Friday, 15 July 2016

ಸೋಲು ಗೆಲುವು



ಹಾ ಸೋತಿದ್ದೇನೆ.
ಜಗದೊಳಗಿರುವ
ಪ್ರತಿಯೊಬ್ಬ
ಪತಿಯಂತೆಯೇ
ನಾನೂ ಕೂಡಾ
ಸೋತಿದ್ದೇನೆ...
ತವರು ಮನೆಗೆ
ಹೊರಟು ನಿಂತಾಗ
ಪತ್ನಿಯ ಮೊಗದಲ್ಲಿ
ಕಾಣ ಸಿಗುವ
ಆ ಹೊಳಪನು
ನಾ ನನ್ನ ಮನೆಯಲ್ಲೇ
ಸೃಷ್ಟಿಸುವುದರಲ್ಲಿ
ಸದ್ಯ ಸೋತಿದ್ದೇನೆ...
ಆದರೂ ಪ್ರಿಯೆ
ಹಾಗೇ ಸೋಲನೊಪ್ಪುವವ
ನಾನಲ್ಲ....
ಅದೇ ಹೊಳಪ
ನನ್ನ ಮನೆಗೆ
ಬರುವಾಗ
ಮೂಡಿಸುವುದಕೆ
ಬಿಡದೆ ಪ್ರಯತ್ನಿಸುತ್ತೇನೆ
ಒಂದಲ್ಲ ಒಂದು ದಿನ
ಗೆದ್ದು ತೋರಿಸುತ್ತೇನೆ.

ನಮನ



ನನ್ನವಳು
ಬಳಿ ಬಂದು
ನನ್ನ ಬಿಗಿದಪ್ಪಿಕೊಳಲವಳ
ಪ್ರೇರೇಪಿಸುವ
ಮುಗಿಲ ನಡುವಿನ
ಸಿಡಿಲ ಸದ್ದಿಗೆ
ನನ್ನ ಮನದಾಳದ
ಕೋಟಿ ನಮನ

ಬುದ್ಧಿವಂತ



ಭಗವಂತ
ಬಲು ಬುದ್ಧಿವಂತ
ನನಗೆ ಹೊಸವರುಷದಿ
ಬರಿಯ ಬೆಲ್ಲವನೇ
ಕೊಡು ಎಂದು
ಕೇಳಿದಾತನಿಗೆ
ನಗುತ ತಥಾಸ್ತು ಎಂದ
ಬೆಲ್ಲವನೇ ಪಡೆದವನಿಗೆ
ಮೊದ ಮೊದಲು
ಖುಷಿಯಾದರೂ
ಮತ್ತೆ ಮತ್ತೆ ಸಿಕ್ಕಿದ್ದು...
ಬೆಲ್ಲಕ್ಕೆ ಮುತ್ತಿಗೆ ಹಾಕಿದ
ಇರುವೆಯ ಕಡಿತ,
ಅದಕಾಗೇ ನಾ ಹೇಳಿದ್ದು
ಭಗವಂತ, ಬಲು ಬುದ್ದಿವಂತ

ತರ್ಪಣ



ಕೈಯಾರೆ
ಕತ್ತು ಹಿಸುಕಿ
ಕೊಲ್ಲಲ್ಪಟ್ಟ
ಆಸೆಯೊಂದಕ್ಕೆ
ಕಣ್ಣೀರ
ತರ್ಪಣ
ಬಿಡುವ
ಹಾಗಿಲ್ಲ

ಕೃತಿಚೌರ್ಯ



ಬೆಳದಿಂಗಳ
ಹೊರಸೂಸುವ
ಚಂದಿರನೆನುವ
ಕಾವ್ಯವನು
ತನ್ನ ಮುಖಪುಟದಿ
ಕೆತ್ತಿದ
ಕೆರೆಯ
ಕಾರ್ಯವದು
ಕೃತಿಚೌರ್ಯವಲ್ಲದೆ
ಮತ್ತೇನು...?


ಚಡಪಡಿಕೆ



ಮುಗಿಲ ಮಕ್ಕಳು
ಬುವಿಯೆಡೆಗೆ
ಸಾಲುಸಾಲಾಗಿ
ಇಳಿದಿಳಿದು
ತಂಪಿನಲೆಯ
ಚೆಲ್ಲುತ್ತಿದ್ದರೂ
ಮನದ ರಾಜ್ಯದಲಿ
ವಿರಹದುರಿಯೆನುವ
'ಬರ'ದ ಚಡಪಡಿಕೆ


ಸ್ವಾತಂತ್ರ್ಯ



ಹಲವು ಸಮಯದಿಂದಲಿ
ಸ್ವಾರ್ಥದ ಸಾಹಿತಿಗಳ
ಶೆಲ್ಫಿನ ಬಂಧನದಿ
ಇರಲಾಗದೇ
ಒದ್ದಾಡುತಿದ್ದ
ಬೆಲೆಬಾಳುವ
ಪ್ರಶಸ್ತಿಗಳಿಗೆಲ್ಲಾ
ಈಗ ಸ್ವಾತಂತ್ರ್ಯದ
ಪರ್ವಕಾಲ

ಕಾಲದ ಪ್ರವಾಹ



ಪುರುಷ ಯತ್ನವ
ಮಾಡಲೊಲ್ಲದೆ
ಕೈಗೊಂಡ
ನಿರ್ಣಯವಿದಲ್ಲ ;
ನಿರಂತರ
ಪ್ರಯತ್ನದಿ
ಬಸವಳಿದ
ಭಾವಕೆ
ಬಲಿಯಾಗಿ
ಕಾಲದ
ಪ್ರವಾಹದಲಿ
ಕೊಚ್ಚಿಕೊಂಡು
ಹೋಗಲನುವಾಗಿದ್ದೇನೆ.
ನನ್ನೆಲ್ಲ
ಮನದಾಸೆಯ
ಭಾರವನು
ಕಳಕೊಂಡು
ಒಣಗಿದ
ಎಲೆಯಾಗಿದ್ದೇನೆ.
ನಾನಿಂದು
ನಿರಾಳನಾಗಿದ್ದೇನೆ.




ತವಕ


ಜಗದ
ಜಾಡ್ಯವ
ಝಾಡಿಸಿ
ಒದೆಯಲು
ನೇಸರಗೆ
ಇನ್ನಿಲ್ಲದ
ತವಕ

ವಿಪರ್ಯಾಸ


ಪತಿಯ ಕಳಕೊಂಡ
ಒಬ್ಬಾಕೆ ತನ್ನ
ಬೋಳು ಹಣೆಯ
ನೋಡಿ ಮನದಿ
ಮರುಗುತ್ತಿದ್ದರೆ.....
ಇನ್ನೊಬ್ಬಳಲ್ಲಿ
ಬೋಳು ಹಣೆಯೇ
ಈಗಿನ ಫ್ಯಾಶನ್
ಎಂದು ಪತಿಯ
ಜೊತೆ ವಾದಿಸುತ್ತಿದ್ದಾಳೆ

ತಾರಾ ಮಳೆ



ಮುಗಿಲನಾವರಿಸಿದ್ದ
ಹೊಳೆವ
ತಾರೆಗಳನೆಲ್ಲಾ
ಒಂದೊಂದಾಗಿ
ನುಂಗಿ ಹಾಕಿದ
ಮೋಡವೇ...
ಮಳೆ ಹನಿಯ
ಜೊತೆಯಲಿ
ಅವುಗಳನೆಂದು
ನೀ ಬುವಿಗೆ
ಸುರಿಯುವೆ

Friday, 27 May 2016

ರಹಸ್ಯ



ಅಯ್ಯೋ...
ಕವಿತೆಗಳೆನುವ
ನವ ತರುಣಿಯರಿಗೆ
ತಿಳಿದು ಬಿಟ್ಟಿತೇನೋ...?
.
.
.
.
.
.
ನಾ ಮದುವೆಯಾದ
" ಅಂಕಲ್ " ಎಂದು
ಯಾರೊಬ್ಬರೂ
ನನ್ನ ಬಳಿಯೇ
ಸುಳಿಯುತ್ತಿಲ್ಲ

ಬರ - ಆನಂದ



ಹಲವಾರು ದಿನಗಳಿಂದ
ನಾ ನನ್ನ ಮನದ ಕತ್ತನು
ಕೆಳಕ್ಕೆ ಬಾಗಿಸಿಲ್ಲ.
ಆ ಮನದ ಕಂಗಳು
ನೆಟ್ಟಿರುವುದು
ಯೋಚನೆಯಾಗಸದಲ್ಲಿ
ಆ ಆಸೆಕಂಗಳ
ನೇರ ಹುಡುಕಾಟ
ಪದಗಳೆನುವ ಮಳೆಹನಿ
ಆ ಮಳೆಹನಿಯ
ಬರುವಿಕೆಯ ಕಾಯುವಿಕೆಗೆ
ಕಾರಣ...
ಪದಗಳ ತೇವವಿರದೆ
ಬಿರುಕು ಬಿಟ್ಟಂತಾದ
ತುಂಡು ಕಾಗದದ
ಬರಡು ಭೂಮಿ.
ಪದಗಳುರುಳಬೇಕು ಅಲ್ಲಿಂದ
ಕವನದಾ ಸಣ್ಣ ಸಣ್ಣ
ಗಿಡಗಳು ಮೊಳೆಯಬೇಕು
ಆ ಬುವಿಯಿಂದ...
ಆಗಲೇ ನನಗಾನಂದ
ಆಗಲೇ ನನಗಾನಂದ

ಉಪವಾಸ



ನಿನ್ನೆ ರಾತ್ರಿ
ಜಾಗರಣೆ...
ಆ ಜಾಗರಣೆಯಿಂದಾಗಿ
ಮನಸಿನುದರಕೆ
ಅವಳ ಕನಸಿರದ
ವಿಶೇಷ ಉಪವಾಸ

ಅಕಾಶವಾಣಿ


ಗೆಳತೀ..
ನಿನ್ನ ಬಗೆಗಿನ
ಭಾವನೆಗಳ
ಮನಬಿಚ್ಚಿ
ಅಕಾಶವಾಣಿಯಲಿ
ಹೇಳಿ ಬಂದಿರುವೆ..
ಕೇಳಲು ಮರೆಯದಿರು
ಎಂದು ಅವಳ
ಬಳಿ ಹೇಳಿದ್ದೆ...
ಅವಳು ಕಿವಿಗೊಟ್ಟು
ಕಾದಿದ್ದೇ ಬಂತು..
.
.
.
ನಮ್ ಹಣೆಬರಹ
ಕವನ ಪ್ರಸಾರ
ಆಗಲೇ ಇಲ್ಲ..
ಪ್ರೀತಿಯ ನಂಟು
ಅಂಟಲೇ ಇಲ್ಲ..
ಹಾಳಾದ್ದು..
ಅವಳೀಗ
ಫೋನು ಕೂಡಾ
ತೆಗಿಯುತ್ತಿಲ್ಲ.

ಯಾಕೆ...??


ಅವಳ
ಪ್ರತಿಯೊಂದು
ನೆನಪುಗಳ
ಹೊರಗೋಡಿಸಿಬಿಟ್ಟಿದ್ದೆ;
ನಿರಾಳವಾಗಿ
ನಿದಿರೆಗಾಗಿ
ಕಣ್ಣಿನ ಕದವ
ಮುಚ್ಚಿಬಿಟ್ಟಿದ್ದೆ,
ಆದರೆ...
ನಿದಿರಾ ದೇವಿಯು
ತಾನೊಬ್ಬಳೇ
ಬರದೆ
ತನ್ನೊಡನೆ
ಅವಳ
ಕನಸುಗಳನ್ನೂ
ಕರೆತಂದಿದ್ದಾದರೂ
ಯಾಕೆ...??

ಅಸೂಯೆ



ಬಿಡದಂತೆ
ಅವಳ
ದುಂಡು
ಕೆನ್ನೆಗೆ
ಅಂಟಿಕೊಂಡಿದ್ದ
ಬಣ್ಣವ
ಕಂಡಾಗ
ನನಗೇತಕೆ
ಆಗುತಿದೆ
ಅಸೂಯೆ ,...?

ಬಣ್ಣ



ಗೆಳತೀ
ಹೇಳೀ ಕೇಳೀ
ನನಗೆಲ್ಲಿಯ
ಹೋಳಿ...?
ಬಣ್ಣಗಳ
ಹಂಗೆನಗಿಲ್ಲ
ನೀ ತೊರೆದು
ಹೋದ
ಬಾಳಿಗೆಲ್ಲಿಯ ಬಣ್ಣ
ಅದು ಹರಿಸುವ
ಕಣ್ಣೀರ ಪಿಚಕಾರಿಗೂ
ಇರುವುದಿಲ್ಲ ಬಣ್ಣ


ಹೋಳಿ



ಅಪರಿಚಿತೆಯಾದರೂ
ತನ್ನ ಅಂಗೈಯಲ್ಲಿದ್ದ
ಬಣ್ಣಗಳನೆಲ್ಲಾ
ನನ್ನ ಕೆನ್ನೆಗೆ ಸವರಿದ
ಆಕೆ ಆಗ ತಾನೇ
ಹೇಳಿದ್ದಳು
ಹ್ಯಾಪಿ ಹೋಳಿ,
.
.
.
,
.
,
ಹಾಳಾದ
ಬಸ್ ಕಂಡಕ್ಟರ್
ಅದೇ ಸಮಯಕ್ಕೆ
ಹೇಳೋದಾ
" ಸ್ವಾಮಿ ನಿಮ್ಮ
ಸ್ಟಾಪ್ ಬಂತು ಏಳಿ

ಬಣ್ಣಗಳ ಹಬ್ಬ


ಹರುಷದಿಂದ
ನಮಗೆಲ್ಲಾ
ಆಚರಿಸಲು
ಬಣ್ಣಗಳ ಹಬ್ಬ
ಬರುವುದು
ಒಂದೇ ಬಾರಿ
ವರುಷದಲಿ;
ಆದರೆ ಆ
ನೇಸರ
ಒಬ್ಬಂಟಿಯಾದರೂ
ಕಡಲ ನೀರನ್ನೇ
ಓಕುಳಿಯನ್ನಾಗಿಸಿ
ಬಾನಿಗೆಲ್ಲಾ
ಬಣ್ಣಗಳ ಎರಚುತ್ತಾ
ಹೋಳಿಯ
ಸಡಗರವನಾಚರಿಸುವನು
ಪ್ರತಿ ದಿನದ
ಮುಂಜಾನೆಯಲಿ
ಮತ್ತು ಮುಸ್ಸಂಜೆಯಲಿ


ಇಬ್ಬನಿ


ನೇಸರನ
ಪ್ರೀತಿಯಲಿ
ನಿಜವಾಗಿಯೂ
ಜಾರಿ ಬಿದ್ದದ್ದು
ಬರಿಯ
ಇಬ್ಬನಿ

ಕರ್ಮ ಫಲ



ಬದುಕೇ ಹೀಗೆ....
ಇಲ್ಲಿ ಉಳುಮೆಯ ಕೆಲಸ
ಆಗಲೇ ಬೇಕು...
ಕರ್ಮದ ಬಿತ್ತನೆಗೆ
ಫಲ ಇದ್ದೇ ಇದೆ..
ಅದಾವುದ ಬೆಳೆಯುವೆವೋ
ಸಿಗುವುದದರದ್ದೇ ಫಲ...
ಭಗವಂತನ ಕೃಪಾದೃಷ್ಟಿಯ
ಮಳೆಯ ಬಗೆಗೆ ಸಂದೇಹವಿಲ್ಲ,
ತೊಂದರೆಯೆಂದರೆ ಬರಿಯ
ಪೂರ್ವ ಸುಕೃತದ
ಕೀಟಗಳದು ಅಥವಾ ಪಶುಪಕ್ಷಿಗಳದು
ಬೆಳೆಯ ತಿಂದೀತೋ... ?
ಅಥವಾ ಕಳೆಯ ತಿಂದು
ಬೆಳೆಯ ಬೆಳೆಸೀತೋ....?
ಎನ್ನುವುದರರಿವು ಯಾರಿಗೂ ಇಲ್ಲ.
ಕಾಯಬೇಕು....
ಫಲ ಸಿಗುವ ಮುನ್ನವೇ
ಉಸಿರು ನಿಂತರೂ
ಕಳವಳ ಪಡಬೇಕಾಗಿಲ್ಲ...
ಮತ್ತವು ಬರುವುದು
ಮುಂದಿನ ಜೀವನದುಳುಮೆಯ
ಬೆಳೆಗಳ ಹಾಳುಗೆಡವಲೋ...
ಅಥವಾ ಉಳಿಸಿ ಬೆಳೆಸಲೋ...?

ಭಯ



ಒಂಟಿತನದ ಸುಖಕಂಟಿ
ಕಾಲವ ಕಳೆಯುತಿದ್ದವನಿಗೀಗ
ತನ್ನರ್ಧವ ಧಾರೆಯೆರೆದು
ಅವಳರ್ಧವ ತಾ ಪಡೆದು
ಜಂಟಿಯಾಗುವುದೆಂದರೆ
ಅದೇನೋ ಹೇಳಲಾಗದ ಭಯ
ಗುಣಗಾನ....
ಹಾಳಾದ್ದು...
ಪಕ್ಷ ಪ್ರಚಾರಕ್ಕೆ
ಹೋಗಲೇ ಬಾರದಿತ್ತು.
.
.
.
.
.
.
.
.
.
ನಿನ್ನದೇ ಗುಣಗಾನ
ಮಾಡುವೆ
ಎಷ್ಟು ಕೊಡುತ್ತೀ...?
ಎಂದು ಕೇಳಿ ಬಿಟ್ಟೆ
ಅಭ್ಯಾಸ ಬಲದಿಂದ,
ನನ್ನವಳ ಬಳಿ.




ಹ್ಯಾಪಿ (???) ಹೋಳಿ..



" ಹ್ಯಾಪಿ "ಯಾಗಲೇ ಇಲ್ಲ
ಆಕೆ ಮುಟ್ಟಿ ಹಚ್ಚಿದರೂ
ನನ್ನ ಕೆನ್ನೆಗೆ ಚೆಲುವಿನ ಬಣ್ಣ ;
ಕಾರಣ; ಹಚ್ಚಿದವಳೇ
ನಗುತ್ತಾ ಹೇಳಿದ ಮಾತು
ಹ್ಯಾಪಿ ಹೋಳಿ " ಅಣ್ಣ "