Tuesday, 8 March 2011

MUNJAAVU

ನಿದಿರೆಯಾ ಬಂಧನದಿಂದ ಹೊರಬಂದು
ಅತಿ ಸುಂದರ ಮುಂಜಾವನು
ನಾನೊಮ್ಮೆ ಕಣ್ಣಾರೆ ಕಂಡೆ
ಆಯಿತೆನಗೆ, ಮದುವೆಯೊಂದ ಕಂಡಂತೆ

ನಕ್ಷತ್ರಗಳು ಓಡುತ್ತಿತ್ತು
ಬೆಳಕೆಂಬ ಗೋಡೆಯ ಮರೆಗೆ
ವರನು ಬರಲು ವಧುವು
ನಾಚಿ ಮರೆಗೊಡುವಂತೆ

ಪ್ರತಿಯೊಂದು ಕ್ಷಣ ಕ್ಷಣಕೂ ತನ್ನ
ವರ್ಣವ ಬದಲಾಯಿಸುತಿತ್ತು ಆಗಸ
ವರನ ಕಣ್ಣೋಟ ತನ್ನೆಡೆಗಿರಲು 
ವಧುವಿನ ಮುಖವು ರಂಗೆರುವಂತೆ

ಬೆಟ್ಟ ಗುಡ್ಡ ಮರಗಳ ನಡುವಿನಿಂದ 
ರವಿಯು ಮೆಲ್ಲನೆ ಮೇಲೆ ಬಂದ
ಸಖಿಯರ ನಡುವೆ ಮಾಲೆ ಹಿಡಿದು
ವಧುವು ಮಂಟಪದೆಡೆ ಮೆಲ್ಲನೆ ಬರುವಂತೆ

ಹಕ್ಕಿಗಳು, ಮೇಘಗಳು ಅತ್ತಿತ್ತ ಸರಿದಾಡುತಿತ್ತು.
ಮದುವೆಯ ಸಡಗರದಿ ಮಕ್ಕಳು ಓಡಾಡುವಂತೆ
ದೇವ ಮಂದಿರದಿಂದ ಕೇಳಿ ಬಂದ ದೇವಸ್ತುತಿ,
ಕೇಳಿಸಿತೆನಗೆ, ಮಾಂಗಲ್ಯ ಧಾರಣೆಯ ಮಂತ್ರದಂತೆ.







Sunday, 6 March 2011

INDU

ಅಂದೆನ್ನ
ಪ್ರೀತಿ
ಕಂಡಿತ್ತು
ಆನಂದದ
ಪರಮಾವಧಿ
ಇಂದು 
ಆ ಪ್ರೀತಿ
ದುಃಖವೆಂಬ
ಮಸಣದಲೊಂದು
ಸಮಾಧಿ.



Thursday, 3 March 2011

MUKHAVAADA

ಕಾಣದಿರಲೆಂದು
ಮನದೊಳಗಿನ
ದುಗುಡ
ಹಾಕಿರುವೆನು
ಮುಖಕೆ
ನಗುವಿನ
ಮುಖವಾಡ

Wednesday, 2 March 2011

APARICHITHA

ಅಂದು ಕಂಡರೆ ಸಾಕು
ಪ್ರೀತಿ ಉಕ್ಕಿ ಹರಿಯುತಿತ್ತು
ಅವಳಲ್ಲಿ ಅಪರಿಮಿತ
ಆದರಿಂದು ಕಂಡರೂ
ಕಾಣದಂತಾಗಿರುವ ನಾನು
ಅವಳಿಗೆ ಅಪರಿಚಿತ.

MANADINGITHA

ನೀಲಿ ನೀಲಿ ನೀರಿನಲೆಯಲಿ
ಈಜುತಿದ್ದ ಮೀನು ನಾನಾಗಿದ್ದೆ.
ಕಂಡು ನನ್ನ, ಬೀಸಿಬಿಟ್ಟಳು ಪ್ರೇಮ ಜಾಲವ
ಮುಢ ನಾ ಅದರೊಳಗೆ ಬಿದ್ದೆ.

ಮನಸು ಕರಗಿತು, ಮೇಣ ರೂಪದಿ
ಉರಿದು ಪ್ರೀತಿಯ ಬೆಂಕಿಯಲಿ
ಪ್ರೀತಿ ಹಕ್ಕಿಯ ರೆಕ್ಕೆ ಮುರಿಯಿತು
ಅವಳ ಮೋಸ ಅರಿವಾದ ಕ್ಷಣದಲಿ

ದೋಣಿ ಏರಿದ್ದೆ ಜೀವನದ ಯಾನಕೆ
ಸುಖವೆಂಬ ತೀರವ ಸೇರುವಾಸೆಗೆ
ಪ್ರೀತಿ ಎನುವ ತೂತು ಉಂಟಾಯಿತು
ದುಃಖದ ತಳವ ಸೇರುತಿದೆ ನಾವೆಯೀಗ ಮೆಲ್ಲಗೆ

ತನುವು ನಿಶ್ಚಲವಾದ ಸಮಯದಿ
ಮನಸು ನಿಶ್ಚಲವಾಗುವುದು ನಿಶ್ಚಿತ
ಆದರೆ ಮನಸು ಸಾವನು ಪಡೆದ ಮೇಲೆಯು
ತನುವಿಗುಸಿರಿರುವುದರಲಿ ಇದೆಯೇ ಅರ್ಥ?



Tuesday, 1 March 2011

NENAPU

 ಚಂದಿರನು ಬಲು ದೂರದಲಿದ್ದರು
ಅವನ ಪ್ರತಿಬಿಂಬವು
ಕೊಳದೊಳಗೆ ಇರುವಂತೆ
ಪ್ರಿಯೆ, ನೀ ನೆಲೆಸಿರುವೆ
ನನ್ನ ಮನದ ಕೊಳದೊಳಗೆ
ನೆನಪೆನುವ ಪ್ರತಿಬಿಂಬದಂತೆ.


KAVIYU THAYIYANTHE

ಕವಿಯು ತಾಯಿಯಂತೆ
ಹಡೆವ ಮುನ್ನ ನೂರಾರು
ಬಯಕೆಗಳು ಮುದ್ದಾದ 
ಮಗುವ ಹೆರಬೇಕೆಂದು
ಹಡೆದ ಮೇಲೆ ಅದು
ಹೆಗ್ಗಣವಾದರು
ಜಗದೊಳಗವಳಿಗೆ
ತನ್ನ ಕೂಸೆ ಹೆಚ್ಚು;
ಅದರಂತೆ ಕವಿಯು
ಕವಿತೆ ಬರೆಯುವ ಮುನ್ನ
ನೂರಾರು ಕಲ್ಪನೆಗಳು
ಕವನ ಅದ್ಭುತವಾಗಿರಬೇಕೆಂದು
ಮತ್ತೆ ತೋಚಿದ್ದು
ಗೀಚಿದರು ಅವನಿಗದೆ
 ಅಚ್ಚು ಮೆಚ್ಚು.