ಸಾಕು ನಿಲ್ಲಿಸಿ ಬಯಕೆಗಳೇ...
ನನ್ನೆದೆಯ ಅಂಗಣದಲಿನ
ನಿಮ್ಮ ನಲಿದಾಟ,
ಸಾಕು ನಿಲ್ಲಿಸಿ ಕನಸುಗಳೇ
ಇರುಳ ನೀರವತೆಯಲ್ಲಿ
ಮುಚ್ಚಿದ ಕಂಗಳೆದುರಿನ
ನಿಮ್ಮ ಅಲೆದಾಟ.
ನನ್ನ ಬಿಟ್ಟು ದೂರ ಸಾಗಿ
ನನಗೀಗ ನನ್ನ ಗಟ್ಟಿಗೊಳಿಸಬೇಕಾಗಿದೆ.
ತಪ್ಪು ನಿಮ್ಮದೇನಿಲ್ಲ.
ನೀವುಗಳು ಸದಾ
ಖುಷಿಯ ಕಚಗುಳಿಯಿಡುವವರೇ,
ಆದರೆ ನಾನಿರಬೇಕಾಗಿರುವುದು
ಕಲ್ಪನೆಯಲಲ್ಲ, ವಾಸ್ತವದಲಿ
ನಿಮ್ಮಪ್ಪುಗೆಯ ಹಿತಕಿಂತಲೂ
ಹೆಚ್ಚಿಗೆ ವಾಸ್ತವವು ಕಾಡುತ್ತದೆ.
ಅದಕಾಗೇ ನನ್ನ ಅದರ
ಜೊತೆಗೇನೆ ಬಿಟ್ಟು ಬಿಡಿ,
ಸಿಹಿಯ ಅರಿವಿರದಾಗ
ಕಹಿಯೇ ಸಿಹಿಯಾಗುವಂತೆ
ನನಗೀಗ ಜೀವಿಸಬೇಕಾಗಿದೆ,
ನೀವು ಬಣ್ಣ ಬಳಿದು ತೋರಿಸಿದುದಲ್ಲ,
ಜನರು ಹಿಡಿದ ಕೈಗನ್ನಡಿಯಲಿ
ಕಾಣುವುದೇ ನನ್ನ ಯೋಗ್ಯತೆ,
ಎನುವುದನು ನಾ
ನನ್ನ ಮನಕೆ ತಿಳಿಸಬೇಕಾಗಿದೆ...
ತಿಳಿಸಿ ಅದರಲೇ ಬಾಳ
ಸವೆಸುವ ಪಾಠವ
ನಾ ಹೇಳಿ ಕೊಡಬೇಕಾಗಿದೆ...
ಅದಕಾಗಿ ಈ ಕೋರಿಕೆ...
ಹೊರಟು ಹೋಗಿ ಬಯಕೆಗಳೇ...
ತೊರೆದು ಹೋಗಿ ಕನಸುಗಳೇ...
ವಾಸ್ತವಕೆ ನಾ ಶರಣಾಗಬೇಕಾಗಿದೆ.