Monday, 26 March 2012

ನಗು



ಮೊದಲೆಲ್ಲ
ನನ್ನ ನಗುವೆನುವ
ಮರದ ಬೇರು
ನನ್ನ ಹೃದಯವನು
ತಲುಪಿರುತಿತ್ತು;
ಅವಳು ಕೊಟ್ಟ
ಕೊಡಲಿಯೇಟಿಗೆ
ನನ್ನ ನಗುವಿನ ಮರ
ಉರುಳಿಹೋಗಿತ್ತು;
ಈಗ ನನ್ನ ನಗು
ಬರಿಯ ಪಾಚಿಯಂತೆ
ನನ್ನ ಮುಖದ
ಗೋಡೆಯಲ್ಲಿ ಬೆಳೆದು
ನಿಂತಿರುವ ಅದನು
ಬೆಳೆಸಿಹೆನು
ನಾ ಅತ್ತು ಅತ್ತು.

Thursday, 22 March 2012

ಯುಗಾದಿ



ಸುತ್ತಮುತ್ತಲೂ ಹಸಿರೇ ಹಸಿರು..
ಈ ಪ್ರಕೃತಿಯೊಂದಿಗೆ ಚಿಗುರುತಿದೆ ಹೊಸತನ
ವರುಷವೊಂದರ ಪ್ರಾಯ ಮುಗಿದು
ಹೊಸ ಹುರುಪಿನೊಂದಿಗೆ ಮತ್ತೆ ಬಂದಿದೆ ಯೌವನ

ಹಳೆಯ ಕಹಿಯನೆಲ್ಲಾ ಮರೆತು ಮುಂದುವರಿದು
ಇಡುತಿಹಳು ಪ್ರಕೃತಿಯ ಮಾತೆ ಹೊಸ ಹೆಜ್ಜೆ
ಉಲ್ಲಾಸ ಉತ್ಸಾಹದಿ ಸ್ವಾಗತವ ಕೋರಿ
ಕಟ್ಟೋಣ ಅವಳ ಪಾದಕೆ ಮಾವಿನೆಲೆಯ ತೋರಣದ ಗೆಜ್ಜೆ

ವಸಂತ ಋತುವಿನ ಚೈತ್ರ ಮಾಸದ ಮೊದಲ ದಿನವಿಂದು
ಜಗವೆ ಸಂಭ್ರಮದಿ ಆಚರಿಸುತಿಹುದು ಯುಗಾದಿ
ಹಳೆ ತಪ್ಪುಗಳನೆಲ್ಲಾ ಮರುಕಳಿಸದಂತೆ ಮರೆತು
ಕೆಡುಕು ಮಾಡದ ಹೊಸ ಜೀವನಕೆ ಹಾಡೋಣ ನಾಂದಿ

ಸಿಹಿಯೂ ಕಹಿಯೂ ಎರಡು ಬೇಕೆನುವ ಉದ್ದೇಶದಿ
ಬಂಧು ಮಿತ್ರರೆಲ್ಲರಿಗೂ ಹಂಚೋಣ ಬೇವು ಬೆಲ್ಲ
ದ್ವೇಷ ಅಸೂಯೆಗಳನೆಲ್ಲ ಬದಿಗೊತ್ತಿ
ಪ್ರೀತಿಯ ಹಂಚಿದರೆ, ಸಂತಸವೇ ನಮ್ಮ ಜೀವನದಲೆಲ್ಲ

ಕುಡಿತದ ಅಮಲಿನಲಿರದೆ, ಅಶ್ಲೀಲ ನೃತ್ಯವಿರದೆ
ಹೊಸ ವರುಷಕ್ಕೆ ಎಲ್ಲರಿಗೂ ಶುಭವ ಕೋರೋಣ
ಪ್ರಕೃತಿಯಲಿನ ಬದಲಾವಣೆಯಂದೆ ಹೊಸ ವರುಷವನಾಚರಿಸಿ
ನಮ್ಮ ಸತ್-ಸಂಪ್ರದಾಯದ ಬಗೆಗೆ ಹೆಮ್ಮೆ ಪಡೋಣ

ವೈರಸ್



ಮನಸಿನಲ್ಲಿರೋ
ನೆನಪುಗಳೆನುವ
ಫೈಲುಗಳನೆಲ್ಲಾ
ಸ್ಕ್ಯಾನ್ ಮಾಡೋ
ಆಂಟಿ ವೈರಸ್
ಸಾಫ್ಟ್ ವೇರ್ ಗಳೇಕಿಲ್ಲ...?
ಇದ್ದಿದ್ದರೆ
ನನ್ನ ಮನಸಿಂದ
ಅವಳ ನೆನಪೆನುವ
ವೈರಸ್ ಗಳನೆಲ್ಲ
ಡಿಲೀಟ್ ಮಾಡಬಹುದಿತ್ತಲ್ಲಾ.

ಸೋಲು



ಸಣಕಲು ದೇಹವಿದ್ದು,
ಈ ರೀತಿ ಆಗಿದ್ದರೆ
ನಾನೊಪ್ಪಿಕೊಳ್ಳುತ್ತಿದ್ದೆ,
ನನ್ನ ದೇಹವೋ
ಗುಂಡುಕಲ್ಲಿನಂತಿದೆ,
ಹಾಗಾಗಿ ನಾ
ಗೆಲ್ಲಲೇ ಬೇಕಿತ್ತು,
ಆದರೂ ಅವಳ
ಸಣ್ಣ ಮುಗುಳ್ ನಗುವಿಗೆ
ನಾನ್ಯಾಕೆ ಸೋತುಹೋದೆ...??

Tuesday, 20 March 2012

ಶುಭ ಶಕುನ



ಶುಭ ಶಕುನಗಳಾಗುತಿದೆ
ಒಂದೊಂದಾಗಿ ಶುಭಶಕುನಗಳಾಗುತಿದೆ,
ಕತ್ತಲ ಕಪ್ಪು ಬಣ್ಣವ ಸರಿಸುವ ಸಲುವಾಗಿ
ಮುಡಣದಿ ಬಣ್ಣಗಳು ಗೋಚರಿಸತೊಡಗಿದೆ,
ರವಿಯಾಗಮನವ ದೂರದಲಿ ಕಂಡು
ಹಕ್ಕಿಗಳು ಸಂತಸದಿ ಹಾಡತೊಡಗಿದೆ,
ಇರುಳಿನಲಿ ಭುವಿಗೆ ಕಾವಲಾಗಿದ್ದ
ಮಂಜು ಮೆಲ್ಲಗೆ ಕರಗತೊಡಗಿದೆ,
ನಡುರಾತ್ರಿಯಿಂದಲೇ ಗಿಡಮರದೆಲೆಗಳ ಮೇಲೆ
ಕಾಯುತ್ತ ಕುಳಿತಿದ್ದ ಇಬ್ಬನಿಯು ಮುತ್ತಾಗತೊಡಗಿದೆ,
ನಿಶ್ಚಲತೆಗೆ ದಾಸರಾಗಿದ್ದ ಜನರಿಗೆಲ್ಲಾ
ಬಿಡುಗಡೆಯ ಸಂಭ್ರಮವು ಸಿಗುತಿದೆ,
ಕತ್ತಲಿನ ದುರಾಡಳಿತವು ಕೊನೆಗೊಂಡಿದೆ,
ಮುಡಣದ ತುದಿಯಿಂದ, ಆಗಸದ ರಾಜಬೀದಿಯಲಿ
ಜಗದ ಶಕ್ತಿಯೊಡೆಯ ನೇಸರನ
ಮಂದ ನಡಿಗೆಯು ಪ್ರಾರಂಭವಾಗಿದೆ.
ಮತ್ತೆ ಜಗಕೆಲ್ಲಾ ಬೆಳಕಾಗಿದೆ.


Monday, 19 March 2012

ಸ್ವಾಮಿ ಭಕ್ತಿ.


ತಮ್ಮೊಡೆಯ ಸೂರ್ಯ
ಸಂಜೆಯಾಗುತ್ತಿದ್ದಂತೆ
ಏಕಾಂಗಿಯಾಗಿ
ಕಡಲಿನಲಿ
ಮುಳುಗಿದುದ ಕಂಡು
ಜಗದ ಬೆಳಕೆಲ್ಲವೂ
ಅವನ ಅನುಸರಿಸಿ
ಕಡಲೊಡಲ ಸೇರುತಿದೆಯಲ್ಲ
ಇವುಗಳದು ಅದೆಂಥಾ
ಸ್ವಾಮಿ ಭಕ್ತಿ...!!!

ಆತ್ಮಹತ್ಯೆ



ಮುಸ್ಸಂಜೆಯ
ಸಂತೆಯಲಿ
ತನ್ನೊಡಲ
ಬಿಳುಪನ್ನೆ
ಕಡಿಮೆ ಬೆಲೆಗೆ
ಕೋಟಿ
ತಾರೆಯರಿಗೆ
ಮಾರಿ,
ವ್ಯಾಪಾರದಲಿ
ದಿವಾಳಿಯಾಗಿ,
ಪಡುವಣದ
ವಿಶಾಲ
ಕಡಲಿಗೆ ಹಾರಿ,
ಆತ್ಮಹತ್ಯೆಯ
ಮಾಡಿಕೊಂಡನೇ..?
ಬೆಳಕ ಮಾರೋ
ವ್ಯಾಪಾರಿ..