Wednesday, 24 October 2012

ಮತ್ಸರ...

ಏಕಾಂತದ
ಮಸ್ಸಂಜೆಯಲಿ,
ತನ್ನ ನೆನಪುಗಳಿಂದ
ಕಾಡತೊಡಗಿದ
ನನ್ನವಳ
ನಾ ಹುಡುಕಲು
ಹೊರಟಾಗ,
ಆ ಬಾನ ಭಾಸ್ಕರ
ಸಿಡುಕಿ ಕೆಂಪಾಗಿ
ಕಡಲ ಮರೆಗೋಡಿ
ಜಗಕೆ ಕತ್ತಲನಿತ್ತನಲ್ಲ;
ಬಹುಶಃ ಅವನಿಗೆ
ನನಗವಳು ಸಿಗುವುದ
ನೋಡಲು ಇಷ್ಟವಿಲ್ಲ

ದಾಹ


ದಿನವಿಡೀ ಜಗವ ನೋಡಿ
ದಣಿದ ನನ್ನ ಕಂಗಳ
ದಾಹ ತೀರುವುದು ,
ಇರುಳ ನದಿಯಿಂದ
ಬೊಗಸೆಯಲಿ ತಂದ
ನಿದಿರೆಯೆಂಬ ಸಿಹಿ ನೀರ
ಕುಡಿದಾಗಲೇ...

ಬಂಧ-ಮುಕ್ತಿ

ಕಾವ್ಯವಾಗಬೇಕಿದ್ದ
ಪದಪುಂಜಗಳು
ಮರೆವಿನ
ಬಂಧನದೊಳಗಿದ್ದರೂ
ಅವುಗಳಿಗೆ
ಒಂದಿನಿತೂ
ಬೇಸರವಿಲ್ಲ;
ಬಂಧಮುಕ್ತಿಗೊಳಿಸಿ
ಕಾಗದದರಮನೆಗೆ
ಅವುಗಳ
ಕರೆತರದೆ
ನನ್ನೊಳಗಿನ
ಚಡಪಡಿಕೆಗೆ
ಮುಕ್ತಿಯಿಲ್ಲ.

ಪರಿಚಯ

ತೆರೆದ ಕಣ್ಣಿಗೂ
ಕಾಣಿಸದ
ಅಪರಿಚಿತರ
ಮನದೊಳಗಿನ
ಗುಣವನರಿಯಲು
ಪರಿಚಯವೆನುವ
ಬಾಗಿಲನು
ತೆರೆಯಲೇಬೇಕು

ಆಯುಧ ಪೂಜೆ

ಮಗನೋರ್ವ
ತನ್ನವಳ ಕಣ್ಣಿಗೆ
ಪೂಜೆ ಮಾಡಹೊರಟ
ಕಣ್ಣೋಟವೇ
ನಿನ್ನ ಆಯುಧವೆಂದು,
ಅದ ನೋಡಿದ ತಂದೆ
ಆರತಿ ತಟ್ಟೆಯೊಡನೆ
ಅವರಾಕೆಯ ಪೀಡಿಸುತ್ತಿದ್ದಾರಂತೆ
ನೀನೊಮ್ಮೆ ನಾಲಗೆಯ
ಹೊರಹಾಕೆಂದು...

Sunday, 14 October 2012

ಈ ಸಂಜೆಯ ಮಳೆ

ಈ ದಿನದ ಮುಸ್ಸಂಜೆಯಲಿ,
ಹಠಾತ್ತನೆ ಸುರಿದ ವರ್ಷಧಾರೆಯ
ಕಂಡಾಗ ನನಗನಿಸಿದ್ದು;
ನವರಾತ್ರಿಯಲಿ,ನವರೂಪದಲಿ
ಜಗದಾದಿಮಾಯೆ ಭುವಿಗಿಳಿದು
ಬರುವಳೆನ್ನುವ ಮಾಹಿತಿಯ
ಪಡೆದೊಡನೆ,
ದೇವನದಿ ಗಂಗೆಯೇ
ಮೋಡಗಳ ಗರ್ಭದಿಂದ
ಮಳೆಹನಿಯಾಗಿ ಜನ್ಮ ತಳೆದು
ಭುವಿಯ ಶುಚಿಗೊಳಿಸಲು
ಓಡೋಡಿ ಬರುತಿಹಳೇ...?

ದಾರಿದೀಪ

ಎಲ್ಲೆಡೆಯೂ
ಕವಿದ
ಕತ್ತಲು
ಬೆಳಕಿನೆಡೆಗೆ
ಹೋಗುವ
ಹಾದಿಯನೇ
ಮರೆಮಾಚಿದಾಗ
ದಾರಿದೀಪವಾಗಿ
ಬಳಿ ಬಂದಿತ್ತು
ಸಿಹಿ ಕನಸು..

ಲೂಡೋ..


ಹದಿನಾರು ಕಾಯಿಗಳಿರುವುದು ಬಂಧನದಲ್ಲಿ
ನಾಲ್ಕು ಬಗೆಯ ಬಣ್ಣದ ಸೆರೆಮನೆಯಲ್ಲಿ
ಬಂಧನದ ನೋವಿರುವುದು ದಾಳದಲಿ ಆರು ಬೀಳುವ ತನಕ
ಬಿದ್ದೊಡನೆ ಎಲ್ಲದಕೂ ತಮ್ಮ ತಮ್ಮ ಮನೆಯ ಸೇರುವ ತವಕ

ಒಂದು ಸುತ್ತು ಸುತ್ತಬೇಕು ಸಿಗಲು ಮನೆಯ ದಾರಿ
ಅವರಿವರ ಕಡಿತಕ್ಕೊಳಗಾಗದೇ ಸಾಗಬೇಕು ಜಾಗರೂಕರಾಗಿ
ಕಡಿತಕ್ಕೊಳಗಾದರೆ ಮತ್ತೆ ಹೋಗಿ ಬೀಳುವುದು ಸೆರೆಮನೆಯಲ್ಲಿ
ಇನ್ನೊಬ್ಬರ ಕಡಿಯಲೇಬೇಕು ಮನೆಯಂಗಳವ ತುಳಿಯಬೇಕಾದಲ್ಲಿ

ಜೀವನಕೂ, ಈ ಮೋಜಿನಾಟಕೂ ಇದೆಯೆಂದೆನಿಸುತಿದೆ ಹೋಲಿಕೆ
ಸಾವಿನೆಡೆಗೆ ಸಾಗುವ ನಾವೆಲ್ಲ ಕಾಯಿಗಳು, ಭಗವಂತನೆನುವ ದಾಳಕೆ
ಕಷ್ಟಗಳ ಕಡಿತ, ಸುಖದ ಜಿಗಿತ ಇವುಗಳೆಲ್ಲ ಸಿಗುತ ಸಾಗುವುದು ಪಯಣ
ನಾವಿಡುವ ಪ್ರತಿ ಹೆಜ್ಜೆಗೂ ದಾಳ ರೂಪಿ ಭಗವಂತನದೇ ನಿರ್ದೇಶನ.

Friday, 12 October 2012

ಗಾಯ



ಎಲ್ಲರಿಗೂ ಕಾಣಿಸುವಂತೆ
ತನುವಿಗೆ ಗಾಯ ಮಾಡಿದ್ದಿದ್ದರೆ
ಸ್ವಲ್ಪ ಹೊತ್ತು ನೆತ್ತರು ಹರಿದು,
ಮತ್ತೊಂದಿಷ್ಟು ಹೊತ್ತಿನಲಿ ಹೆಪ್ಪುಗಟ್ಟಿ
ಗಾಯ ಒಣಗಿ ಹೋಗುತ್ತಿತ್ತು;
ಆದರೆ ಆಕೆ ಬಲು ಜಾಣೆ
ಮೆಲ್ಲನೆ ಮೆಲ್ಲಗೆ ಗೊತ್ತಾಗದಂತೆ
ಕಿತ್ತು ಹಾಕಿ ಬಿಟ್ಟಳು
ನನ್ನ ಕಣ್ಣ ಮೇಲಿದ್ದ
ಪ್ರೀತಿಯ ಪೊರೆ;
ನೋಡುವವರ್ಯಾರಿಗೂ
ಕಾಣಿಸದ ಈ ಗಾಯ
ವಾಸಿಯಾಗುವ ಲಕ್ಷಣವೇ ಇಲ್ಲ
ಉಕ್ಕಿ ಹರಿವ ನದಿಯಂತೆ
ಬರುತಿದೆಯಲ್ಲಾ....
ಈ ಗಾಯದೊಳಗಿಂದ
ಹೆಪ್ಪುಗಟ್ಟಲರಿಯದ
ಕಣ್ಣೀರ ಧಾರೆ.

Monday, 8 October 2012

ಇದೆಂಥಾ ನ್ಯಾಯ...?

ಸಂತಸದ ನಗುವಿನ
ಸರಮಾಲೆ ಇದ್ದಾಗ
ಬರುವುದಿಲ್ಲ ಪರಮಾತ್ಮ
ನಮ್ಮ ನೆನಪಿನ
ಪರಿಧಿಯೊಳಗೆ;
ದುಃಖದ ಮೋಡ
ಆವರಿಸಿ ಕಣ್ಣಿಂದ
ಒಂದು ಕಣ್ಣೀರ ಹನಿ
ಹೊರ ಬಿದ್ದೊಡನೆ
ಭಗವಂತ ದೂರುಗಳ
ಕಟಕಟೆಯೊಳಗೆ.

ಮುಕ್ತಿ...

ಮುಂಜಾನೆಯಲಿ...
ಬೊಗಸೆಯೊಳಗೆ
ತುಂಬಿಸಿಕೊಂಡು,
ಮುಖಕ್ಕೆ ಚಿಮ್ಮಿಸಿದ
ತಣ್ಣಗಿನ ನೀರಧಾರೆಗೆ,
ಮುಕ್ತಿ ಕೊಡುವ
ಶಕ್ತಿ ಇದೆಯೆಂದು
ಗೊತ್ತಾದದ್ದು ಈಗ,
ನನ್ನಾವರಿಸಿದ
ಜಡಾಸುರನ
ಬಾಹುಬಂಧನದಿಂದ
ನಾ ಹೊರಬಂದಾಗ.

ಮುಗಿದ ಅಧ್ಯಾಯ

ನನ್ನ ಬಾಳಲಿ ಅವಳೊಂದು
ಮುಗಿದ ಅಧ್ಯಾಯವಾಗಿದ್ದರೂ
ಈ ತಂಗಾಳಿಗೇನೋ
ತೀರದ ಕುತೂಹಲ...
ನನ್ನ ಮನದ ಪುಸ್ತಕದಲಿರುವ
ಅವಳ ಬಗೆಗಿನ ಭಾವನೆಯ
ನೋಡೋ ತವಕ...
ನಾ ಏಕಾಂತದಲಿರುವಾಗಲೆಲ್ಲಾ
ಬೀಸಿ ಬಂದು
ಮನದ ಪುಟಗಳನೆಲ್ಲಾ
ತಿರುವಿ ಹುಡುಕಾಡುವುದದು
ಆದರಲ್ಲಿ ತಂಗಾಳಿಗೆ ಕಾಣಸಿಕ್ಕಿದ್ದು
ಬರಿಯ ಖಾಲಿ ಹಾಳೆಗಳು..
ಬರೆದಿದ್ದ ಸಾಲುಗಳೆಲ್ಲಾ
ಕಾಣಿಸುವುದಾದರೂ ಹೇಗೆ..?
ಅಳಿಸಿ ಹಾಕಿತ್ತಲ್ಲಾ ಅದನೆಲ್ಲಾ
ಮುಚ್ಚಿದ ಕಂಗಳಿಂದ ಹೊರಬಂದಿದ್ದ
ನನ್ನ ಕಣ್ಣೀರ ಹನಿಗಳು..

ವಿಚಿತ್ರ ಹುಡುಗಿ

ನಾನವಳ ಬಳಿ
ಹೇಳಿದ್ದು ಇಷ್ಟೇ..
ಹೃದಯದಲಿಟ್ಟಿರುವೆ ನಿನ್ನ,
ಬಗೆದು ತೋರಿಸಲೇ...
ಜಗಕೆ ತಿಳಿಸಲೇ..
ಕಲಿಯುಗದ ಮಾರುತಿ ನಾನು.
ವಿಚಿತ್ರ ಹುಡುಗಿ...
ಕನ್ನಡಿಯ ನನ್ನ ಕೈಗಿತ್ತು
ಸಾಧಿಸಿ ತೋರಿಸಿದ
ನಗೆಯೊಂದ ಬೀರಿ
ಹೊರಟು ಹೋದಳಲ್ಲಾ..
ಅವಳು ಹೇಳಿದ್ದಾದರೂ ಏನು ?

ಕಾವ್ಯೋದಯ

ಸಮಯಕ್ಕೆ ಸರಿಯಾಗಿ
ರವಿಯೇನೋ
ಕಡಲ ತೊರೆದು
ಮೇಲೇರಿ ಬಂದು ಬಿಟ್ಟ,
ಆದರೆ, ಅವನಾಗಮನದ
ಸೊಬಗ ಬಣ್ಣಿಸುವ
ಕವನ ಮಾತ್ರ
ನನ್ನ ಮನದ ಕಡಲೊಳಗೇ
ಉಳಿದುಕೊಂಡಿದೆ,
ಕಾಗದದ ಬಾನ ಬೆಳಗೋ
ಲಕ್ಷಣವೇ ಕಾಣದಾಗಿದೆ.

ಮನದ ಮಾತು..

ಅದೆಷ್ಟೋ ಬಾರಿ
ಅವಳೆದುರು ಸಿಕ್ಕಾಗ
ನನಗನ್ನಿಸಿತ್ತು..;
ನನ್ನ ಮನದ ಮಾತುಗಳು
ಅವಳಿಗೆ ಕೇಳಿಸುವ
ಹಾಗಿದ್ದಿದ್ದರೆ ಎಷ್ಟು
ಚೆನ್ನಾಗಿರುತ್ತಿತ್ತು....
ಮೆಲ್ಲಗೆ ಚಿವುಟಿ
ಭ್ರಮೆಯ ಲೋಕದಿಂದ
ಹೊರ ತಂದ ನನ್ನಾತ್ಮ
ಮುಸಿ ಮುಸಿ ನಗುತ್ತಾ
ಪಿಸುಗುಟ್ಟಿತು...
" ಪ್ರೀತಿಸುವುದಿಲ್ಲ "
ಎನುವ ಅವಳ
ಮನದ ಮಾತುಗಳು
ನಿನಗೆ ಗೊತ್ತಾಗಿರುತ್ತಿತ್ತು...