ಅವಳು ಅವಳಾಗೇ ನನಗೆ ಮೆಸೇಜು ಮಾಡಿದ್ದಳೆನುವ ಸುಖದಲ್ಲಿ ನಾ ತೇಲಾಡುವಂತಿರಲಿಲ್ಲ ಕಾರಣ ಅವಳ ಮೆಸೇಜು . . . . . . . . . ಇನ್ನೊಮ್ಮೆ ನನಗೆ ಮೆಸೇಜು ಮಾಡಿದರೆ ಕಂಪ್ಲೇಂಟು ಕೊಡುತ್ತೇನೆ ಜೋಕೆ.
ಪಾಂಡಿತ್ಯದ ದೊಡ್ದ ಅಂತರವಿದೆ ನನ್ನ ನಿನ್ನ ನಡುವೆ ಗೆಳತೀ ಮೇಲೆ ನಿಂತಿರುವ ನಿನಗೆ ಅಂತರವದೇನಿಲ್ಲ ಅಂತನಿಸೀತು , ಅದು ನೀನನಗಿತ್ತ ಸಮ್ಮಾನ ಹತ್ತಿ ಬರಬಲ್ಲೆಯೆನುವ ಸ್ಪೂರ್ತಿ ಮಾತು ಕೇಳಲಷ್ಟೇ ಸಿಹಿಯು ಆದರೆ ನಾನಿನ್ನೂ ಹೆಜ್ಜೆಯೊಂದನು ಮುಂದಿಡಲಾಗದೆ ಒದ್ದಾಡುತ್ತಿದ್ದೇನೆ... ಕಾರಣ ಯೋಗ್ಯತೆಯ ಮಿತಿಯಿದೆ. ಅದಕಾಗೇ ನಿನ್ನ ಸ್ಥಾನವದು ನನ್ನೆದೆಯ ಗೌರವದ ಗರ್ಭಗುಡಿಯಲಿದೆ ಸಲುಗೆಯಿಂದ ಹೇಗಿರಲಿ ನಿನ್ನ ಪೂಜಿಸದೆ
ಹೊಗಳಿಕೆಯ ತುತ್ತತುದಿಯಲ್ಲಿಡಬೇಡ ಗೆಳತೀ... ಅಲ್ಲಿರುವುದು ಅಹಂಕಾರವೆನುವ ವಿಷದ ಗಾಳಿ ಉಸಿರಾಡಿದಂತೆಲ್ಲಾ ನನ್ನುಸಿರ ಚೀಲವನದು ನೀಲಿಯಾಗಿಸೀತು. ಅಲ್ಲಿ ಮತ್ತೊಂದಿಷ್ಟು ಒಂಟಿತನ ಕಾಡೀತು ಯಾಕೆಂದರಲ್ಲಿ ಯಾರಿಲ್ಲ. ಹಾಗೆಯೇ ಸುಮ್ಮನೆ ಯೋಚಿಸಿ ನೋಡು ಕಾಡದಿದ್ದೀತೆ ನನ್ನನಲ್ಲಿ ಆ ಸಣ್ಣ ಭಯ..? ಕಹಿ ಸತ್ಯದ ಬಿರುಗಾಳಿ ಬೀಸಿದರೆ...? ವಾಸ್ತವದ ಪ್ರಪಾತಕ್ಕುರುಳುವಾಗಿನ ನೋವ ನನ್ನಿಂದ ಸಹಿಸಲಾದೀತೇ...? ನೀನೇ ಯೋಚಿಸಿ ನೋಡು. ನಿಂತಿರುವ ನೆಲ ಕೊಳಕಾಗಿದ್ದರೂ ಪರವಾಗಿಲ್ಲ ಇಲ್ಲೊಂದು ಭದ್ರತೆಯ ಹಿತವಾದ ಅನುಭೂತಿ ಇದೆ. ನನ್ನನೀ ನೆಲದಲ್ಲೇ ಇರಲು ಬಿಡು. ಮುಗಿಲೆತ್ತರದಲಿ ನನ್ನನಿರಿಸಿ ಚೆಲುವ ನೋಡುವ ನಿನ್ನ ಕನಸ ಮರೆತು ಬಿಡು...