Monday 9 May, 2011

VASUDHEYA ALALU

ವಸುಧೆಯ ಅಳಲು 


ಅಡಗಿ ಕುಳಿತಿರುವೆ ಏಕೆ? ಮಳೆ ಹನಿಯೇ,
ನೀಲ ನಭದೊಳಗೆ ಹರಡಿರುವ ಮೋಡದೊಳಗೆ
ತವರು ಮನೆಯನು ತೊರೆದು ಬಾರೆ
ನೀ ಮನದಿ ರೋಧಿಸದೆ ನನ್ನೆಡೆಗೆ.

ಅಲ್ಲಲ್ಲಿ ನನ್ನ ತನುವು ಒಡೆದಿಹುದು ನೋಡು
ತಡೆಯದಾಗಿದೆ ಈ ಬಿರುಕು ಕೊಡುವ ನೋವು
ಈ ನೋವ ನೀಗಿಸಲು ನೀನಿಲ್ಲಿ ಬರಬೇಕು
ಬಾರೆ ಅದಕಾಗಿ ಬಾ, ಆ ಮೇಘಕೆ ನೀನಾಗಿ ಸಾವು.

ನಗ್ನೆ ನಾನಾಗದಿರಲು ಬಿಡದಿರು ಓ ಮಳೆ ಹನಿಯೇ
ಹಸಿರು ಸೀರೆಯ ಉಡುಗೊರೆಯ ನೀನೆನಗೆ ನೀಡದೆ
ಇಡಿಯ ಬ್ರಹ್ಮಾಂಡವನೇ ಬೆರಗುಗೊಳಿಸಲು ಸಾಕು
ನೀ ನನಗೆ ನೀಡುವ ಆ ಹಸಿರು ಸೀರೆಯೊಂದೆ.

ನನ್ನ ಸಂತಾನವದು ಕಂಗೆಟ್ಟಿಹುದು ನೀನಿಲ್ಲದೆ
ಉಸಿರ ಬಿಟ್ಟರೆ ನೀನೆ ತಾನೇ ಅವರ ಜೀವನದ ಆಸರೆ.
ಸಂತತಿಯ ನಾಶವನು ನಾ ನೋಡಲಾರೆ ಮಳೆ ಹನಿಯೇ,
ಮರಣ ಛಾಯೆಯಿಂದ ಅವರ ಹೊರತರಲು ಬಾರೆ, ಓ ಅಮೃತ ಧಾರೆ.


No comments:

Post a Comment