Wednesday, 27 March 2013

ನಂಬಿಕೆ...



ಮೋಡ ಕವಿದಾಗಲೇ
ಮಳೆ ಸುರಿಯುವುದು
ಎನುವ ವೈಜ್ಞಾನಿಕ
ಸತ್ಯದ ಮೇಲೂ
ನನಗೆ ನಂಬಿಕೆಯಿಲ್ಲ;
ಪ್ರತಿಯೊಂದು ಬಾರಿಯೂ
ಅವಳ ನೆನಪಾದಾಗ
ನನ್ನಯಾ ತನುವು
ತೋಯ್ದು ಹೋಗುವುದಲ್ಲ.

ಹೋಳಿ...



ಎಟುಕದಷ್ಟು ಎತ್ತರದಲಿಹ
ಹೊಳೆವ ನಿನ್ನ
ಬಿಳಿಯ ತನುವಿಗೆ,
ಬಗೆ ಬಗೆಯ ರಂಗನೆರಚಿ
ಹೋಳಿಯಾಡುವಾಸೆ..
ನನ್ನಾಸೆಯ ಕಂಗಳ
ಈ ಹಸಿವ ನೀಗಿಸೆ...
ಕೊಡುವೆಯಾ ಚಂದಿರನೆ
ಕೆಳಗಿಳಿದು ಬರುವ
ಒಂದು ಸಣ್ಣ ಭರವಸೆ..
ಹೋಳಿ

ಹಗಲಿನಲಿ ಬಣ್ಣ 

ಹಚ್ಚಿಸಿಕೊಳುವುದರಿಂದ
ತಪ್ಪಿಸಿಕೊಂಡರೂ,
ಕಡಲ ಗೂಡ ಸೇರುವ
ಹೊತ್ತಲಿ ಬಾನಾಡಿಗಳು
ನೇಸರಗೆ ಕೆಂಬಣ್ಣವ
ಎರಚಿಯೇ ಬಿಟ್ಟವಲ್ಲ

Thursday, 21 March 2013

ಕುಟುಕುವಾಸೆ



ನನ್ನ ಮನವೆನುವ ಮರ
ಏಕಾಂತದ ತಂಗಾಳಿಗೆ
ಮೈಯನೊಡ್ಡಿ
ಅತ್ತಿತ್ತ ಓಲಾಡುತಿದ್ದಾಗ,
ಕುಟುಕುವ ಆಸೆಯಲಿ
ಹಾರಿ ಬಳಿ ಬಂದದ್ದು
ಅವಳ ನೆನಪೆನುವ
ಒಂದು ಮರಕುಟಿಗ....

ಡಂಗುರ

ಮುಸುಕಿನ
ಮುಂಜಾನೆಯಲಿ
ತೇಲಿಬರುವ
ಸುಸ್ವರದ
ಹಕ್ಕಿಗಳ ಇಂಚರ..
ಇದು ಬಾನ
ಬೀದಿಯಲಿ
ರವಿ-ರಾಜನ
ಆಗಮನದ
ಡಂಗುರ

ನಾಟ್ಯ...

ಈ ಕತ್ತಲೆಯೇ ಹಾಗೆ
ಕಣ್ಣ ಮುಚ್ಚಿಡುವಂತೆಯೇ
ಪ್ರೇರೇಪಿಸುವ ಭೀಕರತೆಯ
ನಮ್ಮೆದುರು ತಂದೊಡ್ಡುವುದು;
ಅದಕಂಜದೆ ಕತ್ತನೆತ್ತುಬೇಕು..
ಆಗ ಮಾತ್ರ, ಬಾನ ರಂಗಮಂಟಪದ
ಕೋಟಿ ತಾರೆಗಳ ಹೊಳೆವ ನಾಟ್ಯದ
ದೃಶ್ಯ-ವೈಭವ ನಮಗೆ ಕಾಣಿಸುವುದು

Wednesday, 20 March 2013

ಕಣ್ ಕಡಲು

ಅವಳ
ನೆನಪೆನುವ
ನೇಸರ
ಏಕಾಂತದ
ಸಂಜೆಯಲಿ
ನನ್ನ ಕಣ್ಣಿನ
ಕಡಲೊಳಗೆ
ಇಳಿಯುತಿರಲು
ರಾಶಿ ಕಣ್ಣೀರ
ಅಲೆಗಳು
ಅದೇಕೋ
ಚಡಪಡಿಸುತಿದೆ,
ಸಮಯ
ಕಳೆದಂತೆಲ್ಲಾ
ಇಡಿಯ
ಕಣ್ ಕಡಲು
ಮೆಲ್ಲಮೆಲ್ಲನೆ
ನೆತ್ತರ
ಬಣ್ಣವ ತಾ
ಪಡೆಯುತಿದೆ