Thursday, 21 November 2013

ನಾಗ ಪಂಚಮಿ





ನಾಗರ ಪಂಚಮಿಯ
ಮುನ್ನಾದಿನವಾದ ಇಂದು
ನ್ಯೂಸ್ ಚಾನಲ್ ಗಳ
ಸುತ್ತ ಮುತ್ತಾ....
ಎದ್ದೇಳುತ್ತಿದೆ ನಾಗನ ಹುತ್ತ...
ಪರ-ವಿರೋಧದ
ವಿಷಯದ ಕುರಿತಾಗಿ
ಮಾತನಾಡುತ್ತಿದ್ದಾರೆ
ಚರ್ಚಾಕಾರರು
ಬುಸುಗುಡುತ್ತಾ...

ನೆಪ





ಜಗದ ಜನರಿಗೆ
ಬೆಳಕ ಕೊಡುವ
ಸಮಾಜಸೇವೆಯ
ನೆಪದಲ್ಲಿ ನೇಸರ
ಆಗಸದ ಛಾವಣಿಯಲಿ
ನಿಂತು ತನ್ನ
ಪ್ರೇಯಸಿಯ
ಎವೆಯಿಕ್ಕದೆ
ನೋಡತೊಡಗಿದ

ಬೆದರುಗೊಂಬೆ





ಚಂದ್ರ ಇರುಳ
ನೆಲದಲ್ಲಿ ಬಿತ್ತಿದ
ತಾರೆಗಳೆನುವ
ಬೀಜಗಳು
ಮೊಳೆಯೊಡೆದು,
ಚಿಗುರಿ ಬೆಳೆದು
ಬುವಿಗೆ ಬೆಳಕ
ನೆರಳನಿತ್ತರೂ...
ಇದರ ಶ್ರೇಯಸ್ಸನ್ನು
ಕಿತ್ತು ಕೊಂಡದ್ದು,
ಬೆಳೆ ಬಂದಾಗ
ತೋಟದ ನಡುವೆ
ನೆಟ್ಟ ರವಿಯೆನುವ
ಬೆದರು ಗೊಂಬೆ

ಬಂಧ ಮುಕ್ತ..




ಹಳೆಯ ದೇಶಭಕ್ತಿ
ಗೀತೆಗಳೆಲ್ಲಾ
ಪುಸ್ತಕದಿಂದಲೋ,
ಸಿ.ಡಿ ಗಳಿಂದಲೋ
ಹೊರ ಬಂದು,
ಮೈಮೇಲಿನ
ಧೂಳ ಕೊಡವಿಕೊಂಡು,
ಅವರಿವರ ಕಂಠದಲಿ
ಎಫ್.ಎಮ್ ರೇಡಿಯೋಗಳಲಿ
ಟಿ.ವಿ ಚಾನಲ್ಲುಗಳಲಿ
ಹಾಡಿಸಿಕೊಂಡು
ಒಂದು ದಿನದ
ಮಟ್ಟಿಗೆ ಬಂಧಮುಕ್ತವಾಗಿವೆ.