Friday, 27 April 2012

ಏಕಾಂಗಿ


ಅವಳ ಪ್ರತಿಬಿಂಬವಿರದ
ಕಣ್ಣಲ್ಲಿ ನಾನೇಕಿರಲಿ..?
ಎಂದು ನನ್ನ ಕಣ್ಣೀರು
ಹೊರ ಹೊರಟಿದೆ
ಒಂದೊಂದಾಗಿ...
ಈಗ ನನ್ನ
ಕಂಗಳು ಕೂಡ
ಅವಳಿರದ ನನ್ನ
ಮನಸಿನಂತೆಯೇ
ಏಕಾಂಗಿ..

Tuesday, 24 April 2012

ಬೆಳಗು


ಶರಧಿಯು
ಮುಂಜಾನೆಯ
ನಿದಿರೆಯಾ
ಮಂಪರಿನಲ್ಲಿದ್ದಾಗ,
ಅವಳ ಬಾಹು
ಬಂಧನದಿಂದ
ತಪ್ಪಿಸಿಕೊಂಡು
ಹೊರಬಂದ
ನೇಸರನು,
ಕಳವಳದಿ
ಕೆಂಪಾಗಿದ್ದ
ತನ್ನ ಮೋರೆಯ
ಮೋಡದ
ಬಟ್ಟೆಯಲಿ ಮುಚ್ಚಿ,
ಒಂದಷ್ಟು ದೂರ
ನಡೆದು
ಭಯವ ತೊರೆದು
ಜಗವನೆಲ್ಲಾ
ಬೆಳಗತೊಡಗಿದನು.

ಕವಿಯಾಗಲಾರೆ...


ಹೆಚ್ಚೇನೂ ಬೇಕಾಗಿಲ್ಲ, ಸಣ್ಣ ಕವಿಯಾಗಬೇಕೆನುವ ಆಸೆ
ಚೆಲುವಾದ ನಾಲ್ಕು ಸಾಲುಗಳ ಹೊಸೆಯಬೇಕೆನುವ ಆಸೆ
ಸುಂದರ ಭಾವಗಳ ಪದಗಳಲಿ ಹಿಡಿದಿಡುವ ಆಸೆ
ಆದರೂ ನನ್ನ ಮನದಲ್ಲಿ ಕವಿತೆಯ ಬಗೆಗೆ ಸ್ಪಷ್ಟತೆ ಇದೆ
ಈ ಸುಂದರ ಭುವಿಯಲ್ಲಿ ನನಗಸ್ತಿತ್ವ ಕೊಟ್ಟ
ಆ ಭಗವಂತನ ಅಸ್ತಿತ್ವವನೇ ಪ್ರಶ್ನಿಸುವ ಕವಿಯಾಗಲಾರೆ..
ನನ್ನ ಮೆದುಳಿನಲಿ ಪದಗಳನ್ನಿಟ್ಟ ಆ ದೇವನ
ಅದೇ ಪದಗಳಲಿ ದೂಷಿಸುವ ಕವಿ ನಾನಾಗಲಾರೆ..
ಬಾಲ್ಯದಿಂದ ಪಡೆದ ಸಂಸ್ಕಾರಗಳ ತಿರುಳನರಿವೆನೇ ಹೊರತು
ನನ್ನೀ ಪದಗಳಲಿ ಹೀಯಾಳಿಸುವ ಕವಿಯು ನಾನಾಗಲಾರೆ..
ಮಾತೃಧರ್ಮದಲೇ ಗಟ್ಟಿಯಾಗಿ ನೆಲೆಯೂರುವೆನೇ ಹೊರತು
ಇತರ ಧರ್ಮಗಳಿಗೆ ವ್ಯಂಗ್ಯ ಮಾಡುವ ಕವಿ ನಾನಾಗಲಾರೆ..
ನನ್ನ ಹೊತ್ತೊಡಲು ತಾಯಿ ಭಾರತಿಯ, ಪದಗಳಲೇ ಅರ್ಚನೆಗೈಯುವೆ
ಬುದ್ದಿಜೀವಿಯಾಗುವ ಆಸೆಯಲಿ, ಅವಳಿಗಪಚಾರವನೆಸಗಲಾರೆ...
ಶ್ರೇಷ್ಟತೆ ಇದರಿಂದಲೇ ಬರುವುದೆಂದಾದರೆ... ಧಿಕ್ಕರಿಸುವೆ ಶ್ರೇಷ್ಟತೆಯ
ನನ್ನೊಳಗಿನ ಆದರ್ಶವ ಶ್ರೇಷ್ಟತೆಗಾಗಿ ಅಡವಿಡಲಾರೆ...
ಶ್ರೇಷ್ಟತೆಗೆ ಮಾರು ಹೋಗುವ ಈ ಹಾಳು ಲೋಕದಲ್ಲಿ
ನಾನೊಬ್ಬ ಮುಢಮನುಜನಾಗೇ ಉಳಿದುಬಿಡುವೆ..
ಕವಿಯಾಗುವ ನನ್ನ ಬಯಕೆಯನೇ ನಾ ಬಿಟ್ಟುಬಿಡುವೆ...
ಆದರೆ ಶ್ರೇಷ್ಠ ಕವಿಯಾಗಲಾರೆ... 
ನಾನೆಂದಿಗೂ ಶ್ರೇಷ್ಠ ಕವಿಯಾಗಲಾರೆ...

ಕವನ


ಏಕಾಂತದ
ಕೋಣೆಯಲಿ
ನನ್ನ ಮನಸಿಗೂ
ಕಲ್ಪನೆಗೂ
ಆಯಿತು ಮಿಲನ,
ಈ ಮಿಲನದಿಂದಾದ
ಪದಪುಂಜವೆನುವ
ಮುದ್ದು ಮಗುವಿಗೆ
ನಾನು ಇಟ್ಟಿರುವ
ಹೆಸರೇ "ಕವನ"

ದ್ವೇಷ...


ಜಗವ
ನಾಶಗೈಯಬಲ್ಲ
ತಾಕತ್ತಿರುವುದು
ದ್ವೇಷಕ್ಕೆ
ಮಾತ್ರ
ಎನುವುದು
ನನ್ನ ಭಾವನೆ;
ಯಾಕೆಂದರೆ
ತಂಪಾದ
ನೀರ ಹನಿಗಳನೇ
ಒಡಲಲ್ಲಿ
ಇಟ್ಟುಕೊಂಡಿರುವ
ಮೋಡಗಳು,
ಮನುಜನನೇ
ಸುಟ್ಟುಹಾಕಬಲ್ಲ
ಉರಿ ಸಿಡಿಲಿಗೆ
ಜನ್ಮ ನೀಡುವುದು
ದ್ವೇಷಕ್ಕೊಳಗಾಗಿ
ತಮ್ಮತಮ್ಮೊಳಗೆ
ಹೋರಾಟಕ್ಕೆ
ಇಳಿದಾಗ ತಾನೆ.

Saturday, 21 April 2012

ಹುಚ್ಚು ಹೋಲಿಕೆ


ಕವಿಯು ನಾನೆನುವ
ಹುಚ್ಚು ಭ್ರಮೆಯಲಿ
ಅವಳ ಚಂದಿರನಿಗೆ
ಹೋಲಿಸಿಬಿಟ್ಟೆ,
ಈಗ ನಿಜಕೂ ಅವಳು
ಚಂದಿರನಂತಾಗಿದ್ದಾಳೆ,
ಬಾನಿನಲಿ ದೂರದಲಿದ್ದು
ನನ್ನ ಕೈಗೆ ಸಿಗುವಂತಿಲ್ಲ,
ಆದರೂ, ನಾನೆಲ್ಲೇ ಹೋದರೂ
ನನ್ನನೇ ಹಿಂಬಾಲಿಸಿದಂತೆ
ನನಗನಿಸುತಿದೆಯಲ್ಲಾ...

ನಿಗೂಢ


ಮುಂಜಾನೆಯಲಿ
ಹಕ್ಕಿಗಳ ಚಿಲಿಪಿಲಿಯು
ಇರುಳರಾಜನ ಸಾವಿನ
ಕುರಿತಾದ ಅಳುವೋ...?
ಇಲ್ಲ ರವಿಯಾಗಮನಕೆ
ಸ್ವಾಗತವೋ..?
ಮುಡಣದಲಿ ಮುಡುವಾಗ
ರವಿಯ ಮೈಮೇಲಿನ
ಕೆಂಪು ಬಣ್ಣ
ಇಳೆಯ ಕಂಡಾಗಿನ
ನಾಚಿಕೆಯೋ...?
ಇಲ್ಲ ಕತ್ತಲೊಡೆಯನ
ಮೈಯಿಂದ ಚಿಮ್ಮಿದ ನೆತ್ತರೋ...?
ತರುಲತೆಗಳ ಮೈಯ
ಮೇಲಿನ ನೀರ ಹನಿಗಳು
ಇರುಳ ಭಯದಲಿ
ಮುಡಿದ ಬೆವರ ಹನಿಯೋ...?
ಇಲ್ಲ ಉದಯರವಿಗೆ
ತೊಡಿಸಲೆಂದು
ತಯಾರಿಸಿದ ಹೊಳೆವ ಮುತ್ತೋ...?
ಈ ಪ್ರಕೃತಿಯೇ ಹೀಗೆ..
ಕಂಡಂತೆ ಇರುವುದಿಲ್ಲ
ಇರುವುದೆಲ್ಲವೂ ಕಾಣುವುದಿಲ್ಲ
ಕಾಣಿಸುತಿರುವುದ ಬಗೆಗೂ
ಮನದಲ್ಲಿ ಸಂಶಯ
ನಾಕಂಡದ್ದು ನಿಜವೋ ಸುಳ್ಳೋ...?
ಉತ್ತರ ಮಾತ್ರ ನಿಗೂಢ...

Friday, 20 April 2012

ಕಣ್ಣೀರು


ಅವಳು ನನ್ನ
ಬಿಟ್ಟು ಹೋದಾಗ
ನಾ ಅಳಲಿಲ್ಲ ಎಂದು
ಜಗವೆ ನನ್ನ ಪ್ರೀತಿಯ
ಸಂಶಯಿಸುತಿದೆ,
ಜಗಕೇನು ಗೊತ್ತು
ನನ್ನ ಕಣ್ಣೊಳಗೆ
ಕಣ್ಣೀರ ಸಾಗರವಿದೆ,
ಇರುವಲ್ಲಿಯೇ
ಭೋರ್ಗರೆದರೂ
ತೆರೆಯಾಗಿ
ಕೆನ್ನೆಯ ದಡವ
ಸೇರುವ ಭಾಗ್ಯ
ಪ್ರತೀ ಕಣ್ಣೀರ
ಹನಿಗೂ ಸಿಗಲಾರದೇ...?

Wednesday, 18 April 2012

ಹುಡುಕಾಟ


ಅವಳೆನ್ನ
ತೊರೆದ
ನಂತರ
ನನ್ನ ಮನದ
ಚಡಪಡಿಕೆಯ
ನೋಡಲಾಗದೆ,
ನನ್ನ ಕಣ್ಣೊಳಗಿನ
ಕಣ್ಣೀರುಗಳು
ಸಾಲು ಸಾಲಾಗಿ
ಕೆನ್ನೆಯ ಹಾದಿಯಲಿ
ಅವಳ ಹುಡುಕಿ
ಕರೆತರಲು ಹೊರಟಿದೆ.

Sunday, 15 April 2012

ಬೇಟೆ


ಅವಳ
ಕನಸುಗಳ
ಬೇಟೆಗೆ,
ಮನಸೀಗ
ಹೊರಟಿಹುದು
ನಿದಿರೆಯಾ
ಕಾಡಿಗೆ.

ಅಮ್ಮ


ನನ್ನೊಡನೆ ಅವರಿವರಂದರು
ಬರಿಯ "ಅವಳ" ಕುರಿತೇ ಬರೆಯುವೆಯಲ್ಲ...
"ಅಮ್ಮ"ನ ಬಗೆಗೇಕೆ ಬರೆಯೋಲ್ಲ...?
ಮನದಲ್ಲಿ ನಸುನಕ್ಕು ನಾನಂದೆ
ಮಮತೆಯ ಗರ್ಭಗುಡಿಯಲಿ ರಾರಾಜಿಸೋ ದೇವಿಯವಳು
ನನ್ನೊಳಗಿರುವ ಅಲ್ಪ ಪದಗಳ ಗುಡಿಸಲಿನಲಿ
ಆ ದೇವತೆಯ ಹೇಗೆ ಕುಳ್ಳಿರಿಸಲಿ..?
ವಾತ್ಸಲ್ಯದ ಮಹಾ ಶರಧಿಯವಳು
ನನ್ನೀ ಪದಗಳ ಬೊಗಸೆಯಲಿ 
ಆ ಕಡಲ ನೀರನೆಲ್ಲಾ ಹೇಗೆ ತುಂಬಿಕೊಳಲಿ...?
ಸ್ವಾರ್ಥವಿರದ ನಿಷ್ಕಲ್ಮಶ ಪ್ರೇಮದ ದಿವ್ಯ ಪ್ರಭೆ ಅವಳು
ನನ್ನ ಪದಗಳ ಸಣ್ಣ ಹಣತೆಯಲಿ
ಆ ಮಹಾನ್ ಜ್ಯೋತಿಯ ಹೇಗೆ ಹಿಡಿದಿಟ್ಟುಕೊಳಲಿ..?
ಪಟ್ಟಿ ಮಾಡಿದರೆ ದೊಡ್ಡ ಗ್ರಂಥಗಳಲೂ ಹಿಡಿಸಲಾರದಂಥ
ಅವಳ ಸಾವಿರಾರು ಗುಣ ವಿಶೇಷತೆಗಳ 
ನನ್ನ ಕವಿತೆಯೆನುವ ಸಣ್ಣ ಹಾಳೆಯಲಿ
ನಾ ಯಾವ ರೀತಿಯಲಿ ಬರೆದು ಮುಗಿಸಲಿ...?
ಹೇಳಿ ನೀವಿಗ, "ಅಮ್ಮ"ನ ಕುರಿತು ನಾನೇನ ಬರೆಯಲಿ...?
ಮುಗಿಯಲಾರದ ಕವನವ ನಾ ಹೇಗೆ ಆರಂಭಿಸಲಿ..?

Friday, 13 April 2012


ಒದ್ದೆಯಾಗಿ ಹೋಗಿದ್ದ
ನನ್ನ ಅಂಗಿಯ ಕಂಡು
ಆಗ ತಾನೆ ಬಂದ
ನನ್ನ ಪ್ರೇಯಸಿ ಅಂದಳು
ನಾನಿಲ್ಲದಿರುವಾಗ
ನನಗಾಗಿ ಸುರಿಸಿದೆಯಾ
ಇಷ್ಟೊಂದು ಕಣ್ಣೀರು,
ನಾನಂದೆ ಪ್ರಿಯೆ
ಸ್ವಲ್ಪ ಸುಮ್ಮನಿರು,
ಮಂಗಳೂರಿನ
ಸೆಖೆಗೆ ಯಾರಿಗೆ
ತಾನೆ ಬರೋಲ್ಲ ಹೇಳು
ಇಷ್ಟೊಂದು ಬೆವರು..?

Wednesday, 11 April 2012

ಅಕ್ಕನ ಮದುವೆ...


ನನ್ನಕ್ಕನ ಮದುವೆಯ ದಿನ ನಿಶ್ಚಯವಾದಂದಿನಿಂದ ಅದೇನೋ ಸಡಗರವಿತ್ತು,
ಪ್ರತಿಯೊಂದು ತಯಾರಿಗಳ ಒದ್ದಾಟ, ಓಡಾಟದಲೂ ಅದೇನೋ ಸಂಭ್ರಮವಿತ್ತು,
ಮದುವೆಯ ದಿನದ ಪ್ರತಿಯೊಂದು ಸಂಪ್ರದಾಯವನು ಆಸ್ವಾದಿಸಿದರೂ...
ಕೊನೆಯಲ್ಲಿ ನನ್ನಕ್ಕನ ಕಳುಹಿಸಿ ಕೊಡುವ ಸಮಯವಾದಾಗ
ಅದುವರೆಗಿನ ನಮ್ಮವರೆಲ್ಲರ ಸಡಗರ ಮಾಯವಾಗಿದ್ದು ಯಾಕೆ..?

ಬಂದಿದ್ದ ನೆಂಟರಿಷ್ಟರೆಲ್ಲರೊಂದಿಗೆ ದಿಬ್ಬಣದ ಪ್ರಯಾಣವೂ ಖುಷಿ ತಂದಿತ್ತು,
ವರನ ಕಡೆಯವರೆಲ್ಲರನು ಉಪಚರಿಸುವಾಗಲು ಮನವು ಆನಂದಲಿತ್ತು,
ಸಂತಸದಲೇ ಭಾವನವರ ಕಾಲನು ನಾ ತೊಳೆದರೂ...
ಕೊನೆಯಲ್ಲಿ ನನ್ನಕ್ಕನ ಅವರ ಬಳಿಗೇ ಕಳುಹಿಸಲು ಮುಂದಾದಾಗ
ಅದುವರೆಗಿನ ನನ್ನಲ್ಲಿನ ಆನಂದ ಮರೆಯಾಗಿದ್ದು ಯಾಕೆ..?

ಮದುಮಗಳಾಗಿ ನನ್ನಕ್ಕ ಮಂಟಪಕೆ ಬರುತಿರಲು ಅವಳ ತುಟಿಯಲ್ಲಿ ನಗುವಿತ್ತು,
ಗಟ್ಟಿಮೇಳದ ನಾದದೊಂದಿಗೆ ಹಾರವ ಬದಲಾಯಿಸುವಾಗ ಸಣ್ಣದೊಂದು ನಡುಕವಿತ್ತು
ತಾಳಿಯನು ಕಟ್ಟಿದ  ಪತಿಯಿಂದ ಓಕುಳಿಯಾಟದಲಿ ಸೋತು ಹೋದರೂ..
ನಗುತಲೇ ಇದ್ದ ನನ್ನಕ್ಕ, ಕೊನೆಯಲ್ಲಿ ಅತ್ತ ಹೊರಡಲನುವಾದಾಗ,
ಅದುವರೆಗೆ ಸಂಭ್ರಮದ ಮಿಂಚಿದ್ದ ಅವಳ ಕಣ್ಣಲ್ಲಿ, ಕಣ್ಣೀರ ಧಾರೆ ಸುರಿದದ್ದು ಯಾಕೆ..?

ಅಚ್ಚುಕಟ್ಟಾಗಿ ಮದುವೆಯು ನಡೆದುದರ ತೃಪ್ತಿ ನನ್ನ  ಮನಸಲ್ಲಿತ್ತು
ಬಂದ ಬಂಧು ಮಿತ್ರರನೆಲ್ಲ ಸರಿಯಾಗಿ ಉಪಚರಿಸಿದ ಸಂತೋಷವಿತ್ತು,
ತಮ್ಮನಾದರೇನಂತೆ ಗಂಡು ನಾನಾದ್ದರಿಂದ ಕಣ್ ರೆಪ್ಪೆಯ ಕದವ ಮುಚ್ಚಿದ್ದರೂ..
ಕೊನೆಯಲ್ಲಿ ಅಳುಮೊಗದಿ ಅಪ್ಪ ಅಮ್ಮ .. ನನ್ನಕ್ಕನ ದಾನ ಮಾಡಿದಾಗ
ಮುಚ್ಚಿದ್ದ ಕಣ್ ರೆಪ್ಪೆಯ ಸಂದಿನಿಂದ ಒಂದೆರಡು ಕಣ್ಣೀರ ಹನಿಗಳು ಹೊರ ಬಂದಿದ್ದು ಯಾಕೆ..?

ಇದು ಸರಿಯೇ...?


ಹಳದಿ ಮತ್ತೆ ಕೆಂಪು,
ಹೀಗೆ ಬಣ್ಣ ಬಣ್ಣದ
ಬಟ್ಟೆಯ ನಿನ್ನೊಡನೆಯೆ
ಇಟ್ಟುಕೊಂಡೆಯಲ್ಲಾ,
ಚಂದಿರಗೆ ಕಲೆಯಿರುವ
ಬಿಳುಪಿನ ಬಟ್ಟೆಯೊಂದನೇ
ಕೊಟ್ಟು ಬಿಟ್ಟೆಯಲ್ಲಾ,
ರವಿಯೇ... ಇದು ಸರಿಯೇ..?

ಮುಸ್ಸಂಜೆಯಲಿ
ಅವುಗಳನೆಲ್ಲಾ
ಒಂದೊಂದಾಗಿ
ತೊಟ್ಟುಕೊಂಡು,
ಚಂದಿರನು ಬರುವ ಮನ್ನವೇ
ವಸುಧೆಯೆದುರು
ಮಿಂಚತೊಡಗಿದೆಯಲ್ಲಾ
ರವಿಯೇ... ಇದು ಸರಿಯೇ..?

ಕಡಲ ನೀರಿಗಿಳಿದು
ತೆರೆಗಳ ರೂಪದಿ
ಇಳೆಯ ತನುವಿಗೆ
ನೀರನೆರಚಿ
ಜಲಕ್ರೀಡೆಯಾಡುತ
ಚಂದಿರನಿಗರಿಯದಂತೆ
ಇಳೆಯ ರಮಿಸತೊಡಗಿದೆಯಲ್ಲಾ
ರವಿಯೇ... ಇದು ಸರಿಯೇ..?

ನಿನ್ನೀ ಮೋಸದಾಟವನು
ಕಂಡು, ಮನನೊಂದು
ಶಶಿಯು ಭುವಿಯ
ಬಳಿ ಬರುವುದನೆ ಬಿಟ್ಟಿಹನಲ್ಲ,
ಕಡಲ ನೀರಿಗಿಳಿಯುತಿಲ್ಲವಲ್ಲ,
ಮನವ ಕಲ್ಲಾಗಿಸಿ ಬೆಳೆದರೂ
ಪಕ್ಷವೊಂದರಲೆ ಸೊರಗಿಹೋಗುವನಲ್ಲ
ರವಿಯೇ ನಿಜವ ಹೇಳು ...
ನೀ ಮಾಡಿದುದು ಸರಿಯೇ...?


Tuesday, 10 April 2012

ಐ.ಪಿ.ಎಲ್


ಸಿನಿಮಾ ರಂಗವಿದೆ
ಶಾರೂಖ್ ಖಾನನಿಗೆ
ನಟಿಸಿ ಕೋಟಿ
ಹಣವ ಸಂಪಾದಿಸಲು
ಆರಾಮದಲಿ
ಬಂದ ಈ ಹಣವ
ಕಳೆದುಕೊಳ್ಳೋಕೆ
ಇದೆಯಲ್ಲಾ ಐ.ಪಿ.ಎಲ್ಲು

ಕನಸುಗಳು


ಸಾಲು ಸಾಲು
ವಿಭಿನ್ನ ಕನಸುಗಳು
ನನ್ನ ನಿದಿರೆಯಾ
ಮನೆಯೊಳಗೆ ಬರಲು
ಹಾತೊರೆಯುತ್ತಿದ್ದರೂ,
ನನ್ನೊಳಗಿನ ಪ್ರೇಮಿ
ಕದವ ತೆರೆದು
ಒಳಕರೆದು ತಂದದ್ದು
"ಅವಳ" ಬಗೆಗಿನ
ಕನಸುಗಳನ್ನು ಮಾತ್ರ...

ಕತ್ತಲು


ಪ್ರೀತಿಯ ಲೋಕವೂ
ಶುಭ್ರ ನೀಲಕಾಶದಂತೆ
ಎನುವ ನನ್ನ ಕಲ್ಪನೆಯು
ಸುಳ್ಳಾಗಿ ಹೋಯಿತು,
ಅವಳೆನುವ ಸೂರ್ಯ
ಕಡಲಾಚೆಗೆ ಹೋದೊಡನೆ
ನನ್ನ  ಪ್ರೀತಿಯ
ಬಾನಿನಲೂ ಕತ್ತಲಾಯಿತು.

Sunday, 8 April 2012

ಸಾಂತ್ವಾನ


ಹಸಿರು ಹಸಿರಾದ
ಇಳೆಯ ಮತ್ಸರದಲಿ
ಕಂಡು ರವಿಯು
ಮಾಡಿದನು ಶೋಷಣೆಯ,
ಬಿಡುತ ಭುವಿಯೆಡೆಗೆ
ಬಿಸಿಲ ಉರಿಕಿರಣ;
ಒಣಗುತಿಹ ಸಸ್ಯರಾಶಿಯ
ಕಂಡು  ಮರುಗಿ
ಮೇಘಗಳು ಕರಗಿ
ಮಾಡಿದವು ಪೋಷಣೆಯ,
ಕೊಡುತ ಮಳೆಹನಿಯ
ರೂಪದ ಸಾಂತ್ವಾನ.

Thursday, 5 April 2012

ತವಕ


ಹಗಲು ಪೂರ್ತಿ
ಕಣ್ಣೆತ್ತಿ ನೋಡದೆ
ಉಪಯೋಗಿಸುವರು
ರವಿಯೇ, ನಿನ್ನ ಬೆಳಕ
ಈ ಜನರೇ ಹಾಗೆ
ಮುಂಜಾನೆ, ಮುಸ್ಸಂಜೆಯಲಿ
ನಿನ್ನ ಹುಟ್ಟು, ಸಾವನಷ್ಟೇ
ನೋಡಲವರಿಗೆ ತವಕ





Tuesday, 3 April 2012

ಬೇಡಿಕೆ




ತಲೆಯ ಮೇಲೆ
ಕೈ ಇಟ್ಟು
ಕುಳಿತಿದ್ದಾರಂತೆ
ಕೇರಳದ ಮುಖ್ಯಮಂತ್ರಿ,
ಹಂಗಾಮಿ ರಾಜ್ಯಪಾಲರ
ಬೇಡಿಕೆಯೊಂದನ್ನು ನೋಡಿ,
ಇರುವ ಎಂಟು
ಕಾರು ಸಾಲದೆ,
ತಿರುಗಾಡೋಕೆ
ಬೇಕಂತೆ ಇವರಿಗೆ
ಎಂಭತ್ತು ಲಕ್ಷದ
ಐಷಾರಾಮಿ
ಕಾರು "ಆಡಿ".

---ಕೆ.ಗುರುಪ್ರಸಾದ್

ಸುದ್ದಿ : ಕೇರಳದ ಹಂಗಾಮಿ ರಾಜ್ಯಪಾಲರಿಂದ (ಪ್ರಸ್ತುತ ಇವರು ಕರ್ನಾಟಕದ ಪ್ರಸಿದ್ಧ ರಾಜ್ಯಪಾಲರು) ಅಲ್ಲಿನ ಸರ್ಕಾರಕ್ಕೆ ಹೊಸ ಬೇಡಿಕೆ ಅವರಿಗೆ "ಆಡಿ "ಕಾರು ಬೇಕಂತೆ.

ಹೀಗೇಕೆ...?


ಸುಖವಾದ
ನಿದ್ದೆಯಿಂದ
ಆದೊಡನೆ
ಎಚ್ಚರಿಕೆ;
ಹೆಚ್ಚಿನವರಿಗೆ
ಬರುವುದೇಕೆ
ಮೈಯಲ್ಲಿ
ಅಲ್ಲಲ್ಲಿ ತುರಿಕೆ...?

ನಿದಿರೆ


ಮಿಲನಕ್ಕೆ ಹಾತೊರೆಯುತ್ತಿರುವ 
ನನ್ನೆರಡು ಕಣ್ಣಿನ ರೆಪ್ಪೆಗಳು;
ತಲೆದಿಂಬಿನ ಮುತ್ತನ್ನು
ಪಡೆಯುವಾಸೆಯಲಿಹ ನನ್ನ ಕೆನ್ನೆಗಳು.


ಹೊದಿಕೆಯೊಂದರ ಆಲಿಂಗನದ
ಆಸೆಯಲಿಹುದೆನ್ನ ಕಾಯ;
ಪ್ರತಿದಿನವೂ ಹೀಗೆಯೇ
ನನ್ನ ನಿದಿರೆ ಸಂಪೂರ್ಣ ಶೃಂಗಾರಮಯ.

ನೋವು


ದಢೂತಿ ದೇಹದವನ
ಬಳಿ ಕುಳಿತು
ಪ್ರಯಾಣಿಸಿದ್ದರಿಂದಾಗಿ
ಇಂದು ನನ್ನ
ಮೈಯೆಲ್ಲಾ ನೋವು,
ಯಾಕೆಂದರೆ
ದಾರಿಯಲ್ಲಿ ಸಿಕ್ಕ
ಘಾಟಿಯಲ್ಲಿ ಇತ್ತಲ್ಲ
ಹತ್ತಿಪ್ಪತ್ತು
"ಹಿ" ತಿರುವು.

Monday, 2 April 2012

ಭಾಗ್ಯ


ಅದೆಷ್ಟೇ
ಪುಣ್ಯದ
ಕೆಲಸವ
ಮಾಡಿದರೂ,
ಅದೆಷ್ಟೇ
ಭಗೀರಥ
ಪ್ರಯತ್ನವ
ಮಾಡಿದರೂ,
ಮತ್ತೆ ಮತ್ತೆ
ಹೆತ್ತ ತಾಯಿಯ
ಗರ್ಭವನು
ಸೇರುವ
ಪರಮ ಭಾಗ್ಯ
ಬರಿಯ
ದಿನಕರನಿಗಷ್ಟೇ
ಸೀಮಿತ

Sunday, 1 April 2012

ರಾಮ


ಮೊದಲಿನವರಿಗೆ
ಬೇಕಾಗಿದ್ದುದು
ಸೀತಾ ರಾಮ;
ಈಗಿನವರಿಗೆ
ಬೇಕಾಗಿರುವುದು
ಬರಿಯ ಆರಾಮ.

ಕಾವಲು




ಮುಸ್ಸಂಜೆಯಲಿ
ಕಾಣದ
ಕಡಲ
ತಳದೂರಿಗೆ
ನೇಸರ
ಹೋಗಿರಲು,
ಆಗಸವೆನುವ
ಅವನ
ತವರೂರಿಗೆ
ಕೋಟಿ
ತಾರೆಯರದೇ
ಕಾವಲು