ನನ್ನ ನಲ್ಲೆ , ನನ್ನೇ ಒಲ್ಲೆ ಎಂದ ಗಳಿಗೆ
ನುಡಿದ ತಕ್ಷಣ ಧುಮುಕಲಿಲ್ಲ , ನನ್ನ ದುಗುಡದಾಶ್ರುಗಳು
ಕಾದು ಕುಳಿತಿತ್ತು ಅದು ಏಕಾಂತದ ಗಾಢ ಕತ್ತಲಿಗೆ.
ಕಣ್ಣಿನಲ್ಲೆಲ್ಲೋ ಅವಿತಿದ್ದ , ಹರಿದು ಹಂಚಿ ಹೋಗಿದ್ದ ಕಣ್ಣೀರ ಹನಿಗಳು
ಮನಸ ಮಾತು ಕೇಳದೆ ಮಾಡತೊಡಗಿತು ಕೆನ್ನೆ ಮೇಲೆ ಮೆರವಣಿಗೆ
ಬದ್ಧ ವೈರಿ "ಮೌನ" ದ ಮನೆಯೊಳಗೇ ವಾಸ ಮಾಡತೊಡಗಿತು ನನ್ನ ಮಾತುಗಳು
ಚಿರ ನಿದ್ರೆಯೇ ಬಂದಿತ್ತು , ಕ್ಷಣ ಕಾಲವೂ ವಿರಮಿಸದ ನನ್ನ ನಾಲಿಗೆಗೆ
ಉತ್ಸಾಹ , ಉಲ್ಲಾಸ ಗಳು ಪರಿಚಿತರಾಗಿದ್ದರು, ಈಗ ನನಗೆ ಅಪರಿಚಿತರು
ಮನದಾಳದ ಪೂರ್ಣ ಕುಂಭ ಸ್ವಾಗತವೀಗ ಬರಿಯ ದುಗುಡ, ಬೇಸರವೆನುವ ಆಗಂತುಕರಿಗೆ.
ನಲಿದಾಡಿದರು ದಣಿವರಿಯದ ಜೀವಕೆ, ದಣಿವ ತರುತಿಹುದು ಇಡುವ ಪ್ರತಿ ಹೆಜ್ಜೆಗಳು
ಸಂತಸದ ವೃಂದಾವನವದು ಸುಟ್ಟು ಕರಕಲಾಗಿಹುದು, ವಿರಹದಾ ಸಣ್ಣ ಕಾಳ್ಗಿಚ್ಚಿಗೆ