Monday, 3 June 2013

ಕಾವ್ಯ...


ಬುವಿಯ ಖಾಲಿ
ಹಾಳೆಯ ಮೇಲೆ
ಮೋಡದ ಮನದಾಳದ
ಮಳೆಹನಿಯೆನುವ
ಪದಗಳುದುರಿ
ಹಚ್ಚ ಹಸುರಿನ
ಸುಂದರ ಕಾವ್ಯ
ಸೃಷ್ಟಿಯಾಗುತಿದೆ..

ಸ್ಟಾರು...



ಭರ್ಜರಿ ಕೊಡುಗೆಗಳ
ಮೆಘಾ ಆಫರುಗಳನು
ಕಂಡು ಖುಷಿಯಿಂದ
ಬಲೂನಿನಂತಾದ
ನನ್ನೊಳಗಿನ
ಗ್ರಾಹಕನಿಗೆ
ಸೂಜಿಯಂತೆ
ಕಾಣಿಸತೊಡಗಿತು
ಕಂಡೀಷನುಗಳ
ತನ್ನೊಳಗೆ
ಅಡಗಿಸಿಟ್ಟುಕೊಂಡಿದ್ದ
ಒಂದು ಸಣ್ಣ "ಸ್ಟಾರು"

ಪ್ರೇಮಿ-ಪ್ರಧಾನಿ



ನನ್ನವಳ ಮುಂದೆ
ಮನದ ಮಾತೆಲ್ಲವನು
ಹೇಳಬೇಕೆಂಬ ಆಸೆ...
ಆದರೆ ಯಾಕೋ
ಅವಳು ಬಳಿ ಬಂದೊಡನೆ
ನಾ ನಮ್ಮ ದೇಶದ
"ಪ್ರಧಾನಿ"ಯಂತಾಗುತ್ತೇನೆ.

Thursday, 30 May 2013

ಸಿಹಿ ಮುತ್ತು



ರವಿಕಿರಣಗಳ
ಬದಿಗೊತ್ತಿ
ಬುವಿಯ
ಮುದ್ದಿಸುತಿದೆ
ಮೋಡ..
ಮಳೆಹನಿಯ
ಸಿಹಿ ಮುತ್ತಿನಿಂದ

ಹುಡುಗಾ(ಕಾ)ಟ..

ಮೊದ ಮೊದಲ ಮಳೆಗೆ
ನೆನೆ ನೆನೆದು ಕುಣಿದು
ಒದ್ದೆಯಾಗುವ ಹುಡುಗಾಟ;
ಎರಡನೆಯ ಮಳೆಗೆ
ಕಳೆದ ವರ್ಷ ಎಸೆದು
ಬಿಟ್ಟಿದ್ದ ಕೊಡೆಯ ಹುಡುಕಾಟ.

ಚಂದಾದಾರ...

ಅವಳ ಸಿಹಿ
ಕನಸೆನುವ
ದಿನ ಪತ್ರಿಕೆಗೆ
ನಾ ಆಜೀವ
ಚಂದಾದಾರ

ತಂಗಾಳಿ...

ನಭದೂರಿನಿಂದ
ಮಳೆಹನಿಯ ದೊಡ್ಡ
ದಿಬ್ಬಣವು ಹೊರಟಿಹುದು
ಎನುವ ಸಿಹಿಸುದ್ದಿಯ,
ಬುವಿಯ ಕಿವಿಯಲ್ಲಿ
ಮೆಲ್ಲನೆ ಪಿಸುಗುಟ್ಟಿದ್ದು
ಇದೇ ತಂಗಾಳಿ...