Tuesday, 28 August 2012

ಪಯಣ

ಕನಸೆನುವ
ನಾವೆಯನೇರಿ
ಹೊರಟಿದೆ,
ನಿದಿರೆಯಾ
ನದಿಯಲ್ಲಿ
ನನ್ನದೊಂದು
ಪಯಣ;
ಎಚ್ಚರವೆನುವ
ದಡವ ಸೇರುವಾಸೆ,
ಬರುವ ಮುನ್ನ
ಮೂಡಣದಿ
ಸೂರ್ಯ ಕಿರಣ.

ಬಂಧಮುಕ್ತಿ..


ನೀರ ಹನಿಗಳೆನುವ
ಮುದ್ದಾದ ಮಕ್ಕಳು,
ಬಂಧನದ ಬೇಸರದಿ

ಕುಳಿತುಕೊಂಡಿದ್ದರು
ಕಾರ್ಮೋಡವೆನುವ
ದೊಡ್ದ ಶಾಲೆಯಲಿ;
ಗುಡುಗೆನುವ ಗಂಟೆ
ಬಾರಿಸಿದ ತಕ್ಷಣ
ಸ್ವತಂತ್ರರಾದಂತೆ
ಭುವಿಯೆನುವ
ಮನೆಯೆಡೆಗೆ,
ಓಡೋಡಿ ಬರುತಿಹರು
ಈಗ ಆತುರಾತುರದಲಿ

ಉಪಚಾರ

ಹಗಲಿನಲಿ ಸುಳಿವಿರದೆ
ಸಂಜೆಯಾದಾಗ
ಹಠಾತ್ತನೆ ಬಿದ್ದ
ನಾಲ್ಕು ಹನಿಯ
ಸಣ್ಣ ಮಳೆಯನು
ಕಂಡಾಗ ನನಗನಿಸಿದ್ದು;
ಇದು ಮತ್ತಿನ್ನೇನು ಅಲ್ಲ,
ಇದುವರೆಗಿದ್ದ ಉರಿಬಿಸಿಲ
ಝಳಕೆ ಬಳಲಿ ಬೆಂಡಾಗಿ,
ಮೂರ್ಛೆ ಹೋದಂತಾದ
ವಸುಧೆಯ ವದನಕೆ
ನೀರ ಚಿಮುಕಿಸುತಲಿ
ಮೇಘರಾಜ ಇಳೆಯ
ವಾತ್ಸಲ್ಯದಿಂದ ಉಪಚರಿಸಿದ್ದು

ಬೇಲಿ

ನನ್ನವಳ ನೆನಪುಗಳೆನುವ
ಮುರಿದ ಆಟಿಕೆಗಳ
ಗಂಟು ಮೂಟೆಯನು
ಹೊತ್ತು ಕೊಂಡು,
ನಗು ನಗುತಲೆ
ಬಂದು ಬಿಟ್ಟಿದೆ
ಕಾಡುವ ಕತ್ತಲು;
ಒಂದೊಂದಾಗಿ
ತೋರಿಸಿ
ಅಣಕಿಸುತ್ತಿದ್ದರೂ...
ಹೊರಗೋಡಿ
ಬರುವಂತಿಲ್ಲ,
ಇರುವುದಲ್ಲ
ನಿದಿರೆಯ ಬೇಲಿ
ನನ್ನ ಸುತ್ತಲೂ.

ದ್ರೋಹ

ಅದೊಂದು ದೊಡ್ದ ಆಸ್ಪತ್ರೆ...
ಅಲ್ಲಿ ಒಳಗಿದ್ದವರೆಲ್ಲರದ್ದೂ
ಒಂದೊಂದು ತರಹದ ಆತಂಕ,
ತಮ್ಮದೇ ಆದ ವೇದನೆ,
ಸಹಿಸಿಕೊಳ್ಳಲಾಗದ ನೋವುಗಳು
ಸಾವಿನ ಭಯ,
ಇನ್ನೊಂದಿಷ್ಟು ಜನರ ಕಂಗಳಲ್ಲಿ.
ಮುಖವು ಮೌನವನೇ
ಬಿಂಬಿಸುತ್ತಿದ್ದರೂ..
ಬಿಕ್ಕಿ ಬಿಕ್ಕಿ ಅಳುವ
ಸದ್ದು ಒಳಗೆಲ್ಲಿಂದಲೋ
ಕಿವಿಗಪ್ಪಳಿಸುತ್ತವೆ,
ಇಂತಹಾ ದುಃಖದ
ಮೋಡವಿಲ್ಲಿ ಕವಿದಿದ್ದರೂ,
ಇರುವ ಹೆಚ್ಚಿನವರೆಲ್ಲರ
ಕಣ್ಣಾಲಿಗಳು ತುಂಬಿದ್ದರೂ..
ಬಾಗಿಲ ಬಳಿಯಲ್ಲೊಂದಷ್ಟು
ಜನ ಬೆಡಗಿಯರು
ಮುಖಕೂ , ತುಟಿಗಳಿಗೂ
ಒಂದಷ್ಟು ಬಣ್ಣವ ಮೆತ್ತಿ
ಸಿಂಗರಿಸಿಕೊಂಡು ,
ಸೌಂದರ್ಯ ಪ್ರದರ್ಶಿಸುತಲೇ
ಕಾರ್ಯನಿರತರಾಗಿರುವುದು
ಮಾನವೀಯತೆಗೊಂದು
ದ್ರೋಹವಲ್ಲದೇ ಇನ್ನೇನು...?

ವ್ಯರ್ಥ ನಿರೀಕ್ಷೆ.

ಮೌಢ್ಯದ ಕತ್ತಲು ಸರಿದು
ನನ್ನ ಮನವೆನುವ
ಭುವಿಯ ಮೇಲೆ
ಕಾವ್ಯರವಿಯ ಆಗಮನದ
ನಿರೀಕ್ಷೆಯಲಿದ್ದೆ..
ಸೂರ್ಯೋದಯ ಆಗಲೇ ಇಲ್ಲ
ಈಗ ಮನಸ್ಸಿಗೆ ಬೇಸರ
ಇದಕಾಗಿ ಬಲು ಬೇಗನೆದ್ದು
ಹಾಳು ಮಾಡಿಕೊಂಡೆನಲ್ಲ
ನನ್ನ ಸೊಗಸಿನ ನಿದ್ದೆ.

ಗುರಿ


ಮುಂಜಾನೆಯಲೇ
ಅನಂತ ದೂರದಿಂದ
ಹೊರಟ ರವಿಕಿರಣಕೆ,
ಇಳೆಯ ತನುವ
ಮೃದುವಾಗಿ
ಸ್ಪರ್ಶಿಸುವ ತವಕ,
ರೆಂಬೆ ಕೊಂಬೆಗಳ
ಅಡ್ಡಿಗಳನೆದುರಿಸಿಯೂ
ಈ ಆಸೆಯ ಕೊನೆವರೆಗೂ
ಹಿಡಿದಿಟ್ಟುಕೊಳುವುದದು,
ತನ್ನ ಗುರಿ ಭುವಿಯ
ಮುಟ್ಟುವ ತನಕ