ಪಿಸುಗುಡದಿರು ಚೆಲುವೆ ಜಗಕೆ ಹೆದರದೆ ಜೋರಾಗೇ ಹೇಳಿಬಿಡು ನನಗೂ ಸವಿಯುವಾಸೆ, "ನಾ ನಿನ್ನ ಪ್ರೀತಿಸುವೆ" ಎನುವ ನಿನ್ನ ಮಾತಿನ ಸವಿ; (ಸ್ವಗತ....) ಪಿಸುಗುಟ್ಟಿದರೆ ಕೇಳದಿರುವುದೂ ನಾ ಹೀಗನ್ನಲು ಒಂದು ಕಾರಣ; ಹಾಳಾದ ಶಬ್ದಮಾಲಿನ್ಯದಿಂದ ಕಾರ್ಯದಕ್ಷತೆಯ ಸ್ವಲ್ಪ ಕಳಕೊಂಡಿದೆ ನನ್ನ ಕಿವಿ.
ನೆನಪಿನ ಕಂತೆಗಳು ಮತ್ತು ಮನದ ಭಾವ ಪದವಾಗುತಿದ್ದಾಗ ಸಾಲು ಸಾಲು ಕಣ್ಣೀರ ಹನಿಗಳು ಉಕ್ಕಿ ಬರುತಿತ್ತು; ನಾ ಬರೆಯುತಿದ್ದ ಅವಳ ದ್ರೋಹದ ಈ ಕಾದಂಬರಿಯ ಪ್ರತಿ ಸಾಲಿಗೆ ಜಿನುಗಿದ ಕಣ್ಣೀರೇ.. ಪೂರ್ಣವಿರಾಮದ ಚುಕ್ಕಿಯಾಗ ತೊಡಗಿತ್ತು.
ಕಣ್ಣಲ್ಲಿ ನೆತ್ತರಿರದವನಂತೆ ಒಂದಿನಿತು ವಿರಾಮ ನೀಡದೆಯೆ ಸತತ ದುಡಿಸಿಕೊಳ್ಳುತ್ತಾನೆ, ಅಬ್ಬಾ..ಈತ ಅದೆಂಥಾ ನಿಷ್ಕರುಣಿ; "ಅವಳ" ಬಗೆಗಿನ ಪುಟ್ಟ ಕವಿತೆ ಬರೆಯುವಾಗಲೆಲ್ಲಾ ಇದೇ ರೀತಿ ನನ್ನ ಮನಸಾರೆ ಶಪಿಸುತ್ತದೆ; ಬೆರಳ ಬಂಧನದಲಿಹ ನನ್ನಯಾ ಲೇಖನಿ.