Tuesday, 29 July 2014

ಅಪ್ಪ...


ಯಾವೊಂದು
ಹಿತವಚನವನೂ,
ಆದರ್ಶಗಳನು
ನನಗೆ
ಹೇಳಿಕೊಟ್ಟವರೇ
ಅಲ್ಲ ನನ್ನಪ್ಪ...
ಬದಲಾಗಿ
ನನ್ನೆದುರು
ಆ ರೀತಿ
ಬಾಳ್ವೆಯ ನಡೆಸಿ
ತೋರಿಸಿಕೊಟ್ಟರು.

ಕರಗು..



ಕರಗಿ ನೀರ
ಹನಿಹನಿಯಾಗಿ
ಕೆಳಗುರುಳೋ
ಬಯಕೆ ಹೊತ್ತ
ಮೋಡಗಳೆಷ್ಟೋ...?
ನನ್ನ ಕಣ್ಣಿನಾಗಸದಲಿ.

ಮೋಡ ಹೆಣ್ಣು...


ಮೋಡ ಹೆಣ್ಣು...
ಬರಿಯ ನೀರ
ಹನಿಗಳನು ಹೆರುವ
ಕಾರಣಕಲ್ಲ...
.
.
.
.
ಒಬ್ಬರಿಗೊಬ್ಬರು
ಗುದ್ದಾಡುವಾಗ
ಆ ಪರಿಯ ಸದ್ದು
ಮಾಡಲು
ಇನ್ಯಾರಿಗೆ ಸಾಧ್ಯ...

ಮುಂಜಾನೆ ಮಳೆ


ಜಿನುಗುವ
ಮಳೆ ಹನಿಯ
ನಡುವೆಯೇ
ಹರಡುತಿದೆ ಎಲ್ಲೆಡೆ
ಮಂದ ಬೆಳಕು,
ಬೀಸುತಿಹ
ತಂಪುಗಾಳಿಗೆ
ತೆರೆದುಕೊಳ್ಳುತ್ತಿದೆ
ಮೆಲ್ಲಮೆಲ್ಲನೆ,
ಬಿಸಿಲಿಗೆ ಬಸವಳಿದ
ಜನರ ಬದುಕು.

ಕಣ್ಣು...ನಾಲಿಗೆ


ಕಣ್ಣು ಹೃದಯ ಹೇಳಿದಂತೆ...
ನಾಲಿಗೆ ಬುದ್ದಿ ಹೇಳಿದಂತೆ
ಅನ್ನೋದು ಗೊತ್ತಾಗಿದ್ದು
ನಿನ್ನಿಂದಲೇ ಗೆಳತೀ...
ಪ್ರತಿ ನೋಟದಲ್ಲೂ
ಇನ್ನಿಲ್ಲದ ಪ್ರೀತಿ ಸುರಿಸುತ್ತಿದ್ದ
ನಿನ್ನ ಕಣ್ಣಿನ ಮಾತನ್ನು
ಕೊನೆಗೂ ನಿನ್ನ
ನಾಲಗೆ ಉಚ್ಚರಿಸಲೇ ಇಲ್ಲ.

ವಿಶ್ವ ಪರಿಸರ ದಿನ...


ಮನುಜ ತನ್ನ
ದುಡಿಮೆಯ
ಬದಿಗಿಡುತ್ತಾ
ಸೌಲಭ್ಯಗಳ
ಪಡೆವಾಸೆಗೆ,
ಸೋಮಾರಿತನದ
ಉಳಿವಿನ
ಹೋರಾಟಕ್ಕೆ
ಬಲಿಯಾಗಿದ್ದು
ಪರಿಸರ

ಇರುಳು...



ಅವಳ ಕನಸೆನುವ
ಚೆಲುವ ಬೊಂಬೆಯ
ಮೇಲೆ ಹಿಡಿಯತೊಡಗಿದ
ಮರೆವೆನುವ ಸೂಕ್ಷ್ಮ
ಧೂಳಿನೆಳೆಯ,
ಊದಿ ಸ್ವಚ್ಛಗೊಳಿಸೋ
ಸಮಯ ಈ ಇರುಳು.