Saturday, 27 April 2013

ಮೊಳಕೆ..

ತಣಿಸುವ ನೆಪದಲಿ
ಮೋಡವನಗಲಿದ
ಮಳೆಹನಿ ಮೆಲ್ಲ
ಮೆಲ್ಲನೆ ವಸುಧೆಯ
ತನುವ ಸವರಲು
ಆಯಿತಂತೆ ಇಳೆಗೆ
ರೋಮಾಂಚನ ;
ಬುವಿಯ ಮೈಯಲ್ಲಿ
ಪುಟ್ಟ ಪುಟ್ಟ
ಹಸಿರು ಮೊಳಕೆಗಳು
ತಲೆಯೆತ್ತಿ ನಿಲ್ಲುತಿರುವುದು
ರೋಮಾಂಚನದ ಪ್ರತೀಕ
ಎನುತಿದೆ ನನ್ನ ಈ
ಕಲ್ಪನೆಯ ಕವಿಮನ.

ಮೆರವಣಿಗೆ

ಗುಡುಗಿನ ವಾದ್ಯದೊಂದಿಗೆ
ಮುಗಿಲ ತವರಿಂದ
ಸಂತಸದಿ ಬುವಿಯೆಡೆಗೆ;
ಕಡಲೆನುವ ಪತಿಯ
ಮನೆಯ ಸೇರಲು
ತವಕದೆ ಸಾಗಿದೆ
ಮಳೆಹನಿಯ ಮೆರವಣಿಗೆ .

ದೋಷ...

ಬ್ರಾಹ್ಮೀ ಮುಹೂರ್ತದಲಿ
ಸುರಿದ ವರ್ಷಧಾರೆಯಿಂದಾಗಿ,
ಏರಿದ ತಾಪಮಾನದ
ಬೇಗೆಯಲಿ ಬೆಂದ
ಜನರ ಮನದಲ್ಲಿ
ಮೂಡಿತು ಸಂತೋಷ ;
ಆದರೆ ವಾಸ್ತವದಲಿ ಈ ಮಳೆ
ತೊಳೆಯಲೆಂದು ಬಂದಿತಂತೆ,
ನಟ್ಟ ನಡುರಾತ್ರಿಯ
ಚಂದ್ರ ಗ್ರಹಣದಿಂದಾಗಿ
ಬುವಿಯ ಮೈಗಂಟಿದ
ಗ್ರಹಣ ದೋಷ

ಪೋಕರಿ...

ತುಂಟತನದ
ಈ ಚೋಕರಿ
ತುಂಬಾನೇ
ಪೋಕರಿ...
ಸುಮ್-ಸುಮ್ಮನೆ
ಮಾಡುತ್ತಾಳೆ
ನನಗೆ
ಪದೇ ಪದೇ
POKE-ರೀ

ಭಯ...

ಆಡುತಿರು ಬಣ್ಣದೋಕುಳಿಯಲ್ಲಿ
ಮುಳುಗು ಹಾಕುವ
ಮನವ ಮಾಡದಿರು
ನೇಸರನೆ, ನೂಕಿ
ಕತ್ತಲೆಡೆಗೆ ಈ ಭುವಿಯ;
ಆ ಕರಾಳ ಕತ್ತಲ
ಅಂಜಿಕೆಯು ನನಗಿಲ್ಲ,
ಆದರೆನ್ನ ಕಣ್ಣಿಂದ
ಕಣ್ಣೀರ ಹೊರಗೆಳೆವ
ಅವಳ ನೆನಪುಗಳು
ನೀನಿರದ ಹೊತ್ತಲ್ಲೇ
ಬರುವುದಲ್ಲ,
ಅದರದೊಂದೇ ಭಯ.

ಕ್ರಿಯೆ-ಪ್ರತಿಕ್ರಿಯೆ

ಕಂಡ ಕಂಡಲ್ಲಿ
ಮೈಕು ನೆಟ್ಟು
ಜನಪ್ರತಿನಿಧಿಗಳು
ಜೋರಾಗಿ ಅರಚುತ್ತಿದ್ದಾರೆ
ಅವರ ಆಶ್ವಾಸನೆಯ
ಹಳೆಯ ರಾಗವನ್ನು
ಕೇಳಿ ಕೇಳಿ ಜನ
ತಮ್ಮ ಮೈ ಪರಚುತ್ತಿದ್ದಾರೆ.

Monday, 22 April 2013

ಟಿಕೆಟ್...

ನನ್ನ ಹೃದಯ
ಎನುವ ಕ್ಷೇತ್ರದಲ್ಲಿ
ಜಗಳವಿಲ್ಲದೆ ಆಗಿದೆ
ಟಿಕೆಟ್ ಹಂಚಿಕೆ;
ಅದಕೆ ಕಾರಣ
ನನ್ನವಳೊಬ್ಬಳದೇ
ಇರೋದು ಅಲ್ಲಿ
ಉಮೇದ್ವಾರಿಕೆ.