Tuesday, 7 February 2012


ಮೂಡಣದ ದಿಬ್ಬವನು
ನೋಡದೆಯೆ ಎಡವಿ ಬಿದ್ದ
ಕೆಂಪಾದ ಸೂರ್ಯನ
ದೇಹದೊಳಗಿಂದ
ಹರಿದು ಬಂದ
ಬಿಳಿಯ ರಕ್ತ ಕಣಗಳು
ಆಗಸದ ನೆಲದ
ಮೇಲೆಲ್ಲಾ ಬಿದ್ದು
ಜಗಕೆ ಬೆಳಕಾಯಿತೇ...?

ಅವಳೊಂದಿಗೆ ಕಳೆದ
ಮಧುರ ಕ್ಷಣಗಳನ್ನೆಲ್ಲಾ
ನಾ ಅಳಿಸಿ ಹಾಕುತ್ತಿದ್ದೆ;
ಮತ್ತೆ ಮತ್ತೆ ಬಿಡದೆ
ನೆನಪಾಗಿ ಬಂದು
ಅವಳು ನನ್ನ ಅಳಿಸುತ್ತಿದ್ದಳು.

ನಾ ಮಾಡುತಿದ್ದ ಕೆಲಸದಿಂದ
ನನ್ನ ಮನದ ಹಾಳೆ
ಹರಿದು ಹೋಯಿತು
ಅವಳು ಮಾಡಿದ ಕೆಲಸದಿಂದ
ನನ್ನ ಕಣ್ಣಿಂದ ಕಣ್ಣೀರು
ಹರಿದು ಹೋಯಿತು.

ಕರೆಯುತಿಹಳು ಮೆಲುದನಿಯಲಿ ನಿದಿರಾದೇವಿ
ಬಾ ನೀಯೆನ್ನ ಬಳಿ ಇದು ಮಲಗುವಾ ಹೊತ್ತು
ಕೈಗಳನಗಲಿಸಿ ಆಲಿಂಗನಕೆ ಕರೆದು
ಕಂಗಳಿಗೆ ಕೊಡುವಳು ನಿದಿರೆಯ ಮುತ್ತು

ಪದಗಳೇಕೋ ಮುನಿಸಿಕೊಂಡಿವೆ
ಹೊರಬರದೇ ಒಳಗೆಲ್ಲೋ ಅವಿತುಕೊಂಡಿವೆ
ಕಲ್ಪನೆಯ ಕಡಲಲ್ಲಿ
ಕವಿತೆಗಳೆನುವ ಅಲೆಗಳು
ನಿರಂತರವಾಗಿ ಕಾಗದದ
ದಡಕೆ ಬರಬಹುದೆಂದುಕೊಂಡಿದ್ದೆ,
ಕಣ್ ತೆರೆದು ನೋಡಿದರೆ
ನನ್ನೊಳಗಿದ್ದುದು ಪದಗಳ ಸಣ್ಣಕೊಳ
ಕವಿತೆಯ ದಾಹದಲಿ ಬಂದವರಿಗೆ
ಗುಟುಕು ನೀರನ್ನಷ್ಟೇ ಕೊಟ್ಟಿರುವೆ.
ತೇವವಿರದೆ ಬಿರುಕು ಬಿಟ್ಟ
ನೆಲವನೀಗ ಕಂಡೊಡನೆ
ಸುಮ್ಮನೆ ಕೈಯ ಕಟ್ಟಿ ಕುಳಿತಿರುವೆ,
ನನ್ನಳುವಿನಿಂದಲೇ ಬರಡು
ಭೂಮಿಯ ಹಸನಾಗಿಸಬೇಕೆಂದಿರುವೆ.

Friday, 3 February 2012



ಪ್ರತಿ ದಿನವು ದುಡಿದು ದಣಿದಿದ್ದರೂ
ಕಡಲೆನುವ ಪ್ರಿಯತಮೆಯ ಬಳಿ ಸಾಗಲು
ನಿನ್ನಾರವಿಂದವು ನಾಚಿಕೆಯಲಿ ಕೆಂಪಾಗುವುದೇಕೆ?
ಪ್ರತಿದಿನವೂ ಅವಳ ಕೆನ್ನೆಗೆ ಮುತ್ತಿಡುವ ಹೊತ್ತಿಗೆ
ಅವಳ ತನುವಿಗೆ ಕನಕಾಬಿಷೇಕವನೇ ಮಾಡುವೆಯಲ್ಲ
ಇಂತಹಾ ಪ್ರೇಮದ ಪರಾಕಾಷ್ಠೆಯು ಜಗಕೆ ಕಾಣುತ್ತಿಲ್ಲವೇಕೆ?


"ಸಿಗರೇಟು" ಎನುವವಳು ಅದೆಷ್ಟು ಕೆಟ್ಟವಳಾದರೇನು
ಅವಳುದರದಿಂದಲೇ ಹೊರ ಬಂದವನು ನಾನು
ಯಾರದರೂ ಬಂದು ಅವಳ ಚುಂಬಿಸಿದರೆ ಸುಮ್ಮನಿರುವೆನೇ
ಅವರ ತನುವಿನೊಳ ಹೊಕ್ಕು ಮೆಲ್ಲನೆ ಪ್ರಾಣವನೆ ಕಿತ್ತೊಗೆಯುವೆನು.

Wednesday, 1 February 2012


ಪೇಟೆಯ ಮದ್ಯದಲ್ಲಿ
"ಸುಲಭ್ ಶೌಚಾಲಯ"ವ
ಕಂಡೊಡನೆ
ಹೊಟ್ಟೆಯೊಳಗಾಗುತ್ತಿದ್ದ
ತಳಮಳವ
ನೀಗಿಸಿಕೊಳ್ಳುವುದರಲ್ಲಿ
ನನಗೇನೂ
ಸಂಶಯವಿರಲಿಲ್ಲ;
ಮನಸೊಳಗೆ ಅಂದುಕೊಂಡೆ
ಆಹಾ ಕೆಲಸ
"ಸುಲಭ"ವಾಯಿತಲ್ಲ;
ಆದರೆ ಹಿಡಿದ
ಕೆಲಸವ ಮುಗಿಸೋ
ಮುನ್ನವೇ,
ನಿಂತು ಹೋದ ನೀರನ್ನು
ಕಂಡಾಗ ಮನಸು
ಅತ್ತು ಹೇಳತೊಡಗಿತು
ಇನ್ನು ಇಲ್ಲಿಂದ
ಹೊರ ಹೋಗೋದು
ಅಷ್ಟೊಂದು "ಸುಲಭ"ವಲ್ಲ.