Wednesday, 11 April 2012

ಇದು ಸರಿಯೇ...?


ಹಳದಿ ಮತ್ತೆ ಕೆಂಪು,
ಹೀಗೆ ಬಣ್ಣ ಬಣ್ಣದ
ಬಟ್ಟೆಯ ನಿನ್ನೊಡನೆಯೆ
ಇಟ್ಟುಕೊಂಡೆಯಲ್ಲಾ,
ಚಂದಿರಗೆ ಕಲೆಯಿರುವ
ಬಿಳುಪಿನ ಬಟ್ಟೆಯೊಂದನೇ
ಕೊಟ್ಟು ಬಿಟ್ಟೆಯಲ್ಲಾ,
ರವಿಯೇ... ಇದು ಸರಿಯೇ..?

ಮುಸ್ಸಂಜೆಯಲಿ
ಅವುಗಳನೆಲ್ಲಾ
ಒಂದೊಂದಾಗಿ
ತೊಟ್ಟುಕೊಂಡು,
ಚಂದಿರನು ಬರುವ ಮನ್ನವೇ
ವಸುಧೆಯೆದುರು
ಮಿಂಚತೊಡಗಿದೆಯಲ್ಲಾ
ರವಿಯೇ... ಇದು ಸರಿಯೇ..?

ಕಡಲ ನೀರಿಗಿಳಿದು
ತೆರೆಗಳ ರೂಪದಿ
ಇಳೆಯ ತನುವಿಗೆ
ನೀರನೆರಚಿ
ಜಲಕ್ರೀಡೆಯಾಡುತ
ಚಂದಿರನಿಗರಿಯದಂತೆ
ಇಳೆಯ ರಮಿಸತೊಡಗಿದೆಯಲ್ಲಾ
ರವಿಯೇ... ಇದು ಸರಿಯೇ..?

ನಿನ್ನೀ ಮೋಸದಾಟವನು
ಕಂಡು, ಮನನೊಂದು
ಶಶಿಯು ಭುವಿಯ
ಬಳಿ ಬರುವುದನೆ ಬಿಟ್ಟಿಹನಲ್ಲ,
ಕಡಲ ನೀರಿಗಿಳಿಯುತಿಲ್ಲವಲ್ಲ,
ಮನವ ಕಲ್ಲಾಗಿಸಿ ಬೆಳೆದರೂ
ಪಕ್ಷವೊಂದರಲೆ ಸೊರಗಿಹೋಗುವನಲ್ಲ
ರವಿಯೇ ನಿಜವ ಹೇಳು ...
ನೀ ಮಾಡಿದುದು ಸರಿಯೇ...?


No comments:

Post a Comment