
ಕೃತಿಚೌರ್ಯವಲ್ಲದೆ
ಮತ್ತೇನು...?


ಚಡಪಡಿಕೆ



ಮುಗಿಲ ಮಕ್ಕಳು
ಬುವಿಯೆಡೆಗೆ
ಸಾಲುಸಾಲಾಗಿ
ಇಳಿದಿಳಿದು
ತಂಪಿನಲೆಯ
ಚೆಲ್ಲುತ್ತಿದ್ದರೂ
ಮನದ ರಾಜ್ಯದಲಿ
ವಿರಹದುರಿಯೆನುವ
'ಬರ'ದ ಚಡಪಡಿಕೆ


ಸ್ವಾತಂತ್ರ್ಯ



ಹಲವು ಸಮಯದಿಂದಲಿ
ಸ್ವಾರ್ಥದ ಸಾಹಿತಿಗಳ
ಶೆಲ್ಫಿನ ಬಂಧನದಿ
ಇರಲಾಗದೇ
ಒದ್ದಾಡುತಿದ್ದ
ಬೆಲೆಬಾಳುವ
ಪ್ರಶಸ್ತಿಗಳಿಗೆಲ್ಲಾ
ಈಗ ಸ್ವಾತಂತ್ರ್ಯದ
ಪರ್ವಕಾಲ

ಕಾಲದ ಪ್ರವಾಹ



ಪುರುಷ ಯತ್ನವ
ಮಾಡಲೊಲ್ಲದೆ
ಕೈಗೊಂಡ
ನಿರ್ಣಯವಿದಲ್ಲ ;
ನಿರಂತರ
ಪ್ರಯತ್ನದಿ
ಬಸವಳಿದ
ಭಾವಕೆ
ಬಲಿಯಾಗಿ
ಕಾಲದ
ಪ್ರವಾಹದಲಿ
ಕೊಚ್ಚಿಕೊಂಡು
ಹೋಗಲನುವಾಗಿದ್ದೇನೆ.
ನನ್ನೆಲ್ಲ
ಮನದಾಸೆಯ
ಭಾರವನು
ಕಳಕೊಂಡು
ಒಣಗಿದ
ಎಲೆಯಾಗಿದ್ದೇನೆ.
ನಾನಿಂದು
ನಿರಾಳನಾಗಿದ್ದೇನೆ.




ತವಕ


ಜಗದ
ಜಾಡ್ಯವ
ಝಾಡಿಸಿ
ಒದೆಯಲು
ನೇಸರಗೆ
ಇನ್ನಿಲ್ಲದ
ತವಕ

ವಿಪರ್ಯಾಸ


ಪತಿಯ ಕಳಕೊಂಡ
ಒಬ್ಬಾಕೆ ತನ್ನ
ಬೋಳು ಹಣೆಯ
ನೋಡಿ ಮನದಿ
ಮರುಗುತ್ತಿದ್ದರೆ.....
ಇನ್ನೊಬ್ಬಳಲ್ಲಿ
ಬೋಳು ಹಣೆಯೇ
ಈಗಿನ ಫ್ಯಾಶನ್
ಎಂದು ಪತಿಯ
ಜೊತೆ ವಾದಿಸುತ್ತಿದ್ದಾಳೆ

ತಾರಾ ಮಳೆ



ಮುಗಿಲನಾವರಿಸಿದ್ದ
ಹೊಳೆವ
ತಾರೆಗಳನೆಲ್ಲಾ
ಒಂದೊಂದಾಗಿ
ನುಂಗಿ ಹಾಕಿದ
ಮೋಡವೇ...
ಮಳೆ ಹನಿಯ
ಜೊತೆಯಲಿ
ಅವುಗಳನೆಂದು
ನೀ ಬುವಿಗೆ
ಸುರಿಯುವೆ