Tuesday, 7 August 2012

ಛಾನ್ಸು..

ಅದೇನ್ ಕೆಲ್ಸಾ
ಮಾಡಿದ್ರೋ ಗೊತ್ತಿಲ್ಲ
ನಮ್ಮ ಉಪರಾಷ್ಟ್ರಪತಿ
ಹಮೀದ್ ಅನ್ಸಾರಿ;
ಆದ್ರೂ ಕೊಟ್ಟೇ ಬಿಟ್ರು
ನೋಡಿ ನಮ್ಮ ಶಾಸಕರು
ಅವರಿಗೇ ಛಾನ್ಸು
ಇನ್ನೊಂದ್ಸಾರಿ

ಅಪೇಕ್ಷೆ

ಅಭಿನಂದನೆ,
ಪ್ರೋತ್ಸಾಹವೆನುವ
ನೀರ ಸುರಿಸಿ,
ನಾನೆಂಬ ಗಿಡದಿಂದ
ಕಾವ್ಯ ಕುಸುಮವ
ಬಯಸುತಿಹ
ನಿಮಗೆಲ್ಲಾ
ನನ್ನ ಅಸಹಾಯಕ
ಮೌನದುತ್ತರ
"ನಾನೊಂದು
ಹೂವ ಬಿಡಲಾಗದ
ಮುಳ್ಳಿನ ಗಿಡ".

ಗೆಳೆತನ

ಹಗೆತನದ
ಕತ್ತಲು ಕಳೆದು
ನಮ್ಮ ನಿಮ್ಮೆಲ್ಲರ
ಬಾಳಿನ ಶುಭ್ರ
ಆಕಾಶದಲಿ ;
ಮೂಡಿ ಬರಲಿ
ಗೆಳೆತನದ
ಹೊಳೆವ ರವಿ
ಸಂತಸದ ಬೆಳಕ
ಚೆಲ್ಲುತಲಿ.

ಕನಸು

ಕನಸುಗಳೆನುವ
ನಕ್ಷತ್ರಗಳು
ಫಳಫಳನೆ
ಹೊಳೆಯಲು
ಬೇಕಾಗಿರುವುದು
ನಿದಿರೆಯೆನುವ
ಕಪ್ಪು ಆಗಸ.

ಉಪವಾಸ.

ಸಾಕಾಯಿತಂತೆ
ಅಣ್ಣಾ ಮತ್ತು
ಅವರ ತಂಡಕ್ಕೆ
ಮಾಡಿ ಮಾಡಿ
ಉಪವಾಸ;
ಇನ್ನೇನಿದ್ರು
ಇವರದ್ದು
ಭೂರಿ ಭೋಜನ
ಸಿಗೋ ಹೋಟೇಲ್
"ರಾಜಕೀಯ"ದ
ಸಹವಾಸ.

ಪೈಪೋಟಿ

ಬರದ ಬೇಗೆಯಲಿ
ಬೆಂದು ಹೋದ
ಬಡ ಜನರ
ಕಂಗಳಿಂದ
ಹರಿದು ಹೋದ
ಕಣ್ಣೀರ ಹನಿಗಳಿಗೆ
ಪೈಪೋಟಿ
ಕೊಡುವ ನೆಪದಲ್ಲಾದರೂ
ಬರಬಾರದೇ..
ಓ ಮಳೆಹನಿಯೆ..

ಸಂಚು..

ಜೀವನದ ಪ್ರತಿಯೊಂದು
ಹಂತದಲೂ
ನನ್ನ ಸಂತೋಷವ
ಕಂಡು ನನಗಿಂತಲೂ
ಹೆಚ್ಚು ಖುಷಿಪಡುತ್ತಿದ್ದ
ನನ್ನ ಮುದ್ದಿನ ಅಮ್ಮ,
ಇತ್ತೀಚಿಗೆ ಬದಲಾಗುತ್ತಿದ್ದಾಳೆ;
ಬ್ರಹ್ಮಚರ್ಯದಲ್ಲಿನ
ನನ್ನ ಸಂತೋಷವ
ಕಂಡು ಹೊಟ್ಟೆಕಿಚ್ಚು
ಪಡುತ್ತಿದ್ದಾಳೆ,
ನನ್ನ ಈ ಸಂತಸವ
ಪೂರ್ತಿಯಾಗಿ ನಿಲ್ಲಿಸುವ
ಸಲುವಾಗಿ,
ತನ್ನ ಮೃದು ಹೃದಯವ
ಕಲ್ಲಿನಂತೆ ಕಠೋರವಾಗಿಸಿ
ಮದುವೆಯೆನುವ
ಸೆರೆಮನೆಗೆ ದೂಡಿ ಬಿಡುವ
ಸಂಚು ರೂಪಿಸುತ್ತಿದ್ದಾಳೆ.