ಜಗದ ಇಂಚು ಇಂಚಿನಲೂ ಭಗವಂತನಿದ್ದರೂ
ಅವನಿಗೊಂದು ಆಲಯ, ಅದೇ ದೇವಾಲಯ,
ಪ್ರವೇಶದಾದಿಯಲೇ ಎತ್ತರದ ಗೋಪುರ
ಸೂರ್ಯ ಕಿರಣಗಳು ತಾಕಿದೊಡನೆ ಫಳಫಳನೆ
ಹೊಳೆವ ತುತ್ತತುದಿಯ ಮುಗುಳಿಗಳೆಷ್ಟು ಸುಂದರ,
ಬದಿಯಲೇ ಶುಭ್ರಜಲದಿಂದ ತುಂಬಿರುವ ಕಲ್ಯಾಣಿ,
ಅದರೊಳಗಿನ ನೀರ ತಲೆಗೆ ಚಿಮುಕಿಸಿದೊಡನೆ
ತನು-ಮನವೆರಡೂ ಪರಿಶುದ್ಧವಾದಂತಹ ಅನುಭವ.
ಪ್ರವೇಶದ್ವಾರದೆದುರು ಅಂಕು ಡೊಂಕಿರದ ಉದ್ದನೆಯ ಧ್ವಜಸ್ತಂಭ
ಅದರ ಬುಡದಲ್ಲೆ ಸಹಸ್ರ ಜ್ಯೋತಿಗಳಿಗೆ ಆಶ್ರಯವನಿತ್ತ ಎತ್ತರದ ಕಾಲು ದೀಪ
ತಲೆಬಾಗಿ ಒಳಹೊಕ್ಕೊಡನೆ ದೇವ ಮಂದಿರದ ದಿವ್ಯ ದರ್ಶನ
ದೇವಗಣಗಳಂತೆ ನಿಂತಿರುವ ಸಾಲು ಸಾಲು ಕಲ್ಲಿನ ಕಂಬಗಳು
ಪ್ರತಿ ಕಂಬದಲೂ ಅರಳಿ ನಿಂತಿದ್ದ ಕಣ್ಸೆಳೆವ ಶಿಲ್ಪ ವೈಭವ
ಪುರಾಣಗಳ ಕಥೆಗಳನೆಲ್ಲ ಕೆತ್ತಿರುವ ರೀತಿ ಬಲು ಅದ್ಭುತ,
ಮೌನದಲಿ, ಭಕ್ತಿ ಭಾವದಲಿ ಪ್ರದಕ್ಷಿಣೆ ಬರುತಿರುವ ಭಕ್ತ ವೃಂದ
ಕ್ಷಣಕ್ಷಣಕೂ ಢಣ್ ಢಣ್ ಅನ್ನೋ ಗಂಟೆಯ ಇಂಪು ನಿನಾದ
ಅಲ್ಲಲ್ಲಿ ಹಚ್ಚಿಟ್ಟ ಊದುಬತ್ತಿಯು ಪಸರಿಸುತಿದೆ ಪರಿಮಳವ
ಕಿವಿಗಿಂಪು ನೀಡುವ ಅರ್ಚಕ ವೃಂದದ ಮಂತ್ರ ಘೋಷ
ನಡುವಿನ ಗರ್ಭಗುಡಿಯೊಳಗೆ ಶಿಲ್ಪರೂಪದಿ ನೆಲೆ ನಿಂತ ಭಗವಂತ,
ಹಲವು ಬಗೆಯ ಹೂಗಳ ಅಲಂಕಾರ, ಸ್ವರ್ಣದೊಡವೆಗಳಿಂದ ಸಿಂಗಾರ
ನೇತು ಹಾಕಿದ್ದ ತೂಗು ದೀಪದ ಮಂದ ಬೆಳಕಿನಲಿ
ಅರ್ಚಕರು ಬೆಳಗುತಿಹ ದಿವ್ಯ ಮಂಗಳಾರತಿಯಲಿ
ಹೊಳೆವ ದೇವ ವದನವ ನೋಡಲೆಂತು ಸುಂದರ
ನಿನ್ನ ಪಾದಕೆ ಶರಣು, ಎಂದು ಭಕ್ತಿಯಿಂದಲಿ ನಮಿಸಿದೊಡನೆ
ದೇವಾಭಿಷೇಕದ ತೀರ್ಥವನು ಕಂಗಳಿಗೊತ್ತಿ ಸೇವಿಸಿದೊಡನೆ
ಮನದ ಕ್ಲೇಶ ಕಳೆದು ಹೋಗಿ, ಆಗುವರೆಲ್ಲರು ಹೃದಯದಿಂದ ನಿರ್ಮಲ
ಆಸ್ತಿಕರಿಗೆ ಆಧ್ಯಾತ್ಮಿಕ ಶಕ್ತಿ ಕೇಂದ್ರ, ಅದುವೇ ಬುವಿಯ ಮೇಲಿನ ದೇಗುಲ.