Saturday, 31 December 2011

ಹೊಸ ವರುಷ...???

ಇಂದೇನು ಹೊಸತನವೋ? ನನಗೇನು ಕಾಣಲಿಲ್ಲ
ಅದೆಂತಾ ಬದಲಾವಣೆಯೋ, ನನಗಾರೂ ತಿಳಿಸಲಿಲ್ಲ.
ಪ್ರಕೃತಿಯು ನಿನ್ನೆ ಇದ್ದಂತೆಯೇ ಇರುವುದಲ್ಲ
ಭೂತಾಯಿ ಹಳೆಯ ಸೀರೆಯನು ತೊರೆಯಲಿಲ್ಲ
ಹೊಚ್ಚಹೊಸತಾದ ಹಸಿರು ಸೀರೆಯನುಡಲೇ ಇಲ್ಲ

ಸಾಕ್ಷಿಗಳಿರದ ಬದಲಾವಣೆಯ ಆಚರಣೆಯೇ ಜೋರು
ಈ ಆಚರಣೆಯ ನಿಜವಾದ ಅರ್ಥವನು ಕೇಳುವವರ್ಯಾರು ?
ಕೇಳುವ, ಟೀಕಿಸುವ "ಬುದ್ಧಿಜೀವಿ"ಗಳದಿಂದು ಇಲ್ಲ ತಕರಾರು
ತಾವೂ ಕುಡಿದು ಕುಣಿದು ಉನ್ಮತ್ತರಾಗಿ ಆಚರಿಸುತಿಹರು
ಅಪರಾತ್ರಿಯಲೇ ಹೊಸ ವರುಷವನು ಸ್ವಾಗತಿಸುತಿಹರು..

ನಮ್ಮದಾಗಿರುವ ಆಚರಣೆಗಳಿಗೆ ಮಾತ್ರ ಇವರದು ಅಡ್ಡಗಾಲು
ವೈಜ್ನಾನಿಕ ಅರ್ಥಗಳೇನೆಂದು ನೂರೆಂಟು ಸವಾಲು
ಹೊಸತೇನು ಇಲ್ಲದಿದ್ದರೂ, ದೈರ್ಯವಿಲ್ಲ ಇಂದು ಜಗವ ಪ್ರಶ್ನಿಸಲು
ನನಗೇಕೋ ಮನಸ್ಸಿಲ್ಲ, ಇಂದು ನಮ್ಮತನವಿಲ್ಲದ ಹೊಸವರಷವನಾಚರಿಸಲು
ಆಚರಿಸದಿದ್ದರೇನಂತೆ, ಅಡ್ಡಿಯೇನಿಲ್ಲ ಗೆಳೆಯರಿಗೆ ಶುಭವ ಹಾರೈಸಲು..

Friday, 30 December 2011

ಅಂದು ಲೋಕ ಕಲ್ಯಾಣಕಾಗಿ

ಸೀತಾ ಪರಿಣಯಕಾಗಿ 

ರಾಮ ಮುರಿದು ಬಿಸಾಕಿದ

ಜನಕರಾಜನ ಸಭೆಯಲ್ಲಿ

ಶಿವನ ಮಹಾಧನುಸ್ಸು;

ಇಂದು ಲೋಕ ಕಂಟಕಕಾಗಿ

"ಲಕ್ಷ್ಮೀ" ಪರಿಣಯಕಾಗಿ


ಭಾರತದ ಸಂಸತ್ತಿನಲ್ಲಿ


ಮುರಿದು ಬಿಸಾಕಿದರು


ಅಣ್ಣಾ ಹಜಾರೆ ನಿರ್ಮಿತ


"ಜನಲೋಕಪಾಲ ಬಿಲ್ಲು"


ಮುರಿದದ್ದು ಕಾಂಗ್ರೆಸ್ಸು..

Friday, 23 December 2011



ಮಾನವನ ಕೈಯಲ್ಲಿ ಇರುವ ತಾನಿರುವ ಮರದ ಬೇರ,


ಕಂಡು ತೊರೆದು ತನ್ನ ತವರ; ಹಾರುತಿದೆ ಹಕ್ಕಿ ದೂರ


,
ಮನುಜನ ಕೈಗಳ ಗುಣವನೇ ಪಡೆಯುವುದಿನ್ನು ಈ ಮರ,



ಒಂದೆರಡು ದಿನದಲೇ ಆಗುವುದು ಮಾನವನಷ್ಟೇ ಕ್ರೂರ


.
ಹಾಗೆಂದು ಹಕ್ಕಿಗಳು ತೊರೆಯುತಿದೆ ತಮ್ಮ ತಮ್ಮ ಬಿಡಾರ.

Wednesday, 21 December 2011

ಅಕೌಂಟು



ಪ್ರಿಯೆ ನಿನ್ನಾಸೆಯಂತೆ
ನಾ ತಾಳಿಯ ದಾರದಲಿ
ಹಾಕಬಲ್ಲೆ ಮುರುಗಂಟು.
ಅದಕೂ ಮುನ್ನ
ದಾಂಪತ್ಯ ಜೀವನದ
ಭದ್ರತೆಗಾಗಿ ನೋಡಬೇಕು
ನಿನ್ನಪ್ಪನ ಬ್ಯಾಂಕಿನ ಅಕೌಂಟು;
ನಿನ್ನ ಮೇಲಿನ ನಂಬಿಕೆಗಾಗಿ
ನೋಡಬೇಕು ಬಾಯ್ ಫ್ರೆಂಡ್ ಗಳ
ಲಿಸ್ಟ್ ಗಳುಳ್ಳ ನಿನ್ನ
ಫೇಸ್ ಬುಕ್ ಅಕೌಂಟು.

ಭದ್ರಕಾಳಿ


ಮನವು ತೋರುವ ವಾಸ್ತವವನು
ಹಾಗೆಯೇ ಚಿತ್ರಿಸುವ
ಅಪರೂಪದ ಚಿತ್ರಕಲಾವಿದನಾಗಿದ್ದನವ
ಮನಸೂರೆಗೊಳ್ಳುವ ಚಿತ್ರಗಳ
ತನ್ನ ಕುಂಚದಿಂದರಳಿಸಿ
ನೋಡುಗರ ನಿಬ್ಬೆರಗಾಗಿಸಿದ್ದನವ
ಇತ್ತೀಚೆಗೆ ಮದುವೆಯಾಗಿ
ಒಂದಿಷ್ಟು ಸಮಯ ಕಳೆದ
ಮೇಲೆ ಮಾಡಿದ ಹೊಸ ಚಿತ್ರ
ಶ್ರೀದೇವಿಯ ಉಗ್ರ ಅವತಾರ
ಭದ್ರಕಾಳಿಯದು.
ಅದರೊಳಗಿನ ವಾಸ್ತವದ
ಚಿತ್ರಣ ಹೀಗಿತ್ತು..
ಭದ್ರಕಾಳಿಯ ಮುಖ
ಅವನ ಹೆಂಡತಿಯ ಮುಖದಂತಿತ್ತು.
ಇವನ ಮೊಗವ ಹೋಲುವ
ತುಂಡಾದ ರುಂಡವೊಂದು
ಆ ಭದ್ರಕಾಳಿಯ ಕೈಯಲ್ಲಿತ್ತು.

Tuesday, 20 December 2011


ನನ್ನೊಳಗಿನ ಯಕ್ಷ ಪ್ರಶ್ನೆ 

ಸಾಧಕನಾಗಬೇಕಾದರೆ
ಮೊದಲು ಸಾಧನೆಯ
ಕನಸು ಕಾಣಿ
ಅನ್ನುತ್ತಿದ್ದ ಅಧ್ಯಾಪಕರು;
ಕನಸ ಕಾಣಲೆಂದೆ
ಅವರ ತರಗತಿಯಲ್ಲಿ
ಮಲಗಿದ್ದಾಗ ಬೈದು
ತರಗತಿಯಿಂದ
ಹೊರಹಾಕಿದ್ದಾದರೂ
ಯಾಕೆ?

Sunday, 18 December 2011

ಮಾರ್ಕೆಟಿಂಗ್ ಹುಡುಗಿ


ಅವಳು ಮಾಡುತಿರುವ
ಉದ್ಯೋಗ ಯಾವುದೆಂದು
ನನಗೆ ಗೊತ್ತಿಲ್ಲ...
ಆದರೂ ಅವಳು
ಮಾರ್ಕೆಟಿಂಗ್ ನವಳು
ಎಂಬುದಂತೂ ಖಚಿತ.
ಹೇಗೆಂದು ಕೇಳುವಿರಾ
ಸಿಗುತ್ತಿದೆಯಲ್ಲಾ
ಅವಳ ನೆನಪಿನ
ಜೊತೆ ನನಗೆ
ಕಣ್ಣೀರು ಉಚಿತ